ಮೊದಲ ಬಾರಿಗೆ ಅಮಿತಾಬ್‌ ಬಚ್ಚನ್‌ ನೋಡಿದಾಗ ನಶೆಯಲ್ಲಿದ್ದೆ : ಮನೋಜ್‌ ಬಾಜಪೇಯಿ

amitabh-manoj

ನಟ ಮನೋಜ್‌ ಬಾಜಪೇಯಿ ಇವತ್ತಿಗೆ ಬಾಲಿವುಡ್‌ನ ಖ್ಯಾತ ನಾಮರಲ್ಲಿ ಒಬ್ಬರು. ರಂಗಭೂಮಿ ಹಿನ್ನೆಲೆಯ ಮನೋಜ್‌ ನಟನೆಗೆ ಮಾರು ಹೋಗದವರಿಲ್ಲ. ಶೂಲ್‌, ಸತ್ಯ, ರಾಜನೀತಿ, ಚಿತ್ತಗಾಂಗ್‌, ಸ್ಪೆಷಲ್‌ 26, ಗ್ಯಾಂಗ್ಸ್‌ ಆಫ್‌ ವಸೇಪುರ್‌ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಭಾರತೀಯ ಸಿನಿ ರಸಿಕರನ್ನು 2 ದಶಕಗಳಿಗೂ ಹೆಚ್ಚು ಕಾಲ ರಂಜಿಸಿ ಭಿನ್ನ ತಾರಾ ಮೆರುಗನ್ನು ಗಳಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಮೋನಜ್‌ ತಮ್ಮ ಸಿನಿ ಬದುಕಿನ ಆರಂಭದ ದಿನಗಳಲ್ಲಿ ನೆಚ್ಚಿನ ನಟ ಅಮಿತಾಬ್‌ ಬಚ್ಚನ್‌ ಅವರನ್ನು ನಶೆಯಲ್ಲಿ ಭೇಟಿಯಾಗಿದ್ದರಂತೆ.

ಇತ್ತೀಚೆಗೆ ʼಲಲ್ಲನ್‌ಟಾಪ್‌ʼ ಎಂಬ ಯೂಟ್ಯೂಬ್‌ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಮನೋಜ್‌, ತಾವು ಮೊದಲು ಅಮಿತಾಬ್‌ ಅವರನ್ನು ಭೇಟಿಯಾದ ಸಿನಿಮೀಯ ಸಂದರ್ಭವನ್ನು ವಿವರಿಸಿದ್ದಾರೆ.

Eedina App

ಮನೋಜ್‌ ಬಾಜಪೇಯಿ ಸಂದರ್ಶನದ ಭಾವಾನುವಾದ ಇಲ್ಲಿದೆ

1998ರಲ್ಲಿ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ ಸತ್ಯ ಸಿನಿಮಾ ಬಿಡುಗಡೆಯಾಗಿತ್ತು. ಆ ಚಿತ್ರದಲ್ಲಿ ನಾನು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಅಮಿತಾಬ್‌ ಬಚ್ಚನ್‌ ಮತ್ತವರ ಕುಟುಂಬಸ್ಥರಿಗಾಗಿ ಚಿತ್ರತಂಡ ವಿಶೇಷ ಪ್ರದರ್ಶನವನ್ನು ಏರ್ಪಡಿಸಿತ್ತು. ಅಮಿತಾಬ್‌ ನಮ್ಮ ಸಿನಿಮಾ ನೋಡಲು ಬರುತ್ತಿದ್ದಾರೆ ಎಂದ ಕೂಡಲೇ ನನ್ನ ಕೈಕಾಲುಗಳಲ್ಲಿ ನಡುಕ ಶುರುವಾಗಿತ್ತು. ಯಾಕೆಂದರೆ ಅಮಿತಾಬ್‌ ನಾನು ಆರಾಧಿಸುತ್ತಿದ್ದ ನೆಚ್ಚಿನ ನಟ. ಅವರನ್ನು ಚಿಕ್ಕಂದಿನಿಂದ ಪರದೆಯ ಮೇಲೆ ನೋಡಿದ್ದು ಬಿಟ್ಟರೆ ಎಂದಿಗೂ ನೇರವಾಗಿ ನೋಡಿರಲಿಲ್ಲ.

