ಸಂದರ್ಶನ | ಕಡೆಗಣಿಸಿದ ಸ್ಯಾಂಡಲ್‌ವುಡ್‌ ಮತ್ತೆ ಬಾಲಿವುಡ್‌ನತ್ತ ಮುಖ ಮಾಡಿದ ಜೆಕೆ

ಸ್ಯಾಂಡಲ್‌ವುಡ್‌ನಲ್ಲಿ ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಮುಂದೆಯೂ ನನ್ನನ್ನು ನ್ಯಾಯಯುತವಾಗಿ ಬಳಸಿಕೊಳ್ಳುವುದಿಲ್ಲ ಎಂಬುದು ಕೂಡ ಗೊತ್ತಿದೆ ಎಂದು ನಟ ಕಾರ್ತಿಕ್‌ ಜಯರಾಮ್‌ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
JK

ಅಶ್ವಿನಿ ನಕ್ಷತ್ರ ಧಾರವಾಹಿ ಖ್ಯಾತಿಯ ನಟ ಜೆಕೆ (ಕಾರ್ತಿಕ್‌ ಜಯರಾಮ್‌) ಮತ್ತೆ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಈ ಹಿಂದೆ ʼಸಿಯಾ ಕೆ ರಾಮ್ʼ ಧಾರಾವಾಹಿಯಲ್ಲಿ ನಟಿಸಿ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದ ಅವರು ಇದೀಗ ಹಿಂದಿಯ ಜನಪ್ರಿಯ ವಾಹಿನಿ ʼಸೋನಿ ಸಾಬ್‌ʼನಲ್ಲಿ ಮೂಡಿ ಬರುತ್ತಿರುವ ʼಅಲಿಬಾಬಾ ದಾಸ್ತಾನ್ ಎ ಕಾಬುಲ್ʼ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಾವು ಬಾಲಿವುಡ್‌ಗೆ ಮರಳುತ್ತಿರುವ ಬಗ್ಗೆ ಈ ದಿನ.ಕಾಮ್‌ಗೆ ಅಧಿಕೃತ ಮಾಹಿತಿ ನೀಡಿರುವ ಜೆ.ಕೆ, ಸ್ಯಾಂಡಲ್‌ವುಡ್‌ನಲ್ಲಿ ಅವಕಾಶ ವಂಚಿತರಾಗಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲಿಬಾಬಾ ದಾಸ್ತಾನ್‌-ಎ-ಕಾಬುಲ್‌ ಮೂಲಕ ಮತ್ತೆ ಬಾಲಿವುಡ್‌ಗೆ ಮರಳುತ್ತಿದ್ದೀರಿ, ಧಾರಾವಾಹಿಯಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ..

ಅಲಿಬಾಬಾ ಮತ್ತು ನಲವತ್ತು ಕಳ್ಳರ ಕತೆ ಎಲ್ಲರಿಗೂ ಗೊತ್ತಿದೆ. ಅದೇ ಕತೆಯ ಎಳೆಯನ್ನು ಇಟ್ಟುಕೊಂಡು ಅಲಿಬಾಬಾ ದಾಸ್ತಾನ್‌-ಎ-ಕಾಬುಲ್‌ ಧಾರಾವಾಹಿ ಮೂಡಿ ಬರುತ್ತಿದೆ. ಮೂಲ ಕತೆಯಲ್ಲಿರುವ ನಲವತ್ತು ಮಂದಿಯೂ ಕಳ್ಳರು ಎಂಬ ಕಾರಣಕ್ಕೆ ಅಲಿಬಾಬಾ ಮತ್ತು ನಲವತ್ತು ಕಳ್ಳರು ಎಂದೇ ಆ ಕತೆ ಜನಜನಿತವಾಗಿದೆ. ಆದರೆ, ನಮ್ಮ ಫ್ಯಾಂಟಸಿ ಕಥನದಲ್ಲಿ ಆ ನಲವತ್ತು ಮಂದಿ ಕಳ್ಳರ ಗುಂಪಿಗೆ ʼಇಬ್ಲಿಸ್‌ʼ ಎಂಬ ನಾಯಕನಿದ್ದಾನೆ. ಆ ಇಬ್ಲಿಸ್‌ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಅತ್ಯಂತ ದುಷ್ಟನಾದ ಇಬ್ಲಿಸ್‌ ಮತ್ತು ಅಲಿಬಾಬಾ ಇಬ್ಬರೂ ಎದುರುಗೊಳ್ಳುವ ರೋಚಕ ಕತೆ ಧಾರಾವಾಹಿಯಲ್ಲಿದೆ. ಈಗಾಗಲೇ ಲಡಾಖ್‌ನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದೇವೆ. ಸದ್ಯದಲ್ಲೇ ಧಾರಾವಾಹಿ ಸೋನಿ ಸಾಬ್‌ ವಾಹಿನಿಯಲ್ಲಿ ಪ್ರಸಾರವಾಗಲಿದೆ. 

