ಜೀವ ಬೆದರಿಕೆ ಆರೋಪ; ನಟ ದರ್ಶನ್‌ ವಿರುದ್ಧ ದೂರು ದಾಖಲು

dboss darshan
  • ನಿರ್ಮಾಪಕನಿಗೆ ಜೀವ ಬೆದರಿಕೆ ಹಾಕಿದರೇ ದರ್ಶನ್‌?
  • ಪೊಲೀಸ್‌ ಠಾಣೆ ಮೆಟ್ಟಿಲೇರಿದ ಭರತ್‌ ವಿಷ್ಣುಕಾಂತ್‌

ನಟ ದರ್ಶನ್‌ ಇತ್ತೀಚೆಗೆ ವಿವಾದಗಳಿಂದಲೇ ಅತಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಪುನೀತ್‌ ರಾಜ್‌ಕುಮಾರ್‌ ಸಾವಿನ ಕುರಿತು ನೀಡಿದ್ದ ಹೇಳಿಕೆಗೆ ಪುನೀತ್‌ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನಟನ ವಿರುದ್ಧ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿತ್ರ ನಿರ್ಮಾಪಕರಾದ ಭರತ್‌ ವಿಷ್ಣುಕಾಂತ್‌ ಎನ್ನುವವರು ದರ್ಶನ್‌ ವಿರುದ್ಧ ದೂರು ದಾಖಲಿಸಿದ್ದು, ಸಿನಿಮಾ ವಿಚಾರಕ್ಕೆ ದರ್ಶನ್‌ ತಮಗೆ ಜೀವ ಬೆದರಿಕೆ ಹಾಕಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.

ದರ್ಶನ್‌ ವಿರುದ್ಧ ಬೆಂಗಳೂರಿನ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಭರತ್‌, "2020ರಲ್ಲಿ ಧ್ರುವನ್‌ ಎಂಬುವವರನ್ನು ನಾಯಕನನ್ನಾಗಿ ಇರಿಸಿಕೊಂಡು ʼಭಗವಾನ್‌ ಶ್ರೀಕೃಷ್ಣ ಪರಮಾತ್ಮʼ ಎಂಬ ಸಿನಿಮಾವನ್ನು ಪ್ರಾರಂಭಿಸಿದ್ದೆ. ಅದಾದ ಕೆಲ ದಿನಗಳ ಬಳಿಕ ಧ್ರುವನ್‌ ಪರವಾಗಿ ನನಗೆ ಕರೆ ಮಾಡಿದ್ದ ದರ್ಶನ್‌, ಬೇರೆ ಕತೆಯೊಂದನ್ನು ಸೂಚಿಸಿ ಅದನ್ನು ಸಿನಿಮಾ ಮಾಡುವಂತೆ ಹೇಳಿದರು. ದರ್ಶನ್‌ ಮತ್ತು ಧ್ರುವನ್‌ ಇಬ್ಬರೂ ಸೇರಿ ಮೊದಲಿಗೆ ಕತೆ ಬದಲಿಸಿದರು. ನಂತರ ಚಿತ್ರದಿಂದ ನಿರ್ದೇಶಕರನ್ನೇ ಹೊರ ಹಾಕಿದರು. ಈ ಎಲ್ಲ ಬೆಳವಣಿಗೆಗಳಿಗೂ ನಾನು ಒಪ್ಪಿಗೆ ಸೂಚಿಸುತ್ತಲೇ ಬಂದೆ. ಕಾರಣಾಂತರಗಳಿಂದ ಚಿತ್ರೀಕರಣ ಸ್ವಲ್ಪ ತಡವಾಯಿತು. ಅದನ್ನು ಸಹಿಸದ ದರ್ಶನ್‌, ಇತ್ತೀಚೆಗೆ ನನಗೆ ಕರೆ ಮಾಡಿ 'ಧ್ರುವನ್‌ ಜೀವನವನ್ನು ಹಾಳು ಮಾಡಬೇಕು ಎಂದುಕೊಂಡಿದ್ದೀಯೇನು' ಎಂದು ಜೋರು ಮಾಡಿದರು. ಅವನ ಕೆರಿಯರ್‌ ಹಾಳಾದರೆ ನೀನು ಕೂಡ ಹಾಳಾಗುತ್ತೀಯ. ಸಿನಿಮಾ ಅನೌನ್ಸ್‌ ಮಾಡಿದ್ದೀಯ ಅದನ್ನು ಪೂರ್ಣಗೊಳಿಸಬೇಕು. ಇಲ್ಲ ಅಂದ್ರೆ ನೀನು ಇರಲ್ಲ. ನಾನು ಏನಾದರೂ ಮಾಡೋದಿಕ್ಕಿಂತ ಮುಂಚೆ ಹೇಳಿಯೇ ಮಾಡೋದು ನೆನಪಿರಲಿ" ಎಂದು ಬೆದರಿಕೆ ಹಾಕಿರುವುದಾಗಿ ದೂರಿದ್ದಾರೆ.  

ಈ ಸುದ್ದಿ ಓದಿದ್ದೀರಾ? ದರ್ಶನ್ ಹೇಳಿಕೆಗೆ ಅಪ್ಪು ಅಭಿಮಾನಿಗಳ ಆಕ್ರೋಶ ; ನಿಜಕ್ಕೂ ನಡೆದಿದ್ದೇನು?

ಭರತ್‌ ದೂರಿನನ್ವಯ ಪ್ರರಕಣ ದಾಖಲಿಸಿಕೊಂಡಿರುವ ಪೊಲೀಸರು ನಾಯಕ ನಟ ಧ್ರುವನ್‌, ʼಭಗವಾನ್‌ ಶ್ರೀಕೃಷ್ಣ ಪರಮಾತ್ಮ ಚಿತ್ರದ ನಿರ್ದೇಶಕ ಆಂಥೋನಿ ಮತ್ತು ಚಿತ್ರತಂಡದ ಉಳಿದ ಸದಸ್ಯರ ಹೇಳಿಕೆ ಪಡೆದಿದ್ದಾರೆ. ದರ್ಶನ್‌, ಭರತ್‌ ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್