ಈ ದಿನ ವಿಶೇಷ | ಮಣಿರತ್ನಂ, ರೆಹಮಾನ್‌ ಜೋಡಿಯ ಚಿತ್ರಕ್ಕೆ ಹಾಡು ಬರೆದಿದ್ದು ವಿಶೇಷ ಖುಷಿ; ಜಯಂತ್‌ ಕಾಯ್ಕಿಣಿ

Jayanth Kaikini
  • ಮಣಿರತ್ನಂ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಚಿತ್ರ
  • ಯೂಟ್ಯೂಬ್‌ನಲ್ಲಿ ಬಿಡುಗಡೆ, 6.5 ಲಕ್ಷ ಬಾರಿ ವೀಕ್ಷಣೆ

ಭಾರೀ ನಿರೀಕ್ಷೆ ಹುಟ್ಟಿಸಿರುವ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್‌ ಸೆಲ್ವನ್‌' ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಗೀತೆಗೆ ಕನ್ನಡದ ಸಾಹಿತ್ಯವನ್ನು ಬರೆದವರು ಜಯಂತ್‌ ಕಾಯ್ಕಿಣಿ.

ನೂರಾರು ರಮ್ಯ ಹಾಡುಗಳ ಮೂಲಕ ಮನೆ ಮಾತಾಗಿರುವ ಜಯಂತ್ ಕಾಯ್ಕಿಣಿ ಅವರನ್ನು 'ಪೊನ್ನಿಯಿನ್‌ ಸೆಲ್ವನ್‌' ಚಿತ್ರಕ್ಕೆ ಹಾಡು ಬರೆಯುವಂತೆ ಮಣಿರತ್ನಂ ಆಹ್ವಾನಿಸಿದ್ದು, ಚಿತ್ರಕ್ಕಾಗಿ 7 ಹಾಡುಗಳನ್ನು ಬರೆದಿದ್ದಾರೆ. ಮೊದಲ ಹಾಡು 'ಪೊನ್ನಿ ನದಿ' ಯೂಟ್ಯೂಬ್‌ನಲ್ಲಿ ಈಗಾಗಲೇ ಆರೂವರೆ ಲಕ್ಷ ವೀಕ್ಷಣೆಗಳನ್ನು ಕಂಡಿದೆ.

ಕಾರ್ತಿ ಕಾಣಿಸಿಕೊಂಡಿರುವ ಹಾಡನ್ನು ನಕುಲ್ ಅಭಯಂಕರ್‌, ಎ ಆರ್‌ ರಯಾನ್ಹಾ, ಬಂಬಾ ಬಾಕ್ಯ ಹಾಡಿದ್ದಾರೆ. ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ಜಯಂತ್‌ ಕಾಯ್ಕಿಣಿ ಮಣಿರತ್ನಂ, ರೆಹಮಾನ್‌ ಅವರೊಂದಿಗೆ ಗುರುತಿಸಿಕೊಂಡ ಅನುಭವ ಹಂಚಿಕೊಂಡರು.

"ಏಪ್ರಿಲ್‌ ತಿಂಗಳಲ್ಲಿ ನನಗೆ ಕರೆ ಮಾಡಿದ್ದರು. ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದರಿಂದ ಕನ್ನಡದಲ್ಲಿ ಬರುವ ಸಿನಿಮಾಕ್ಕೆ ಹಾಡುಗಳನ್ನು ಬರೆದುಕೊಡಲು ಕೇಳಿದರು. ಮೂಲ ತಮಿಳು ಸಿನಿಮಾ. ತಮಿಳು ಹಾಡುಗಳನ್ನು ಅನುವಾದ ಮಾಡಬೇಕಿತ್ತು. ಆದರೆ ಯಥಾವತ್ತು ಹಾಗೇ ಆಗಿರಬೇಕಿಲ್ಲ ಎಂದು ನನಗೊಂದು ಸೃಜನಶೀಲ ಸ್ವಾತಂತ್ರ್ಯ ಕೊಟ್ಟರು. ನಾನು ಬರೆದೆ" ಎಂದು ಅವಕಾಶ ಸಿಕ್ಕ ಉತ್ಸಾಹದ ಕ್ಷಣವನ್ನು ಮೆಲುಕು ಹಾಕಿದರು.

