ಬಾಲಿವುಡ್‌ ಪ್ರವೇಶದ ಸುಳಿವು ನೀಡಿದ ಮಿಸ್‌ ಇಂಡಿಯಾ ಸಿನಿ ಶೆಟ್ಟಿ

Sini shetty
  • ಕಿರೀಟ ಹೊತ್ತು ತವರಿಗೆ ಬಂದಿಳಿದ ʼಮಿಸ್‌ ಇಂಡಿಯಾʼ
  • ಒಳ್ಳೆಯ ಕತೆ ಬಂದರೆ ಖಂಡಿತಾ ನಟಿಸುವೆ ಎಂದ ಸಿನಿ

ಇತ್ತೀಚೆಗೆ ʼಮಿಸ್ ಇಂಡಿಯಾʼ ಕೀರಿಟ ಗೆದ್ದುಕೊಂಡಿರುವ ಕನ್ನಡತಿ ಸಿನಿಶೆಟ್ಟಿ ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಮಿಸ್ ಇಂಡಿಯಾ ಪಟ್ಟ ಗೆದ್ದ ಬಳಿಕ ಮೊದಲ ಬಾರಿಗೆ ತವರಿಗೆ ಭೇಟಿ ನೀಡುತ್ತಿರುವ ಅವರನ್ನು ಕುಟುಂಬಸ್ಥರು ಚೆಂಡೆ ವಾದ್ಯದ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿನಿ ಶೆಟ್ಟಿ, "ನನ್ನ ಅಜ್ಜಿಯನ್ನು ಭೇಟಿಯಾಗಲು ಬಂದಿದ್ದೇನೆ. ಮಿಸ್ ಇಂಡಿಯಾ ಕಿರೀಟ ಗೆದ್ದ ಮೇಲೆ ಅಜ್ಜಿಯನ್ನು ಭೇಟಿಯಾಗಲು ಖುಷಿಯಾಗುತ್ತಿದೆ" ಎಂದಿದ್ದಾರೆ.

Image
Sini shetty

ಸಿನಿಮಾಗಳ ಅವಕಾಶಗಳ ಬಗ್ಗೆ ಎದುರಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ. ಆದರೆ, ಸದ್ಯಕ್ಕೆ ʼಮಿಸ್ ವರ್ಲ್ಡ್ʼ ಸ್ಪರ್ಧೆಯತ್ತ ಗಮನ ಹರಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಕತೆಗಳು ಬಂದರೆ ಖಂಡಿತಾ ನಟಿಸುವೆ ಎಂದಿದ್ದಾರೆ.

ಕುಟುಂಬಸ್ಥರನ್ನು ಭೇಟಿಯಾದ ಬಳಿಕ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಿನಿಶೆಟ್ಟಿ ಕುಟುಂಬಸ್ಥರ ಜೊತೆಗೆ ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್‌ ಕೂಡ ಉಪಸ್ಥಿತರಿದ್ದರು.

ಈ ಸುದ್ದಿ ಓದಿದ್ದೀರಾ? ಅಭಿಮಾನಿಗಳ ಒತ್ತಡಕ್ಕೆ ಮಣಿದ ಟ್ವಿಟರ್; ಪುನೀತ್ ಖಾತೆಯಲ್ಲಿ ʻಬ್ಲ್ಯೂಟಿಕ್ʼ ವಾಪಸ್

ಉಡುಪಿ ಜಿಲ್ಲೆಯ ಬನ್ನಂಜೆ ಮೂಲದ ಸಿನಿ ಶೆಟ್ಟಿ ಹುಟ್ಟಿದ್ದು, ಬೆಳೆದಿದ್ದೆಲ್ಲವೂ ಮುಂಬೈನಲ್ಲಿ. ಸಿನಿ ಅವರ ತಂದೆ ಸದಾನಂದ್‌ ಶೆಟ್ಟಿ ಮುಂಬೈನಲ್ಲಿ ಹೋಟೆಲ್‌ ಉದ್ಯಮ ನಡೆಸುತ್ತಿದ್ದಾರೆ. ಅಕೌಂಟಿಂಗ್‌ ಮತ್ತು ಫೈನಾನ್ಸ್‌ನಲ್ಲಿ ಪದವಿ ಪಡೆದಿರುವ ಸಿನಿ ತಾವು ರೂಪದರ್ಶಿಯಾಗಲು ಪೋಷಕರೇ ಸ್ಫೂರ್ತಿ ಎಂದಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್