ಹಿಂದು ದೇವತೆಗಳ ಮೇಲೆ ಸಿನಿಮಾ ಮಾಡಲು ಹೊರಟರೆ ಕೆಂಗಣ್ಣಿಗೆ ಗುರಿಯಾಗುತ್ತೇವೆ: ಲೀನಾ ಮಣಿಮೇಕಲೈ

leena
  • ಲೀನಾ ಮಣಿಮೇಕಲೈ ಅವರ ಕಾಳಿ ಪೋಸ್ಟರ್‌ ಟ್ವೀಟ್‌ ತೆಗೆದು ಹಾಕಿದ ಟ್ವಿಟರ್‌
  • ಜೀವ ಬೆದರಿಕೆ ಟ್ವೀಟ್‌ ನಿಯಮ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಿದ ನಿರ್ದೇಶಕಿ

ಕಾಳಿ ಪಾತ್ರದಾರಿ ಸಿಗರೇಟ್ ಸೇದುತ್ತಿರುವ ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್ ಹಂಚಿಕೊಂಡು ಸುದ್ದಿಯಾಗಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ, ಪೋಸ್ಟರ್‌ ಹಂಚಿಕೊಂಡ ನಂತರದಲ್ಲಾದ ಬೆಳವಣಿಗೆಗಳು ಮತ್ತು ತಾವು ಕಾಳಿಯನ್ನು ಕಾಣುವ ಬಗೆ ವಿವರಿಸಿದ್ದಾರೆ.

ಪೋಸ್ಟರ್ ವಿವಾದಕ್ಕೆ ಸಂಬಂಧಿಸಿ ಇತ್ತೀಚೆಗೆ 'ವಾಯ್ಸ್ ಆಫ್ ಅಮೆರಿಕ' ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು, "ನಾನು ಪೋಸ್ಟರ್‌ ಹಂಚಿಕೊಂಡ ಬಳಿಕ ಹಿಂದು ಸಂಘಟನೆಗಳು ಒತ್ತಡ ಹಾಕಿ ನಮ್ಮ ಸಾಕ್ಷ್ಯಚಿತ್ರದ ಪ್ರದರ್ಶನ ತಡೆದಿವೆ. ಟ್ವಿಟರ್‌ ಸಂಸ್ಥೆ, ನಾನು ಕಾಳಿ ಪೋಸ್ಟರ್‌ ಜೊತೆಗೆ ಹಂಚಿಕೊಂಡಿದ್ದ ಟ್ವೀಟ್‌ ಅನ್ನು ನನ್ನ ಖಾತೆಯಿಂದ ತೆಗೆದು ಹಾಕಿದೆ. ಈ ಬೆಳವಣಿಗೆಯ ಬಳಿಕ ನನಗೆ ಮತ್ತು ನನ್ನ ಕುಟುಂಬಸ್ಥರಿಗೆ ಟ್ವಿಟರ್‌ ಸೇರಿದಂತೆ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ 2 ಲಕ್ಷ ಮಂದಿ ಕರೆ ಮಾಡಿ, ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ" ಎಂದು ಹೇಳಿದ್ದಾರೆ.

