ಮತ್ತೆ ಖಾಕಿ ತೊಟ್ಟ ಮಾಲಾಶ್ರೀ | ಗಮನ ಸೆಳೆಯುತ್ತಿದೆ ʻಕೆಂಡದ ಸೆರಗುʼ ಟೀಸರ್‌

kendada seragu
  • ಕುಸ್ತಿ ಪಟುವಾಗಿ ಮಿಂಚಿದ ಭೂಮಿ ಶೆಟ್ಟಿ
  • 'ಕೆಂಡದ ಸೆರಗು' ಕಾದಂಬರಿ ಆಧಾರಿತ ಚಿತ್ರ

ಯುವ ನಿರ್ದೇಶಕ ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದ, ಕಿರುತೆರೆಯ ಖ್ಯಾತ ನಟಿ ಭೂಮಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕೆಂಡದ ಸೆರಗು’ ಸಿನಿಮಾದ ಟೀಸರ್ ಸೋಮವಾರ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ರಾಕಿ ಬರೆದಿರುವ ಜನಪ್ರಿಯ ‘ಕೆಂಡದ ಸೆರಗು’ ಕಾದಂಬರಿಯನ್ನು ಆಧಾರಿಸಿ ಈ ಚಿತ್ರದ ಕಥೆ ಮೂಡಿಬಂದಿದೆ. 

ಗ್ರಾಮೀಣ ಕ್ರೀಡೆ ಕುಸ್ತಿ ಮತ್ತು ಲೈಂಗಿಕ ಕಾರ್ಯಕರ್ತೆಯ ದುರಂತ ಬದುಕಿನ ಸುತ್ತ ಚಿತ್ರದ ಕಥೆ ಹೆಣೆಯಲಾಗಿದ್ದು, ಹಿರಿಯ ನಟಿ ಮಾಲಾಶ್ರೀ ಈ ಚಿತ್ರದಲ್ಲಿ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ಭೂಮಿ ಶೆಟ್ಟಿ ಈ ಚಿತ್ರದಲ್ಲಿ ಕುಸ್ತಿಪಟುವಾಗಿ ಬಣ್ಣ ಹಚ್ಚಿದ್ದಾರೆ. 

ಒಂದೂವರೆ ನಿಮಿಷಗಳ ಟೀಸರ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯ ದುರಂತಮಯ ಬದುಕು, ಕುಸ್ತಿ ಪಟುವಾಗಬೇಕು ಎಂಬ ಆಕೆಯ ಮಗಳ ಕನಸು ಹಾಗೂ ತಾಯಿ, ಮಗಳಿಬ್ಬರ ಮೇಲೂ ನಡೆಯುವ ದೌರ್ಜನ್ಯವನ್ನು ಸೂಚ್ಯವಾಗಿ ತೋರಿಸಲಾಗಿದೆ. ಬಹುದಿನಗಳ ಬಳಿಕ ಖಾಕಿ ತೊಟ್ಟಿರುವ ಮಾಲಾಶ್ರೀ ಆಕ್ಷನ್‌ ದೃಶ್ಯಗಳಲ್ಲಿ ಮಿಂಚಿದ್ದಾರೆ.

ʼಶ್ರೀ ಮುತ್ತು ಟಾಕೀಸ್ʼ ಮತ್ತು ʼಎಸ್ ಕೆ ಪ್ರೊಡಕ್ಷನ್ಸ್ʼ ಬ್ಯಾನರ್‌ನಡಿ ಕೆ ಕೊಟ್ರೇಶ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೀರೇಶ್ ಕಂಬ್ಲಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app