"ಮಣಿರತ್ನಂ ಸಿನಿಮಾವನ್ನು, ರೆಹಮಾನ್‌ ಅವರ ಹಾಡುಗಳನ್ನು ದಶಕಗಳಿಂದ ಕೇಳಿಕೊಂಡು ಬಂದವನು ನಾನು. ಅವರಿಬ್ಬರ ದೊಡ್ಡ ಅಭಿಮಾನಿ. 'ರೋಜಾ'ದಿಂದ ಹಿಡಿದು 'ಬಾಂಬೆ', 'ನಾಯಗನ್‌' ಚಿತ್ರಗಳನ್ನು ನೋಡಿದ್ದೇನೆ. ಚಿತ್ರ ಸಂವೇದನೆಯನ್ನು ಮಣಿರತ್ನಂ ರೂಪಿಸಿದರೆ, ಸಂಗೀತ ಸಂವೇದನೆಯನ್ನು ರೆಹಮಾನ್‌ ರೂಪಿಸಿದರು. ಇವರ ಚಿತ್ರಗಳಿಗೆ ಹಾಡು ಬರೆಯುವುದು ವಿಶೇಷವಾದ ಖಾಸಗಿ ಖುಷಿ" ಎಂದು ತಮ್ಮ ಸಂತಸ ಹಂಚಿಕೊಂಡರು.

ಈ ಸುದ್ದಿ ಓದಿದ್ದೀರಾ? | ಶಿವ- ರವಿ 61ನೇ ಹುಟ್ಟು ಹಬ್ಬ ಆಚರಣೆಯ ಫಿಲ್ಮ್‌ ಚೇಂಬರ್‌ ಯೋಜನೆಗೆ ಅಡ್ಡಿಯಾದರೆ ಸಾ ರಾ ಗೋವಿಂದು?

"ಬರೆಯುವುದು ಸುಲಭವಿರಲಿಲ್ಲ. ಐತಿಹಾಸಿಕ ಚಿತ್ರ. 'ಕಲ್ಕಿ' ಕಾದಂಬರಿ ಆಧರಿಸಿದ್ದು. ಅದರ ಭಾಷೆಯೇ ಬೇರೆ. ಆಡು ಭಾಷೆಯ ಪ್ರೇಮಗೀತೆಗಳನ್ನು ಬರೆದಿದ್ದೀನಿ. ಆದರೆ ಆ ಚಿತ್ರಕ್ಕೆ ಐತಿಹಾಸಿಕ ಸೊಗಡಿದೆ. ಹಾಗಾಗಿ ನನಗೆ ಒಂದು ಸವಾಲಿತ್ತು. ಆದರೆ ಆನಂದಿಸಿದೆ. ಮೊದಲನೆಯ ಹಾಡು ಬಿಡುಗಡೆಯಾಗಿದೆ" ಎಂದು ತಿಳಿಸಿದರು.

'ಪೊನ್ನಿಯಿನ್‌ ಸೆಲ್ವನ್‌' ಚಿತ್ರ ಎರಡು ಭಾಗಗಳಲ್ಲಿ ಹೊರಬರುತ್ತಿದೆ. ಜಯಂತ್ ಕಾಯ್ಕಿಣಿ ಮೊದಲ ಭಾಗದಲ್ಲಿ 7 ಹಾಡುಗಳನ್ನು ಬರೆದಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಎರಡನೆಯ ಭಾಗದಲ್ಲಿ ಜಯಂತ್ ಬರೆದ 5 ಹಾಡುಗಳಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್