ಜನುಮದಿನ | 40ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಮಲಯಾಳಂ ನಟ ಫಹಾದ್‌ ಫಾಸಿಲ್‌ ಅಭಿನಯದ ಅತ್ಯುತ್ತಮ ಚಿತ್ರಗಳು

ಮಲಯಾಳಂ ಚಿತ್ರರಂಗದ ಅತ್ಯುತ್ತಮ ನಟರೊಳಗೆ ಗುರುತಿಸಿಕೊಳ್ಳುವ ಫಹಾದ್‌ ಫಾಸಿಲ್‌ 40 ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರು ನಟಿಸಿರುವ ಪ್ರಮುಖ ಸಿನಿಮಾಗಳ ಒಂದು ಝಲಕ್
fahad fazil

ಮಲಯಾಳಂನ ಅತ್ಯುತ್ತಮ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಫಹಾದ್‌ ಫಾಸಿಲ್‌ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2002ರಲ್ಲಿ 'ಕೈಯೆತ್ತುಂ ದೂರತ್‌' ಸಿನಿಮಾ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ಫಹಾದ್‌ ಮೊದಲ ಚಿತ್ರದಲ್ಲೇ ಹೀನಾಯ ಸೋಲು ಕಾಣುತ್ತಾರೆ. ಚೊಚ್ಚಲ ಚಿತ್ರದ ಸೋಲನ್ನು ಸವಾಲನ್ನಾಗಿ ಸ್ವೀಕರಿಸಿ ಬರೋಬ್ಬರಿ 7 ವರ್ಷಗಳ ಕಾಲ ಸಿನಿಮಾದಿಂದ ಅಂತರ ಕಾಯ್ದುಕೊಳ್ಳುವ ಅವರು, ಅಮೆರಿಕಗೆ ತೆರಳಿ ಸಿನಿಮಾ ಮತ್ತು ನಟನೆಯ ಕುರಿತು ಅಧ್ಯಯನ ನಡೆಸುತ್ತಾರೆ. ಅದಾದ ಬಳಿಕ 2009ರಲ್ಲಿ 'ಕೇರಳ ಕೆಫೆ' ಚಿತ್ರದ ತೆರೆಗೆ ಮರಳುವ ಫಹಾದ್‌, ತಾವೊಬ್ಬ ಅದ್ಭುತ ನಟ ಎಂಬುದನ್ನು ಸಾಬೀತುಪಡಿಸುತ್ತಾರೆ. ಜನುಮದಿನದ ದಿನದ ಹಿನ್ನೆಲೆಯಲ್ಲಿ ಫಹಾದ್‌ ಸಿನಿ ಪಯಣವನ್ನು ಮೆಲುಕು ಹಾಕುವ ಸಲುವಾಗಿ ಅವರು ನಟಿಸಿದ ಪ್ರಮುಖ ಹತ್ತು ಚಿತ್ರಗಳನ್ನು ಪಟ್ಟಿ ಇಲ್ಲಿದೆ.

ಕೇರಳ ಕೆಫೆ

'ಕೇರಳ ಕೆಫೆ' ಫಹಾದ್‌ ವೃತ್ತಿ ಬದುಕಿಗೆ ತಿರುವು ನೀಡಿದ ಸಿನಿಮಾ. ಖ್ಯಾತ ನಿರ್ದೇಶಕರಾದ ರಂಜಿತ್‌ ಬಾಲಕೃಷ್ಣನ್‌, ಶಾಜಿ ಕೈಲಾಸ್‌, ಲಾಲ್‌ ಜೋಸ್‌ ಸೇರಿದಂತೆ ಮಲಯಾಳಂನ 10 ಮಂದಿ ನಿರ್ದೇಶಕರು ಒಟ್ಟುಗೂಡಿ ಈ ಸಿನಿಮಾ ನಿರ್ದೇಶಿಸಿದ್ದರು. ಮಮ್ಮುಟ್ಟಿ, ಪೃಥ್ವಿರಾಜ್‌ ಸುಕುಮಾರನ್‌, ಸುರೇಶ್‌ ಗೋಪಿ, ದಿಲೀಪ್‌, ಜಯಸೂರ್ಯ, ಸೂರಜ್‌ ವೆಂಜಾರಮೂಡು, ನವ್ಯಾ ನಾಯರ್‌, ನಿತ್ಯಾ ಮೆನನ್‌ ಸೇರಿದಂತೆ ಮಲಯಾಳಂನ ಖ್ಯಾತ ಕಲಾವಿದರು ನಟಿಸಿದ್ದ ಈ ಚಿತ್ರದಲ್ಲಿ ಫಹಾದ್‌ ಪತ್ರಕರ್ತನ ಪಾತ್ರ ನಿಭಾಯಿಸಿದ್ದರು. 

