
- ವಿಜಯ ದಶಮಿಗೆ ಸೆಟ್ಟೇರಿದ 'ನೋಟರಿ'
- ಪವನ್ ವಡೆಯರ್ ಹೊಸ ಪ್ರಯತ್ನಕ್ಕೆ ಅಭಿಮಾನಿಗಳ ಮೆಚ್ಚುಗೆ
ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಡೈರೆಕ್ಟರ್ ಎನ್ನಿಸಿಕೊಂಡಿರುವ ಪವನ್ ಒಡೆಯರ್ ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಗೂಗ್ಲಿ, ರಣ ವಿಕ್ರಮ, ನಟ ಸೌರ್ವಭೌಮ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಪವನ್, ತಾವು ಬಾಲಿವುಡ್ಗೆ ಎಂಟ್ರಿ ನೀಡುತ್ತಿರುವ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಈಗಾಗಲೇ ಚಿತ್ರದ ಕಥೆಯನ್ನು ಸಿದ್ಧಪಡಿಸಿರುವ ಅವರು 'ಫೈನಲ್ ಡ್ರಾಫ್ಟ್' ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತಾವು ಬಾಲಿವುಡ್ ಪ್ರವೇಶಿಸುತ್ತಿರುವ ಬಗ್ಗೆ ಖಚಿತಪಡಿಸಿದ್ದಾರೆ.
The new Beginning ✨️
— Pavan Wadeyar (@PavanWadeyar) October 6, 2022
"NOTARY"
My Debut in Hindi film industry.@b_shabbir @paramspeak @geetabasra @natashamalpani @wadeeyar_movies @PurohitApeksha pic.twitter.com/m6ebDwUtzp
ಪವನ್ ನಿರ್ದೇಶಿಸುತ್ತಿರುವ ಚೊಚ್ಚಲ ಬಾಲಿವುಡ್ ಚಿತ್ರಕ್ಕೆ 'ನೋಟರಿ' ಎಂದು ಹೆಸರಿಡಲಾಗಿದೆ. ವಿಜಯ ದಶಮಿಯ ಅಂಗವಾಗಿ ಬುಧವಾರ ಮಧ್ಯಪ್ರದೇಶದ ಭೋಪಾಲ್ನಲ್ಲಿ 'ನೋಟರಿ' ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ದೊರೆತಿದೆ. ಪರಿ, ಕಹಾನಿ ಸೇರಿದಂತೆ ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಪರಂಬ್ರತಾ ಚಟ್ಟೋಪಾಧ್ಯಾಯ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಾಯಕಿಯ ಪಾತ್ರ ನಿರ್ವಹಿಸಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೊಸ ಪ್ರಯೋಗಗಳಿಗೆ ಅಣಿಯಾಗುತ್ತಿರುವ ಪವನ್ ಕೇವಲ ನಿರ್ದೇಶನಕ್ಕೆ ಮಾತ್ರ ಸೀಮಿತವಾಗದೆ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ. ಡೊಳ್ಳು ಚಿತ್ರದ ನಿರ್ಮಾಣಕ್ಕಾಗಿ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಅವರು, 2023ನೇ ಸಾಲಿನ ಆಸ್ಕರ್ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.