
ಚಿತ್ರ: ಗಾರ್ಗಿ | ನಿರ್ದೇಶನ: ಗೌತಮ್ ರಾಮಚಂದ್ರನ್ | ತಾರಾಗಣ: ಸಾಯಿ ಪಲ್ಲವಿ, ಕಾಳಿ ವೆಂಕಟ್, ಜಯಪ್ರಕಾಶ್, ಐಶ್ವರ್ಯ ಲಕ್ಷ್ಮಿ | ಭಾಷೆ: ಕನ್ನಡ | ಅವಧಿ: 2 ಗಂಟೆ 20 ನಿಮಿಷ
ಗಾರ್ಗಿ ಸ್ತ್ರೀ ಘನತೆ, ಬೌದ್ಧಿಕತೆ ಮತ್ತು ಸ್ತ್ರೀಪರವಾದ ಐಕಾನ್. ಜ್ಞಾನ ಕೇವಲ ಪುರುಷರ ಸ್ವತ್ತೇನು ಅಲ್ಲ ಎಂದು ವಾಗ್ವಾದಗಳಿಗೆ ನಿಂತು ಗೆದ್ದ ಹೆಣ್ಣು. ಸ್ಥಾಪಿತ ವ್ಯವಸ್ಥೆ, ಸ್ಥಾಪಿತ ಮೌಲ್ಯಗಳು ಬಹುತೇಕ ಪುರುಷ ಪರವೇ. ಅಂತಹ ವ್ಯವಸ್ಥೆಯ ವಿರುದ್ಧ ದನಿ ಎತ್ತಿದ್ದಾಕೆ ಗಾರ್ಗಿ.
ಇದೇ ಹೆಸರಿನಲ್ಲಿ ತೆರೆ ಕಂಡಿರುವ ಗಾರ್ಗಿ ಚಿತ್ರ ಕೂಡ ತಣ್ಣಗೆ ಹೆಣ್ಣನ್ನು ಕಾಡುವ ಪುರುಷ ಶೋಷಣೆಯನ್ನು ಬಿಚ್ಚಿಡುತ್ತದೆ ಮತ್ತು ಅಂತಹ ಶೋಷಿಸುವ ವ್ಯವಸ್ಥೆಯ ಹೋರಾಡುವ ಹೆಣ್ಣಾಗಿ ಗಾರ್ಗಿ ಕಾಣಿಸುತ್ತಾಳೆ.
ಗೌತಮ್ ರಾಮಚಂದ್ರನ್ ನಿರ್ದೇಶನದ, ಸಾಯಿ ಪಲ್ಲವಿ ಮುಖ್ಯಪಾತ್ರದಲ್ಲಿರುವ ಈ ಚಿತ್ರ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಗುಂಪು ಅತ್ಯಾಚಾರ ಮತ್ತು ನಂತರ ವಿಚಾರಣೆ ಸುತ್ತ ಸಾಗುತ್ತದೆ. ನಾಯಕಿ ಗಾರ್ಗಿಯ ತಂದೆ ಸೆಕ್ಯುರಿಟಿ ಗಾರ್ಡ್ ಆಗಿದ್ದ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆಯುತ್ತದೆ ಮತ್ತು ಆತನೂ ಬಂಧನಕ್ಕೆ ಒಳಗಾಗುತ್ತಾನೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಂದು ಸುದ್ದಿ ಬಿತ್ತರವಾಗುತ್ತಿದ್ದಂತೆ, ತನ್ನ ತಂಗಿಯನ್ನು ನೆನೆದು ಆತಂಕಕ್ಕೆ ಒಳಗಾಗುವ ಗಾರ್ಗಿ, ತನ್ನ ತಂದೆ ಅತ್ಯಾಚಾರಿಯ ಆರೋಪ ಹೊತ್ತು ನಿಂತಾಗ ದಿಟ್ಟವಾಗಿ ಹೋರಾಡುವುದನ್ನು ಚಿತ್ರ ಮನದಲ್ಲಿ ಮತ್ತೆ ಮತ್ತೆ ಕಾಡುವಂತೆ ಕಟ್ಟಿಕೊಡುತ್ತದೆ.
ಪಾತ್ರವನ್ನು ಆವಾಹಿಸಿಕೊಂಡಂತೆ ನಟಿಸುವ ಸಾಯಿ ಪಲ್ಲವಿ, ತಮ್ಮ ಎಂದಿನ ಛಾಪು ಇಲ್ಲೂ ಒತ್ತಿದ್ದಾರೆ. ಸಾಮಾನ್ಯ ಕುಟುಂಬದ ಹೆಣ್ಣು ಮಗಳು ಗಾರ್ಗಿ, ಖಾಸಗಿ ಶಾಲೆಯ ಶಿಕ್ಷಕಿ. ಅಪ್ಪ ಸೆಕ್ಯುರಿಟಿ ಗಾರ್ಡ್, ಮನೆಯಲ್ಲಿದ್ದುಕೊಂಡೆ ಕೈ ಕಾಸಿಗೆ ಸಣ್ಣದೊಂದು ವ್ಯವಹಾರ ಮಾಡಿಕೊಂಡಿರುವ ತಾಯಿ. ಶಾಲೆಯಲ್ಲಿ ಓದುತ್ತಿರುವ ತಂಗಿ. ಇಂತಹ ಮನೆಯಲ್ಲಿ ಅತ್ಯಾಚಾರ ಪ್ರಕರಣ ಬಿರುಗಾಳಿ ಎಬ್ಬಿಸುತ್ತದೆ.