ಅನ್ನಯುಂ ರಸೂಲುಂ

2013ರಲ್ಲಿ ತೆರೆಕಂಡಿದ್ದ 'ಅನ್ನಯುಂ ರಸೂಲುಂ' ಚಿತ್ರದಲ್ಲಿ ಫಹಾದ್‌ ಮತ್ತು ಆಂಡ್ರಿಯಾ ಜೆರೆಮಿಯಾ ಜೊತೆಯಾಗಿ ನಟಿಸಿದ್ದರು. ಟ್ಯಾಕ್ಸಿ ಡ್ರೈವರ್‌ ರಸೂಲ್‌ ಮತ್ತು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಅನ್ನಯುಂ. ಇವರಿಬ್ಬರ ನಡುವಿನ ಸುಂದರ ಪ್ರೇಮಕಥೆಯನ್ನು ತೆರೆ ಅಳವಡಿಸುವಲ್ಲಿ ನಿರ್ದೇಶಕ ರಾಜೀವ್‌ ರವಿ ಯಶಸ್ವಿಯಾಗಿದ್ದರು. 'ಅನ್ನಯುಂ ರಸೂಲುಂ' ರಾಜೀವ್‌ ನಿರ್ದೇಶನದ ಚೊಚ್ಚಲ ಸಿನಿಮಾ ಕೂಡ ಹೌದು. ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ನಾರ್ಥ್‌ 24 ಕಾದಂ

2013ರಲ್ಲಿ ಅನಿಲ್‌ ರಾಧಾಕೃಷ್ಣನ್‌  ಮೆನನ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ 'ನಾರ್ಥ್‌ 24 ಕಥಂ' ಚಿತ್ರದಲ್ಲಿ ಫಹಾದ್‌ ʼಒಸಿಪಿಡಿʼ (ಒಬ್ಸೆಸಿವ್ ಕಂಪಲ್ಸಿವ್ ಪರ್ಸನಾಲಿಟಿ ಡಿಸಾರ್ಡರ್) ಎಂಬ ಕಾಯಿಲೆಯಿಂದ ಬಳಲುತ್ತಿರುವ ʼಸಾಫ್ಟವೇರ್‌ ಆರ್ಕಿಟೆಕ್ಟ್‌ʼ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಪರೂಪದ ಕಾಯಿಲೆ ಹೊಂದಿರುವ ವ್ಯಕ್ತಿಯೊಬ್ಬ ಪಡುವ ಪಾಡು ಮತ್ತು ಆತ ಮಾನಸಿಕವಾಗಿ ಗಟ್ಟಿಯಾಗಲು ಸಹಕಾರಿಯಾಗುವ ಒಂದು ಆಕಸ್ಮಿಕ ಪ್ರಯಾಣದ ಜೊತೆಗೆ ಈ ಚಿತ್ರದ ಕಥೆಯನ್ನು ಪ್ರಯೋಗಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದರು ನಿರ್ದೇಶಕರು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು.