'ಸಿಯಾ ಕೆ ರಾಮ್‌' ಧಾರಾವಾಹಿಯ ಬಳಿಕ ನಿಮ್ಮ  ಸಿನಿ ಪಯಣದಲ್ಲಾದ ಬದಲಾವಣೆಗಳೇನು?

'ಸಿಯಾ ಕೆ ರಾಮ್‌' ಧಾರಾವಾಹಿಯಲ್ಲಿ ನಟಿಸಿದ್ದು 2016-17ರಲ್ಲಿ. ಆ ಧಾರಾವಾಹಿ ನನಗೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತು. ಅದಾದ ಮೇಲೆ ಹಿಂದಿಯ ಹಲವು ಧಾರಾವಾಹಿಗಳಲ್ಲಿ ನಟಿಸಲು ಅವಕಾಶಗಳು ಬಂದವು. ಸಿನಿಮಾಗಳಲ್ಲಿ ನಟಿಸುವ ಸಲುವಾಗಿ ನಾನು ಬೇರೆ ಯಾವುದೇ ಧಾರಾವಾಹಿಗಳನ್ನು ಒಪ್ಪಿಕೊಳ್ಳಲಿಲ್ಲ. ಆಗಿನಿಂದ ಕನ್ನಡ ಚಿತ್ರರಂಗದಲ್ಲೇ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡೆ. ಮತ್ತೆ ಧಾರಾವಾಹಿಗೆ ಮರಳುವುದಾದರೆ 'ಸಿಯಾ ಕೆ ರಾಮ್‌' ಮೀರಿಸುವ ಕತೆಯ ಭಾಗವಾಗಬೇಕು ಎಂಬುದು ನನ್ನ ಬಯಕೆಯಾಗಿತ್ತು. ಅದರಂತೆ ಈಗ ಭಾರತೀಯ ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಮೂಡಿ ಬರುತ್ತಿರುವ ಅತಿದೊಡ್ಡ ಧಾರಾವಾಹಿಯಲ್ಲಿ ನಟಿಸ್ತಿದ್ದೀನಿ.

ಜೆ.ಕೆ ಹೆಚ್ಚಾಗಿ ಖಳನ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಎಂಬ ಮಾತಿದೆ...

