
'ಒಂದು ಮೊಟ್ಟೆಯ ಕತೆ' ಖ್ಯಾತಿಯ ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ʼಗರುಡ ಗಮನ ವೃಷಭ ವಾಹನʼ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಸ್ಯಾಂಡಲ್ವುಡ್ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಖ್ಯಾತನಾಮರು ಚಿತ್ರವನ್ನು ಮೆಚ್ಚಿ ಮಾತನಾಡಿದ್ದರು. ಇತ್ತೀಚೆಗೆ ಸಿನಿಮಾ ನೋಡಿರುವ ಕನ್ನಡ ಸ್ಟಾರ್ ನಟ ಕಿಚ್ಚ ಸುದೀಪ್ ಕೂಡ ಚಿತ್ರ ತಂಡವನ್ನು ಹೊಗಳಿ ಪತ್ರ ಬರೆದಿದ್ದಾರೆ.
ಸುದೀಪ್ ʼಗರುಡ ಗಮನ ವೃಷಭ ವಾಹನʼ ಚಿತ್ರತಂಡಕ್ಕೆ ಬರೆದ ಪತ್ರದ ಭಾವಾನುವಾದ ಇಲ್ಲಿದೆ.
ಪ್ರತಿಯೊಬ್ಬ ಕ್ರಿಯಾಶೀಲ ವ್ಯಕ್ತಿಯೂ ಒಳ್ಳೆಯ ಕತೆಯ ಹುಡುಕಾಟದಲ್ಲಿರುತ್ತಾನೆ. ತಾನು ಆಯ್ದುಕೊಳ್ಳುವ ಕತೆಯನ್ನು ತೆರೆಗೆ ಅಳವಡಿಸುವ ಮತ್ತು ಆ ಕತೆಯನ್ನು ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದಿಡುವ ಪ್ರಕ್ರಿಯೆ ಎಲ್ಲರನ್ನೂ ಬೆರಗುಗೊಳಿಸುವಂತಿರಬೇಕು ಎಂಬುದೇ ಪ್ರತಿಯೊಬ್ಬರ ಕನಸಾಗಿರುತ್ತದೆ.
ಸಿನಿಮಾದ ಬಗ್ಗೆ ನನ್ನ ಅಭಿಪ್ರಾಯ ತಿಳಿಸುವುದಷ್ಟೇ ಈ ಪತ್ರದ ಉದ್ದೇಶವಲ್ಲ. ಇಂತಹ ಒಳ್ಳೆಯ ಚಿತ್ರವನ್ನು ನೀಡಿದ್ದಕ್ಕಾಗಿ ಇಡೀ ಚಿತ್ರತಂಡವನ್ನು ಅಭಿನಂದಿಸಿ ಈ ಪತ್ರ ಬರೆಯುತ್ತಿದ್ದೇನೆ.
ತೆರೆಗೆ ಬರುವ ಎಲ್ಲಾ ಸಿನಿಮಾಗಳಲ್ಲಿ ನನಗೆ ನೋಡಲು ಸಾಧ್ಯವಾಗುವುದು ಕೆಲವನ್ನು ಮಾತ್ರ. ಹೀಗೆ ನಾನು ನೋಡಿದ ಕೆಲವೇ ಕೆಲವು ಚಿತ್ರಗಳಲ್ಲಿ ʼಗರುಡ ಗಮನ ವೃಷಭ ವಾಹನʼ ಕೂಡ ಒಂದು.
ಸಿನಿಮಾ ನೋಡಿದ ತಕ್ಷಣ ನನಗೆ ಅನ್ನಿಸುತ್ತಿರುವುದನ್ನು ಮೊದಲು ಹೇಳಿ ಬಿಡುತ್ತೇನೆ.
My note to @raj_shetty for his excellence in conviction "GGVV"
— Kichcha Sudeepa (@KicchaSudeep) May 6, 2022
Cheers 🥂❤️ pic.twitter.com/1yeKAwUQeK
ಚಿತ್ರಕತೆ ಅದ್ಭುತವಾಗಿದೆ. ಸಿನಿಮಾದ ಕುರಿತು ಚಿತ್ರತಂಡಕ್ಕಿರುವ ಶ್ರದ್ಧೆ ಮತ್ತು ಕತೆಯನ್ನು ಹೇಳುವ ರೀತಿ ಅತ್ಯದ್ಭುತ. ಚಿತ್ರದ ನಿರ್ದೇಶನ ಮಾದರಿಯಾಗುವಂಥದ್ದು. ಸಂಗೀತವಂತೂ ಎಲ್ಲವನ್ನೂ ಮೀರಿದ್ದು. ಕಲಾವಿದರ ಬಗ್ಗೆ ಹೇಳುವುದಾದರೆ ಎಲ್ಲರೂ ಅವರವರ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಸರಳತೆಯೇ ಈ ಚಿತ್ರದ ಬಹುಮುಖ್ಯ ಅಂಶ. ಸಿನಿಮಾದಲ್ಲಿ ಹಾದು ಹೋಗುವ ಯಾವುದೇ ಸನ್ನಿವೇಶಗಳಾಗಲಿ ಅಥವಾ ಪಾತ್ರಗಳೇ ಆಗಲಿ ಸಹಜವಾಗಿ ನೋಡಿಸಿಕೊಂಡು ಹೋಗುತ್ತವೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಇನ್ನಷ್ಟು ತೀವ್ರತೆ ನೀಡುತ್ತದೆ. ಮುಕುಂದನ್ ಅವರ ಹಿನ್ನೆಲೆ ಸಂಗೀತ ಸಿನಿಮಾ ಉದ್ದಕ್ಕೂ ನನ್ನನ್ನು ಹಿಡಿದಿಟ್ಟಿತ್ತು.