ಪೊಲೀಸರು, ಮಾಧ್ಯಮ ಎಲ್ಲರೂ ಹೆದರಿಸಿದರೂ ಅನನುಭವಿ ವಕೀಲನನ್ನು ನಂಬುವ, ಪೊಲೀಸರ ಬೆದರಿಕೆ, ಸಾರ್ವಜನಿಕರ ಅವಮಾನಗಳನ್ನು ನುಂಗಿಕೊಳ್ಳುತ್ತಲೇ ಅಪ್ಪನನ್ನು ರಕ್ಷಿಸಲು ಹೋರಾಡುವ ಗಾರ್ಗಿ, ಕುರ್ಚಿಯ ತುದಿಗೆ ಕೂತು ನೋಡುವಂತಹ ಸಿನಿಮಾವಾಗಿ ತೆರೆ ಮೇಲೆ ಮೂಡಿದೆ. ಅತಿ ರೋಚಕ ತಿರುವುಗಳ ಜೊತೆಗೆ ಪ್ರೇಕ್ಷಕನ ಕಲ್ಪನೆಗೆ ಎಟುಕದಂತೆ ಚಿತ್ರ ಓಡುತ್ತದೆ.
ಸ್ವತಃ ಬಾಲ್ಯದಲ್ಲಿ ದೈಹಿಕ ಶೋಷಣೆಯನ್ನು ಎದುರಿಸಿದ ಗಾರ್ಗಿಯನ್ನು ಕಾಪಾಡಿದ್ದು ಅವರ ತಂದೆ. ಆಗಿನಿಂದಲೂ ಆತನೇ ಹೀರೋ. ಅಂತಹ ಅಪ್ಪ ಅತ್ಯಚಾರವೆಸಗಿರಲಾರ ಎಂಬ ಗಟ್ಟಿನಂಬಿಕೆಯೊಂದಿಗೆ ಕಾನೂನು ಸಮರಕ್ಕೆ ಇಳಿಯುತ್ತಾಳೆ ಗಾರ್ಗಿ.
ನಿರ್ದೇಶಕ ಗೌತಮ್ ಅವರೇ ಚಿತ್ರಕತೆ ಬರೆದಿದ್ದಾರೆ. ಅತ್ಯಾಚಾರ ಘಟನೆಯನ್ನು ರೋಚಕಗೊಳಿಸುವ ಮತ್ತು ಕೋರ್ಟ್ಗೂ ಮೊದಲು ತೀರ್ಪು ನೀಡುವ ಧಾವಂತದ ಮೀಡಿಯಾ ಟ್ರಯಲ್, ಕಾನೂನು ವ್ಯವಸ್ಥೆಯಲ್ಲಿರುವ ಸಣ್ಣ ಲೋಪಗಳು ಸೂಕ್ಷ್ಮವಾಗಿ ಹೇಳುತ್ತಾ ಹೋಗಿದ್ದಾರೆ. ಅನಗತ್ಯ ರೋಚಕತೆ ತುರುಕದೆಯೇ ಕುತೂಹಲ ಉಳಿಸಿಕೊಳ್ಳುವಂತೆ ಒಪ್ಪವಾಗಿ ಹೆಣೆದಿದ್ದಾರೆ.
ನಿರ್ದೇಶಕರು ನ್ಯಾಯಾಧೀಶರ ಪಾತ್ರಕ್ಕೆ ಟ್ರಾನ್ಸ್ಜೆಂಡರ್ ಒಬ್ಬರನ್ನು ಕರೆತಂದಿದ್ದು ವಿಶೇಷ. ತೀರ್ಪು ನೀಡುವಾಗ ನ್ಯಾಯಾಧೀಶರು, "ಹೆಣ್ಣಿನ ಸಂಕಟ ಮತ್ತು ಗಂಡಿನ ಸೊಕ್ಕು ನನಗೆ ಗೊತ್ತು" ಎಂದು ಹೇಳುವ ಮಾರ್ಮಿಕವಾದ ಮಾತುಗಳು ಸಮಾಜದ ಪೂರ್ವಗ್ರಹಪೀಡಿತ ಮೌಲ್ಯಗಳನ್ನು ಪ್ರಶ್ನಿಸುತ್ತವೆ.
ಅತ್ಯಾಚಾರ ಆರೋಪದಲ್ಲಿ ಗಾರ್ಗಿ ತಂದೆಗೆ ಏನಾಯ್ತು? ಗಾರ್ಗಿ ನಿಜಕ್ಕೂ ಗೆದ್ದಳಾ ಎಂಬುದನ್ನು ನೋಡಿಯೇ ಅರಿಯಬೇಕು. ಆದರೆ ಅಬ್ಬರಗಳಿಲ್ಲದ, ಹಾಡುಗಳಿದ್ದೂ ನೆನಪಿಗೆ ಉಳಿಯದ ಚಿತ್ರದಲ್ಲಿ ಸಾಯಿ ಪಲ್ಲವಿಯೊಬ್ಬರೇ ಆವರಿಸಿಕೊಂಡಿದ್ದಾರೆ.
ಅನನುಭವಿ ವಕೀಲನಾಗಿ ನಟಿಸಿರುವ ಕಾಳಿ ವೆಂಕಟ್, ಸಂತ್ರಸ್ತ ಬಾಲಕಿಯ ತಂದೆಯಾಗಿ ನಟಿಸಿರುವ ಸರವಣನ್ ಅಭಿನಯ ಉತ್ತಮವಾಗಿದೆ. 'ವಿರಾಟ ಪರ್ವಂ'ನಲ್ಲಿ ಮಿಂಚಿದ್ದ ಸಾಯಿ ಪಲ್ಲವಿ ತಮ್ಮ ಅಭಿನಯ ಸಾಮರ್ಥ್ಯವನ್ನು 'ಗಾರ್ಗಿ'ಯಲ್ಲೂ ಸ್ಪಷ್ಟವಾಗಿ ದಾಖಲಿಸಿದ್ದಾರೆ.