
- ಕಾರಿನಲ್ಲಿ ಬಂದು ಕಲ್ಲೆಸೆದು ಪರಾರಿಯಾದ ಕಿಡಿಗೇಡಿಗಳು
- ಘಟನೆಯ ಬೆನ್ನಲ್ಲೇ ಮುನ್ನೆಲೆಗೆ ಬಂದ ಹಳೆಯ ವಿವಾದಗಳು
ತಮಿಳಿನ ಖ್ಯಾತ ನಟ ವಿಶಾಲ್ ಅವರ ಮನೆಯ ಮೇಲೆ ಸೆಪ್ಟೆಂಬರ್ 27ರಂದು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಹೆಸರು ಮಾಡಿರುವ ವಿಶಾಲ್ ಚೆನ್ನೈನ ಅಣ್ಣಾನಗರದ 12ನೇ ಬೀದಿಯಲ್ಲಿ ತಮ್ಮ ಕುಟುಂಬದ ಜೊತೆಗೆ ವಾಸವಿದ್ದಾರೆ. ಸೆಪ್ಟೆಂಬರ್ 27ರ ರಾತ್ರಿ 9:35ರ ಸುಮಾರಿಗೆ ಇದೇ ಮನೆಯ ಎದುರು ಕಾರಿನಲ್ಲಿ ಬಂದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ವಿಶಾಲ್ ಮನೆ ಮುಂದಿನ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ.
ದುಷ್ಕರ್ಮಿಗಳ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಗೆ ಸಂಬಂಧಿಸಿ ವಿಶಾಲ್ ಆಪ್ತ ಸಹಾಯಕ ಹರಿಕೃಷ್ಣನ್ ಅಣ್ಣಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ವಿಶಾಲ್ ಮನೆ ಮೇಲಿನ ದಾಳಿಗೆ ನಿರ್ದಿಷ್ಟ ಕಾರಣ ಏನು ಎಂಬುದು ಈವರೆಗೆ ತಿಳಿದು ಬಂದಿಲ್ಲ.

ವಿಶಾಲ್ ಕುಟುಂಬಸ್ಥರು ಮೂಲತಃ ಆಂದ್ರಪ್ರದೇಶದವರು. ಅವರ ತಂದೆ ಜಿ ಕೆ ರೆಡ್ಡಿ ಕಾಲಿವುಡ್ನಲ್ಲಿ ನಿರ್ಮಾಪಕರಾಗಿ ಹೆಸರು ಮಾಡಿದ್ದಾರೆ. ಚೆನ್ನೈನಲ್ಲೇ ವಿದ್ಯಾಭ್ಯಾಸ ಮುಗಿಸಿ ನಂತರ ಚಿತ್ರರಂಗ ಪ್ರವೇಶಿಸಿದ ವಿಶಾಲ್, ಕೇವಲ ನಟನಾಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ ತಮಿಳುನಾಡಿನ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ತೀವ್ರ ಪೈಪೋಟಿಯ ನಡುವೆ ಕಲಾವಿದರ ಸಂಘದ ಚುನಾವಣೆಯಲ್ಲಿ ವಿಶಾಲ್ ಜಯ ಸಾಧಿಸಿದ್ದರು. ಕಲ್ಲು ತೂರಾಟ ಪ್ರಕರಣಕ್ಕೂ ಕಲಾವಿದರ ಸಂಘದ ಚುನಾವಣೆಗೂ ಸಂಬಂಧ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾವೊಂದರ ವ್ಯವಹಾರಕ್ಕೆ ಸಂಬಂಧಿಸಿ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ʼಲೈಕಾʼ ಮತ್ತು ವಿಶಾಲ್ ನಡುವೆ ವಿವಾದವಿದೆ ಎನ್ನಲಾಗುತ್ತಿದೆ. ಕಲ್ಲು ತೂರಾಟ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಹಳೆಯ ವಿವಾದಗಳು ಮುನ್ನೆಲೆಗೆ ಬರುತ್ತಿದ್ದು, ದಾಳಿಗೆ ಅಸಲಿ ಕಾರಣ ಏನು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ತಿಳಿಯಬೇಕಿದೆ.