
- ಟ್ಯೂನ್ ಕದ್ದ ಆರೋಪ ಎದುರಿಸುತ್ತಿರುವ ಕಾಂತಾರ ಚಿತ್ರತಂಡ
- ಕೇರಳ ಕೋರ್ಟ್ ಆದೇಶದ ಬೆನ್ನಲ್ಲೇ ಹಾಡಿನ ಟ್ಯೂನ್ ಬದಲು
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರʼ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ 400 ಕೋಟಿಗೂ ಅಧಿಕ ಮೊತ್ತವನ್ನು ಕಲೆ ಹಾಕಿದೆ. ಚಿತ್ರದ ಡಿಜಿಟಲ್ ಹಕ್ಕನ್ನು ಅಮೆಜಾನ್ ಪ್ರೈಂ ಒಟಿಟಿ ಸಂಸ್ಥೆ ಖರೀದಿ ಮಾಡಿದ್ದು, ಗುರುವಾರದಿಂದ ಚಿತ್ರ ಒಟಿಟಿಯಲ್ಲೂ ಪ್ರಸಾರವಾಗುತ್ತಿದೆ.
ʼಕಾಂತಾರʼ ಚಿತ್ರ ಭಾರೀ ಜನಪ್ರಿಯತೆ ಗಳಿಸುವುದರ ಜೊತೆಗೆ ಕೃತಿ ಚೌರ್ಯದ ಆರೋಪಕ್ಕೂ ಗುರಿಯಾಗಿತ್ತು. ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಮೊದ ಮೊದಲು ಕೃತಿಚೌರ್ಯ ಆರೋಪವನ್ನು ತಳ್ಳಿ ಹಾಕಿದ್ದ ಕಾಂತಾರ ಚಿತ್ರತಂಡ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಇದೀಗ ವಿವಾದಿತ ʼನವರಸಂʼ ಹಾಡಿನ ಟ್ಯೂನ್ ಅನ್ನು ಸಂಪೂರ್ಣವಾಗಿ ಬದಲಿಸಿದ್ದಾರೆ. ಈ ಮೂಲಕ ಕಾಂತಾರ ಚಿತ್ರತಂಡ ʼನವರಸಂʼ ಟ್ಯೂನ್ ಕದ್ದಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡಿತೆ ಎಂಬ ಚರ್ಚೆ ಕೂಡ ಶುರುವಾಗಿದೆ.
ವಿವಾದಿತ ʼವರಾಹ ರೂಪಂʼ ಹಾಡನ್ನು ಪ್ರಸಾರ ಮಾಡದಂತೆ ಈ ಹಿಂದೆ ಕೇರಳ ಕೋರ್ಟ್ ಕಾಂತಾರ ಚಿತ್ರತಂಡಕ್ಕೆ ಆದೇಶಿಸಿತ್ತು. ಅದರಂತೆ ಚಿತ್ರತಂಡ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ʼವರಾಹ ರೂಪಂʼ ಹಾಡಿನ ಟ್ಯೂನ್ ಬದಲಿಸಿದ್ದಾರೆ. ಹಳೆಯ ಟ್ಯೂನ್ ಬದಲಿಸಿ ಸಾಧಾರಣ ಎನ್ನಿಸುವ ಹೊಸ ಟ್ಯೂನ್ ಅನ್ನು ಸಂಯೋಜನೆ ಮಾಡಲಾಗಿದೆ. ʼವರಾಹ ರೂಪಂʼ ಬದಲಾದ ಆವೃತ್ತಿಯೇ ಸದ್ಯ ಅಮೆಜಾನ್ ಪ್ರೈಂನಲ್ಲಿ ಲಭ್ಯವಿರುವ ಕಾಂತಾರ ಚಿತ್ರದಲ್ಲಿ ಪ್ರಸಾರವಾಗುತ್ತಿದೆ.
