ತಮಿಳುನಾಡಿನಲ್ಲಿ ಹೊಸ ದಾಖಲೆ ಬರೆದ 'ಪೊನ್ನಿಯಿನ್ ಸೆಲ್ವನ್'

ponniyin selvan
  • ತಮಿಳುನಾಡಿನಲ್ಲೇ 200 ಕೋಟಿ ಗಳಿಸಿದ ಮಣಿರತ್ನಂ ಚಿತ್ರ
  • ಕಬಾಲಿ ದಾಖಲೆಯನ್ನೂ ಹಿಂದಿಕ್ಕಿದ ಪೊನ್ನಿಯಿನ್‌ ಸೆಲ್ವನ್‌

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಜಗತ್ತಿನಾದ್ಯಂತ ಮೂರನೇ ವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಕಾಲಿವುಡ್‌ ಇತಿಹಾಸದಲ್ಲೇ ಈ ಚಿತ್ರ ಹೊಸ ದಾಖಲೆ ಸೃಷ್ಟಿ ಮಾಡಿದೆ.

'ಪೊನ್ನಿಯಿನ್‌ ಸೆಲ್ವನ್‌' ತೆರೆಕಂಡ 19ನೇ ದಿನಕ್ಕೆ ಜಗತ್ತಿನಾದ್ಯಂತ ₹456 ಕೋಟಿಗಳನ್ನು ಗಳಿಸಿದೆ. ತಮಿಳುನಾಡೊಂದರಲ್ಲೇ ಬರೋಬ್ಬರಿ ₹205 ಕೋಟಿ ಗಳಿಸುವ ಮೂಲಕ ತಮಿಳು ನೆಲದಲ್ಲಿ ₹200 ಕೋಟಿ ಮೊತ್ತ ಕಲೆ ಹಾಕಿದ ಮೊದಲ ಕಾಲಿವುಡ್ ಸಿನಿಮಾ ಎಂಬ ಕೀರ್ತಿಗೆ ಪಾತ್ರವಾಗಿದೆ.

ತಮಿಳುನಾಡಿನಲ್ಲಿ ಮೊದಲ ವಾರ ₹127 ಕೋಟಿ 68 ಲಕ್ಷಗಳನ್ನು ಗಳಿಸಿದ್ದ ಮಣಿರತ್ನಂ ಸಿನಿಮಾ, ಎರಡನೇ ವಾರ ₹56 ಕೋಟಿ 53 ಲಕ್ಷ ಬಾಚಿಕೊಂಡಿತ್ತು. ಮೂರನೇ ವಾರದ ಮೊದಲ ನಾಲ್ಕು ದಿನಗಳಲ್ಲಿ ಚಿತ್ರ ₹20 ಕೋಟಿ 88 ಲಕ್ಷ ಕಲೆ ಹಾಕಿದ್ದು, ಒಟ್ಟಾರೆಯಾಗಿ ತವರು ರಾಜ್ಯದಲ್ಲಿ ₹205 ಕೋಟಿ 9 ಲಕ್ಷಗಳನ್ನು ಗಳಿಸಿದೆ.

ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದೆ. ತಮಿಳು ಚಿತ್ರಗಳ ಪಟ್ಟಿಯಲ್ಲಿ 'ಪೊನ್ನಿಯಿನ್‌ ಸೆಲ್ವನ್‌' ಎರಡನೇ ಸ್ಥಾನಕ್ಕೇರಿದೆ. 2018ರಲ್ಲಿ ರಜನಿಕಾಂತ್‌ ಮುಖ್ಯಭೂಮಿಕೆಯಲ್ಲಿ ತೆರೆಗೆ ಬಂದಿದ್ದ 'ರೋಬೋಟ್‌ 2.0' ಚಿತ್ರ ₹800 ಕೋಟಿ ಮೊತ್ತವನ್ನು ಕಲೆ ಹಾಕುವ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರ ಎಂಬ ಕೀರ್ತಿ ಗಳಿಸಿತ್ತು. ರೋಬೋಟ್‌ 2.0 ನಂತರದ ಎರಡನೇ ಸ್ಥಾನವನ್ನು 'ಪೊನ್ನಿಯಿನ್‌ ಸೆಲ್ವನ್‌' ಆಕ್ರಮಿಸಿದೆ. ₹432 ಕೋಟಿ ಗಳಿಸುವ ಮೂಲಕ ಎರಡನೇ ಸ್ಥಾನ ಅಲಂಕರಿಸಿದ್ದ 'ಕಬಾಲಿ' ಚಿತ್ರವನ್ನು ಹಿಂದಿಕ್ಕಿ ₹456 ಕೋಟಿಗಳನ್ನು ಬಾಚಿಕೊಂಡಿರುವ 'ಪೊನ್ನಿಯಿನ್‌ ಸೆಲ್ವನ್‌' ಅತಿ ಹೆಚ್ಚು ಗಳಿಕೆ ಮಾಡಿದ ತಮಿಳಿನ ಎರಡನೇ ಚಿತ್ರ ಎಂಬ ಹೊಸ ದಾಖಲೆ ಬರೆದಿದೆ. 'ಕಬಾಲಿ' ಚಿತ್ರ ಮೂರನೇ ಸ್ಥಾನಕ್ಕೆ ಇಳಿದಿದ್ದು, ₹410 ಕೋಟಿ ಗಳಿಕೆ ಮಾಡಿರುವ ಕಮಲ್‌ ಹಾಸನ್‌ ನಟನೆಯ ವಿಕ್ರಮ್‌ ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app