ಸಿನಿ ಶುಕ್ರವಾರ | ಈ ವಾರ 7 ಚಿತ್ರಗಳು ತೆರೆಗೆ | ಪೆಟ್ರೋಮ್ಯಾಕ್ಸ್‌ ಹೊತ್ತು ಬಂದ ಸತೀಶ್‌ ನೀನಾಸಂ

Petromax
  • ʼಗಾರ್ಗಿʼಯಾಗಿ ಕನ್ನಡಕ್ಕೆ ಬಂದ ಸಾಯಿ ಪಲ್ಲವಿ
  • ಅನಿಶ್‌ ನಟನೆಯ 'ಬೆಂಕಿ' ಸಿನಿಮಾ ತೆರೆಗೆ

ಈ ಶುಕ್ರವಾರ ಸ್ಯಾಂಡಲ್‌ವುಡ್‌ನಲ್ಲಿ 7 ಸಿನಿಮಾಗಳು ಬಿಡುಗಡೆಯಾಗಿವೆ. ಸತೀಶ್‌ ನೀನಾಸಂ ಅಭಿನಯದ 'ಪೆಟ್ರೋಮ್ಯಾಕ್ಸ್‌', ನಟಿ ಸಾಯಿ ಪಲ್ಲವಿ ಅಭಿನಯದ 'ಗಾರ್ಗಿ', ಅಕ್ಷಿತ್‌ ಶಶಿಕುಮಾರ್‌ ನಟನೆಯ ಎರಡನೇ ಸಿನಿಮಾ ʼಓ ಮೈ ಲವ್‌ʼ ಸೇರಿದಂತೆ 7 ಚಿತ್ರಗಳು ಈ ವಾರ ತೆರೆಕಂಡಿವೆ.

ಪೆಟ್ರೋಮ್ಯಾಕ್ಸ್‌ 

'ಸಿದ್ಲಿಂಗು', 'ನೀರ್‌ದೋಸೆ' ಖ್ಯಾತಿಯ ನಿರ್ದೇಶಕ ವಿಜಯ್‌ ಪ್ರಸಾದ್‌ ನಿರ್ದೇಶನದ, ನಟ ಸತೀಶ್‌ ನೀನಾಸಂ ಮುಖ್ಯಭೂಮಿಕೆಯ 'ಪೆಟ್ರೋಮ್ಯಾಕ್ಸ್‌' ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಟ್ರೈಲರ್‌ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಈ ಸಿನಿಮಾ ಮೇಲ್ನೋಟಕ್ಕೆ ಹಾಸ್ಯಪ್ರಧಾನ ಎಂಬಂತೆ ಕಂಡರೂ, ಚಿತ್ರದಲ್ಲಿ ಗಂಭೀರವಾದ ವಿಚಾರಗಳನ್ನು ಚರ್ಚೆಗೆತ್ತುಕೊಂಡಿದ್ದೇನೆ ಎಂದು ನಿರ್ದೇಶಕರು ಭರವಸೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಸತೀಶ್‌ಗೆ ಹರಿಪ್ರಿಯಾ ಜೋಡಿಯಾಗಿ ಕಾಣಿಸಿಕೊಂಡಿದ್ದು, ಅಚ್ಯುತ್‌ಕುಮಾರ್‌, ನಾಗಭೂಷಣ್‌, ಸುಮನ್‌ ರಂಗನಾಥ್‌, ಕಾರುಣ್ಯ ರಾಮ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಧೀರ್‌ ಕೆಎಂ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದಾರೆ.

ಗಾರ್ಗಿ

ಬಹುಭಾಷಾ ನಟಿ ಸಾಯಿ ಪಲ್ಲವಿ ಅಭಿನಯದ ಬಹು ನಿರೀಕ್ಷಿತ ಗಾರ್ಗಿ ಸಿನಿಮಾ ಇಂದು ಏಕಕಾಲಕ್ಕೆ ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ತೆರೆಕಂಡಿದೆ. ಗೌತಮ್‌ ರಾಮಚಂದ್ರನ್‌ ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ ಶಿಕ್ಷಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಸುಳ್ಳು ಪ್ರಕರಣವೊಂದರಲ್ಲಿ ಜೈಲು ಪಾಲಾಗುವ ತಂದೆಯ ಬಿಡುಗಡೆಗಾಗಿ ಹೋರಾಡುವ ದಿಟ್ಟ ಹೆಣ್ಣುಮಗಳ ಪಾತ್ರದಲ್ಲಿ ಸಾಯಿ ಪಲ್ಲವಿ ಮಿಂಚಿದ್ದಾರೆ. ಚಿತ್ರದ ಕನ್ನಡ ಅವತರಣಿಕೆಗೆ ಸ್ವತಃ ಸಾಯಿ ಪಲ್ಲವಿ ಅವರೇ ಡಬ್‌ ಮಾಡಿರುವುದು ಈ ಚಿತ್ರದ ವಿಶೇಷ. ಚಿತ್ರದ ಕನ್ನಡ ಅವತರಣಿಕೆಯ ವಿತರಣೆಯ ಹಕ್ಕನ್ನು ಕನ್ನಡದ ಸ್ಟಾರ್‌ ನಟ ರಕ್ಷಿತ್‌ ಶೆಟ್ಟಿ ಪಡೆದುಕೊಂಡಿದ್ದಾರೆ.

