ಸ್ವಾತಂತ್ರ್ಯದ ಅಮೃತ ಮಹೋತ್ಸವ | ದೇಶಪ್ರೇಮ ಸಾರುವ ಕನ್ನಡದ ಪ್ರಮುಖ ಚಿತ್ರಗಳಿವು

75ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ಸ್ವಾತಂತ್ರ್ಯ ಹೋರಾಟ ಮತ್ತು ದೇಶಭಕ್ತಿಯ ಸುತ್ತ ಕಳೆದ 6 ದಶಕಗಳಲ್ಲಿ ಮೂಡಿ ಬಂದ ಕನ್ನಡದ ಪ್ರಮುಖ ಚಿತ್ರಗಳ ಮಾಹಿತಿಯ ಹೂರಣ ಇಲ್ಲಿದೆ.
Veerappa Nayaka

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಬ್ರಿಟೀಷ್‌ ಆಳ್ವಿಕೆಯ ವಿರುದ್ಧ ಸಿಡಿದೆದ್ದು ದಿಟ್ಟ ಹೋರಾಟ ನಡೆಸಿದ ಈ ಮಣ್ಣಿನ ಕೆಚ್ಚೆದೆಯ ವೀರರ ಸಾಹಗಾಥೆಗಳನ್ನು ಆಧರಿಸಿ ತೆರೆಗೆ ಬಂದ ಕನ್ನಡದ ಜನಪ್ರಿಯ ಸಿನಿಮಾಗಳ ವಿವರ ಇಲ್ಲಿದೆ.

ಕಿತ್ತೂರು ಚೆನ್ನಮ್ಮ

18ನೇ ಶತಮಾನದಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನನ್ನು ಜಾರಿಗೊಳಿಸಿ ಈಸ್ಟ್‌ ಇಂಡಿಯಾ ಕಂಪನಿ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ ಮತ್ತು ಕಪ್ಪ ಕಾಣಿಕೆ ನೀಡಬೇಕು ಎಂಬ ಆದೇಶವನ್ನು ಧಿಕ್ಕರಿಸಿ ಇಡೀ ಬ್ರಿಟೀಷ್‌ ಸೇನೆಯ ವಿರುದ್ಧ ಹೋರಾಡಿ ದೇಶಕ್ಕಾಗಿ ವೀರಮರಣ ಹೊಂದಿದ ರಾಣಿ ಚೆನ್ನಮ್ಮನ ಜೀವನವನ್ನು ಆಧರಿಸಿ 1961ರಲ್ಲಿ ʼಕಿತ್ತೂರು ಚೆನ್ನಮ್ಮʼ ಸಿನಿಮಾ ತೆರೆಗೆ ಬಂದಿತ್ತು. ಬಿ.ಆರ್‌ ಪಂತುಲು ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟಿ ಬಿ. ಸರೋಜಾದೇವಿ ರಾಣಿ ಚೆನ್ನಮ್ಮನ ಪಾತ್ರವನ್ನು ನಿರ್ವಹಿಸಿದ್ದರು. ವರನಟ ಡಾ. ರಾಜ್‌ಕುಮಾರ್‌ ಮಲ್ಲಸರ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೆ.ಎಸ್‌ ಅಶ್ವಥ್‌, ಲೀಲಾವತಿ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದರು. ಎಸ್‌ ಜಾನಕಿ, ಪಿ ಸುಶೀಲ, ಪಿ ಬಿ ಶ್ರೀನಿವಾಸ್‌, ಪಿ ಕಾಳಿಂಗರಾವ್‌ ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದರು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿತ್ತು.

