ಕಾಂತಾರ ವಿವಾದ | ನಟ ಚೇತನ್‌ಗೆ ತಿರುಗೇಟು ನೀಡಲು ಹೋಗಿ ವಿವಾದಕ್ಕೆ ಸಿಲುಕಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಹಿಂದುಳಿದ, ದಲಿತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾದ ನಾವು ಪಂಜುರ್ಲಿ, ಕೊರಗಜ್ಜ, ಕಲ್ಕುಡ ಎಲ್ಲ ದೈವ, ದೇವರುಗಳನ್ನು ಆರಾಧಿಸುತ್ತೇವೆ. ಆ ದೇವರುಗಳಿಗೆ ಪೂಜೆ ಸಲ್ಲಿಸುವ ನಾವು ಹಿಂದೂಗಳು ಎಂದು ಕೋಟ ಶ್ರೀನಿವಾಸ ಪೂಜಾರಿ ಗೊಂದಲಮಯ ಹೇಳಿಕೆ ನೀಡಿದ್ದಾರೆ.
Kota srinivas poojary made confusing statement over kantara controversy

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಸೃಷ್ಟಿಸುತ್ತಿರುವಂತೆ ವಿವಾದಗಳಿಗೂ ಮೂಲವಾಗಿದೆ. ಈ ಚಿತ್ರದಲ್ಲಿ ವರಾಹ ರೂಪಕವನ್ನಿಟ್ಟು ಮೂಲ ನಿವಾಸಿ ಆಚರಣೆಗಳಿಗೆ ಬ್ರಾಹ್ಮಣ್ಯ ಮತ್ತು ಹಿಂದೂ ಧರ್ಮದ ಲೇಪನ ಅಂಟಿಸಲಾಗಿದೆ ಎಂದು 'ಆ ದಿನಗಳು' ಖ್ಯಾತಿಯ ನಟ ಚೇತನ್ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದರು.

ಚೇತನ್‌ ಇಂದು ಸುದ್ದಿಗೋಷ್ಠಿ ನಡೆಸಿ 'ಕಾಂತಾರ' ಚಿತ್ರದಲ್ಲಿ ಪಂಜುರ್ಲಿ ದೈವವನ್ನು ಚಿತ್ರಿಸಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ಪಂಜುರ್ಲಿ, ಭೂತಾರಾಧನೆ ಎಲ್ಲವೂ ನಮ್ಮ ಕೆಳವರ್ಗದವರ ಆಚರಣೆಗಳು. ಹಿಂದೂಗಳಾದ ಕಾರಣಕ್ಕೆ ನಾವು ಈ ಆಚರಣೆಯನ್ನು ನಡೆಸಿಕೊಂಡು ಬಂದಿದ್ದೇವೆ ಎಂದು ಬಾಲಿಶವಾಗಿ ಉತ್ತರಿಸಿದ್ದಾರೆ.

Eedina App

ಭೂತ- ದೈವಗಳನ್ನು ನಂಬಿದವರು ಹಿಂದೂ ಧರ್ಮದವರು

ಇಂದು ಸುದ್ದಿಗೋಷ್ಠಿಯಲ್ಲಿ ಚೇತನ್‌ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಶ್ರೀನಿವಾಸ ಪೂಜಾರಿ, "ದಕ್ಷಿಣ ಕನ್ನಡ ಮತ್ತು ಕರಾವಳಿ ಭಾಗದಲ್ಲಿರುವ ಹಿಂದುಳಿದವರು, ದಲಿತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಾದ ನಾವು ನಮ್ಮ ಭೂತ ಮತ್ತು ದೈವಗಳನ್ನು ನಂಬಿಕೊಂಡು ಬಂದಿದ್ದೇವೆ. ನಮ್ಮ ಪಂಜುರ್ಲಿ, ಕಲ್ಕುಡ ಹೀಗೆ ಹಲವು ಗಣಗಳ ದೈವಗಳಿಗೆ ನಂಬಿಕೆ ಆಧಾರದಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಕೋಲವನ್ನು ಮಾಡುತ್ತ ಬಂದಿದ್ದೇವೆ. ಸಾವಿರಾರು ಜನ ಸೇರಿಕೊಂಡು ರಾತ್ರಿಯಿಡೀ ಭೂತಕೋಲ ಆಚರಿಸುತ್ತೇವೆ. ನಂತರ ಬೆಳಗಿನ ಜಾವದಲ್ಲಿ ಭೂತ ಬಂದು ಜನರ ಸಮಸ್ಯೆಯನ್ನು ಆಲಿಸುತ್ತದೆ. ಹೀಗೆ ಕೋಲದ ಸಮಯದಲ್ಲಿ ಬರುವ ಪಂಜುರ್ಲಿ, ಕೊರಗಜ್ಜ ದೈವಗಳಿಗೆ ನಾವು ಆರ್ಥಿಕ ಸಮಸ್ಯೆ, ಕೌಟುಂಬಿಕ ಮತ್ತು ಕೃಷಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಹಾಕುತ್ತೇವೆ. ಆ ಸಮಯದಲ್ಲಿ ನಮ್ಮ ಸಮಸ್ಯೆಗಳನ್ನು ಆಲಿಸುವ ದೈವಗಳು ಪ್ರಸಾದ ಕೊಟ್ಟು, ನೆಮ್ಮದಿಯಾಗಿರಿ ನಾನಿದ್ದೇನೆ ಎಂದು ಅಭಯ ನೀಡುತ್ತವೆ. ಈ ಆಚರಣೆಗಳು ನಮ್ಮ ಬದುಕಿನಲ್ಲಿ ಭಾವನಾತ್ಮಕವಾಗಿ ಬೆಸೆದುಕೊಂಡಿವೆ. ನಾವೆಲ್ಲರೂ ಹಿಂದೂ ಧರ್ಮದವರು. ಆ ದೇವರು ನಮಗೆ ಹಿಂದೂ ಧರ್ಮದ ಭಾಗವಾಗಿ ಅಭಯವನ್ನು ನೀಡುತ್ತದೆ. 'ಕಾಂತಾರ' ಚಿತ್ರದಲ್ಲೂ ಅದನ್ನೇ ತೋರಿಸಲಾಗಿದೆ. ಅದರಿಂದ ನಮಗೆ ಯಾವುದೇ ರೀತಿಯ ತೊಂದರೆ ಇಲ್ಲ. ಯಾರಿಗಾದರೂ ತೊಂದರೆ ಇದ್ದರೆ ಅದಕ್ಕೆ ನಾವು ಹೊಣೆಯಲ್ಲ" ಎಂದಿದ್ದಾರೆ.

