ಕತ್ರಿನಾ- ವಿಕ್ಕಿ ದಂಪತಿಗೆ ಜೀವ ಬೆದರಿಕೆ; ಆರೋಪಿಯ ಬಂಧನ

katrina kaif
  • ಇನ್‌ಸ್ಟಾಗ್ರಾಂನಲ್ಲಿ ನಟಿಗೆ ಬೆದರಿಕೆ ಹಾಕಿದ ಅಪರಿಚಿತ 
  • ತನಿಖೆ ಪ್ರಾರಂಭಿಸಿದ ಮುಂಬೈ ಪೊಲೀಸರು

ಬಾಲಿವುಡ್‌ನ ಸ್ಟಾರ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರಿಗೆ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದು, ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.  

ಸಾಮಾನ್ಯವಾಗಿ ತಾರೆಯರು ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿರಲು ಹೆಚ್ಚಾಗಿ ಸಾಮಾಜಿಕ ಜಾಲತಾಣ, ಅದರಲ್ಲೂ ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಹೀಗೆ ಅಭಿಮಾನಿಗಳ ಜೊತೆಗೆ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು  ಒಡನಾಟ ಇಟ್ಟುಕೊಂಡಿರುವ ನಟಿ ಕತ್ರಿನಾ ಕೈಫ್‌ ಅವರಿಗೆ ಉತ್ತರ ಪ್ರದೇಶದ ಲಕ್ನೋ ಮೂಲದ ಮನ್ವಿಂದರ್‌ ಸಿಂಗ್‌ ಎಂಬಾತ ಕೊಲೆ ಬೆದರಿಕೆ ಹಾಕಿದ್ದಾನೆ.

ಈ ಸುದ್ದಿ ಓದಿದ್ದೀರಾ? ಅತಿಹೆಚ್ಚು ಆದಾಯ ತೆರಿಗೆ ಪಾವತಿಸಿದ ರಜನಿಕಾಂತ್‌; ಗೌರವಿಸಿದ ತೆರಿಗೆ ಇಲಾಖೆ

ಕತ್ರಿನಾ ಮತ್ತವರ ಪತಿ ವಿಕ್ಕಿ ಕೌಶಲ್‌ ಇಬ್ಬರನ್ನೂ ಉದ್ದೇಶಿಸಿ ಇನ್‌ಸ್ಟಾಗ್ರಾಂ ಮೂಲಕ ಬೆದರಿಕೆ ಸಂದೇಶಗಳನ್ನು ಮನ್ವಿಂದರ್‌ ಕಳುಹಿಸಿದ್ದಾನೆ. ಘಟನೆಗೆ ಸಂಬಂಧಿಸಿ ಮುಂಬೈನ ಸಾಂತಾಕ್ರೂಸ್ ಠಾಣೆಯಲ್ಲಿ ಕತ್ರಿನಾ- ವಿಕ್ಕಿ ದಂಪತಿ ದೂರು ನೀಡಿದ್ದರು. ದೂರಿನನ್ವಯ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ʼತಾನು ಕತ್ರಿನಾ ಅವರ ಅಭಿಮಾನಿ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಲು ಅವಕಾಶಗಳಿಗಾಗಿ ಪರದಾಡುತ್ತಿದ್ದೇನೆʼ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಕತ್ರಿನಾ ಮತ್ತು ವಿಕ್ಕಿ 2021ರ ಡಿಸೆಂಬರ್‌ 9ರಂದು ರಾಜಸ್ಥಾನದ ಸವಾಯಿ ಮಾಧೋಪುರ್‌ ಬಳಿಯ ಬರ್ವಾರದಲ್ಲಿನ ಸಿಕ್ಸ್‌ ಸೆನ್ಸಸ್‌ ಫೋರ್ಟ್‌ ರೆಸಾರ್ಟ್‌ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್