ಸಲ್ಮಾನ್‌ ಖಾನ್‌ ಸಿನಿಮಾಗೆ ರವಿ ಬಸ್ರೂರ್‌ ಗಾನ ಬಜಾನ

ravi basrur
  • 'ಕೆಜಿಎಫ್‌' ಸಿನಿಮಾದ ಹಿನ್ನೆಲೆ ಸಂಗೀತ ಮೆಚ್ಚಿದ ಸಲ್ಮಾನ್‌ ಖಾನ್‌
  • 'ಅಂತಿಮ್‌' ಮೂಲಕ ಸಲ್ಮಾನ್‌ ಖಾನ್‌ಗೆ ಹತ್ತಿರವಾದ ರವಿ ಬಸ್ರೂರ್‌

'ಕೆಜಿಎಫ್' ಸಿನಿಮಾಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ್ದ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರಿಗೆ ಸದ್ಯ ಬೇಡಿಕೆ ಹೆಚ್ಚಿದೆ.

'ಕೆಜಿಎಫ್‌' ಬಳಿಕ ಕೇವಲ ಸ್ಯಾಂಡಲ್‌ವುಡ್‌ಗೆ ಸೀಮಿತವಾಗದೆ ಪರಭಾಷೆಯ ಚಿತ್ರಗಳಿಗೂ ಸಂಗೀತ ಸಂಯೋಜನೆ ಮಾಡುತ್ತಿರುವ ರವಿ, ಇದೀಗ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. 

'ಕೆಜಿಎಫ್' ಚಿತ್ರದಲ್ಲಿನ ರವಿ ಬಸ್ರೂರ್‌ ಸಂಗೀತವನ್ನು ಮೆಚ್ಚಿರುವ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರ ʼಕಭಿ ಈದ್ ಕಭಿ ದಿವಾಲಿʼಗೆ ಸಂಗೀತ ನಿರ್ದೇಶನ ಮಾಡುವಂತೆ ರವಿ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ರವಿ ಕೂಡ ಸಲ್ಲು ಆಫರ್‌ ಒಪ್ಪಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ದೋಷಮುಕ್ತನಾದರೂ ಸಿಗದ ಪಾಸ್‌ಪೋರ್ಟ್‌; ನ್ಯಾಯಾಲಯದ ಮೊರೆ ಹೋದ ಆರ್ಯನ್‌ ಖಾನ್‌

ಈ ಹಿಂದೆ ʼಕಭಿ ಈದ್ ಕಭಿ ದಿವಾಲಿʼ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದರಂತೆ ದೇವಿ ಶ್ರೀ ಪ್ರಸಾದ್ ಕೂಡ ಸಿನಿಮಾಗಾಗಿ ಕೆಲವು ಹಾಡಿನ ಟ್ರ್ಯಾಕ್‌ಗಳನ್ನು ಸಿದ್ಧಪಡಿಸಿದ್ದರು. ಆದರೆ, ಆ ಟ್ರ್ಯಾಕ್‌ಗಳು ಚಿತ್ರದ ಸನ್ನಿವೇಶಕ್ಕೆ ಸರಿಹೊಂದದ ಕಾರಣ ದೇವಿ ಶ್ರೀ ಪ್ರಸಾದ್‌ ಅವರ ಬದಲಿಗೆ ಸಲ್ಮಾನ್ ಖಾನ್, ರವಿ ಬಸ್ರೂರ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. 

ʼಅಂತಿಮ್‌ʼನಲ್ಲಿ ಜೊತೆಯಾಗಿದ್ದ ಸಲ್ಲು- ರವಿ

ಸಲ್ಮಾನ್‌ ಖಾನ್‌ ಸಹೋದರಿ ಅರ್ಪಿತಾ ಖಾನ್‌ ಅವರ ಪತಿ ಆಯುಷ್‌ ಶರ್ಮಾ ಅಭಿನಯದ ಚೊಚ್ಚಲ ಚಿತ್ರ ʼಅಂತಿಮ್‌ʼಗೆ ರವಿ ಬಸ್ರೂರ್‌ ಸಂಗೀತ ನಿರ್ದೇಶನ ಮಾಡಿದ್ದರು. 2021ರ ನವೆಂಬರ್‌ನಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ಸಲ್ಮಾನ್‌ ಖಾನ್‌ ಬಂಡವಾಳ ಹೂಡಿದ್ದರು. ಮಹೇಶ್‌ ಮಾಂಜ್ರೇಕರ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರದಲ್ಲಿ ಸ್ವತಃ ಸಲ್ಮಾನ್‌ ಖಾನ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2018ರಲ್ಲಿ ತೆರೆಕಂಡಿದ್ದ 'ಕೆಜಿಎಫ್‌-1' ಚಿತ್ರದ ಹಿನ್ನೆಲೆ ಸಂಗೀತವನ್ನು ಮೆಚ್ಚಿದ್ದ ಸಲ್ಮಾನ್‌ ಖಾನ್‌, 'ಅಂತಿಮ್‌' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲು ರವಿ ಬಸ್ರೂರ್‌ಗೆ ಆಫರ್‌ ನೀಡಿದ್ದರು. ಸಲ್ಮಾನ್‌ ಖಾನ್‌ ನಿರೀಕ್ಷಿಸಿದಂತೆ 'ಅಂತಿಮ್‌' ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸದಿದ್ದರೂ, ಚಿತ್ರದ ಹಾಡುಗಳು ಜನಪ್ರಿಯತೆ ಗಳಿಸಿದ್ದವು. ಇದೇ ಕಾರಣಕ್ಕೆ ತಮ್ಮ ಮುಂದಿನ ಚಿತ್ರದಲ್ಲಿ ದೇವಿ ಶ್ರೀ ಪ್ರಸಾದ್‌ ಬದಲಿಗೆ ರವಿ ಬಸ್ರೂರ್‌ಗೆ ಸಂಗೀತ ನಿರ್ದೇಶನ ಮಾಡಲು ಸಲ್ಮಾನ್‌ ಖಾನ್‌ ಆಫರ್‌ ನೀಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್