ಈ ದಿನ ಎಕ್ಸ್‌ಕ್ಲೂಸಿವ್‌ | ಸಿನಿಮಾ ಬಗ್ಗೆ ಮೆಚ್ಚುಗೆಯಿದೆ, ಆದರೆ ನೋಡಲು ಜನರಿಲ್ಲ ಎಂದು ಬೇಸರಿಸಿದ ಶಶಾಂಕ್‌

ಇದು ಒಟಿಟಿ ಯುಗ ಅಲ್ಲವೇ? ಹೊಸಬರ ಸಿನಿಮಾಗಳು, ಒಳ್ಳೆಯ ಕಥಾಹಂದರವುಳ್ಳ ಚಿತ್ರಗಳು ಬಿಡುಗಡೆಯಾದರೆ ಒಟಿಟಿಯಲ್ಲೊ ಅಥವಾ ಟಿವಿಯಲ್ಲೊ ಬಂದಾಗ ನೋಡಿದರಾಯ್ತು ಎಂಬ ಮನಸ್ಥಿತಿ ಜನರಲ್ಲಿದೆ ಎಂದು ʻಲವ್‌ 360ʼಗೆ ಪ್ರೇಕ್ಷಕರ ಕೊರತೆ ಬಗ್ಗೆ ನಿರ್ದೇಶಕ ಶಶಾಂಕ್ ಆತಂಕ ವ್ಯಕ್ತಪಡಿಸಿದ್ದಾರೆ.
love 360

ಯಶಸ್ವೀ 'ಮೊಗ್ಗಿನ ಮನಸ್ಸು' ಖ್ಯಾತಿಯ ನಿರ್ದೇಶಕ ಶಶಾಂಕ್ ಆಕ್ಷನ್‌ ಕಟ್‌ ಹೇಳಿರುವ ʼಲವ್ 360ʼ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ʼಲವ್ 360ʼ ಹೊಸತನದ ಚಿತ್ರ, ಒಂದೊಳ್ಳೆಯ ʼಎಮೋಷನಲ್ ಡ್ರಾಮಾʼ ಎಂಬ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿರುವ ಹೊತ್ತಿನಲ್ಲೇ ಚಿತ್ರ ನಿರೀಕ್ಷಿಸಿದ ಮಟ್ಟಿಗೆ ಗಲ್ಲಾ ಪೆಟ್ಟಿಗೆಯಲ್ಲಿ ಗಳಿಕೆ ಮಾಡುತ್ತಿಲ್ಲ ಎಂದು ನಿರ್ದೇಶಕ ಶಶಾಂಕ್‌ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ನಿರ್ದೇಶಕ ಶಶಾಂಕ್‌, "ನಮ್ಮ ʼಲವ್ 360ʼ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿ ಬರ್ತಿದೆ. ಆದರೆ, ನಿರೀಕ್ಷಿಸಿದ ಮಟ್ಟಿಗೆ ಸಿನಿಮಾ ಗಳಿಕೆ ಮಾಡುತ್ತಿಲ್ಲ. ವಾರಾಂತ್ಯದಲ್ಲೂ ಸಿನಿಮಾ ನೋಡೋದಿಕ್ಕೆ ಜನ ಥಿಯೇಟರ್‌ಗೆ ಬಂದಿಲ್ಲ. ನಾನು ಈ ಬಗ್ಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದೆ. ಅದಾದ ಬಳಿಕ ಭಾನುವಾರ ಸಂಜೆ ಹೊತ್ತಿಗೆ ಕೆಲ ಶೋಗಳು ʼಹೌಸ್‌‌ ಫುಲ್‌ʼ ಆದವು. ಅದೂ ಸಣ್ಣ ಪ್ರಮಾಣದಲ್ಲಿ. ಸ್ಯಾಂಡಲ್‌ವುಡ್‌ ಮಟ್ಟಿಗೆ ʼಲವ್‌ 360ʼಯಲ್ಲಿನ ʼಜಗವೇ ನೀನು ಗೆಳತಿಯೇ...ʼ ಹಾಡು ಈ ವರ್ಷದ ಸೂಪರ್‌ ಹಿಟ್‌ ಮೆಲೋಡಿ ಹಾಡು. ಈ ಹಾಡಿನ ಮೂಲಕವೇ ನಮ್ಮ ಸಿನಿಮಾ ಎಲ್ಲರ ಗಮನ ಸೆಳೆದಿತ್ತು. ಚಿತ್ರಕ್ಕೆ ಭರ್ಜರಿ ಪ್ರಚಾರವನ್ನೂ ನೀಡಿದ್ದೆವು. 'ಲವ್‌ 360' ನೋಡಿದ ಪ್ರೇಕ್ಷಕರು ಮತ್ತು ವಿಮರ್ಶಕರು ಒಳ್ಳೆಯ ಅಭಿಪ್ರಾಯಗಳನ್ನೇ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಾಗಿಯೂ ಸಿನಿಮಾ ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ನತ್ತ ಬರದಿರಲು ಕಾರಣವೇನು ಎಂಬುದೇ ತಿಳಿಯುತ್ತಿಲ್ಲ" ಎಂದರು.