ಆರ್ಟಿಸ್ಟ್‌

ಶ್ಯಾಮ್‌ ಪ್ರಸಾದ್‌ ನಿರ್ದೇಶನದ 'ಆರ್ಟಿಸ್ಟ್‌' ಚಿತ್ರದಲ್ಲಿ ಫಹಾದ್‌, ಮೈಕಲ್‌ ಎಂಬ ಚಿತ್ರಕಲಾವಿದನ ಪಾತ್ರದಲ್ಲಿ ನಟಿಸಿದ್ದರು. ಕಲಾವಿದನಾಗಿ ಬದುಕಿ ಕಟ್ಟಿಕೊಳ್ಳುವ ಬಯಕೆ ಹೊಂದಿರುವ ಮೈಕಲ್‌ ಗಾಯಿತ್ರಿಯ ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ. ಗಾಯಿತ್ರಿ ಕೂಡ ಚಿತ್ರ ಕಲಾವಿದೆಯಾಗುವ ಕನಸು ಕಂಡಾಕೆ. ಇಬ್ಬರೂ ಕಲಾವಿದರು ಜೊತೆಯಾಗಿ ಮಹತ್ವದ್ದೇನನ್ನೊ ಸಾಧಿಸುತ್ತೀವಿ ಎಂಬ ವಿಶ್ವಾಸದಲ್ಲಿ ಬದುಕು ಸಾಗಿಸುತ್ತಿರುವಾಗಲೇ ಮೈಕಲ್‌ ಅಪಘಾತದಲ್ಲಿ ತನ್ನ ದೃಷ್ಟಿ ಕಳೆದುಕೊಂಡು ಜೀವನ ನಿರ್ವಹಣೆಗೆ ಹೆಣಗಾಡುವ ಸ್ಥಿತಿ ತಲುಪುತ್ತಾನೆ. ಅದಾದ ಬಳಿಕ ಅವರಿಬ್ಬರ ಬದುಕಿನಲ್ಲಾಗುವ ಬೆಳವಣಿಗೆಗಳನ್ನು ಚಿತ್ರದಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ. ಈ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಫಹಾದ್‌ ಅವರಿಗೆ ಕೇರಳ ಸರ್ಕಾರ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಿತ್ತು.

ಮಹೇಶಿಂಟೆ ಪ್ರತೀಕಾರಂ

ದಿಲೀಶ್‌ ಪೋಥನ್‌ ನಿರ್ದೇಶನದಲ್ಲಿ 2016ರಲ್ಲಿ ಬಿಡುಗಡೆಯಾಗಿದ್ದ 'ಮಹೇಶಿಂದೆ ಪ್ರತಿಕಾರಂ' ಚಿತ್ರದಲ್ಲಿ ಫಹಾದ್‌ ಸಾಮಾನ್ಯ ಛಾಯಾಗ್ರಾಹಕ ಪಾತ್ರವನ್ನು ನಿಭಾಯಿಸಿದ್ದರು. ಚಿಕ್ಕ ಪೇಟೆಯೊಂದರಲ್ಲಿ ಫೋಟೋ ಸ್ಟುಡಿಯೋ ನಡೆಸುವ ಮಹೇಶ. ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಕಾಣಿಸಿಕೊಂಡು ಬಹುಮಾನ ಗೆಲ್ಲುವ ಸಲುವಾಗಿ ಫೋಟೋ ತೆಗೆಸಿಕೊಳ್ಳಲು ಮಹೇಶನ ಸ್ಟುಡಿಯೋಗೆ ಬರುವ ಸೌಮ್ಯ, ಮುಂದೆ ಆತನ ಬದುಕಿನ ಭಾಗವಾಗುತ್ತಾಳೆ. ಹಾಸ್ಯಮಯವಾಗಿ ಸಾಗುವ ಈ ರೋಮ್ಯಾಂಟಿಕ್‌ ಡ್ರಾಮಾದಲ್ಲಿ  ನಡೆಯುವ ಆಕಸ್ಮಿಕ ಘಟನೆಯಿಂದಾಗಿ ಮಹೇಶ ಪ್ರತಿಕಾರಕ್ಕೆ ಸಜ್ಜಾಗುತ್ತಾನೆ. ತನ್ನ ಸೇಡು ತೀರುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಊರ ಜನರ ಮುಂದೆ ಶಪಥ ಮಾಡುತ್ತಾನೆ. ಮಹೇಶ ಮತ್ತು ಆತನ ಪ್ರೀತಿ, ಪ್ರತಿಕಾರದ ಸುತ್ತ ಸಾಗುವ ಈ ಕಥನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ದೊರೆತಿದೆ.