ಹೌದು, ಕೇವಲ ಖಳನ ಪಾತ್ರ ಅಂತಲ್ಲ, ಸಿಗುವ ಎಲ್ಲ ಪಾತ್ರಗಳನ್ನು ನಾನು ಖುಷಿ ಖುಷಿಯಿಂದ ಮಾಡುತ್ತೇನೆ. ಎಲ್ಲ ಸಿನಿಮಾಗಳಲ್ಲೂ ನಾಯಕನಾಗಿಯೇ ನಟಿಸಲು ನಮ್ಮ ತಂದೆ ನಿರ್ಮಾಪಕ ಅಲ್ಲವಲ್ಲ. ಅಪ್ಪ ನಿರ್ಮಾಪಕನಾಗಿದ್ದು, ನಾನು ಸಿನಿಮಾ ಹಿನ್ನೆಲೆಯಿಂದ ಬಂದವನಾಗಿದ್ದರೆ ಖಂಡಿತವಾಗಿಯೂ ಎಲ್ಲ ಚಿತ್ರಗಳಲ್ಲೂ ನಾಯಕನಾಗಿಯೇ ಕಾಣಿಸಿಕೊಳ್ಳುತ್ತಿದ್ದೆ. ನಾಯಕ ನಟನಾಗುವ ಎಲ್ಲ ಸಾಮರ್ಥ್ಯಗಳು ಕೂಡ ನನ್ನಲ್ಲಿದೆ. ಹಾಗಂತ ನನಗೊಂದು ಅವಕಾಶ ಕೊಡಿ ಎಂದು ಯಾರ ಬಳಿಯೂ ಅಂಗಲಾಚಲು ನಾನು ಸಿದ್ಧನಿಲ್ಲ. ಈವರೆಗೆ ನಾನು ಬೆಳೆದು ಬಂದಿದ್ದು ನನ್ನ ಸ್ವಂತ ಶ್ರಮದಿಂದ. ನನಗೆ ನಟನೆ ಇಷ್ಟವಾದ್ದರಿಂದ ಖಳನ ಪಾತ್ರಗಳಲ್ಲಿ ನಟಿಸುವುದು ಕೂಡ ನನಗೆ ಖುಷಿ ನೀಡುತ್ತದೆ. ಹಾಗೇ ನೋಡಿದರೆ ʼಕಾಡಾʼ ಸಿನಿಮಾದಲ್ಲಿ ನಾನು ನಾಯಕನ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇನೆ.

ಬಾಲಿವುಡ್‌ನಲ್ಲೂ ಹೆಸರು ಮಾಡಿರುವ ನಿಮ್ಮನ್ನು ಸ್ಯಾಂಡಲ್‌ವುಡ್‌ನಲ್ಲಿ ಸರಿಯಾಗಿ ಬಳಸಿಕೊಳ್ಳಲಿಲ್ಲ ಎನ್ನಿಸುತ್ತದೆಯೇ?

