ಕಾಳಿ ವಿವಾದ | ನನ್ನ ಕಾಳಿ ಶಕ್ತಿ, ಸತ್ಯ ಹಾಗೂ ಸ್ವಾತಂತ್ರ್ಯದ ಅಚಲ ಚೇತನ ಎಂದ ನಿರ್ದೇಶಕಿ ಲೀನಾ

ಕಾಳಿ ಸಿನಿಮಾ ನಿರ್ದೇಶಕಿ ಲೀನಾ ಅವರು ಸಿನಿಮಾ ಪೋಸ್ಟರ್‌ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಭಾರತದ ಇಂದಿನ ವಾಸ್ತವತೆಗಳ ಬಗ್ಗೆ ಮಾತನಾಡಿದ್ದಾರೆ.

ʻಕಾಳಿʼ ಸಿನಿಮಾದ ಪೋಸ್ಟರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದ ಭುಗಿಲೆದ್ದಿದ್ದು, ಸಿನಿಮಾ ನಿರ್ದೇಶಕಿ, ಲೀನಾ ಮಣಿಮೇಕಲೈ ಅವರನ್ನು ಬಂಧಿಸಬೇಕು, ಸಿನಿಮಾವನ್ನು ಬಹಿಷ್ಕರಿಸಬೇಕು ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.  ಈ ಬಗ್ಗೆ ಇಂಗ್ಲಿಷ್ ಪತ್ರಿಕೆ 'ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌'ಗೆ ನೀಡಿದ ಸಂದರ್ಶನದಲ್ಲಿ ಕಾಳಿ ಸಿನಿಮಾದ ಹಿನ್ನೆಲೆ ಮತ್ತು ಭಾರತದ ಇಂದಿನ ವಾಸ್ತವತೆಗಳ ಬಗ್ಗೆ ಮಾತನಾಡಿದ್ದಾರೆ. ಆ ಸಂದರ್ಶನದ ಸಂಕ್ಷಿಪ್ತ ವಿವರ ಇಲ್ಲಿದೆ

ಲೀನಾ ನೋಡುವ ಕಾಳಿ ಮಾತೆ

ನನ್ನ ಪ್ರಕಾರ, ಕಾಳಿ ಎಂದರೆ ಸತ್ಯ, ಶಕ್ತಿ ಹಾಗೂ ಸ್ವಾತಂತ್ರ್ಯದ ವಾಸಸ್ಥಾನ. ಒಂದು ರೀತಿಯಲ್ಲಿ ಅಚಲ ಚೇತನವಿದ್ದಂತೆ. ನಮ್ಮ ಹಳ್ಳಿಗಳ ದೇವಾಲಯಗಳಲ್ಲಿ ಮತ್ತು ತಮಿಳು ಹಬ್ಬಗಳಲ್ಲಿ ಪಾವಲಕಾಳಿ, ಕರುಂಕಾಳಿ, ಪಚ್ಚಕಾಳಿ ಹೀಗೆ ನಾನಾ ಅವತಾರಗಳು ಜನರ ಮೈಮೇಲೆ ಆತ್ಮಗಳಾಗಿ ಆವರಿಸುತ್ತವೆ. ಮೈಮೇಲೆ ಕಾಳಿ ಆವಾಹನೆಯಾದಂತೆ ಅವರು ಕುಣಿಯುತ್ತಾರೆ, ಧೂಮಪಾನ ಮಾಡುತ್ತಾ ಮದ್ಯ ಸೇವಿಸುತ್ತಾರೆ. ನನಗೆ ಗೊತ್ತಿರುವ ಕಾಳಿಯ ರೂಪ ಇದು. ನನ್ನನ್ನು ಆವರಿಸಿಕೊಂಡ ಕಾಳಿ ಟೊರೊಂಟೊದ ಡೌನ್‌ಟೌನ್ ನಗರದ ಬೀದಿಗಳಲ್ಲಿ ಸುತ್ತಾಡುತ್ತಾಳೆ. ಆಫ್ರಿಕನ್‌, ಏಷ್ಯನ್‌ ಮತ್ತು ಪರ್ಷಿಯನ್‌ ಮೂಲದವರು ಸೇರಿದಂತೆ ನಾನಾ ಜನಾಂಗಗಳಿಗೆ ಸೇರಿದ ಜನರನ್ನು ಭೇಟಿಯಾಗುತ್ತಾರೆ ಎಂದು ಸಂದರ್ಶನದಲ್ಲಿ ವಿವರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಉಚ್ಚ ನ್ಯಾಯಾಲಯವನ್ನೇ ಕಪಿಮುಷ್ಠಿಯಲ್ಲಿಟ್ಟುಕೊಂಡಿದೆ 40% ಕಮಿಷನ್‌ ಸರ್ಕಾರ: ಆಪ್‌ ಆರೋಪ

