ಟೊರಾಂಟೊ ಮಹಿಳಾ ಚಲನಚಿತ್ರೋತ್ಸವ | ಅತ್ಯುತ್ತಮ ಮಾನವ ಹಕ್ಕು ಪ್ರಶಸ್ತಿ ಗೆದ್ದ ʻಗೌರಿ ಸಾಕ್ಷ್ಯಚಿತ್ರʼ

gauri lankesh
  • ಗೌರಿ ಲಂಕೇಶ್‌ ಹೋರಾಟದ ಬದುಕಿನ ಸುತ್ತ ಮೂಡಿಬಂದಿರುವ ಸಾಕ್ಷ್ಯಚಿತ್ರ
  • ʼಟೊರಾಂಟೊʼ ಸೇರಿದಂತೆ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಕ್ಕೆ ಆಯ್ಕೆ

ಕನ್ನಡದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಕುರಿತು ಅವರ ಸಹೋದರಿ, ಖ್ಯಾತ ನಿರ್ದೇಶಕಿ ಕವಿತಾ ಲಂಕೇಶ್ ನಿರ್ದೇಶಿಸಿರುವ ʼಗೌರಿʼ ಸಾಕ್ಷ್ಯಚಿತ್ರ 2022ರ ʼಟೊರಾಂಟೊʼ ಮಹಿಳಾ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಮಾನವ ಹಕ್ಕು ಪ್ರಶಸ್ತಿ  ಗೆದ್ದುಕೊಂಡಿದೆ.

ʼಗೌರಿʼ ಸಾಕ್ಷ್ಯಚಿತ್ರ ಕೇವಲ ʼಟೊರಾಂಟೊʼ ಮಹಿಳಾ ಚಲನಚಿತ್ರೋತ್ಸವದಲ್ಲಿ ಮಾತವಲ್ಲದೆ, ಮಾಂಟ್ರಿಯಲ್‌ನ ʼಸೌತ್ ಏಷ್ಯಾ ಫಿಲ್ಮ್ ಫೆಸ್ಟಿವಲ್ʼ, ಆಮ್‌ಸ್ಟರ್‌ಡ್ಯಾಮ್‌ನ ʼಇಂಟರ್‌ನ್ಯಾಶನಲ್ ಡಾಕ್ಯುಮೆಂಟರಿ ಫಿಲ್ಮ್ ಫೆಸ್ಟಿವಲ್ʼ, ʼಡಾಕ್ ನ್ಯೂಯಾರ್ಕ್ʼ, ʼಸನ್‌ಡಾನ್ಸ್ ಫಿಲ್ಮ್  ಫೆಸ್ಟಿವಲ್ʼ ಸೇರಿದಂತೆ ಜಗತ್ತಿನಾದ್ಯಂತ ಹಲವು ಚಿತ್ರೋತ್ಸವಗಳಿಗೆ ಪರಿಗಣಿಸಲಾಗಿದೆ ಎಂದು ಕವಿತಾ ಲಂಕೇಶ್‌ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಮ್ಮ ಸಾಕ್ಷ್ಯ ಚಿತ್ರದ ಕುರಿತಾಗಿ ಮಾತನಾಡಿರುವ ಕವಿತಾ ಲಂಕೇಶ್, “ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ 200ಕ್ಕೂ ಹೆಚ್ಚು ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಬೇರೆ ಬೇರೆ ರೀತಿಯ ದಾಳಿಗಳು ನಡೆದಿವೆ. 30ಕ್ಕೂ ಹೆಚ್ಚು ಪತ್ರಕರ್ತರನ್ನು ಕಳೆದ ದಶಕದಲ್ಲಿ ಹತ್ಯೆ ಮಾಡಲಾಗಿದೆ. ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ 180ರಲ್ಲಿ 150ಕ್ಕೆ ಕುಸಿದಿದೆ. ಭಿನ್ನಮತೀಯರು ಮತ್ತು ಪತ್ರಕರ್ತರ ಮೇಲಿನ ದಾಳಿಗಳು ಹೊಸದಲ್ಲ. ಈ ವಿಚಾರ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಆದರೆ, ಕಳೆದ ದಶಕದಲ್ಲಿನ ಈ ದಾಳಿಗಳು ತೀವ್ರ ರೂಪದಲ್ಲಿದ್ದು, ಚಿಂತಿಸಬೇಕಾದ ವಿಷಯಗಳಾಗಿವೆ” ಎಂದಿದ್ದಾರೆ. 

ʼಗೌರಿʼ ಸಾಕ್ಷ್ಯಚಿತ್ರ, ಭಾರತದಲ್ಲಿ ಪತ್ರಕರ್ತರು ಪ್ರತಿದಿನ ಎದುರಿಸುತ್ತಿರುವ ಮೌಖಿಕ, ದೈಹಿಕ ದಾಳಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ತಮ್ಮ ದಿಟ್ಟ ವರದಿಗಳ ಕಾರಣಕ್ಕಾಗಿ 80ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸಿದ್ದ ಗೌರಿಯವರು, ರಾಜ್ಯಾದ್ಯಂತ ಓಡಾಡುತ್ತಾ ಅದನ್ನೊಂದು ಅವಕಾಶವನ್ನಾಗಿ ಹೇಗೆ ಬಳಸಿಕೊಂಡರು ಎಂಬ ವಿವರಣೆ ಈ ಸಾಕ್ಷ್ಯಚಿತ್ರದಲ್ಲಿದೆ. 

ಈ ಸುದ್ದಿ ಓದಿದ್ದೀರಾ? ಗೆಲುವಿನ ಬೆನ್ನಲ್ಲೇ ʻಬ್ರಹ್ಮಾಸ್ತ್ರ ಭಾಗ 2ʼಗೆ ಸಜ್ಜಾದ ಅಯಾನ್ ಮುಖರ್ಜಿ

ಆಮ್‌ಸ್ಟರ್‌ಡ್ಯಾಮ್‌ನ ʼಫ್ರೀ ಪ್ರೆಸ್ ಅನ್‌ಲಿಮಿಟೆಡ್ʼ ಸಂಸ್ಥೆ ʼಗೌರಿʼ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದೆ. ಈ ಸಂಸ್ಥೆ ತಮ್ಮ ವೃತ್ತಿಪರ ಸೇವೆಯ ಕಾರಣದಿಂದಾಗಿ ಹಿಂಸಾಚಾರಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ಪತ್ರಕರ್ತರ ಸಾಕ್ಷ್ಯಚಿತ್ರಗಳ ಪ್ರಸ್ತಾಪಕ್ಕೆ ಕರೆ ನೀಡಿತ್ತು. ಸುಮಾರು 300 ಪ್ರಸ್ತಾವನೆಗಳು ಬಂದಿದ್ದವು. ಆ ಪೈಕಿ ನಾಲ್ಕು ಚಿತ್ರಗಳನ್ನು ʼಫ್ರೀ ಪ್ರೆಸ್ʼ ಆಯ್ಕೆ ಮಾಡಿದ್ದು, ಅದರಲ್ಲಿ ‘ಗೌರಿ’ ಸಾಕ್ಷ್ಯಚಿತ್ರವೂ ಒಂದು.

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180