ಮಾಡಿ ಮಡಿದವರು

ʼಕ್ವಿಟ್‌ ಇಂಡಿಯಾʼ ಚಳವಳಿಯಲ್ಲಿ ದೇಶದ ಸಾಮಾನ್ಯ ಜನರ ಪಾಲುದಾರಿಕೆಯ ಕುರಿತು ಕನ್ನಡದ ಖ್ಯಾತ ಸಾಹಿತಿ ಬಸವರಾಜ ಕಟ್ಟೀಮನಿ ಅವರು ರಚಿಸಿದ್ದ ʼಮಾಡಿ ಮಡಿದವರುʼ ಕಾದಂಬರಿಯನ್ನು ಆಧರಿಸಿ ಕನ್ನಡದ ಹೆಸರಾಂತ ನಿರ್ದೇಶಕ ಕೆ ಎಂ ಶಂಕರಪ್ಪನವರು ಅದೇ ಹೆಸರಿನ ಚಿತ್ರವನ್ನು 1974ರಲ್ಲಿ ತೆರೆಗೆ ಅಳವಡಿಸಿದ್ದರು. ಜಿ ಶಿವಾನಂದ ಮತ್ತು ಗಿರಿಜಾ ಲೋಕೇಶ್‌ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ರಂಗದಿಗ್ಗಜರಾದ ಏಣಗಿ ಬಾಳಪ್ಪ, ಕೋದಂಡರಾಮ, ರಾಮ್‌ಗೋಪಾಲ್‌, ಸುಧೀರ್‌, ಬಿ ಜಯಶ್ರೀ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಗೋಪಾಲಕೃಷ್ಣ ಅಡಿಗರ ʼನೆನೆ ನೆನೆ ಆದಿನ..ʼ ಕವಿತೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಈ ಗೀತೆಗೆ ಮೈಸೂರು ಅನಂತಸ್ವಾಮಿ ಧ್ವನಿಯಾಗಿದ್ದರು. ಭಾಸ್ಕರ್‌ ರಾವ್‌ ಸಂಗೀತ ನಿರ್ದೇಶಿಸಿದ್ದ ಈ ಚಿತ್ರಕ್ಕೆ ಉಮೇಶ್‌ ಕುಲಕರ್ಣಿ ಅವರ ಸಂಕಲನ ಮತ್ತು ಯು ಎಂ ಎನ್‌ ಷರೀಫ್‌ ಅವರ ಛಾಯಾಗ್ರಹಣವಿತ್ತು. ಚಿತ್ರ ನಿರೂಪಣೆ ಮತ್ತು ತಾಂತ್ರಿಕತೆ ದೃಷ್ಟಿಯಿಂದ ಹಿನ್ನೆಡೆ ಅನುಭವಿಸಿದರೂ, ಹೊಸ ಅಲೆಯ ಚಿತ್ರ ಎಂಬ ಕಾರಣಕ್ಕೆ ದ್ವಿತೀಯ ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಜೊತೆಗೆ ಯು ಎಂ ಎನ್‌ ಷರೀಫ್‌ ಅವರು ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದರು.

ವೀರ ಸಿಂಧೂರ ಲಕ್ಷ್ಮಣ

ಬ್ರಿಟೀಷರ ವಿರುದ್ಧ ಸಿಡಿದೆದ್ದು 18ನೇ ಶತಮಾನದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದ ಆಂಗ್ಲರ ಕಚೇರಿಗಳನ್ನು ಲೂಟಿ ಮಾಡಿ ಬಡವರಿಗೆ ನೆರವಾಗುತ್ತಿದ್ದ ಕ್ರಾಂತಿಕಾರಿ ಹೋರಾಟಗಾರ ಸಿಂಧೂರ ಲಕ್ಷ್ಮಣನ ಬದುಕಿನ ಕತೆಯನ್ನು ಆಧರಿಸಿ 1977ರಲ್ಲಿ ವೀರ ಸಿಂಧೂರ ಲಕ್ಷ್ಮಣ ಸಿನಿಮಾ ತೆರೆಗೆ ಬಂದಿತ್ತು. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಎನ್‌. ಬಸವರಾಜ್‌ ಲಕ್ಷ್ಮಣನ ಪಾತ್ರ ನಿಭಾಯಿಸಿದ್ದರು. ಕೆ. ಎಸ್‌ ಅಶ್ವಥ್‌, ವಜ್ರಮುನಿ, ಸುಧೀರ್‌ ಮುಂತಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಮುತ್ತಿನ ಹಾರ

1990ರಲ್ಲಿ ವಿಷ್ಣುವರ್ಧನ್‌ ಮುಖ್ಯಭೂಮಿಕೆಯಲ್ಲಿ ಮೂಡಿಬಂದಿದ್ದ ಮುತ್ತಿನ ಹಾರ ಸಿನಿಮಾ ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಗಡಿ ಕಾಯುವ ಸೈನಿಕರ ಬದುಕಿನ ಚಿತ್ರಣವನ್ನು ತೋರಿಸುವಲ್ಲಿ ಯಶಸ್ವಿಯಾಗಿತ್ತು. ಯುದ್ಧ ಹೇಗೆ ಒಬ್ಬ ಯೋಧನ ಸಂಸಾರವನ್ನೇ ನಾಶ ಮಾಡುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದರು ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು. ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿದ್ದ ಈ ಚಿತ್ರದಲ್ಲಿ ವಿಷ್ಣುವರ್ಧನ್‌ ಮತ್ತು ಸುಹಾಸಿನಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರದ ʼಮಡಿಕೇರಿ ಸಿಪಾಯಿ..ʼ, ʼದೇವರು ಹೊಸೆದ ಪ್ರೇಮದ ದಾರ..ʼ ಹಾಡುಗಳು ಭಾರಿ ಜನಪ್ರಿಯತೆ ಗಳಿಸಿದ್ದವು.