ಕಾಳಿ ಸಿನಿಮಾ ಬಹಿಷ್ಕರಿಸಬೇಕೆಂಬ ಕರೆ

ಭಾರತದಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರವು ಹಿಂದೂ ಮೂಲಭೂತವಾದಿ, ನಿರಂಕುಶ ಹಾಗೂ ಫ್ಯಾಸಿಸ್ಟ್ ಸರ್ಕಾರವಾಗಿದೆ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು ಆಳುತ್ತಿದ್ದಾರೆ. ಗಲಭೆಗಳ ಮೂಲಕ ಅಧಿಕಾರಕ್ಕೆ ಬರುತ್ತಾರೆ. ಅಲ್ಪಸಂಖ್ಯಾತರು, ದಲಿತರನ್ನು ಹತ್ಯೆ ಮಾಡುತ್ತಿದ್ದಾರೆ. ನಿರಂತರವಾಗಿ ನರಮೇಧದ ಮೂಲಕ ಭಯದ ವಾತಾವರಣ ಸೃಷ್ಟಿಸಿ ಅದನ್ನೇ ಮತಬ್ಯಾಂಕ್‌ ಮಾಡಿಕೊಳ್ಳುತ್ತಿದ್ದಾರೆ. ಕಲಾವಿದರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ಪ್ರತಿಭಟನಾಕಾರರು ಹೀಗೆ ಒಬ್ಬರಿಂದೊಬ್ಬರನ್ನು ಸೆರೆಮನೆಗೆ ತಳ್ಳುತ್ತಾ ಇಡೀ ದೇಶವನ್ನೇ ತೆರೆದ ಬಂಧೀಖಾನೆ ಮಾಡಲಿದ್ದಾರೆ. ಇಡೀ ಆಡಳಿತವೇ ಈ ದೇಶವನ್ನು ಕತ್ತಲೆಯ ಕೂಪಕ್ಕೆ ಕೊಂಡೊಯ್ಯುತ್ತಿದೆ ಎಂಬ ಕಾರಣಕ್ಕೆ ನನ್ನ ಕಲೆ ಮತ್ತು ಅಸ್ತಿತ್ವವನ್ನು ನಾನು ಸ್ವಯಂ ಸೆನ್ಸಾರ್‌ ಮಾಡಲು ಸಾಧ್ಯವಿಲ್ಲ. ಸ್ವಯಂ ಸೆನ್ಸಾರ್‌ಶಿಪ್‌ ಒಬ್ಬ ಕಲಾವಿದನಿಗೆ ಮರಣವಿದ್ದಂತೆ ಎಂದಿದ್ದಾರೆ.

ಸಿನಿಮಾ ನಿಷೇಧಿಸುವ ಬಗ್ಗೆ

ಅಂತರ್ಜಾಲದ ಯುಗದಲ್ಲಿ ಯಾವುದನ್ನೂ ನಿಷೇಧಿಸಲು ಸಾಧ್ಯವಿಲ್ಲ. ಸಾಮ್ರಾಜ್ಯಶಾಹಿ ಸರ್ಕಾರಗಳ ರಕ್ಷಣಾ ವಿಷಯಗಳು ಇದರಿಂದ ಹೊರತಾಗಿಲ್ಲ. ನನ್ನ ಕವಿತೆಗಳು, ಸಿನಿಮಾಗಳನ್ನು ನಿಷೇಧಿಸಬೇಕೆಂದು ಮತಾಂಧ ಗುಂಪುಗಳು ಒತ್ತಾಯಿಸಿದವು. ಏನೇ ಸಮಸ್ಯೆಗಳಿದ್ದರೂ ಕಲೆ ಒಂದಲ್ಲಾ ಒಂದು ರೀತಿಯಲ್ಲಿ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ. ನಾನೊಬ್ಬ ಮಹಿಳೆಯಾಗಿ ಮತ್ತು ಕಲಾವಿದೆಯಾಗಿ ನನ್ನ ಜೀವನದುದ್ದಕೂ ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಎಲ್ಲದಕ್ಕೂ ಸಿದ್ಧಳಿದ್ದೇನೆ ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್