ಬೆಂಕಿ

'ಅಕಿರ', 'ವಾಸು ನಾನ್‌ ಪಕ್ಕಾ ಕಮರ್ಷಿಯಲ್‌', 'ರಾಮಾರ್ಜುನ' ಚಿತ್ರಗಳ ಮೂಲಕ ಕನ್ನಡದ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟ ಅನೀಶ್‌ ತೇಜೇಶ್ವರ್‌ ಇದೀಗ 'ಬೆಂಕಿ' ಸಿನಿಮಾದ ಮೂಲಕ ಮತ್ತೆ ತೆರೆಗೆ ಮರಳಿದ್ದಾರೆ. ಅನೀಶ್‌ ಅಭಿನಯದ 'ಬೆಂಕಿ' ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಎ ಆರ್‌ ಶಾನ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ 'ಅಣ್ಣ- ತಂಗಿ' ನಡುವಿನ ಬಾಂಧವ್ಯದ ಸುತ್ತ ಮೂಡಿ ಬಂದಿದೆ. ಚಿತ್ರದಲ್ಲಿ ಅನೀಶ್‌ಗೆ 'ರೈಡರ್‌' ಖ್ಯಾತಿಯ ನಟಿ ಸಂಪದ ಹುಲಿವಾನ ಜೊತೆಯಾಗಿದ್ದಾರೆ. ಯುವ ನಟಿ ಶ್ರುತಿ ಪಾಟೀಲ್‌ ಅವರು ಅನೀಶ್‌ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಚ್ಯುತ್‌ ಕುಮಾರ್‌, ಸಂಪತ್‌ ಕುಮಾರ್‌, ಉಗ್ರಂ ಮಂಜು, ಚಂದ್ರಕೀರ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಅನೀಶ್‌ ನಿಭಾಯಿಸಿದ್ದಾರೆ.

ಓ ಮೈ ಲವ್‌

ʼಸೀತಾಯಣʼದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದ ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ʼಓ ಮೈ ಲವ್‌ʼ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬಂದಿದ್ದಾರೆ. ಗೆಳೆತನ, ಪ್ರೀತಿ ಮತ್ತು ಕೌಟುಂಬಿಕ ಕಥಾಹಂದರದ 'ಓ ಮೈ ಲವ್‌' ಚಿತ್ರವನ್ನು ಸ್ಮೈಲ್‌ ಶ್ರೀನು ನಿರ್ದೇಶಿಸಿದ್ದಾರೆ. ಜಿ ರಾಮಾಂಜಿನಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕೀರ್ತಿ ಕಲಕೇರಿ, ಅಕ್ಷಿತ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ, ನಿರ್ದೇಶಕ ಎಸ್‌. ನಾರಾಯಣ್‌, ಸಾಧು ಕೋಕಿಲ, ಸಂಗೀತಾ ಅನಿಲ್‌, ಪವಿತ್ರಾ ಲೋಕೇಶ್‌ ಸೇರಿದಂತೆ ಪ್ರಮುಖ ಕಲಾವಿದರು ಚಿತ್ರದಲ್ಲಿದ್ದಾರೆ.

ಚೇಸ್‌

ಟ್ರೈಲರ್‌ ಮೂಲಕ ಸಖತ್‌ ಸದ್ದು ಮಾಡಿದ್ದ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ 'ಚೇಸ್‌' ಇಂದು ಬಿಡುಗಡೆಯಾಗಿದೆ. ಯುವತಿಯೊಬ್ಬಳ ಸಾವಿನ ಸುತ್ತ ಹೆಣೆಯಲಾದ 'ಚೇಸ್‌' ಕತೆಗೆ ವಿಲೋಕ್‌ ಶೆಟ್ಟಿ ನಿರ್ದೇಶನವಿದೆ. ಅವಿನಾಶ್‌ ಎಸ್‌ ದಿವಾಕರ್‌, ರಾಧಿಕಾ ನಾರಾಯಣ್‌, ಶೀತಲ್‌ ಶೆಟ್ಟಿ, ಅರ್ಜುನ್‌ ಯೋಗೇಶ್‌ ರಾಜ್‌, ರಾಜೇಶ್‌ ನಟರಂಗ ಸೇರಿದಂತೆ ಬಹುತಾರಾಗಣವನ್ನು ಹೊಂದಿರುವ ಈ ಚಿತ್ರವನ್ನು ಮನೋಹರ್‌ ಸುವರ್ಣ ನಿರ್ಮಾಣ ಮಾಡಿದ್ದಾರೆ.

ಶ್ರೀಹರಿ ಆನಂದ್‌ ನಿರ್ದೇಶನದ 'ಕರ್ಮಣ್ಯೇ ವಾಧಿಕಾರಸ್ತೇ' ಮತ್ತು ಮಿತುನ್‌ ಚಂದ್ರಶೇಖರ್‌ ಆಕ್ಷನ್‌ ಕಟ್‌ ಹೇಳಿರುವ 'ಪದ್ಮಾವತಿ' ಚಿತ್ರ ಕೂಡ ಇಂದು ತೆರೆಗೆ ಬಂದಿವೆ.

ನಿಮಗೆ ಏನು ಅನ್ನಿಸ್ತು?
1 ವೋಟ್