ಕಾಶ್ಮೀರಿ ಪಂಡಿತರ ಕುರಿತ ಹೇಳಿಕೆ; ವಿಚಾರಣೆಗೆ ಹಾಜರಾಗಲು ಸಾಯಿ ಪಲ್ಲವಿಗೆ ಹೈಕೋರ್ಟ್ ಸೂಚನೆ

Sai_Pallavi
  • ನಟಿಯ ವಿರುದ್ಧ ದೂರು ದಾಖಲಿಸಿದ ಭಜರಂಗ ದಳ ಕಾರ್ಯಕರ್ತ
  • ಕಾಶ್ಮೀರಿ ಪಂಡಿತರ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಸಾಯಿ ಪಲ್ಲವಿ

ವಿರಾಟ ಪರ್ವಂ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿ ಮಿಶ್ರ ಪ್ರತಿಕ್ರಿಯೆ ಎದುರಿಸಿದ್ದ ಬಹುಭಾಷಾ ನಟಿ ಸಾಯಿ ಪಲ್ಲವಿ ಅವರಿಗೆ ಪೊಲೀಸ್ ವಿಚಾರಣೆ ಎದುರಿಸುವಂತೆ ತೆಲಂಗಾಣ ಹೈಕೋರ್ಟ್ ಸೂಚಿಸಿದೆ.

ಸಾಯಿ ಪಲ್ಲವಿ ಅವರ ಹೇಳಿಕೆಯನ್ನು ವಿರೋಧಿಸಿ ತೆಲಂಗಾಣದ ಭಜರಂಗದಳದ ಕಾರ್ಯಕರ್ತ ಅಖಿಲ್ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಜೂನ್ 21ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ ನೋಟೀಸ್ ನೀಡಿದ್ದರು. ನೋಟೀಸ್ ರದ್ದುಗೊಳಿಸುವಂತೆ ಕೋರಿ ಸಾಯಿ ಪಲ್ಲವಿ ತೆಲಂಗಾಣ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ನಟಿಯ ಅರ್ಜಿ ವಿಚಾರಣೆ  ನಡೆಸಿರುವ ನ್ಯಾಯಮೂರ್ತಿ ಲಲಿತಾ ಅವರ ಪೀಠ ನೋಟೀಸ್ ರದ್ದುಗೊಳಿಸಲು ನಿರಾಕರಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಚಿತ್ರದ ಪ್ರಚಾರದ ವೇಳೆ ತೆಲುಗಿನ ಗ್ರೇಟ್‌ ಆಂಧ್ರ ಯೂಟ್ಯೂಬ್‌ ಚಾನಲ್‌ ಸಾಯಿ ಪಲ್ಲವಿ ಅವರನ್ನು ಸಂದರ್ಶಿಸಿತ್ತು. ಈ ವೇಳೆ ನಿರೂಪಕರು ಎಡ ಮತ್ತು ಬಲ ಪಂಥಗಳ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ನಟಿ, ನಾನು  ಎರಡೂ ಪಂಥಗಳ ಪ್ರಭಾವಕ್ಕೆ ಒಳಗಾಗದೆ ಬೆಳೆದಿದ್ದೇನೆ ಎಂದಿದ್ದರು.

ಈ ಸುದ್ದಿ ಓದಿದ್ದೀರಾ? ಸಂಚಲನ ಸೃಷ್ಟಿಸಿದ ಪೊನ್ನಿನ್ ಸೆಲ್ವನ್ ಟೀಸರ್

ಹಿಂಸೆಯನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದಿದ್ದ ನಟಿ, "ಕಾಶ್ಮೀರಿ ಪಂಡಿತರ ಹತ್ಯಾಕಾಂಡವಾಗಲಿ, ಹಸು ಸಾಗಿಸುತ್ತಿದ್ದ ಅಮಾಯಕ ಮುಸಲ್ಮಾನರ ಮೇಲಿನ ದಾಳಿಯೇ ಆಗಲಿ, ಈ ಎರಡೂ ಘಟನೆಗಳು ಹಿಂಸೆಯನ್ನೇ ಪ್ರತಿಪಾದಿಸುತ್ತವೆ. ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ ಎಂದಿಗೂ ಖಂಡನೀಯ" ಎಂದಿದ್ದರು. 

ಸಾಯಿ ಪಲ್ಲವಿ ಅವರ ಹಿಂಸೆ ವಿರುದ್ಧ ಹೇಳಿಕೆಯ ವಿಡಿಯೋ ತುಣುಕುಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿತ್ತು. ನಟಿಯ ಹೇಳಿಕೆಗೆ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದಾದ ಬೆನ್ನಲ್ಲೇ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ್ದ, ಸಾಯಿ ಪಲ್ಲವಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಸ್ಪಷ್ಟನೆ ನೀಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್