ವೆಬ್‌ ಸರಣಿ ರೂಪ ಪಡೆದ ಕುಖ್ಯಾತ ತಮಿಳ್‌ ರಾಕರ್ಸ್‌ ಕತೆ

tamilrockerz
  • ʼಸೋನಿ ಲಿವ್‌ʼನಲ್ಲಿ ಬಿಡುಗಡೆಯಾಗಲಿದೆ ಸರಣಿ
  • ಸಿನಿಗಳ್ಳರ ಕತೆಯಲ್ಲಿ ಖಾಕಿ ತೊಟ್ಟ ಅರುಣ್‌ ವಿಜಯ್‌

ಯಾವುದೇ ಭಾಷೆಯ ಸಿನಿಮಾ ಅಥವಾ ವೆಬ್‌ ಸರಣಿಗಳು ತೆರೆಕಂಡು ಗಂಟೆಗಳು ಕಳೆಯುವ ಹೊತ್ತಿಗೆ ಆ ಸಿನಿಮಾಗಳು ತಮಿಳ್‌ ರಾಕರ್ಸ್‌ ವೆಬ್‌ಸೈಟ್‌ನಲ್ಲಿ ಲಭ್ಯವಾಗಿರುತ್ತವೆ. ಪೈರಸಿ ವಿಚಾರದಲ್ಲಿ ಸಿನಿಮಾ ಮಂದಿಯನ್ನು ದುಸ್ವಪ್ನದಂತೆ ಕಾಡುತ್ತಿರುವ ಕುಖ್ಯಾತ ತಮಿಳ್‌ ರಾಕರ್ಸ್‌ ತಂಡದ ಬಗ್ಗೆ ಇದೀಗ ವೆಬ್‌ ಸರಣಿಯೊಂದು ಮೂಡಿಬರುತ್ತಿದೆ.

ಕೇವಲ ಕಾಲಿವುಡ್‌ ಮಾತ್ರವಲ್ಲದೆ, ಎಲ್ಲ ಚಿತ್ರರಂಗಗಳಿಗೂ ಮಾರಕವಾಗಿ ಬೆಳೆದು ನಿಂತಿರುವ ತಮಿಳ್‌ ರಾಕರ್ಸ್‌ ಬಗ್ಗೆ ತಮಿಳಿನಲ್ಲೇ ವೆಬ್‌ ಸರಣಿ ಸಿದ್ಧವಾಗುತ್ತಿದೆ. ಅರಿವಳಗನ್‌ ನಿರ್ದೇಶನದ ಈ ಸರಣಿಯ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಿನಿ ರಸಿಕರ ಕುತೂಹಲ ಹೆಚ್ಚಿಸಿದೆ. ಬಹುಭಾಷಾ ನಟ ಅರುಣ್‌ ವಿಜಯ್‌ ಈ ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.  

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು ಕ್ಷಣ ಮಾತ್ರಗಳಲ್ಲಿ ಹೇಗೆ ಪೈರಸಿಯಾಗುತ್ತವೆ. ಸಿನಿಮಾಗಳನ್ನು ನಕಲು ಮಾಡಿ ಹರಿಬಿಡುವ ಪೈರಸಿ ಜಾಲ ಹೇಗೆ ಕಾರ್ಯ ನಿರ್ವಹಿಸುತ್ತದೆ? ಈ ನಕಲಿ ಜಾಲದಿಂದಾಗಿ ಚಿತ್ರದ ನಿರ್ಮಾಪಕರು ಮತ್ತು ಸಿನಿಮಾವನ್ನೇ ನಂಬಿಕೊಂಡು ಬದುಕುತ್ತಿರುವ ಲಕ್ಷಾಂತರ ಕುಟುಂಬಗಳು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ? ಈ ಸಿನಿಗಳ್ಳರ ಗುಂಪನ್ನು ಮಟ್ಟ ಹಾಕಲು ತಮಿಳು ನಿರ್ಮಾಪಕರ ಸಂಘ ಮತ್ತು ಪೊಲೀಸ್‌ ಇಲಾಖೆ ನಡೆಸುವ ಹರಸಾಹಸಗಳನ್ನು ಟೀಸರ್‌ನಲ್ಲಿ ಸೂಚ್ಯವಾಗಿ ತೋರಿಸಲಾಗಿದೆ. ತಮಿಳ್‌ ರಾಕರ್ಸ್‌ ಸರಣಿ ಶೀಘ್ರದಲ್ಲೇ 'ಸೋನಿ ಲಿವ್‌' ಒಟಿಟಿ ವೇದಿಕೆಯಲ್ಲಿ ತೆರೆ ಕಾಣಲಿದೆ.