ಸ್ಯಾಂಡಲ್‌ವುಡ್‌ನಲ್ಲಿ ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಮುಂದೆಯೂ ನನ್ನನ್ನು ನ್ಯಾಯಯುತವಾಗಿ ಬಳಸಿಕೊಳ್ಳುವುದಿಲ್ಲ ಎಂಬುದು ಕೂಡ ಗೊತ್ತಿದೆ. ನಮ್ಮಲ್ಲಿ ಯಾಕೆ ನನಗೆ ಅವಕಾಶಗಳನ್ನು ನೀಡುವುದಿಲ್ಲ ಎಂಬುದು ನನಗಂತೂ ನಿಗೂಢವಾಗಿಯೇ ಉಳಿದಿದೆ. ಆದರೆ, ಪಾತ್ರಗಳಿಗಾಗಿ ನಾನು ನಡೆಸುವ ತಯಾರಿ ಮತ್ತು ಕಲಾವಿದನಾಗಿ ನಾನು ಪಡುವ ಶ್ರಮ ಎಷ್ಟು ಎಂಬುದು ನನಗೆ ಮಾತ್ರ ಗೊತ್ತು.  ಇದೇ ಕಾರಣಕ್ಕೆ 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ನನ್ನ ನಟನಾ ಸಾಮರ್ಥ್ಯ ಸಾಬೀತುಪಡಿಸುವ ಪ್ರಯತ್ನ ಮಾಡಿದ್ದೆ. ಆ ಧಾರಾವಾಹಿಯಲ್ಲಿನ ನನ್ನ ನಟನೆಯನ್ನು ಜನ ಕೂಡ ಮೆಚ್ಚಿಕೊಂಡಿದ್ದರು. ಕಿರುತೆರೆಯಲ್ಲಿ ಕಲಾವಿದರನ್ನು ತುಳಿಯುವುದಕ್ಕೆ ಸಾದ್ಯವಾಗಲ್ಲ. ನಿಮ್ಮ ನಟನೆ ಜನಕ್ಕೆ ಇಷ್ಟವಾದರೆ ಮುಗೀತು. ಟಿಆರ್‌ಪಿ ಕಾರಣಕ್ಕೆ ಚಾನಲ್‌ನವರು ನಿಮ್ಮನ್ನೇ ಹಾಕಿಕೊಂಡು ಮತ್ತಷ್ಟು ಕಾರ್ಯಕ್ರಮ ಮಾಡುತ್ತಾರೆ. ನಿಮ್ಮ ಪ್ರತಿಭೆಗೆ ಬೆಳಕು ಚೆಲ್ಲುತ್ತಾರೆ. ಆದರೆ, ಸಿನಿಮಾದಲ್ಲಿ ಹಾಗಲ್ಲ. ಮೊದಲು ಅವಕಾಶ ಕಿತ್ತುಕೊಳ್ಳುತ್ತಾರೆ. ಅದನ್ನೂ ಮೀರಿ ನೀವು ಸಿನಿಮಾ ಮಾಡಿದರೆ ನಿಮ್ಮ ಸಿನಿಮಾ ಬಿಡುಗಡೆ ಆಗದಂತೆ ತಡೆಯುತ್ತಾರೆ. ಚಿತ್ರಮಂದಿರಗಳಲ್ಲಿ ಚೆನ್ನಾಗಿ ಓಡುತ್ತಿದ್ದ ನನ್ನ ಸಾಕಷ್ಟು ಸಿನಿಮಾಗಳನ್ನು ಬಿಡುಗಡೆ ಆಗದಂತೆ ತಡೆದರು. ಚೆನ್ನಾಗಿ ಓಡುತ್ತಿದ್ದ ಸಿನಿಮಾಗಳನ್ನು ಚಿತ್ರಮಂದಿರಗಳಿಂದ ಕಿತ್ತೆಸೆದರು. ನಾನು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ 'ಆ ಕರಾಳ ರಾತ್ರಿ' ಸಿನಿಮಾ 42ನೇ ದಿನವೂ ಯಶಸ್ವಿ ಪ್ರದರ್ಶನ ಕಾಣುತ್ತಿತ್ತು. ಎಲ್ಲಿ ನನ್ನ ಸಿನಿಮಾ 50 ದಿನಗಳನ್ನು ಪೂರೈಸುತ್ತದೆಯೋ ಎಂದು ಚಿತ್ರವನ್ನು ಥಿಯೇಟರ್‌ನಿಂದ ತೆಗೆದು ಹಾಕಲಾಯ್ತು. ನನ್ನನ್ನು ತುಳಿಯುವ ಪ್ರಯತ್ನ ಇಲ್ಲಿಗೆ ನಿಂತಿಲ್ಲ. ನಾನು ಬೆಂಗಳೂರು ಬಿಟ್ಟು ಮುಂಬೈ ಸೇರಿದ್ದೇನೆ ಅಂತಲೂ ಸುಳ್ಳು ಸುದ್ದಿ ಹಬ್ಬಿಸಿದರು. ನಮ್ಮ ಕನ್ನಡದ ಸಿನಿಮಾಗಳಿಗೆ ಪರಭಾಷೆಯ ನಟರನ್ನು ಕರೆಸಿ ಒಳ್ಳೊಳ್ಳೆಯ ಪಾತ್ರಗಳನ್ನು ಕೊಡುತ್ತಾರೆ. ಆದರೆ, ಕನ್ನಡದವರೇ ಆದ ನಮ್ಮನ್ನು ಮಾತ್ರ ಸಂಪರ್ಕಿಸುವುದಿಲ್ಲ. ಹೊರಗಿನವರು ಕನ್ನಡದ ಸಿನಿಮಾಗಳಲ್ಲಿ ನಟಿಸಿ ಅಸಹ್ಯವಾಗಿ ಡಬ್ಬಿಂಗ್‌ ಮಾಡಿದ ಹಲವು ಸಿನಿಮಾಗಳನ್ನು ನಾನು ಗಮನಿಸಿದ್ದೇನೆ. ಆದರೂ, ಹೊರಗಿನವರಿಗೆ ಆದ್ಯತೆ ನೀಡಲಾಗುತ್ತದೆ. ಇದು ನನ್ನೊಬ್ಬನ ಕತೆಯಲ್ಲ, ನಮ್ಮ ಚಿತ್ರರಂಗದಲ್ಲಿರುವ ಹಲವು ಕಲಾವಿದರ ಕತೆ. ಎಷ್ಟೋ ಮಂದಿ ನಿರ್ದೇಶಕರು ಮಾತಿಗೆ ಸಿಕ್ಕಾಗ ಜೆಕೆ ನೀನೊಬ್ಬ ಒಳ್ಳೆಯ ನಟ ಅಂತಾರೆ. ಹಾಗೆನ್ನುವವರೇ ಇವತ್ತಿಗೂ ತಮ್ಮ ಸಿನಿಮಾಗಳಲ್ಲಿ ಅವಕಾಶ ಕೊಟ್ಟಿಲ್ಲ. ಇದನ್ನೆಲ್ಲ ನೋಡಿದಾಗ ಬೇಸರ ಎನ್ನಿಸುತ್ತೆ. ಒಬ್ಬ ವ್ಯಕ್ತಿ ಕಷ್ಟಪಟ್ಟು ಬೆಳೆಯುತ್ತಿದ್ದಾನೆ ಅಂದಾಗ ಅವನ ಪಾಡಿಗೆ ಬೆಳೆಯಲು ಬಿಟ್ಟು ಬಿಡಬೇಕು.

