ತೆರೆಗೆ ಸಜ್ಜಾದ ‘19.20.21’ ಸಿನಿಮಾ | ಕುತೂಹಲ ಹೆಚ್ಚಿಸಿದ ಟೀಸರ್‌

19.20.21

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘19.20.21’ ಬಿಡುಗಡೆಗೆ ಸಜ್ಜಾಗಿದ್ದು, ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿದೆ.  

‘19.20.21’ ಚಿತ್ರ ಭಿನ್ನ ಟೈಟಲ್‌ ಮೂಲಕವೇ ನಿರೀಕ್ಷೆ ಹೆಚ್ಚಿಸಿತ್ತು. ಸದ್ಯ ಬಿಡುಗಡೆಯಾಗಿರುವ ಟೀಸರ್‌, ಕರಾವಳಿ ಪ್ರದೇಶದ ದಟ್ಟ ಕಾಡು ಮತ್ತು ಆ ಕಾಡಿಗೆ ಹೊಂದಿಕೊಂಡಂತೆ ಬದುಕುವ ಬುಡಕಟ್ಟು ಜನ, ಅವರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸುವ ದರ್ಪ ಹೀಗೆ ಹಲವು ಗಂಭೀರ ವಿಚಾರಗಳ ಸುತ್ತ ಮೂಡಿಬಂದಿದೆ. ಟೀಸರ್‌ನೊಂದಿಗೆ ಚಿತ್ರದ ಟ್ರೈಲರ್‌ ಬಿಡುಗಡೆ ದಿನಾಂಕವನ್ನು ಕೂಡ ಚಿತ್ರತಂಡ ಬಹಿರಂಗ ಪಡಿಸಿದ್ದು, ಜನವರಿ 27ರಂದು ಚಿತ್ರದ ಟ್ರೈಲರ್‌ ಬಿಡುಗಡೆಯಾಗಲಿದೆ.  

ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದ ಕಥೆ ಚಿತ್ರದಲ್ಲಿದ್ದು, ಕ್ರೈಂ, ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ರಂಗಭೂಮಿ ಕಲಾವಿದ ಶೃಂಗ ಬಿ ವಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಬಾಲಾಜಿ ಮನೋಹರ್, ಸಂಪತ್, ಎಂ ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಅವರನ್ನೊಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ.

ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಜೊತೆಯಾಗಿ ಚಿತ್ರಕಥೆ ರೂಪಿಸಿದ್ದು, ʼ19.20.21’ ಚಿತ್ರವನ್ನು ಯಲ್ಲಾಪುರ, ಧಾರವಾಡ, ಮಂಗಳೂರು, ಕುಂದಾಪುರ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ರೋಣದ ಬಕ್ಕೇಶ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ ಬರೆದಿದ್ದು, ಕಿರಣ್ ಕಾವೇರಪ್ಪ ಅವರ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್ ಆರ್ ಎಂಬುವವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸೆನ್ಸಾರ್‌ ಮಂಡಳಿಯಿಂದ ʼಎ ಸರ್ಟಿಫಿಕೇಟ್ʼ ಪಡೆದುಕೊಂಡಿರುವ ʼ19.20.21ʼ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app