ʻಪುಷ್ಪ-2ʼ ಮಾತ್ರವಲ್ಲ ʻಪಾರ್ಟ್-3ʼ ಕೂಡ ಬರಲಿದೆ ಎಂದ ಫಹಾದ್ ಫಾಸಿಲ್

pushpa-3
  • ʼಪುಷ್ಪ-2ʼ ಚಿತ್ರೀಕರಣಕ್ಕೆ ನಡೆದಿದೆ ಭರದ ಸಿದ್ಧತೆ
  • ʼಪುಷ್ಪ-3ʼಗೂ ಕಥೆ ಸಿದ್ಧವಿದೆ ಎಂದ ಸುಕುಮಾರ್‌

ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್‌ 'ಪುಷ್ಪ-2' ಸಿನಿಮಾ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿರುವಾಗಲೇ, ಪುಷ್ಪ-2 ನಂತರ ಭಾಗ 3 ಕೂಡ ಬರಲಿದೆ ಎಂದು ಹೇಳಿಕೆ ನೀಡುವ ಮೂಲಕ ನಟ ಫಹಾದ್‌ ಫಾಸಿಲ್‌ ಅಚ್ಚರಿ ಮೂಡಿಸಿದ್ದಾರೆ.  

ಕಳೆದ ವರ್ಷ ಅಲ್ಲು ಅರ್ಜುನ್ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಪುಷ್ಪʼ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಭರ್ಜರಿ ಯಶಸ್ಸಿನ ಬೆನ್ನಲ್ಲೇ ʼಪುಷ್ಪ-2ʼ ಮಾಡುವುದಾಗಿ ನಿರ್ದೇಶಕ ಸುಕುಮಾರ್ ಘೋಷಿಸಿದ್ದರು. ಅದರಂತೆ 'ಪುಷ್ಪ-2' ಚಿತ್ರೀಕರಣಕ್ಕೆ ಭರದ ಸಿದ್ಧತೆಗಳು ಕೂಡ ಪ್ರಾರಂಭವಾಗಿವೆ. ಚಿತ್ರಕ್ಕಾಗಿ ಹೊಸ ಮುಖಗಳ ಹುಡುಕಾಟದಲ್ಲಿರುವ ಚಿತ್ರತಂಡ ಇತ್ತೀಚೆಗೆ ತಿರುಪತಿಯಲ್ಲಿ ನಾಲ್ಕೈದು ದಿನಗಳ ಆಡಿಷನ್ ಕೂಡ ನಡೆಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ʼಪುಷ್ಪʼ ಚಿತ್ರತಂಡದ ಭಾಗವಾಗಿರುವ ಮಲಯಾಳಂ ನಟ ಫಹಾದ್ ಫಾಸಿಲ್ 'ಪುಷ್ಪ-3' ಕುರಿತು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, "ಪುಷ್ಪ-2 ಮಾತ್ರವಲ್ಲ, ʼಪುಷ್ಪ-3ʼ ಕೂಡ ಬರಲಿದೆ. ನಿರ್ದೇಶಕ ಸುಕುಮಾರ್ ಅವರು ನನಗೆ ಮೊದಲು ʼಪುಷ್ಪʼ ಕತೆ ಹೇಳಿದ್ದಾಗ ಅವರಿಗೆ ʼಸೀಕ್ವೆಲ್ʼ ಮಾಡುವ ಯೋಚನೆ ಇರಲಿಲ್ಲ. ʼಪುಷ್ಪʼ ಯಶಸ್ಸು ಕಂಡ ಬಳಿಕ ʼಸೀಕ್ವೆಲ್ʼ ಮಾಡುವ ಬಗ್ಗೆ ಸುಕುಮಾರ್ ನಿರ್ಧಾರ ಕೈಗೊಂಡರು. ಇತ್ತೀಚೆಗೆ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗ ʼಪುಷ್ಪ-2ʼ ಮಾತ್ರವಲ್ಲ ʼಪುಷ್ಪ -3ʼ ಸಿನಿಮಾ ಮಾಡುವ ಸಾಧ್ಯತೆಯೂ ಇದೆ ಎಂದರು. "ಪುಷ್ಪ-3 ಸಿನಿಮಾ ಮಾಡುವಷ್ಟು ಕತೆ ಸುಕುಮಾರ್ ಅವರ ಬಳಿ ಸಿದ್ಧವಿದೆ. ಹೀಗಾಗಿ ಪಾರ್ಟ್‌-3 ಬಂದರೂ ಆಶ್ಚರ್ಯ ಪಡಬೇಕಿಲ್ಲ" ಎಂದಿದ್ದಾರೆ.  

ರಕ್ತ ಚಂದನ ದೋಚುವ ಬೃಹತ್‌ ಜಾಲದ ಸುತ್ತ ಮೂಡಿ ಬಂದಿದ್ದ 'ಪುಷ್ಪ' ಚಿತ್ರದಲ್ಲಿ ಫಹಾದ್‌ ಫಾಸಿಲ್‌ ಪೊಲೀಸ್‌ ಅಧಿಕಾರಿ ಭನ್ವರ್‌ ಸಿಂಗ್‌ ಶೇಖಾವತ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಪುಷ್ಪ-2' ಚಿತ್ರದಲ್ಲಿ ಫಹಾದ್‌ ಫಾಸಿಲ್‌ ಅಲ್ಲು ಅರ್ಜುನ್‌ಗೆ ಪ್ರಮುಖ ಎದುರಾಳಿಯಾಗಿ ಇರಲಿದ್ದಾರೆ ಎನ್ನಲಾಗಿದೆ. 

ಈ ಸುದ್ದಿ ಓದಿದ್ದೀರಾ? ಮತ್ತೆ 10 ಲಕ್ಷ ಚಂದಾದಾರರನ್ನು ಕಳೆದುಕೊಂಡ ʻನೆಟ್‌ಫ್ಲಿಕ್ಸ್‌ʼ

'ಪುಷ್ಪ-2' ಬರೋಬ್ಬರಿ ₹350 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಹಿಂದೆ 'ಪುಷ್ಪ' ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದ ಕನ್ನಡದ ಪ್ರತಿಭೆಗಳಾದ ಡಾಲಿ ಧನಂಜಯ ಮತ್ತು ರಶ್ಮಿಕಾ ಮಂದಣ್ಣ ಕೂಡ ಇರಲಿದ್ದಾರೆ. ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ 'ಪುಷ್ಪ-2' ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್