ಜುಬಿಲಿ ಹಿಲ್ಸ್‌ನಿಂದ ಬೀದಿಗೆ ತಂದ 'ಆಚಾರ್ಯ'

koratala-siva
  • ಚಿತ್ರಮಂದಿರಗಳಲ್ಲಿ ಹೀನಾಯ ಸೋಲು ಕಂಡ 'ಆಚಾರ್ಯ'
  • ವಿತರಕರ ನಷ್ಟ ಭರಿಸಲು ಆಸ್ತಿ ಮಾರಲು ಮುಂದಾದ ನಿರ್ದೇಶಕ

'ಆಚಾರ್ಯ' ಸಿನಿಮಾವನ್ನು ವಿತರಿಸಿ ದೊಡ್ಡ ಪ್ರಮಾಣದಲ್ಲಿ ಹಣ ಕಳೆದುಕೊಂಡ ವಿತರಕರ ನಷ್ಟ ಭರಿಸುವ ಸಲುವಾಗಿ ನಿರ್ದೇಶಕ ಕೊರಟಾಲ ಶಿವ ತಮ್ಮ ಬಹುಕೋಟಿ ಮೊತ್ತದ ಆಸ್ತಿ ಮಾರಾಟಕ್ಕಿಟ್ಟಿದ್ದಾರೆ.

ತೆಲುಗಿನ ಖ್ಯಾತ ನಟ ರಾಮ್ ಚರಣ್ ತೇಜ ಮುಖ್ಯಭೂಮಿಕೆಯ 'ಆಚಾರ್ಯ' ಸಿನಿಮಾ ಬಿಡುಗಡೆಗೂ ಮೊದಲೇ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿತ್ತು. ಈ ಚಿತ್ರದಲ್ಲಿ ರಾಮ್ ಚರಣ್ ಜೊತೆಗೆ ಅವರ ತಂದೆ, ಮೆಗಾಸ್ಟಾರ್ ಚಿರಂಜೀವಿ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ʼಮಿರ್ಚಿʼ, ʼಶ್ರೀಮಂತುಡುʼ, ʼಜನತಾ ಗ್ಯಾರೇಜ್ʼ, ʼಭರತ್ ಅನೆ ನೇನುʼ ಹೀಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಸ್ಟಾರ್ ನಿರ್ದೇಶಕ ಕೊರಟಾಲ ಶಿವ ಆಕ್ಷನ್ ಕಟ್ ಹೇಳಿದ್ದ 'ಆಚಾರ್ಯ' ಸಿನಿಮಾ ಚಿತ್ರಮಂದಿರಗಳಲ್ಲಿ ಹೀನಾಯ ಸೋಲು ಕಂಡಿತ್ತು.

"ಚಿತ್ರಕ್ಕೆ ಹಾಕಿದ್ದ ಬಂಡವಾಳ ಕೂಡ ವಾಪಸ್ ಬಂದಿಲ್ಲ" ಎಂಬುದು ನಿರ್ಮಾಪಕರ ಗೋಳಾದರೆ, ಸ್ಟಾರ್ ಸಿನಿಮಾ ಎಂದು ಬಹುಕೋಟಿ ಮೊತ್ತಕ್ಕೆ ವಿತರಣಾ ಹಕ್ಕು ಖರೀದಿಸಿದ್ದ ವಿತರಕರು, "ನಿರ್ದೇಶಕ ಕೊರಟಾಲ ಶಿವ ಅವರನ್ನು ನಂಬಿ ಸಿನಿಮಾದ ವಿತರಣಾ ಹಕ್ಕನ್ನು ಖರೀದಿ ಮಾಡಿ ನಾವು ಬೀದಿಗೆ ಬಂದಿದ್ದೇವೆ" ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ನಷ್ಟ ಭರಿಸಿಕೊಡುವಂತೆ ನಿರ್ದೇಶಕರ ಮನೆ ಮತ್ತು ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಾಯಿ ಪಲ್ಲವಿ ಅಭಿನಯದ 'ಗಾರ್ಗಿ' ಚಿತ್ರ ಬೆಂಬಲಿಸಿದ್ದಕ್ಕೆ ರಕ್ಷಿತ್‌ ಶೆಟ್ಟಿ ಮೇಲೆ ಕಮೆಂಟ್‌ಗಳ ದಾಳಿ

ಇದರಿಂದ ಬೇಸತ್ತಿರುವ ನಿರ್ದೇಶಕ ಕೊರಟಾಲ ಶಿವ ಹೈದರಾಬಾದ್‌ನ ಅತ್ಯಂತ ದುಬಾರಿ ಪ್ರದೇಶ ಜುಬಿಲಿ ಹಿಲ್ಸ್‌ನಲ್ಲಿರುವ ₹40ರಿಂದ ₹45 ಕೋಟಿ ಬೆಲೆ ಬಾಳುವ ತಮ್ಮ ಆಸ್ತಿ ಮಾರಿ ವಿತರಕರ ನಷ್ಟ ಭರಿಸಲು ಮುಂದಾಗಿದ್ದಾರೆ.  

₹140 ಕೋಟಿ ಬಂಡವಾಳದಲ್ಲಿ ಸಿದ್ಧಗೊಂಡಿದ್ದ 'ಆಚಾರ್ಯ' ಸಿನಿಮಾ ₹76 ಕೋಟಿಗಳನ್ನು ಕಲೆ ಹಾಕಲು ಸಾಧ್ಯವಾಗಿತ್ತು. ಕೇವಲ ನಿರ್ದೆಶಕರು ಮಾತ್ರವಲ್ಲದೆ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಮೆಗಾಸ್ಟಾರ್‌ ಚಿರಂಜೀವಿ ಕೂಡ ತಮ್ಮ ಸಂಭಾವನೆಯ ಹಣದಲ್ಲಿ ₹10 ಕೋಟಿಗಳನ್ನು ಹಿಂದಿರುಗಿಸಿ ವಿತರಕರ ನಷ್ಟ ಭರಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್