ಬುಡಕಟ್ಟು ಮಹಿಳೆ ನಂಚಮ್ಮನ ಕಂಠಸಿರಿಗೆ ಒಲಿದ ರಾಷ್ಟ್ರಪ್ರಶಸ್ತಿ

nanchamma
  • ಸಿನಿಮಾ ಹೆಸರು ಕೂಡ ತಿಳಿಯದೇ ಹಾಡು ಹಾಡಿದ್ದ ನಂಚಮ್ಮ
  • ಆಡು, ಕುರಿ ಸಾಕಿಕೊಂಡು ಬದುಕು ನಡೆಸುತ್ತಿರುವ ಮುಗ್ಧ ಮಹಿಳೆ  

68ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶುಕ್ರವಾರ ಪ್ರಕಟಗೊಂಡಿವೆ. ಮಲಯಾಳಂನ ʼಅಯ್ಯಪ್ಪನುಂ ಕೋಶಿಯುಂʼ ಚಿತ್ರ ಹಲವು ವಿಭಾಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಚಿತ್ರದ ನಿರ್ದೆಶನಕ್ಕಾಗಿ ಸಚ್ಚಿದಾನಂದನ್‌ ಕೆ.ಆರ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ದೊರೆತಿದೆ. ಪೋಷಕ ಪಾತ್ರ ನಿರ್ವಹಿಸಿದ್ದ ಬಿಜು ಮೆನನ್‌ ಅವರಿಗೆ ಅತ್ಯುತ್ತಮ ಪೋಷಕ ನಟ, ಸಾಹಸ ನಿರ್ದೇಶನಕ್ಕಾಗಿ ರಾಜಶೇಖರ್‌, ಮಾಫಿಯಾ ಶಶಿ ಮತ್ತು ಸುಪ್ರೀಂ ಸುಂದರ್‌ ಅವರುಗಳು ಅತ್ಯುತ್ತಮ ಸಾಹಸ ನಿರ್ದೆಶಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಪಾಲಕ್ಕಾಡಿನ ನಂಚಮ್ಮ ʼಅಯ್ಯಪ್ಪನುಂ ಕೋಶಿಯುಂʼ ಚಿತ್ರದ ʼಕಲಕ್ಕಾತ ಸಂದಡಮೆ..ʼ ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ವಿಶೇಷ ಎನ್ನಿಸಿಕೊಂಡಿದೆ.

ʼಅಯ್ಯಪ್ಪನುಂ ಕೋಶಿಯುಂʼ ಚಿತ್ರಕ್ಕೆ ಒಲಿದ ಪ್ರಶಸ್ತಿಗಳ ಪಟ್ಟಿ ದೊಡ್ಡದಿದ್ದರೂ ಹಲವರ ಹುಬ್ಬೇರುವಂತೆ ಮಾಡಿರುವುದು ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ಆಯ್ಕೆಗೊಂಡ ಮಹಿಳೆ ಮತ್ತು ಆಕೆಯ ಹಿನ್ನೆಲೆ. ಆಡು, ಕುರಿಗಳನ್ನು ಮೇಯಿಸುತ್ತ, ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತ ಬದುಕು ಸಾಗಿಸುತ್ತಿರುವ ಪಾಲಕ್ಕಾಡ್‌ನ ಬುಡಕಟ್ಟು ಸಮುದಾಯದ ಕುರಿಗಾಹಿ ಮಹಿಳೆ ನಂಚಮ್ಮ ʼಕಲಕ್ಕಾತ ಸಂದಡಮೆ..ʼ ಹಾಡಿನ ಹಿನ್ನೆಲೆ ಗಾಯನಕ್ಕಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಜನಪದ ಗೀತೆಯಂತೆ ಕಾಣುವ ʼಕಲಕ್ಕಾತ ಸಂದಡಮೆ..ʼ ಹಾಡಿನಲ್ಲಿ ನಂಚಮ್ಮ ಕುರಿಗಾಹಿ ಆಗಿಯೇ ಕಾಣಿಸಿಕೊಂಡಿದ್ದಾರೆ. ಹಳ್ಳಿಗಾಡಿನ ಮುಗ್ಧ ಮಹಿಳೆ ನಂಚಮ್ಮ ಈ ಹಾಡು ಹಾಡಿದ ವೇಳೆ ತಾನು ಯಾವ ಚಿತ್ರಕ್ಕಾಗಿ ಹಾಡುತ್ತಿದ್ದೇನೆ ಎಂಬುದು ಕೂಡ ತಿಳಿದಿರಲಿಲ್ಲ. ಹಾಡಿನ ಕೊನೆಯಲ್ಲಿ ಸ್ವತಃ ಪೃಥ್ವಿರಾಜ್‌ ಸುಕುಮಾರನ್‌ ಅವರೇ, "ನಿಮಗೆ ಪೃಥ್ವಿರಾಜ್‌ ಸುಕುಮಾರನ್‌ ಆಗಲಿ ಅಥವಾ ಬಿಜು ಮೆನನ್‌ ಆಗಲಿ ಯಾರೆಂದು ಗೊತ್ತೆ" ಎಂದು ಪ್ರಶ್ನಿಸಿದ್ದಾರೆ ಅದಕ್ಕೆ ಮುಗ್ಧ ನಗುವಿನೊಂದಿಗೆ ಉತ್ತರಿಸಿರುವ ನಂಚಮ್ಮ, "ಅವರು ಯಾರೆಂದು ನನಗೆ ತಿಳಿದಿಲ್ಲ" ಎನ್ನುತ್ತಾರೆ. 