AV Eye Hospital ad

"ನಾವು ಹಿಂದುಳಿದವರು, ದಲಿತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಕೋಲ ಮಾಡುವುದು. ನಾವೇ ದೈವವನ್ನು ನಂಬುವುದು, ನಾವೇ ಭೂತವನ್ನು ಆರಾಧಿಸುವುದು. ಪಂಜುರ್ಲಿ ಮತ್ತು ಕಲ್ಕುಡ ದೈವಗಳನ್ನು ನಾವೇ ಪೂಜೆ ಮಾಡುವುದು. ಹೀಗಿರುವಾಗ ನೀವು ಹಿಂದೂ ಧರ್ಮ ಅಲ್ಲ. ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳುವುದು ಯಾರು? ಅವರಿಗೆ ಗೊತ್ತಿಲ್ಲದೆ ಈ ರೀತಿಯ ಹೇಳಿಕೆ ನೀಡಿರಬಹುದು. ಅಧಿಕ ಪ್ರಸಂಗವಾಗಿರಬಹುದು. ಇಲ್ಲವೇ ಸಂದೇಹಗಳು ಕೂಡ ಇರಬಹುದು. ಆದರೆ, ನಾನು ದೈವ ಮತ್ತು ಭೂತಗಳನ್ನು ನಂಬಿ ಪೂಜೆ ಪುನಸ್ಕಾರ ಮಾಡಿಕೊಂಡು ಬಂದಿರುವುದರಿಂದ, ದೈವದ ನುಡಿಗಳನ್ನು ನನ್ನ ಶ್ರೇಯಸ್ಸು ಎಂದು ಭಾವಿಸಿ ಕೋಲ ಮಾಡಿದವನಾಗಿ ಇದು ನನ್ನ ನಂಬಿಕೆ" ಎಂದಿದ್ದಾರೆ. 

ಭೂತಾರಾಧನೆ ತುಳು ಸಂಸ್ಕೃತಿಯ ಭಾಗ. ಇಲ್ಲಿರುವಂತಹ ಪಂಜುರ್ಲಿ, ಕೊರಗಜ್ಜ, ಕಲ್ಕುಡ ಎಲ್ಲ ದೈವ, ದೇವರುಗಳು ನಮ್ಮ ಬದುಕಿನ ಭಾಗವಾಗಿ ನಾವು ನಂಬಿಕೊಂಡು ಬಂದಿದ್ದೇವೆ. ಆ ದೇವರುಗಳಿಗೆ ಪೂಜೆ ಸಲ್ಲಿಸುವ ನಾವು ಹಿಂದೂಗಳು" ಎಂದು ಗೊಂದಲಮಯ ಹೇಳಿಕೆ ನೀಡಿದ್ದಾರೆ.

ಬಿಲ್ಲವರ ಮನೆಯಲ್ಲಿ ಪೂಜೆ ನೆರವೇರಿಸುವವರ ಬಗ್ಗೆ ಮಾತಾಡಿದ್ದ ಚೇತನ್‌

ಕೋಟ ಶ್ರೀನಿವಾಸ ಪೂಜಾರಿ ಬಿಲ್ಲವ ಸಮುದಾಯದವರಾಗಿದ್ದು, ಭೂತದ ಕೋಲದಂತಹ ಆಚರಣೆಯನ್ನು ಆಯೋಜಿಸುತ್ತಾರೆ. ಪಂಜುರ್ಲಿ, ಭೂತಾರಾಧನೆ, ಕಲ್ಕುಡ, ಕೊರಗಜ್ಜರನ್ನು ಪೂಜಿಸುತ್ತಾರೆ. ಆದರೆ ಬಿಲ್ಲವ ಸಮುದಾಯದ ಮನೆಗಳಲ್ಲಿ ಭೂತಾರಾಧನೆ ಪೂಜೆಗಳನ್ನು ನೆರವೇರಿಸುವ ತಳಸಮುದಾಯದ ಬಗ್ಗೆ ನಟ ಚೇತನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನುವುದನ್ನು ಗಮನಿಸಲು ವಿಫಲರಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app