ಸಿನಿ ಶುಕ್ರವಾರ | ವಿಕ್ರಾಂತ್‌ ರೋಣ ಸೇರಿ ಮೂರು ಸಿನಿಮಾಗಳು ತೆರೆಗೆ

vikrant-rona
  • ವಿಕ್ರಾಂತ್‌ ರೋಣನಿಗೆ ಅಭಿಮಾನಿಗಳ ಮಿಶ್ರ ಪ್ರತಿಕ್ರಿಯೆ
  • ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚನ ದರ್ಬಾರ್‌ 

ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಕೇವಲ ಮೂರು ಸಿನಿಮಾಗಳು ತೆರೆಕಂಡಿವೆ. ಮೇಕಿಂಗ್‌ನಿಂದಲೇ ಹೆಚ್ಚು ಸದ್ದು ಮಾಡಿದ್ದ ಕಿಚ್ಚ ಸುದೀಪ್‌ ನಟನೆಯ 'ವಿಕ್ರಾಂತ್‌ ರೋಣ' ಸಿನಿಮಾ ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಬಹುಕೋಟಿ ವೆಚ್ಚದ ಈ ಸಿನಿಮಾ ತೆರೆಗೆ ಬಂದಿರುವ ಹಿನ್ನೆಲೆ ಪೈಪೋಟಿ ಎದುರಿಸಬೇಕಾದ ಕಾರಣಕ್ಕೆ ಹೇಳಿಕೊಳ್ಳುವಂತಹ ಕನ್ನಡದ ಯಾವ ಸಿನಿಮಾಗಳು ತೆರೆಗೆ ಬಂದಿಲ್ಲ. ಹೊಸಬರ 'ರಕ್ಕಂ' ಮತ್ತು ತಮಿಳಿನಿಂದ ಕನ್ನಡಕ್ಕೆ ಡಬ್‌ ಆಗಿರುವ 'ಲೆಜೆಂಡ್‌' ಸಿನಿಮಾಗಳು ಮಾತ್ರ ತೆರೆಗೆ ಬಂದಿವೆ.  

ವಿಕ್ರಾಂತ್‌ ರೋಣ

ಕನ್ನಡದ ಸ್ಟಾರ್‌ ನಟ ಕಿಚ್ಚ ಸುದೀಪ್‌ ಅಭಿನಯದ 'ವಿಕ್ರಾಂತ್‌ ರೋಣ' ಸಿನಿಮಾ ಜುಲೈ 28ರಂದು ಭಾರತ ಸೇರಿದಂತೆ ದುಬೈ, ಜರ್ಮನಿ, ಅಮೆರಿಕ, ಥೈಲ್ಯಾಂಡ್‌ ಹೀಗೆ ಜಗತ್ತಿನ 30ಕ್ಕೂ ಹೆಚ್ಚು ದೇಶಗಳಲ್ಲಿ ಅದ್ದೂರಿಯಾಗಿ ತೆರೆಗೆ ಬಂದಿದೆ. 'ರಂಗಿತರಂಗ' ಖ್ಯಾತಿಯ ಅನೂಪ್‌ ಭಂಡಾರಿ ನಿರ್ದೇಶನದ 'ವಿಕ್ರಾಂತ್‌ ರೋಣ' ಸಸ್ಪೆನ್ಸ್‌ ಕ್ರೈ ಥ್ರಿಲ್ಲರ್‌ ಕಥಾ ಹಂದರ ಹೊಂದಿದೆ. ಚಿತ್ರದಲ್ಲಿ ಸುದೀಪ್‌ ದಕ್ಷ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 'ಲವ್‌ ಮಾಕ್‌ಟೇಲ್‌' ಖ್ಯಾತಿಯ ನಟಿ ಮಿಲನ ನಾಗರಾಜ್‌ ಕಿಚ್ಚನಿಗೆ ಜೋಡಿಯಾಗಿದ್ದಾರೆ. ನಟ ನಿರೂಪ್‌ ಭಂಡಾರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನೀತಾ ಅಶೋಕ್‌, ಸಿಧು ಮೂಲಿಮನಿ, ರವಿಶಂಕರ್‌ ಗೌಡ ಮುಂತಾದವರು ಚಿತ್ರದಲ್ಲಿದ್ದಾರೆ.  ಬಿ. ಅಜನೀಶ್‌ ಲೋಕನಾಥ್‌ 'ವಿಕ್ರಾಂತ್‌ ರೋಣ'ನಿಗೆ ಹಿನ್ನೆಲೆ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್‌ ಛಾಯಾಗ್ರಹಣವಿದೆ. ಸುದೀಪ್‌ ಅವರ ಆಪ್ತ, ನಿರ್ಮಾಪಕ ಜ್ಯಾಕ್‌ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಚಿತ್ರ ತೆರೆಗೆ ಬಂದಿದೆ.

ರಕ್ಕಂ

ಕೆ ಸೇಂದಿಲ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ 'ರಕ್ಕಂ' ಸಿನಿಮಾ ಕೂಡ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕ್ರೈ, ಥ್ರಿಲ್ಲರ್‌ ಕಥಾಹಂದರದ 'ರಕ್ಕಂ' ಚಿತ್ರದಲ್ಲಿ ರಣಧೀರ್‌ ಗೌಡ ಮತ್ತು ಅಮೃತಾ ನಾಯರ್‌ ಜೊತೆಯಾಗಿ ನಟಿಸಿದ್ದಾರೆ. ಖ್ಯಾತ ಗಾಯಕ ವಿಜಯ್‌ ಪ್ರಸಾದ್‌ 'ರಕ್ಕಂ' ಹಾಡುಗಳಿಗೆ ಧ್ವನಿಯಾಗಿದ್ದು, ಸ್ನೇಹಲತಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಲೆಜೆಂಡ್‌

ಸರವಣನ್‌ ಅರುಳ್‌ ನಟನೆಯ 'ಲೆಜೆಂಡ್‌' ಸಿನಿಮಾದ ಕನ್ನಡ ಅವತರಣಿಕೆ ಜುಲೈ 28ರಂದು ಬಿಡುಗಡೆಯಾಗಿದೆ. ಜೆ.ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಆಕ್ಷನ್‌, ರೊಮ್ಯಾಂಟಿಕ್‌ ಡ್ರಾಮಾದಲ್ಲಿ ಸರವಣನ್‌ಗೆ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಜೊತೆಯಾಗಿದ್ದಾರೆ. ಖ್ಯಾತ ನಟರಾದ ನಾಸರ್‌, ಪ್ರಭು ಗಣೇಸನ್‌ ಮತ್ತು ಯೋಗಿಬಾಬು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ಸರವಣನ್‌ ಅವರೇ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಹ್ಯಾರಿಸ್‌ ಜಯರಾಜ್‌ ಸಂಗೀತ ನಿರ್ದೇಶಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್