'ಓಹ್‌ ಪುಷ್ಪ ಐ ಹೇಟ್‌ ಟೀಯರ್ಸ್‌' ಬಳಿಕ ಬಾಲಿವುಡ್‌ನ ಯಾವ ಚಿತ್ರದಲ್ಲಿ ನಟಿಸುತ್ತಿದ್ದೀರಿ?

'ಓಹ್‌ ಪುಷ್ಪ ಐ ಹೇಟ್‌ ಟೀಯರ್ಸ್‌', ನಾಯಕ ನಟನಾಗಿ ನನ್ನ ಚೊಚ್ಚಲ ಬಾಲಿವುಡ್‌ ಚಿತ್ರ. ನಮ್ಮ ದುರಾದೃಷ್ಟಕ್ಕೆ ಸರಿಯಾಗಿ ಕೋವಿಡ್‌ ಸಮಯದಲ್ಲಿ ಸಿನಿಮಾ ಬಿಡುಗಡೆಯಾದ್ದರಿಂದ ನಿರೀಕ್ಷಿಸಿದ್ದಷ್ಟು ಯಶಸ್ಸು ಸಿಗಲಿಲ್ಲ. ಜೊತೆಗೆ ನಾನು ಸ್ಯಾಂಡಲ್‌ವುಡ್‌ ಮತ್ತು ಬಾಲಿವುಡ್‌ ಎಂಬ ಎರಡು ದೋಣಿಗಳ ಸವಾರನಾಗಿರುವ ಕಾರಣಕ್ಕೆ ಮತ್ತೆ ಯಾವುದೇ ಬಾಲಿವುಡ್‌ ಸಿನಿಮಾ ಅವಕಾಶಗಳು ಬಂದಿಲ್ಲ. ಆದರೆ, ʼಅಲಿಬಾಬಾ ದಾಸ್ತಾನ್ ಎ ಕಾಬುಲ್ʼ ಧಾರಾವಾಹಿ ಪ್ರಸಾರವಾದ ಬಳಿಕ ಮತ್ತೆ ನನಗಾಗಿ ಒಂದಷ್ಟು ಅವಕಾಶಗಳು ಹುಟ್ಟಿಕೊಳ್ಳುತ್ತವೆ ಎಂಬ ಭರವಸೆ ಇದೆ.

ಕನ್ನಡ ಮತ್ತು ದಕ್ಷಿಣದ ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ಬೆಳವಣಿಗೆಯನ್ನು ನೀವು ಹೇಗೆ ಕಾಣುತ್ತೀರಿ?