ನಾನು ಕಾಳಿಯ ಪೋಸ್ಟರ್‌ ಹಂಚಿಕೊಂಡಿದ್ದು ತಪ್ಪು ಎಂದಾದರೆ ಆ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ದೊಡ್ಡ ವಿವಾದ ಸೃಷ್ಟಿಸಿದ ಟ್ರೋಲ್‌ ಪಡೆಗಳು ಮಾಡಿದ್ದೇನು? 2 ಲಕ್ಷ ಮಂದಿ ನೆಟ್ಟಿಗರು ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವಬೆದರಿಕೆ ಹಾಕುತ್ತಿದ್ದಾರಲ್ಲ ಅದು ತಪ್ಪಲ್ಲವೇ? ಅಯೋಧ್ಯೆಯ ಪೂಜಾರಿಯೊಬ್ಬ ವಿಡಿಯೋದಲ್ಲಿ ನನ್ನ ತಲೆ ಕಡಿಯುವ ಮಾತಾಡುತ್ತಾನೆ. ಈ ಬೆದರಿಕೆಯ ಟ್ವೀಟ್‌ಗಳು, ಸಂದೇಶಗಳ ಟ್ವಿಟರ್‌ ಅಥವಾ ಬೇರೆ ಸಂಸ್ಥೆಗಳ ನಿಯಮ ಉಲ್ಲಂಘಿಸುವುದಿಲ್ಲವೇ? 2 ಲಕ್ಷ ಮಂದಿಯ ಮೇಲೆ ನಾನು ಹೇಗೆ ದೂರು ಕೊಡಲಿ? ಯಾರ ಬಳಿ ದೂರಲಿ? ಕ್ರಮ ತೆಗೆದುಕೊಳ್ಳುವುದಾದರೂ ಯಾರು? ಭಾರತದಲ್ಲಿ ಕಾನೂನು ವ್ಯವಸ್ಥೆಯೇ ಇಲ್ಲವಾಗಿದೆ. ಇಲ್ಲಿನ ಸಂವಿಧಾನವೇ ಸತ್ತು ಹೋಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಕ್ಷ್ಯಚಿತ್ರದಲ್ಲಿ ಮರುಹುಟ್ಟು ಪಡೆಯುವ ಕಾಳಿ ಕಾಲಾಂತರಗಳ ಸಮಯ ಪ್ರಜ್ಞೆಯಂತೆ ವರ್ತಿಸುತ್ತಾಳೆ. ತನ್ನ ಹಕ್ಕಿನ ನೆಲಕ್ಕಾಗಿ ಹೋರಾಡುತ್ತಾಳೆ. ಕೊನೆಯಲ್ಲಿ ಭೂಮಿ ಯಾರದ್ದೂ ಸ್ವತ್ತಲ್ಲ. ಜೀವ ಜಗತ್ತು ನಿರಂತರ ಬದಲಾವಣೆ ಮತ್ತು ಹರಿವಿನಿಂದ ಕೂಡಿದೆ ಎಂಬ ಸತ್ಯವನ್ನು ಅರಿಯುತ್ತಾಳೆ. ಚಿತ್ರದ ಕೊನೆಯಲ್ಲಿ ನಿರ್ಗತಿಕನ ಜೊತೆಗೆ ಕಾಳಿ ಸಿಗರೇಟು ಹಂಚಿಕೊಳ್ಳುವ ದೃಶ್ಯವಿದೆ. ಅದೇ ದೃಶ್ಯದ ಪೋಸ್ಟರ್‌ ಅನ್ನು ನಾನು ಹಂಚಿಕೊಂಡಿದ್ದು" ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಕಾಶ್ಮೀರಿ ಪಂಡಿತರ ಕುರಿತ ಹೇಳಿಕೆ; ವಿಚಾರಣೆಗೆ ಹಾಜರಾಗಲು ಸಾಯಿ ಪಲ್ಲವಿಗೆ ಹೈಕೋರ್ಟ್ ಸೂಚನೆ

ತಾವು ಕಾಳಿಯನ್ನು ಕಾಣುವ ಬಗೆಯನ್ನು ವಿವರಿಸಿರುವ ಅವರು, "ನನ್ನ ಕಾಳಿ ವಿಲಕ್ಷಣಳು. ಆಕೆ ಸ್ವತಂತ್ರ ಚೇತನ. ಪಿತೃಪ್ರಾಧಾನ್ಯತೆ ಕಂಡು ಉಗಿಯುತ್ತಾಳೆ. ಹಿಂದುತ್ವವನ್ನು ಕಿತ್ತೆಸೆಯುತ್ತಾಳೆ. ಬಂಡವಾಳಶಾಹಿಗಳನ್ನು ದಮನಿಸುತ್ತಾಳೆ. ತನ್ನ ಸಾವಿರ ಕೈಗಳಿಂದ ಎಲ್ಲರನ್ನೂ ಬಿಗಿದಪ್ಪಿಕೊಳ್ಳುತ್ತಾಳೆ. ಇದು ನಾನು ನಂಬಿದ ಕಾಳಿಯ ಸ್ವರೂಪ. ಆದರೆ, ಭಾರತದಲ್ಲಿ ಹಿಂದು ದೇವತೆಗಳ ಮೇಲೆ ಸಿನಿಮಾ ಮಾಡಲು ಹೊರಟರೆ ಹಲವರ ಕೆಂಗಣ್ಣಿಗೆ ಗುರಿಯಾಗುತ್ತೇವೆ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್