ಮೈಸೂರ ಮಲ್ಲಿಗೆ

ಕೆ.ಎಸ್‌ ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ ಕವನಸಂಕಲನವನ್ನು ಆಧರಿಸಿ 1991ರಲ್ಲಿ ʼಮೈಸೂರ ಮಲ್ಲಿಗೆʼ ಸಿನಿಮಾ ತೆರೆಗೆ ಬಂದಿತ್ತು. ನವ ವಿವಾಹಿತ ಹಳ್ಳಿಯ ಶಿಕ್ಷಕನೊಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ ಬದಲಾಗುವ ಕಥನಕ್ಕೆ ಟಿ.ಎಸ್‌ ನಾಗಾಭರಣ ಆಕ್ಷನ್‌ ಕಟ್‌ ಹೇಳಿದ್ದರು. ಗಿರೀಶ್‌ ಕಾರ್ನಾಡ್‌ ಮತ್ತು ಸುಧಾರಾಣಿ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಸಿದ್ದರು. ಎರಡು ರಾಷ್ಟ್ರಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದ ಮೈಸೂರ ಮಲ್ಲಿಗೆಯ ʼದೀಪವು ನಿನ್ನದೆ.. ಗಾಳಿಯೂ ನಿನ್ನದೆ.. ಆರದಿರಲಿ ಬೆಳಕು..ʼ, ʼರಾಯರು ಬಂದರು ಮಾವನ ಮನೆಗೆ..ʼ ಸೇರಿದಂತೆ ಹಲವು ಹಾಡುಗಳು ಜನಪ್ರಿಯಗೊಂಡಿದ್ದವು. ಸಿ. ಅಶ್ವಥ್‌ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು.

ತಾಯಿ ಸಾಹೇಬ

1997ರಲ್ಲಿ ತೆರೆಕಂಡಿದ್ದ ತಾಯಿ ಸಾಹೇಬ ಸಿನಿಮಾ ಕೌಟುಂಬಿಕ ಕಥಾಹಂದರವನ್ನು ಹೊಂದಿತ್ತಾದರೂ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಬೆಳವಣಿಗೆಗಳ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿತ್ತು. ಚಿತ್ರದಲ್ಲಿ ಪ್ರಮುಖವಾಗಿ ಭೂ ಚಳವಳಿಯ ಬಗ್ಗೆ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದರು. ಜಯಮಾಲಾ ಮತ್ತು ಸುರೇಶ್‌ ಹೆಬ್ಳಿಕರ್‌ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದರು. ಈ ಚಿತ್ರಕ್ಕೆ 4 ರಾಷ್ಟ್ರ ಪ್ರಶಸ್ತಿಗಳು ಒಲಿದು ಬಂದಿದ್ದವು.

ವೀರಪ್ಪ ನಾಯಕ

ದೇಶಪ್ರೇಮಿಯೊಬ್ಬನ ಬದುಕಿನ ಸುತ್ತ ವೀರಪ್ಪ ನಾಯಕ ಸಿನಿಮಾ ಮೂಡಿಬಂದಿತ್ತು. ದೇಶಪ್ರೇಮಿಯಾದ ವೀರಪ್ಪ ನಾಯಕ ತನ್ನ ಬದುಕಿನುದ್ದಕ್ಕೂ ಗಾಂಧಿವಾದಿಯಾಗಿ ಬದುಕುತ್ತಾನೆ. ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಮಗ ಭಯೋತ್ಪಾದಕನಾಗಿ ದೇಶಕ್ಕೆ ಕಂಟಕವಾದಾಗ ಮಗನೆಂದೂ ಲೆಕ್ಕಿಸದೇ ಆತನ ಶೀರಚ್ಛೇದನ ಮಾಡಿ ದೇಶಪ್ರೇಮವನ್ನು ಮೆರೆಯುವ ವೀರಪ್ಪ ನಾಯಕನ ಕತೆ ತೆರೆಯ ಮೇಲೆ ಅದ್ಭುತವಾಗಿ ಮೂಡಿಬಂದಿತ್ತು. 1999ರಲ್ಲಿ ತೆರೆಕಂಡಿದ್ದ ಎಸ್‌. ನಾರಾಯಣ್‌ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣುವರ್ಧನ್‌ ವೀರಪ್ಪ ನಾಯಕನ ಪಾತ್ರದಲ್ಲಿ ಮಿಂಚಿದ್ದರು. ಶೃತಿ ವಿಷ್ಣುವರ್ಧನ್‌ಗೆ ಜೋಡಿಯಾಗಿದ್ದರು. ಎಸ್‌. ಪಿ ಬಾಲಸುಬ್ರಮಣ್ಯಂ ಕಂಠಸಿರಿಯಲ್ಲಿ ಮೂಡಿಬಂದಿದ್ದ ʼಭಾರತಾಂಬೆ ನಿನ್ನ ಜನುಮದಿನ..ʼ, ʼಜೀವ ಜ್ಯೋತಿಯೇ..ʼ, ʼಮಲ್ಲೆ ನಿನ್ನ ಮಾತು ಕೇಳದೆ..ʼ ಹಾಡುಗಳು ಜನಪ್ರಿಯತೆ ಗಳಿಸಿದ್ದವು.