ಸಿನಿಮಾಗೆ ಭಾಷೆಯ ಗಡಿಗಳಿಲ್ಲ. ಇತ್ತೀಚೆಗೆ ಕನ್ನಡ ಮತ್ತು ದಕ್ಷಿಣದ ಸಿನಿಮಾಗಳು ಏಕಕಾಲಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿವೆ. ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ನಿಂದಾಗಿ ಕನ್ನಡದ ಒಂದೊಳ್ಳೆಯ ಸಿನಿಮಾ ವಿವಿಧ ಪ್ರದೇಶಗಳ ಜನರನ್ನು ತಲುಪುತ್ತದೆ ಎಂದರೆ ಅದು ಉತ್ತಮ ಬೆಳವಣಿಗೆಯೇ. ಬಾಲಿವುಡ್‌ ಕೂಡ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಇದೇ ರೀತಿ. ಈ ಹಿಂದೆ ಮಲಯಾಳಂ ಚಿತ್ರಗಳು ಎಂದರೆ ವಯಸ್ಕ ಚಿತ್ರಗಳು ಎಂಬ ರೀತಿಯ ಮಾತುಗಳು ಆ ಚಾಲ್ತಿಯಲ್ಲಿದ್ದವು. ಆದರೆ, ಈಗ ಜನ ಮಲಯಾಳಂ ಸಿನಿಮಾಗಳನ್ನು ಕಾಣುವ ದೃಷಿಕೋನ ಬದಲಾಗಿದೆ. ಮಲಯಾಳಂ ಚಿತ್ರಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಇವತ್ತು ಮಲಯಾಳಂ ಚಿತ್ರರಂಗ ಬೆಳೆದಿದೆ ಎನ್ನುವುದಾದರೆ, ಆ ಚಿತ್ರರಂಗದ ಬೆಳವಣಿಗೆಗೆ ಶ್ರಮಿಸಿದ ತಂತ್ರಜ್ಞರು, ಕಲಾವಿದರು, ನಿರ್ಮಾಪಕರು ಎಲ್ಲರ ಒಗ್ಗಟ್ಟಿನ ಶ್ರಮ ಕಾರಣ. ಅದೇ ರೀತಿ ನಮ್ಮ ಚಿತ್ರರಂಗ ಕೂಡ ಬದಲಾವಣೆಯ ಹಾದಿಯಲ್ಲಿದೆ.

ಒಬ್ಬ ಕನ್ನಡಿಗನಾಗಿ ನೀವು ಬಾಲಿವುಡ್‌ನಲ್ಲಿ ಎದುರಿಸಿದ ಸವಾಲುಗಳೇನು?

ಬಾಲಿವುಡ್‌ನಲ್ಲಿ ಅವಕಾಶ ಸಿಗುವುದೇ ಕಷ್ಟ. ನಮ್ಮದಲ್ಲದ ಭಾಷೆ ಕಲಿತು, ಆ ಭಾಷೆಗೆ ಹೊಂದಿಕೊಂಡು, ಅಲ್ಲಿನವರ ನೀರಿಕ್ಷೆಗೆ ತಕ್ಕಂತೆ ನಟಿಸಿ ಗುರುತಿಸಿಕೊಳ್ಳುವುದು ಸಾಮಾನ್ಯದ ಮಾತಲ್ಲ. ನಾನು 'ಸಿಯಾ ಕೆ ರಾಮ್‌' ಧಾರಾವಾಹಿಯ ಮೂಲಕ ಹೆಸರು ಮಾಡಿದ್ದರೂ ʼಇಬ್ಲಿಸ್‌ʼ ಪಾತ್ರಕ್ಕಾಗಿ ಆಡಿಶನ್‌ ಎದುರಿಸಬೇಕಾಯ್ತು. ಆಡಿಶನ್‌ ಬಳಿಕ 5 ಬಾರಿ ಲುಕ್‌ ಟೆಸ್ಟ್‌ಗೆ ಹಾಜರಾಗಿದ್ದೆ.  

ಸದ್ಯ ಕನ್ನಡದ ಎಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದೀರಿ?

'ಕಾಡಾ' ಮತ್ತು 'ಐರಾವನ್‌' ಚಿತ್ರಗಳಲ್ಲಿ ನಟಿಸಿದ್ದೇನೆ. ಎರಡೂ ಚಿತ್ರಗಳು ಬಿಡುಗಡೆಯ ತಯಾರಿಯಲ್ಲಿದೆ. ಈ ಎರಡು ಚಿತ್ರಗಳನ್ನು ಬಿಟ್ಟರೆ ಬೇರೆ ಯಾವ ಸಿನಿಮಾಗಳು ನನ್ನ ಕೈಲಿ ಇಲ್ಲ.

ನಿಮಗೆ ಏನು ಅನ್ನಿಸ್ತು?
2 ವೋಟ್