ಸಾವಿರ ಕೋಟಿ ಕ್ಲಬ್‌ ಸೇರಿದ ಕನ್ನಡದ ಮೊದಲ ಸಿನಿಮಾ ಕೆಜಿಎಫ್‌- 2

KGF2
  • ಸಾವಿರ ಕೋಟಿ ಕ್ಲಬ್‌ ಸೇರಿದ ಕೆಜಿಎಫ್‌-2
  • ತಮಿಳುನಾಡಲ್ಲೂ ರಾಕಿಭಾಯ್‌ ಅಬ್ಬರ

ರಾಕಿಂಗ್ ಸ್ಟಾರ್ ಯಶ್ ನಟನೆಯ ʼಕೆಜಿಎಫ್-2ʼ ಚಿತ್ರ ಗಲ್ಲಾ ಪಟ್ಟಿಗೆಯಲ್ಲಿ ಸಖತ್ ಸದ್ದು ಮಾಡ್ತಿದೆ. ಬಿಡುಗಡೆಯಾದ 20 ದಿನಕ್ಕೆ ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿ ಕಲೆ ಹಾಕುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ʼಕೆಜಿಎಫ್-2ʼ ಚಿತ್ರ ತೆರೆಕಂಡು ಇಂದಿಗೆ 20 ದಿನ ಕಳೆದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ₹1,025 ಕೋಟಿ 61 ಲಕ್ಷ ಕಲೆ ಹಾಕಿದೆ. ಈ ಮೂಲಕ ಸಾವಿರ ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದ ನಾಲ್ಕು ಚಿತ್ರಗಳ ಪೈಕಿ ʼಕೆಜಿಎಫ್-2ʼ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ.

ಸಾವಿರ ಕೋಟಿ ಕ್ಲಬ್‌ನಲ್ಲಿ ಅಮಿರ್ ಖಾನ್ ನಟನೆಯ ʼದಂಗಲ್ʼ ಸಿನಿಮಾ ಮೊದಲ ಸ್ಥಾನದಲ್ಲಿದ್ದರೆ, ಎಸ್‌ಎಸ್ ರಾಜಮೌಳಿ ನಿರ್ದೇಶನದ ʼಬಾಹುಬಲಿʼ, ʼಆರ್‌ಆರ್‌ಆರ್‌ʼ ಚಿತ್ರಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಇದೀಗ ಕನ್ನಡದ ʼಕೆಜಿಎಫ್-2ʼ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಹಿಂದಿ ನೆಲದಲ್ಲೂ ʼಕೆಜಿಎಫ್-2ʼ ಭರ್ಜರಿ ಗಳಿಕೆ ಮಾಡುತ್ತಿದ್ದು ಈವರೆಗೆ ₹369 ಕೋಟಿ 58 ಲಕ್ಷಗಳನ್ನು ಗಳಿಸಿದೆ. ರಾಕಿಭಾಯ್ ಹಾವಳಿಗೆ ಇತ್ತೀಚೆಗೆ ಅಜಯ್ ದೇವಗನ್ ನಟನೆಯಲ್ಲಿ ಮೂಡಿಬಂದಿದ್ದ ʼರನ್ ವೇ 34ʼ ಸಿನಿಮಾ ಕೂಡ ನೆಲ ಕಚ್ಚಿದೆ. "ಕೆಜಿಎಫ್-2' ಕೆಲವೇ ದಿನಗಳಲ್ಲಿ ʼದಂಗಲ್ʼ ಸಿನಿಮಾದ ದಾಖಲೆಯನ್ನು ಹಿಂದಿಕ್ಕುವ ಸಾಧ್ಯತೆ ಇದೆ" ಎಂದು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಅಭಿಪ್ರಾಯ ಪಟ್ಟಿದ್ದಾರೆ.

ಕೇವಲ ಬಾಲಿವುಡ್ ಮಾತ್ರವಲ್ಲದೆ ಕಾಲಿವುಡ್‌ನಲ್ಲೂ ʼಕೆಜಿಎಫ್-2ʼ ಮೋಡಿ ಮಾಡುತ್ತಿದೆ. ಕನ್ನಡದ ಸಿನಿಮಾವೊಂದು ಮೊದಲ ಬಾರಿಗೆ ತಮಿಳುನಾಡಿನಲ್ಲಿ ₹100 ಕೋಟಿ 57 ಲಕ್ಷ ಕಲೆ ಹಾಕಿದೆ" ಎಂದು ಸಿನಿಮಾ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app