AV Eye Hospital ad

ಆ ದಿನ ಅಮಿತಾಬ್‌ ಚಿತ್ರಮಂದಿರದಲ್ಲಿ ಕೂತು ತಮ್ಮ ಕುಟುಂಬದೊಂದಿಗೆ ನಮ್ಮ ಸಿನಿಮಾ ನೋಡುತ್ತಿದ್ದರು. ಭಯದಿಂದ ನಾನು, ರಾಮ್‌ ಗೋಪಾಲ್‌ ವರ್ಮಾ ಮತ್ತು ಚಿತ್ರ ವಿಮರ್ಶಕ ಖಾಲಿದ್‌ ಮೊಹಮದ್‌ ಅವರೊಂದಿಗೆ ಹೊರಗಡೆ ಕಾರಿನಲ್ಲಿ ಕೂತು ಮದ್ಯಪಾನ ಮಾಡುತ್ತಿದ್ದೆ. ನಮ್ಮೊಂದಿಗೆ ಹರಟತ್ತು, ಮದ್ಯ ಸೇವಿಸುತ್ತ ಕುಳಿತಿದ್ದ ರಾಮ್‌ ಗೋಪಾಲ್‌, ಸಿನಿಮಾ ಮುಗಿಯುವ ಹೊತ್ತಾಯಿತು ನಾನು ಅತಿಥಿಗಳ ಬಳಿ ಹೋಗಬೇಕು ಎಂದು ಕಾರು ಇಳಿದು ಹೊರಟು ನಿಂತರು. ನಾನು ಅಮಿತಾಬ್‌ ಅಭಿಮಾನಿ ಎಂದು ತಿಳಿದಿದ್ದ ಅವರು ನನ್ನತ್ತ ತಿರುಗಿ, ನನ್ನೊಂದಿಗೆ ಬರುತ್ತೀಯ ಎಂದು ಕೇಳಿದರು. ನಾನು ಸಂಕೋಚದಿಂದಲೇ, 'ಬೇಡ ನೀವು ಹೋಗಿ ಬನ್ನಿ' ಅವರೆದುರು ಬರಲು ನನಗೆ ಭಯವಾಗುತ್ತದೆ ಎಂದಿದ್ದೆ. ಅಷ್ಟೊತ್ತಿಗೆ ಕಾರಿನೊಳಗಿದ್ದ ಖಾಲಿದ್‌ ನನ್ನನ್ನು ಕಾರಿನಿಂದ ಹೊರನೂಕಿ, ಹೋಗು.. ಹೋಗಿ 'ಅಮಿತಾಬ್‌ ಅವರನ್ನು ಭೇಟಿಯಾಗು. ಅವರು ನಿನ್ನ ಹೀರೋ. ಅವರನ್ನು ಭೇಟಿಯಾಗುವುದನ್ನು ಬಿಟ್ಟು ನೀನಿಲ್ಲಿ ಕೂರುವುದರಲ್ಲಿ ಅರ್ಥವಿಲ್ಲ' ಎಂದಿದ್ದರು.

 

ಬಲವಂತವಾಗಿ ಕಾರಿನಿಂದ ಚಿತ್ರಮಂದಿರದ ಕಡೆ ಹೋದ ನಾನು. ಅಮಿತಾಬ್‌ ಅವರನ್ನು ಎದುರಾಗುವ ಧೈರ್ಯವಿಲ್ಲದೆ ಬಾತ್‌ರೂಮ್‌ನತ್ತ ಓಡತೊಡಗಿದ್ದೆ. ಅದೇ ಹೊತ್ತಿಗೆ ಸರಿಯಾಗಿ ಯಾರೋ ನನ್ನ ಹೆಸರು ಹಿಡಿದು ಕೂಗಿದಂತಾಯ್ತು ತಿರುಗಿ ನೋಡಿದರೆ ಅಭಿಷೇಕ್‌ ಬಚ್ಚನ್‌. ತಪ್ಪಿಸಿಕೊಳ್ಳಲು ಹೋಗಿ ಸಿಲುಕಿಕೊಂಡೆನಲ್ಲ ಎಂದು ಅಭಿಷೇಕ್‌ ಅವರನ್ನು ಮಾತನಾಡಿಸಿದೆ. ಸಿನಿಮಾ ನೋಡಿದ್ದ ಅಭಿಷೇಕ್‌ ನನ್ನ ಪಾತ್ರವನ್ನು ಮೆಚ್ಚಿ ಹೊಗಳುತ್ತ ನಿಂತು ಬಿಟ್ಟರು.