ಹೊಸಬರ ಸಿನಿಮಾ ಎಂಬ ಕಾರಣಕ್ಕೆ ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದಾರೆಯೇ? ಈ ಬೆಳವಣಿಗೆ ನೀವು ಹೇಗೆ ಗ್ರಹಿಸುತ್ತಿದ್ದೀರಿ?

ಹೊಸಬರ ಸಿನಿಮಾ ಎಂಬ ಕಾರಣಕ್ಕೆ ಹಿನ್ನಡೆ ಆಗಬಹುದು ಎಂಬುದನ್ನು ಮೊದಲೇ ಅಂದಾಜಿಸಿದ್ದೆ. ಅದಕ್ಕಾಗಿಯೇ ಭಾನುವಾರದವರೆಗೆ ಕಾಯೋಣ ಎಂದುಕೊಂಡೆ. ಶುಕ್ರವಾರ ಮತ್ತು ಶನಿವಾರ ಸಿನಿಮಾ ನೋಡಿದ ಪ್ರೇಕ್ಷಕರು ಮತ್ತು ವಿಮರ್ಶಕರು ಉತ್ತಮ ಪ್ರತಿಕ್ರಿಯೆ ನೀಡಿದರು. ಹಲವು ಪ್ರೇಕ್ಷಕರು ಸಿನಿಮಾ ಮೆಚ್ಚಿ ಸಾಮಾಜಿಕ ಜಾಲತಾಣಗಳಲ್ಲಿಯೂ ಬರೆದುಕೊಂಡರು. ಇದೆಲ್ಲ ಗಮನಿಸಿದ ಬಳಿಕ ವಾರಾಂತ್ಯಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಭಾವಿಸಿದ್ದೆ. ಆದರೆ, ಹಾಗೇನೂ ಆಗಲಿಲ್ಲ. ನಾನು ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿರುವುದು ಹೊಸದೇನಲ್ಲ. 'ಸಿಕ್ಸರ್‌', 'ಮೊಗ್ಗಿನ ಮನಸ್ಸು', 'ಕೃಷ್ಣನ್‌ ಲವ್‌ ಸ್ಟೋರಿ' ಸಿನಿಮಾಗಳಲ್ಲೂ ಹೊಸಬರೇ ಇದ್ದರು. ಆ ಸಿನಿಮಾಗಳೆಲ್ಲ ಬಿಡುಗಡೆಯಾದ ದಿನವೇ ಹೌಸ್‌ಫುಲ್‌ ಆಗುತ್ತಿದ್ದವು. ಈಗ ಒಂದು ದಶಕ ಕಳೆದು ಹೋಗಿದೆ. ಈ ಬೆಳವಣಿಗೆ ನೋಡುತ್ತಿದ್ದರೆ ಸಿನಿಮಾ ನೋಡುವ ಟ್ರೆಂಡ್‌ ಬದಲಾಗಿದೆ ಎನ್ನಿಸುತ್ತಿದೆ. ಪ್ರೇಕ್ಷಕರು ಸ್ಟಾರ್‌ ಸಿನಿಮಾಗಳಿಗೆ ಮಾತ್ರ ಥಿಯೇಟರ್‌ಗೆ ಹೋಗಬೇಕು ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಇದು ಒಟಿಟಿ ಯುಗ ಅಲ್ಲವೇ? ಹೊಸಬರ ಸಿನಿಮಾಗಳು, ಒಳ್ಳೆಯ ಕಥಾಹಂದರವುಳ್ಳ ಚಿತ್ರಗಳು ಬಿಡುಗಡೆಯಾದರೆ ಒಟಿಟಿಯಲ್ಲೊ ಅಥವಾ ಟಿವಿಯಲ್ಲೊ ಬಂದಾಗ ನೋಡಿದರಾಯ್ತು ಎಂಬ ಮನಸ್ಥಿತಿ ಜನರಲ್ಲಿದೆ. 