ತೊಂಡಿಮುತ್ತಾಲುಂ ದೃಕ್ಸಾಕ್ಷಿಯುಂ

2017ರಲ್ಲಿ ತೆರೆಕಂಡಿದ್ದ 'ತೊಂಡಿಮೊದಲುಂ ದೃಕ್ಷಾಕ್ಷಿಯುಂ' ಚಿತ್ರದಲ್ಲಿ ಫಹಾದ್‌, ಸರಗಳ್ಳ ಪ್ರಸಾದ್‌ ಪಾತ್ರದಲ್ಲಿ ನಟಿಸಿದ್ದರು. ನಿರ್ದೇಶಕ ಸಜೀವ್‌ ಪಳೂರ್‌ ಈ ಚಿತ್ರವನ್ನು ಒಂದು ಸರಗಳ್ಳತನ ಪ್ರಕರಣದ ಸುತ್ತ ಹೆಣೆದಿದ್ದಾರೆ. ಬಸ್‌ನಲ್ಲಿ ನವ ವಿವಾಹಿತೆಯ ಕೊರಳಲ್ಲಿದ್ದ ಸರವನ್ನು ಕದ್ದು ಸಿಕ್ಕಿ ಬೀಳುವ ಪ್ರಸಾದ್‌ ಪೊಲೀಸರ ಅತಿಥಿಯಾಗುತ್ತಾನೆ. ಆತ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಬಳಿಕ ನಡೆಯುವ ಇಡೀ ಪ್ರಸಂಗವನ್ನು ಹಾಸ್ಯಮಯವಾಗಿ, ಸಸ್ಪೆನ್ಸ್‌ ಜೊತೆಗೆ ಕಟ್ಟಿಕೊಡಲಾಗಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.  

ನ್ಯಾನ್ ಪ್ರಕಾಶನ್

2018ರಲ್ಲಿ ಬಿಡುಗಡೆಯಾಗಿದ್ದ 'ನ್ಯಾನ್ ಪ್ರಕಾಶನ್' ಚಿತ್ರದಲ್ಲಿ ಫಹಾದ್‌, ಪ್ರಕಾಶ್‌ ಎಂಬ ನರ್ಸಿಂಗ್‌ ಓದಿದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿದೇಶಿ ವಾಸ್ತವ್ಯದ ಮೋಹಕ್ಕೆ ಬೀಳುವ ಪ್ರಕಾಶ, ತಾನು ಜರ್ಮನಿ ಸೇರಲು ಆಡುವ ಪ್ರೀತಿಯ ನಾಟಕದ ಸುತ್ತ ಚಿತ್ರದ ಕತೆಯನ್ನು ಹೆಣೆಯಲಾಗಿತ್ತು. ಸತ್ಯನ್‌ ಅಂಥಿಕಾಡ್‌ ಈ ಚಿತ್ರವನ್ನು ನಿರ್ದೇಶಿಸಿದ್ದರು. 

ಕುಂಬಲಂಗಿ ನೈಟ್ಸ್‌

2019ರಲ್ಲಿ ತೆರೆಕಂಡಿದ್ದ 'ಕುಂಬಲಂಗಿ ನೈಟ್ಸ್‌' ಚಿತ್ರ ಕೂಡ ಪ್ರೇಕ್ಷಕರ ಗಮನ ಸೆಳೆದಿತ್ತು. ಮಧು ಸಿ ನಾರಾಯಣನ್‌ ನಿರ್ದೇಶನದ ಈ ಚೊಚ್ಚಲ ಚಿತ್ರದಲ್ಲಿ ಫಹಾದ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ಬಂಡವಾಳವನ್ನು ಹೂಡಿದ್ದರು. ಶೌಬಿನ್‌ ಶಾಹಿರ್‌ ಮುಖ್ಯಭೂಮಿಕೆಯ ಕೌಟುಂಬಿಕ ಕಥಾಹಂದರವುಳ್ಳ 'ಕುಂಬಲಂಗಿ ನೈಟ್ಸ್‌' ಯುವನಟ ಶೇನೆ ನಿಗಮ್‌ ಕೂಡ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. 