ಹಗಲುವೇಷ

2000 ಇಸವಿಯಲ್ಲಿ ತೆರೆಕಂಡಿದ್ದ ಶಿವರಾಜ್‌ಕುಮಾರ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ಹಗಲುವೇಷ ಸಿನಿಮಾ ಹಳ್ಳಿಗನೊಬ್ಬ ಬ್ರಿಟೀಷ್‌ ಸಾಮ್ರಾಜ್ಯದ ವಿರುದ್ಧ ಬಂಡಾಯ ಏಳುವ ಸ್ವಾತಂತ್ರ್ಯ ಹೋರಾಟದ ಸುತ್ತ ಮೂಡಿಬಂದಿತ್ತು. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ಗೆ ರೇಶ್ಮಾ‌ ಜೊತೆಯಾಗಿದ್ದರು. ತಾರಾ, ಪ್ರಮೀಳಾ ಜೋಶಾಯಿ, ಜೈ ಜಗದೀಶ್‌, ಕರಿಬಸಯ್ಯ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ಚಿತ್ರದ ʼಜಗ್ಗದು.. ಜಗ್ಗದು.. ಯಾರಿಗು ಜಗ್ಗದು ಇಂಡಿಯಾ..ʼ ಹಾಡಿಗೆ ನಟ ರಾಜ್‌ಕುಮಾರ್‌ ಧ್ವನಿಯಾಗಿದ್ದು ವಿಶೇಷ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಬ್ರಿಟೀಷ್‌ ವಸಾಹತುಶಾಹಿಯ ವಿರುದ್ಧ ಸ್ವಾತಂತ್ರ್ಯದ ಕಹಳೆ ಊದಿದ್ದ ಕಿತ್ತೂರಿನ ರಾಣಿ ಚೆನ್ನಮ್ಮಳ ಸೇನಾಧಿಪತಿಯಾಗಿದ್ದ ಸಂಗೊಳ್ಳಿ ರಾಯಣ್ಣನ ಬದುಕಿನ ಕತೆಯನ್ನು ಆಧರಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ತೆರೆಗೆ ಬಂದಿತ್ತು. ಬ್ರಿಟೀಷರ ಪಾಲಿಗೆ ಸಿಂಹ ಸ್ವಪ್ನನಾಗಿದ್ದ ರಾಯಣ್ಣನ ಪಾತ್ರದಲ್ಲಿ ದರ್ಶನ್‌ ಮಿಂಚಿದ್ದರು. 2012ರಲ್ಲಿ ನಾಗಣ್ಣ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ಚಿತ್ರದಲ್ಲಿ ನಟಿ ನಿಖಿತಾ ತುಕ್ರಾಲ್‌ ದರ್ಶನ್‌ಗೆ ಜೋಡಿಯಾಗಿದ್ದರು. ಹಿರಿಯ ನಟಿ ಜಯಪ್ರದಾ ರಾಣಿ ಚೆನ್ನಮ್ಮನ ಪಾತ್ರ ನಿರ್ವಹಿಸಿದರೆ, ಶಶಿಕುಮಾರ್‌, ರಾಯಣ್ಣನ ಆಪ್ತ ಚನ್ನಬಸವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಿರಿಯ ನಟಿ ಉಮಾಶ್ರೀ ರಾಯಣ್ಣನ ತಾಯಿ ಪಾತ್ರ ನಿಭಾಯಿಸಿದ್ದರು.  

ನಿಮಗೆ ಏನು ಅನ್ನಿಸ್ತು?
1 ವೋಟ್