ಅಕ್ರಮ ಹಣ ವರ್ಗಾವಣೆ ಪ್ರಕರಣ| ಇಡಿ ಆರೋಪಪಟ್ಟಿ ಸಲ್ಲಿಕೆ; ನಟಿ ಜಾಕ್ವೆಲಿನ್‌ಗೆ ಎದುರಾಯ್ತು ಸಂಕಷ್ಟ!

jacqueline fernandez
  • ಜಾಕ್ವೆಲಿನ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ಇ ಡಿ ಅಧಿಕಾರಿಗಳು
  • 52 ಲಕ್ಷದ ಕುದುರೆ, 9 ಲಕ್ಷದ ಪರ್ಶಿಯನ್‌ ಬೆಕ್ಕು ಉಡುಗೊರೆ ಪಡೆದಿದ್ದ ನಟಿ

ಬಾಲಿವುಡ್‌ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸುಖೇಶ್‌ ಚಂದ್ರಶೇಖರ್‌ ಪ್ರಮುಖ ಆರೋಪಿಯಾಗಿರುವ 215 ಕೋಟಿ ರೂಪಾಯಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ʼಇಡಿʼ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಪ್ರಕರಣದಲ್ಲಿ ಜಾಕ್ವೆಲಿನ್ ಕೂಡ ಆರೋಪಿ ಎಂದು ಉಲ್ಲೇಖಿಸಲಾಗಿದೆ.

ಜಾಕ್ವಲಿನ್‌ ಜೊತೆಗೆ ಆತ್ಮೀಯವಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಸುಖೇಶ್, ನಟಿಗೆ 5 ಕೋಟಿ 71 ಲಕ್ಷ ಮೌಲ್ಯದ ಉಡುಗೊರೆಗಳನ್ನು ನೀಡಿದ್ದು, 52 ಲಕ್ಷ ಮೌಲ್ಯದ ಕುದುರೆ, 9 ಲಕ್ಷ ಬೆಲೆ ಬಾಳುವ ಪರ್ಶಿಯನ್‌ ಬೆಕ್ಕನ್ನು ಕೂಡ ಜಾಕ್ವೆಲಿನ್‌ ಉಡುಗೊರೆಯಾಗಿ ಪಡೆದಿದ್ದರು ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ.

ಜೈಲು ಶಿಕ್ಷೆಗೆ ಗುರಿಯಾಗಿದ್ದ ಉದ್ಯಮಿ ಮಾನವೀಂದರ್‌ ಸಿಂಗ್‌ ಅವರನ್ನು ಜೈಲಿನಿಂದ ಹೊರತರುವುದಾಗಿ ಅವರ ಪತ್ನಿಯನ್ನು ನಂಬಿಸಿದ್ದ ಸುಖೇಶ್‌, ಹಂತ ಹಂತವಾಗಿ ಆಕೆಯಿಂದ 215 ಕೋಟಿ ರೂಪಾಯಿ ಪಡೆದು ವಂಚಿಸಿದ್ದ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? 'ಸಲಾರ್‌' ಬಿಡುಗಡೆ ದಿನಾಂಕ ಘೋಷಣೆ: ಎದುರಾಳಿಯಾಗಿ ಬರಲು ಸಜ್ಜಾದ 'ಫೈಟರ್‌'

ಇಡಿ ಅಧಿಕಾರಿಗಳು ಪ್ರಕರಣದ ತನಿಖೆ ಚುರುಕುಗೊಳಿಸಿದ ಬಳಿಕ ಆರೋಪಿ ಸುಖೇಶ್‌ಗೆ ಬಾಲಿವುಡ್‌ ನಟಿಯರ ಜೊತೆಗೆ ನಂಟಿರುವುದು ತಿಳಿದು ಬಂದಿತ್ತು. ಜಾಕ್ವೆಲಿನ್‌ ಜೊತೆಗೆ ಆತ್ಮೀಯವಾಗಿದ್ದ ಸುಖೇಶ್‌, ನಟಿಗೆ ಐಶಾರಾಮಿ ಕಾರು, ದುಬಾರಿ ವಾಚ್‌ ಸೇರಿದಂತೆ 5 ಕೋಟಿಗೂ ಅಧಿಕ ಮೌಲ್ಯದ ಉಡುಗೊರೆಗಳನ್ನು ನೀಡಿರುವುದು ಬೆಳಕಿಗೆ ಬಂದಿತ್ತು. ಕೇವಲ ಜಾಕ್ವೆಲಿನ್‌ ಮಾತ್ರವಲ್ಲದೆ ಆಕೆಯ ಕುಟುಂಬದ ಸದಸ್ಯರಿಗೂ ಸುಖೇಶ್‌ ಹಣ ನೀಡಿರುವುದನ್ನು ಇ ಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್‌ ಕೂಡ ಆರೋಪಿ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಇ ಡಿ ಅಧಿಕಾರಿಗಳು ಹಲವು ಬಾರಿ ಜಾಕ್ವೆಲಿನ್‌ ವಿಚಾರಣೆ ನಡೆಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್