ಈ ಸುದ್ದಿ ಓದಿದ್ದೀರಾ? ಬಾಲಕಿಯರ ಎದುರು ಅಸಭ್ಯ ವರ್ತನೆ: ಮಲಯಾಳಂ ನಟ ಶ್ರೀಜಿತ್‌ ರವಿ ಬಂಧನ

ಹಾಲಿವುಡ್‌ ಸಿನಿಮಾಗಳಿಂದ ಹಿಡಿದು ಎಲ್ಲಾ ರೀತಿಯ ಚಿತ್ರಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅವುಗಳನ್ನು ನಕಲು ಮಾಡಿ ಟೆಲಿಗ್ರಾಂ ಸೇರಿದಂತೆ ನಾನಾ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಅದೃಶ್ಯ ತಮಿಳ್‌ ರಾಕರ್ಸ್‌ ತಂಡ ಪೈರಸಿಯಿಂದ ಕೋಟಿಗಟ್ಟಲೇ ಸಂಪಾದಿಸುತ್ತದೆ. ಬಹುಕೋಟಿ ಬಂಡವಾಳ ಹೂಡಿ ಸಿನಿಮಾ ಮಾಡುವ ನಿರ್ಮಾಪಕರ ಪಾಲಿಗೆ ತಮಿಳ್‌ ರಾಕರ್ಸ್‌ ಎಂದರೆ ದುಸ್ವಪ್ನವೇ ಸರಿ. ಈ ತಂಡದ ಪೈರಸಿ ಹಾವಳಿ ಅದೇಷ್ಟರ ಮಟ್ಟಿಗೆ ಇದೆಯೆಂದರೆ, ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾದರೆ ತಮ್ಮ ಚಿತ್ರವನ್ನು ಯಾರೂ ನಕಲು ಮಾಡಿ ಹರಿಬಿಡದಂತೆ ತಡೆಯಲು ಚಿತ್ರತಂಡ ಮೊದಲು ಆಂಟಿ ಪೈರಸಿ ತಂಡವನ್ನು ನಿಯೋಜನೆ ಮಾಡುತ್ತದೆ. ಚಿತ್ರತಂಡದ ಮುನ್ನೆಚ್ಚರಿಕಾ ಕ್ರಮಗಳ ಹೊರತಾಗಿಯೂ ತಮಿಳ್‌ ರಾಕರ್ಸ್‌ ಸಿನಿಮಾಗಳನ್ನು ನಕಲು ಮಾಡಿ ಹರಿಬಿಡುತ್ತದೆ. 

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿರುವ ತಮಿಳ್‌ ರಾಕರ್ಸ್‌ ಹೆಸರಿನ ಈ ತಂಡ ಹಲವು ವರ್ಷಗಳಿಂದ ಅದೃಶ್ಯವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಎಲ್ಲ ರೀತಿಯ ಚಿತ್ರಗಳಿಗೂ ಕನ್ನ ಹಾಕುವ ಈ ಸಿನಿಗಳ್ಳರು ಎಲ್ಲಿದ್ದಾರೆ. ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು ಇಲ್ಲ. ಪೈರಸಿ ಪ್ರಕರಣಗಳಿಗೆ ಸಂಬಂಧಿಸಿ 2018ರಲ್ಲಿ ಕೇರಳ ಪೊಲೀಸರು ಕಾರ್ತಿ, ಸುರೇಶ್‌ ಮತ್ತು ಪ್ರಭು ಎಂಬುವವರನ್ನು ಬಂಧಿಸಿದ್ದರು. ಈ ಮೂವರು ತಮಿಳ್‌ ರಾಕರ್ಸ್‌ ತಾಣದ ಸಂಸ್ಥಾಪಕರು ಎನ್ನಲಾಗಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್