ನಿರ್ದೇಶಕ ಕೆ.ಆರ್ ಸಚ್ಚಿದಾನಂದನ್ ಮನವಿಗೆ ಒಪ್ಪಿ ನಂಚಮ್ಮ ʼಕಲಕ್ಕಾತ ಸಂದಡಮೆ..ʼ ಹಾಡನ್ನು ಹಾಡಿದ್ದರು. 'ಅಯ್ಯಪ್ಪನುಂ ಕೋಶಿಯುಂ' ಚಿತ್ರಕ್ಕೆ 4 ಪ್ರಶಸ್ತಿಗಳು ಲಭಿಸಿವೆ. ಸಚ್ಚಿದಾನಂದನ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಒಲಿದಿದೆ. ಆದರೆ, ದುರಾದೃಷ್ಟವಶಾತ್ ಈ ಖುಷಿಯನ್ನು ಸಂಭ್ರಮಿಸಲು ಅವರೇ ಇಲ್ಲ. "ನನ್ನನ್ನು ಈ ಲೋಕಕ್ಕೆ ಪರಿಚಯಿಸಿ ಅವರೇ ಹೋಗಿಬಿಟ್ಟರು" ಎಂದು ವಿಷಾದ ವ್ಯಕ್ತಪಡಿಸುವ ನಂಚಮ್ಮ, ಪ್ರಶಸ್ತಿಯನ್ನು ತಮ್ಮ ಪ್ರೀತಿಯ ಸಚ್ಚಿ ಅವರಿಗೆ ಸಮರ್ಪಿಸುವ ಮೂಲಕ ತಮ್ಮ ಹೃದಯವಂತಿಕೆಯನ್ನು ಮೆರೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? 68ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಘೋಷಣೆ | ತಮಿಳು ನಟ ಸೂರ್ಯಗೆ ಒಲಿದ ರಾಷ್ಟ್ರಪ್ರಶಸ್ತಿ

ಪೃಥ್ವಿರಾಜ್ ಮುಖ್ಯಭೂಮಿಕೆಯ 'ಅಯ್ಯಪ್ಪನುಂ ಕೋಶಿಯುಂ' ಚಿತ್ರ 2020ರ ಫೆಬ್ರವರಿಯಲ್ಲಿ ತೆರೆಕಂಡಿತ್ತು. ಬಿಜು ಮೆನನ್, ಅನಿಲ್‌ ನೆಡುಮಂಗದ್‌ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು. 'ಅಯ್ಯಪ್ಪನುಂ ಕೋಶಿಯುಂʼ ಚಿತ್ರ ತೆರೆಕಂಡ ನಾಲ್ಕು ತಿಂಗಳಿಗೆ ಸಚ್ಚಿದಾನಂದನ್ ಹೃದಯಾಘಾತದಿಂದ ನಿಧನರಾದರು. 

ನಿಮಗೆ ಏನು ಅನ್ನಿಸ್ತು?
1 ವೋಟ್