ಸಿನಿ ಶುಕ್ರವಾರ | ಈ ವಾರ ಚಂದನವನದಲ್ಲಿ ಗಾಳಿಪಟದ್ದೇ ಹಾರಾಟ

galipata 2
  • ಭಟ್ಟರ 'ಗಾಳಿಪಟ'ಕ್ಕೆ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ
  • 'ರವಿ ಭೋಪಣ್ಣ'ನಾಗಿ ಬಂದ ಕ್ರೇಜಿಸ್ಟಾರ್‌ 

ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಕೇವಲ ಮೂರು ಸಿನಿಮಾಗಳು ತೆರೆಕಂಡಿವೆ. ಸೆಟ್ಟೇರಿದ ದಿನದಿಂದಲೂ ಹೆಚ್ಚು ಮಾಡಿದ್ದ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ 'ಗಾಳಿಪಟ-2' ಸಿನಿಮಾ ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಬಹುಕೋಟಿ ವೆಚ್ಚದ ಈ ಸಿನಿಮಾ ಶುಕ್ರವಾರ ತೆರೆಗೆ ಬಂದಿದ್ದು, ರವಿ ಭೋಪಣ್ಣ ಸಿನಿಮಾ ಮೂಲಕ ಕ್ರೇಜಿಸ್ಟಾರ್‌ ರವಿಚಂದ್ರನ್‌ ಕೂಡ ಪೈಪೋಟಿಗಿಳಿದಿದ್ದಾರೆ. ತೆಲುಗಿನಿಂದ ಕನ್ನಡಕ್ಕೆ ಡಬ್‌ ಆಗಿರುವ 'ಕಾರ್ತಿಕೇಯ-2' ಸಿನಿಮಾ ಕೂಡ ಈ ವಾರ ಬಿಡುಗಡೆಯಾಗಿದೆ.

ಗಾಳಿಪಟ- 2

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗಾಳಿಪಟ-2' ಸಿನಿಮಾ ಶುಕ್ರವಾರ ತರೆಗೆ ಬಂದಿದೆ. 2008ಲ್ಲಿ ಯೋಗರಾಜ್‌ ಭಟ್‌ ಮತ್ತು ಗಣೇಶ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ 'ಗಾಳಿಪಟ' ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ಅದೇ ಶೀರ್ಷಿಕೆಯನ್ನು ಇಟ್ಟುಕೊಂಡು ತೆರೆಗೆ ಬಂದಿರುವ 'ಗಾಳಿಪಟ-2' ಸಿನಿಮಾ ʼಹಾಸ್ಯʼ ಮತ್ತು ʼಭಾವನಾತ್ಮಕʼ ಕಥಾಹಂದರವನ್ನು ಹೊಂದಿದೆ. ಚಿತ್ರದಲ್ಲಿ ಗಣೇಶ್‌ಗೆ ವೈಭವಿ ಶಾಂಡಿಲ್ಯ ಜೊತೆಯಾಗಿದ್ದು, ನಟ ದಿಗಂತ್‌ ಮತ್ತು ನಿರ್ದೇಶಕ ಪವನ್‌ ಕುಮಾರ್‌, ಗಣೇಶ್‌ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಅನಂತ್‌ ನಾಗ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ.   

ರವಿ ಭೋಪಣ್ಣ

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ರವಿ ಬೋಪಣ್ಣ' ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡಿದೆ. ಟ್ರೈಲರ್ ಮೂಲಕ ಗಮನ ಸೆಳೆದಿದ್ದ 'ರವಿ ಬೋಪಣ್ಣ' ಸಿನಿಮಾವು 'ಏಕಾಂಗಿ' ಸಿನಿಮಾವನ್ನು ನೆನಪಿಸಿತ್ತು. ಈ ಚಿತ್ರದಲ್ಲಿ ತೀರ ನೊಂದು ಕುಡಿತದ ವ್ಯಸನಕ್ಕೆ ತುತ್ತಾದ ವ್ಯಕ್ತಿಯ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ತೆರೆಯಿಂದ ಅಂತರ ಕಾಯ್ದುಕೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ರವಿಚಂದ್ರನ್‌ಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಸ್ಟಾರ್‌ ನಟ ಸುದೀಪ್‌ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರವಿಚಂದ್ರನ್ ಅವರೇ ಚಿತ್ರಕತೆ ಬರೆದು, ಈ ಚಿತ್ರವನ್ನು ನಿರ್ದೇಶಿಸಿ ಮುಖ್ಯಭೂಮಿಕೆಯನ್ನೂ ನಿಭಾಯಿಸಿದ್ದು, ಚಿತ್ರಕ್ಕೆ ಅವರೇ ಬಂಡವಾಳ ಹೂಡಿದ್ದಾರೆ. ಸಂಗೀತ ನಿರ್ದೇಶನದ ಹೊಣೆಯನ್ನು ಅವರೇ ಹೊತ್ತುಕೊಂಡಿದ್ದಾರೆ. 

ಕಾರ್ತಿಕೇಯ-2

ನಿಖಿಲ್‌ ಸಿದ್ಧಾರ್ಥ್‌ ಮತ್ತು ಅನುಪಮಾ ಪರಮೇಶ್ವರನ್‌ ಮುಖ್ಯಭೂಮಿಕೆಯ 'ಕಾರ್ತಿಕೇಯ-2' ಸಿನಿಮಾ ಆಗಸ್ಟ್‌ 13ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಚಂದೂ ಮೊಂಡೇಟಿ ನಿರ್ದೇಶನದ ಥ್ರಿಲ್ಲರ್‌ ಕಥಾಹಂದರವುಳ್ಳ ಈ ಚಿತ್ರದಲ್ಲಿ ಅನುಪಮ್‌ ಖೇರ್‌, ಆದಿತ್ಯ ಮೆನನ್‌ ಮುಂತಾದ ಕಲಾವಿದರು ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ 'ಕಾರ್ತಿಕೇಯ-2' ಸಿನಿಮಾ ತೆರೆಗೆ ಬಂದಿದೆ.   

ನಿಮಗೆ ಏನು ಅನ್ನಿಸ್ತು?
0 ವೋಟ್