ಪ್ರೇಕ್ಷಕರನ್ನು ಸೆಳೆಯುವಲ್ಲಿ 'ಲವ್‌ 360' ಎಡವಿತೆ?

'ಲವ್‌ 360' ಎಲ್ಲಿಯೂ ಎಡವಿಲ್ಲ. ಪ್ರಚಾರದಲ್ಲೂ ನಾವು ಹಿಂದೆ ಬಿದ್ದಿಲ್ಲ. ಈ ಸಿನಿಮಾದ ʼಜಗವೇ ನೀನು ಗೆಳತಿಯೇ...ʼ ಹಾಡು ದೊಡ್ಡ ಮಟ್ಟಿಗೆ ಸಂಚಲನ ಸೃಷ್ಟಿಸಿತ್ತು. ಮಾಧ್ಯಮದ ಬೆಂಬಲವೂ ಸಿಕ್ಕಿದೆ. ಸಿನಿಮಾ ನೋಡಿದ ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬದಲಾಗಿರುವುದು ಸಿನಿಮಾ ನೋಡುವವರ ಮನಸ್ಥಿತಿ ಅಷ್ಟೇ. ಕೆಲವೊಮ್ಮೆ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎಂದು ಜನ ಸೋಷಿಯಲ್‌ ಮೀಡಿಯಾಗಳಲ್ಲಿ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರನ್ನು ದೂಷಿಸುವುದನ್ನು ಗಮನಿಸಿದ್ದೇನೆ. ಹೌದು, ಕೆಲವೊಮ್ಮೆ ಮೂರು ತಿಂಗಳು ಕಳೆದರೂ ಒಳ್ಳೆಯ ಸಿನಿಮಾಗಳೇ ಬಂದಿರುವುದಿಲ್ಲ. ಜನರ ಅಭಿಪ್ರಾಯ ಸರಿಯಾಗಿದೆ ಬಿಡು ಎಂದುಕೊಂಡು ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡಲು ಪ್ರಯತ್ನಿಸುತ್ತೇವೆ. ಸಿನಿಮಾ ಚೆನ್ನಾಗಿಲ್ಲ ಎಂದು ದೂಷಿಸುವ ಪ್ರೇಕ್ಷಕ, ಉತ್ತಮ ಕಥೆಯುಳ್ಳ ಚಿತ್ರಗಳು ಬಂದಾಗ ಆ ಚಿತ್ರವನ್ನು ಮೆಚ್ಚಿ ಬೆಂಬಲಿಸುವ ಕೆಲಸ ಮಾಡಬೇಕಲ್ಲವೇ? ಸಿನಿಮಾ ತಯಾರಕರಿಗೆ ಇರುವ ಹೊಣೆ ಪ್ರೇಕ್ಷಕರಿಗೂ ಇರಬೇಕಲ್ಲವೇ? ಕೇವಲ ಸ್ಟಾರ್‌ ಸಿನಿಮಾಗಳನ್ನು ಮಾತ್ರ ಥಿಯೇಟರ್‌ಗೆ ಬಂದು ನೋಡುತ್ತೇವೆ ಎನ್ನುವ ಮನಸ್ಥಿತಿ ಪ್ರೇಕ್ಷಕನಲ್ಲಿದೆ ಎಂದುಕೊಳ್ಳಿ. ಕನ್ನಡದಲ್ಲಿ ಎಷ್ಟು ಜನ ಸ್ಟಾರ್‌ಗಳಿದ್ದಾರೆ? ಐದು ಅಥವಾ ಆರು ಜನ ಸ್ಟಾರ್‌ಗಳು ಎಂದುಕೊಂಡರೂ, ವರ್ಷಕ್ಕೆ ಐದಾರು ಸ್ಟಾರ್‌ ಸಿನಿಮಾಗಳು ಜನರ ಮನರಂಜನೆಗೆ ಸಾಕಾಗುತ್ತದೆಯೇ? ಹೊಸಬರ ಸಿನಿಮಾ, ಒಳ್ಳೆಯ ಕಥಾಹಂದರವುಳ್ಳ ಸಿನಿಮಾಗಳನ್ನು ನೋಡಲು ಜನ ಮುಂದೆ ಬರದಿದ್ದರೆ, ಹೊಸ ಪ್ರಯತ್ನಗಳಿಗೆ ಬಂಡವಾಳ ಹೂಡಲು ಯಾವ ನಿರ್ಮಾಪಕನೂ ಮುಂದೆ ಬರುವುದಿಲ್ಲ. ಸಿನಿಮಾಗಳನ್ನೇ ನಂಬಿಕೊಂಡು ಬದುಕುವ ಸಾವಿರಾರು ಕಲಾವಿದರ ಬುದುಕಿನ ಕತೆ ಏನು?   