ಕಾಂತಾರ ಸಿನಿಮಾ ತೆರೆಕಂಡ ಕೆಲವೇ ದಿನಗಳಿಗೆ ಚಿತ್ರದ ʼಟೈಟಲ್ ಟ್ರ್ಯಾಕ್ʼ ಎನ್ನಿಸಿಕೊಂಡಿರುವ ʼವರಾಹ ರೂಪಂʼ ಹಾಡು ನಕಲು ಮಾಡಿದ್ದು ಎಂಬುದನ್ನು ನೆಟ್ಟಿಗರು ಪತ್ತೆ ಹಚ್ಚಿದ್ದರು.
ಈ ಸುದ್ದಿ ಓದಿದ್ದೀರಾ? ಕೃತಿಚೌರ್ಯ ಆರೋಪ: 'ಕಾಂತಾರ' ಹಾಡಿನ ಪ್ರಸಾರಕ್ಕೆ ಕೇರಳ ಕೋರ್ಟ್ ತಡೆ
ಮಲಯಾಳಂನ ಜನಪ್ರಿಯ ಆಲ್ಬಂ ʼನವರಸಂʼನ ಟ್ಯೂನ್ ಕದ್ದು ʼವರಾಹ ರೂಪಂʼ ಹಾಡನ್ನು ಸೃಷ್ಟಿಸಿರುವ ಆರೋಪ ಕೇಳಿಬಂದಿತ್ತು. ʼನವರಸಂʼ ಆಲ್ಬಂ ಸೃಷ್ಟಿಸಿದ್ದ ಮಲಯಾಳಂನ ಜನಪ್ರಿಯ ಮ್ಯೂಸಿಕ್ ಬ್ಯಾಂಡ್ ʼಥೈಕ್ಕುಡಂ ಬ್ರಿಡ್ಜ್ʼ, ತಮ್ಮ ಅನುಮತಿ ಇಲ್ಲದೆ ʼನವರಸಂʼ ಟ್ಯೂನ್ ಬಳಸಿಕೊಂಡಿದ್ದಕ್ಕೆ ಚಿತ್ರತಂಡದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ, ವಿವಾದಿತ ಹಾಡಿನ ಪ್ರಸಾರಕ್ಕೆ ತಡೆ ನೀಡಿ ಆದೇಶ ಹೊರಡಿಸಿತ್ತು. ಇದಾದ ಬಳಿಕ ತಪ್ಪೊಪ್ಪಿಕೊಂಡಿರುವ ಚಿತ್ರತಂಡ ಹಾಡಿನ ಟ್ಯೂನ್ ಬದಲಿಸಿದೆ. ಸದ್ಯ ಬದಲಾದ ರೂಪದಲ್ಲಿ ʼವರಾಹ ರೂಪಂʼ ಹಾಡು ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.
ʼಕಾಂತಾರʼ ಚಿತ್ರತಂಡ ʼವರಾಹ ರೂಪಂʼ ಹಾಡಿನ ಟ್ಯೂನ್ ಬದಲಿಸಿದ ಬೆನ್ನಲ್ಲೇ ʼಇನ್ಸ್ಟಾಗ್ರಾಂʼ ಮೂಲಕ ಸಂತಸ ವ್ಯಕ್ತಪಡಿಸಿರುವ ʼಥೈಕ್ಕುಡಂ ಬ್ರಿಡ್ಜ್̧ʼ "ನಮ್ಮ ನವರಸಂ ಹಾಡಿನಿಂದ ನಕಲು ಮಾಡಿದ್ದ ಕಾಂತಾರ ಚಿತ್ರದ ಹಾಡನ್ನು ʼಅಮೆಜಾನ್ ಪ್ರೈಂʼ ತೆಗೆದು ಹಾಕಿದೆ. ಸತ್ಯಕ್ಕೆ ಜಯವಾಗಿದೆ. ಕಾನೂನು ಹೋರಾಟಕ್ಕೆ ಬೆಂಬಲಿಸಿದ ಅಭಿಮಾನಿಗಳು ಮತ್ತು ಮಾಧ್ಯಮದವರಿಗೆ ಧನ್ಯವಾದ ತಿಳಿಸಿದೆ.