ಚಿತ್ರದಲ್ಲಿ ರಿಷಭ್ ಶೆಟ್ಟಿಯವರ ನಟನೆಯಂತೂ ಹೇಳಿ ಮಾಡಿಸಿದ ಹಾಗಿದೆ. ಅವರ ಸಂಭಾಷಣೆಯ ಶೈಲಿ ನಿಜಕ್ಕೂ ಆಕರ್ಷಣೀಯ. ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ರಿಷಭ್, ಈಗ ನಟನಾಗಿಯೂ ಒಳ್ಳೆಯ ರೂಪ ಪಡೆದಿದ್ದಾರೆ.

ರಾಜ್ ಬಿ ಶೆಟ್ಟಿಯವರ ಬಗ್ಗೆ ನಾನು ಹೇಳುವುದೇನಿದೆ?
ʼಗರುಡ ಗಮನʼವೇ ನಾನು ನೋಡುತ್ತಿರುವ ರಾಜ್ ಬಿ ಶೆಟ್ಟಿಯವರ ಮೊದಲ ಸಿನಿಮಾ. ನಟನೆ ಮತ್ತು ನಿರ್ದೇಶನದಲ್ಲಿ ರಾಜ್ ಎಲ್ಲರನ್ನೂ ಮೀರಿಸಿದ್ದಾರೆ. ಕತೆ ಹೆಣೆದಿರುವ ರೀತಿ ಮತ್ತು ಕತೆಯ ಮೇಲೆ ಅವರಿಗಿರುವ ಹಿಡಿತ ಅದ್ಭುತ. ಒಂದು ವೇಳೆ ಈ ಚಿತ್ರದ ಕತೆಯನ್ನು ಅವರು ಬರೆಯದೆ ಬೇರೆ ಯಾರೇ ಬರೆದಿದ್ದರೂ ಶಿವನ ಪಾತ್ರದಲ್ಲಿ ರಾಜ್ ಶೆಟ್ಟಿ ಕಾಣಿಸಿಕೊಳ್ಳುವ ಸಾಧ್ಯತೆಯೇ ಇರುತ್ತಿರಲಿಲ್ಲ. ನಾನು ಹೀಗೇಕೆ ಹೇಳುತ್ತಿದ್ದೇನೆ ಎಂಬುದು ಅವರಿಗೆ ಅರ್ಥವಾಗಿರುತ್ತದೆ. ಶಿವನ ಪಾತ್ರದಲ್ಲಿ ರಾಜ್ ಅದ್ಭುತವಾಗಿ ನಟಿಸಿದ್ದಾರೆ. ಪ್ರತಿ ದೃಶ್ಯದಲ್ಲೂ ಅಷ್ಟು ಚೆಂದವಾಗಿ ಅಭಿನಯಿಸಲು ಹಲವು ವರ್ಷಗಳ ಅನುಭವ ಬೇಕು. ರಾಜ್ ನಿಜಕ್ಕೂ ವರನಟ.
ನಿಮ್ಮ ಬರವಣಿಗೆಯ ಕಲೆಯನ್ನು ಕಂಡು ನಾನು ಆಶ್ಚರ್ಯ ಪಡುತ್ತಿದ್ದೇನೆ. ಗರುಡ ಗಮನದಂತಹ ಸಿನಿಮಾವನ್ನು ನಿಮ್ಮ ಶೈಲಿಯಲ್ಲಿ ತೆಗೆಯುವುದು ಸುಲಭದ ಮಾತಲ್ಲ. ನಿಮ್ಮ ಚಿತ್ರವನ್ನು ನೋಡಿ ಖುಷಿಯಾಗುತ್ತಿದೆ. ಅದೇ ಖುಷಿಯಲ್ಲಿ ಇಡೀ ಚಿತ್ರತಂಡಕ್ಕೆ ಪತ್ರ ಬರೆಯುತ್ತಿದ್ದೇನೆ. ಈ ಮೂಲಕ ಸರಳವಾಗಿ ನನ್ನ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.
ಪ್ರೀತಿಯಿಂದ
ಕಿಚ್ಚ