ಹೀಗೆ ಸ್ವಲ್ಪ ಹೊತ್ತಿನ ವರೆಗೆ ನಮ್ಮಿಬ್ಬರ ನಡುವೆ ಸಂಭಾಷಣೆ ನಡೆಯುತ್ತ ಹೋಯಿತು. ಅಭಿಷೇಕ್‌ ನನ್ನನ್ನು ಬಾಯಿತುಂಬಾ ಹೊಗಳುತ್ತಿರುವಾಗಲೇ ಹಿಂದಿನಿಂದ ಯಾರೋ ಬಂದಂತೆ ಭಾಸವಾಯ್ತು. ಆ ದೃಢಕಾಯದ ವ್ಯಕ್ತಿ ಅಭಿಷೇಕ್‌ ನನ್ನನ್ನು ಹೊಗಳುತ್ತಿರುವುದನ್ನೇ ನೋಡುತ್ತ ನಿಂತಂತೆ ಎನ್ನಿಸಿತು. ತಿರುಗಿ ನೋಡಿದರೆ ಸಾಕ್ಷ್ಯಾತ್‌ ಅಮಿತಾಬ್‌ ಬಚ್ಚನ್‌ ಕಣ್ಮುಂದೆ ನಿಂತಿದ್ದರು.     

ಅಮಿತಾಬ್‌ ಅವರನ್ನು ಮೊದಲ ಬಾರಿಗೆ ಎದುರುದಾಗ ನಾನು ವಿಚಲಿತನಾಗಿದ್ದೆ. ನನ್ನ ಎರಡು ಕಿವಿಗಳಲ್ಲೂ ಶಿಳ್ಳೆಯ ಸದ್ದು ಮಾತ್ರ ಕೇಳಿಸ ತೊಡಗಿತ್ತು. ಅವರು ನನ್ನ ನಟನೆಯನ್ನು ಮೆಚ್ಚಿ ಏನೇನೋ ಹೇಳುತ್ತಿದ್ದರು. ಆದರೆ, ಅದ್ಯಾವುದು ನನಗೆ ಕೇಳಿಸುತ್ತಲೇ ಇರಲಿಲ್ಲ. ಅವರೆದುರು ಸ್ತಬ್ದವಾಗಿ ನಿಂತಿದ್ದೆ. ಕಿವಿಯಲ್ಲಿ ಶಿಳ್ಳೆಯ ಸದ್ದು ಪ್ರತಿಧ್ವನಿಸುತ್ತಲೇ ಇತ್ತು. ಜೊತೆಗೆ ನಶೆಯೂ ಏರಿತ್ತು.

ಬೆರುಗುಗಣ್ಣಿನಿಂದ ಅವರನ್ನೇ ನೋಡುತ್ತ ನಿಂತ ನಾನು ಕೊನೆಗೆ ಧೈರ್ಯ ತಂದುಕೊಂಡು ಕೇಳಿದ್ದು ಒಂದೇ ಮಾತು, ನಾನು ನಿಮ್ಮನ್ನು ಅಪ್ಪಿಕೊಳ್ಳಬಹುದೆ ಎಂದೆ. ಅರೆ ಕ್ಷಣ ಸುಮ್ಮನಾದ ಅವರು ಅರೇ ಭಾಯ್‌ ಅದರಲ್ಲೇನಿದೆ ಎಂದು ನನ್ನನ್ನು ತಬ್ಬಿಕೊಂಡೆ ಬಿಟ್ಟರು. ಆ ಅಮೂಲ್ಯ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಬಚ್ಚನ್‌ ಅವರ ಅಪ್ಪಟ ಅಭಿಮಾನಿಯಾಗಿರುವ ಮನೋಜ್‌ ಬಾಜಪೇಯಿ ಆ ಘಟನೆಯ ಬಳಿಕ ಅಕ್ಸ್‌, ಆಕರ್ಷಣ್‌, ಸತ್ಯಾಗ್ರಹ ಸೇರಿದಂತೆ ಹಲವು ಚಿತ್ರಗಳಲ್ಲಿ ಅಮಿತಾಬ್‌ ಜೊತೆಗೆ ತೆರೆಯನ್ನು ಹಂಚಿಕೊಂಡರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app