ಚಿತ್ರರಂಗದ ಹಲವರು 'ಲವ್‌ 360'ಗೆ ಬೆಂಬಲ ಸೂಚಿಸುತ್ತಿದ್ದಾರೆ...

'ಲವ್‌ 360' ನೋಡಲು ಜನ ಬರುತ್ತಿಲ್ಲ ಎಂದು ನಾನು ವಿಡಿಯೋ ಮಾಡಿ ಹಾಕಿದ ಬಳಿಕ ನಮ್ಮ ಚಿತ್ರರಂಗದ ಹಲವರು ಬೆಂಬಲಕ್ಕೆ ನಿಂತರು. ಯೋಗರಾಜ್‌ ಭಟ್ಟರು ಮತ್ತು 'ಗಾಳಿಪಟ-2' ಚಿತ್ರತಂಡ, "ಲವ್‌ 360 ಸಿನಿಮಾ ನೋಡಿ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿತು. ಪವನ್‌ ಒಡೆಯರ್‌, ಉಪೇಂದ್ರ ಸೇರಿದಂತೆ ಹಲವರು 'ಲವ್‌ 360' ನೋಡುವಂತೆ ತಮ್ಮ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. "ಸಿನಿಮಾ ನೋಡಿ" ಎಂದು ಮನವಿ ಮಾಡಬಹುದು, ಒತ್ತಾಯಿಸಲು ಸಾಧ್ಯವಿಲ್ಲ. ನಮ್ಮ ಪ್ರಯತ್ನಗಳನ್ನು ನಾವು ಮಾಡಿ ಆಗಿದೆ. ಇನ್ನೇನಿದ್ದರೂ ಪ್ರೇಕ್ಷಕರ ಕೈಯಲ್ಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್