ಟ್ರಾನ್ಸ್‌

2020ರಲ್ಲಿ ಅನ್ವರ್‌ ರಶೀದ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಟ್ರಾನ್ಸ್‌' ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತ್ತು. ಈ ಚಿತ್ರದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಭಾರೀ ಅಕ್ರಮಗಳನ್ನು ಪ್ರಮುಖವಾಗಿ ತೋರಿಸಲಾಗಿತ್ತು. ಈ ಚಿತ್ರದಲ್ಲಿ ಫಹಾದ್‌ ಧರ್ಮದ ಹೆಸರಲ್ಲಿ ಚಮತ್ಕಾರಗಳನ್ನು ಮಾಡಿ ಜನರನ್ನು ಸೆಳೆಯುವ ಜೋಶುವಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ʼಸಸ್ಪೆನ್ಸ್‌, ಕ್ರೈಂ, ಥ್ರಿಲ್ಲರ್‌ ಕಥಾಹಂದರದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು.

ಜೋಜಿ

2021ರಲ್ಲಿ ತೆರೆಗೆ ಬಂದಿದ್ದ ಸಸ್ಪೆನ್ಸ್‌, ಕ್ರೈಂ ಕಥಾಹಂದರದ 'ಜೋಜಿ' ಚಿತ್ರವನ್ನು ದಿಲೀಶ್‌ ಪೋಥನ್‌ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಫಹಾದ್‌ ಜೋಜಿಯಾಗಿ ಕಾಣಿಸಿಕೊಂಡಿದ್ದರು. ಕೌಟುಂಬಿಕ ಕಲಹದ ಸುತ್ತ ಸಾಗುವ ಚಿತ್ರದ ಕತೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಫಹಾದ್‌, 'ಜೋಜಿ' ಪಾತ್ರವನ್ನು ನಿರ್ವಹಿಸಿದ ರೀತಿಗೆ ವಿಮರ್ಶಕರಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು.

ಮಾಲಿಕ್‌

2021ರಲ್ಲಿ ಧರ್ಮ ರಾಜಕಾರಣದ ಸುತ್ತ ಮೂಡಿಬಂದಿದ್ದ ಫಹಾದ್‌ ಫಾಸಿಲ್‌ ಮುಖ್ಯಭೂಮಿಕೆಯ 'ಮಾಲಿಕ್‌' ಚಿತ್ರ ಕೂಡ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಫಹಾದ್‌ ಅವರ ಆಪ್ತ ಮಹೇಶ್‌ ನಾರಾಯಣ್‌ ಈ ಚಿತ್ರವನ್ನು ನಿರ್ದೇಶಿಸಿದ್ದರು.

 

ತಮಿಳಿನ 'ಸೂಪರ್‌ ಡಿಲಕ್ಸ್‌', ತೆಲುಗಿನ 'ಪುಷ್ಪ', 'ವಿಕ್ರಮ್‌' ಕಳೆದ ಎರಡು ವಾರಗಳ ಹಿಂದೆ ತೆರೆಗೆ ಬಂದ 'ಮಲಯನ್‌ ಕುಂಜು' ಸಿನಿಮಾಗಳಲ್ಲಿನ ನಟನೆ ಫಾಸಿಲ್‌ ಈ ಕಾಲಮಾನದ ಅದ್ಭುತ ನಟ ಎಂಬುದನ್ನು ಮತ್ತೆ ಸಾಬೀತು ಪಡಿಸಿದೆ. ಪಾತ್ರಗಳಲ್ಲಿ ಜೀವಿಸುವ ಅಪರೂಪದ ನಟನಿಗೆ ಜನುಮದಿನ ಶುಭಾಶಯ. 

ನಿಮಗೆ ಏನು ಅನ್ನಿಸ್ತು?
0 ವೋಟ್