ಸ್ಯಾಂಡಲ್‌ವುಡ್‌ಗೆ ಸ್ಟಾರ್‌ ಕಲಾವಿದರನ್ನು ನೀಡಿದ 'ಮೊಗ್ಗಿನ ಮನಸ್ಸು' ಚಿತ್ರಕ್ಕೆ 14ರ ಸಂಭ್ರಮ

mogina-manassu
  • 'ಮೊಗ್ಗಿನ ಮನಸ್ಸು' ಎಲ್ಲವನ್ನೂ ನೀಡಿದೆ ಎಂದ ರಾಧಿಕಾ ಪಂಡಿತ್‌
  • ನಮ್ಮ ಅಸ್ತಿತ್ವಕ್ಕಾಗಿ ಮಾಡಿದ್ದ ಚಿತ್ರ ಎಂದ ನಿರ್ದೇಶಕ ಶಶಾಂಕ್‌

ʼಕೆಜಿಎಫ್‌ʼ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿರುವ ನಟ ಯಶ್‌ ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿಯಾಗಿ 14 ವರ್ಷಗಳನ್ನು ಪೂರೈಸಿದ್ದಾರೆ. ಕೇವಲ ಯಶ್‌ ಮಾತ್ರವಲ್ಲ, ಅವರ ಪತ್ನಿ ನಟಿ ರಾಧಿಕಾ ಪಂಡಿತ್‌ ಕೂಡ ಬೆಳ್ಳಿತೆರೆ ಪ್ರವೇಶಿಸಿ ಜುಲೈ 18ಕ್ಕೆ 14 ವರ್ಷ ಕಳೆದಿದೆ.

2008ರಲ್ಲಿ ಶಶಾಂಕ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಮೊಗ್ಗಿನ ಮನಸ್ಸು' ಸಿನಿಮಾದ ಮೂಲಕ ಯಶ್‌ ಮತ್ತು ರಾಧಿಕಾ ಪಂಡಿತ್‌ ಬೆಳ್ಳಿತೆರೆ ಪ್ರವೇಶಿಸಿದ್ದರು. ಯಶ್‌- ರಾಧಿಕಾ ಜೋಡಿ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ಅದಕ್ಕೂ ಮೊದಲು ಯಶ್‌ 'ಜಂಭದ ಹುಡುಗಿ' ಚಿತ್ರದಲ್ಲಿ ನಟಿಸಿದ್ದರಾದರೂ, ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಮಾತ್ರ 'ಮೊಗ್ಗಿನ ಮನಸ್ಸು'.

'ಮೊಗ್ಗಿನ ಮನಸ್ಸು' ಯಶಸ್ಸಿನ ಬಳಿಕ 'ರಾಕಿ', 'ಮೊದಲ ಸಲ', 'ರಾಜಧಾನಿ', 'ಕಿರಾತಕ', 'ರಾಜಾಹುಲಿ', 'ಗೂಗ್ಲಿ' ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಯಶ್‌, ರಾಕಿಂಗ್‌ ಸ್ಟಾರ್‌ ಆಗಿ ಬೆಳೆದರೆ, ಅದೇ ಚಿತ್ರದ ಮೂಲಕ ಸಿನಿ ಪಯಣದ ಶುರು ಮಾಡಿದ ರಾಧಿಕಾ ಪಂಡಿತ್‌ 'ಲವ್‌ಗುರು', 'ಹುಡುಗರು', 'ಅಲೆಮಾರಿ', 'ಅದ್ದೂರಿ' ಸೇರಿ ಹಲವು ಚಿತ್ರಗಳಲ್ಲಿ ನಟಿಸಿ 'ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ' ಎಂದು ಖ್ಯಾತಿ ಗಳಿಸಿದರು.

ಮೊಗ್ಗಿನ ಮನಸ್ಸು ತೆರೆಕಂಡು 14 ವರ್ಷ ಕಳೆದ ಹಿನ್ನೆಲೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ತಾವು ಮತ್ತು ಯಶ್‌ ಜೊತೆಯಾಗಿರುವ ಚಿತ್ರದ ಕೆಲ ಸನ್ನಿವೇಶಗಳನ್ನು ಹಂಚಿಕೊಂಡಿರುವ ರಾಧಿಕಾ, "ಚಿತ್ರದಲ್ಲಿ ನೀವು ನೋಡುತ್ತಿರುವ ಈ ಯುವ ಜೋಡಿ ಇದೇ ಸಿನಿಮಾದ ಮೂಲಕ 14 ವರ್ಷಗಳ ಹಿಂದೆ ತಮ್ಮ ಸಿನಿ ಪಯಣ ಆರಂಭಿಸಿದರು. ವೈಯಕ್ತಿಕವಾಗಿ ಈ ಸಿನಿಮಾ ನನಗೆ ಬಹಳಷ್ಟು ಕೊಡುಗೆ ನೀಡಿದೆ. ಫಿಲ್ಮ್‌ಫೇರ್‌ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಅಷ್ಟೇ ಯಾಕೆ ಈ ಸಿನಿಮಾದಿಂದಲೇ ನನ್ನ ಬಾಳ ಸಂಗಾತಿಯೂ ಸಿಕ್ಕಿದ್ದು. ಇದಕ್ಕಿಂದ ಹೆಚ್ಚಿನದ್ದನ್ನು ಇನ್ನೇನೂ ಕೇಳಲು, ಪಡೆಯಲು ಸಾಧ್ಯವಿದೆ. 'ಮೊಗ್ಗಿನ ಮನಸ್ಸು' ನನಗೆ ಎಲ್ಲವನ್ನೂ ನೀಡಿದೆ. ನಮ್ಮಿಬ್ಬರನ್ನೂ ನಂಬಿ ಈ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ ನಿರ್ದೇಶಕ ಶಶಾಂಕ್‌, ನಿರ್ಮಾಪಕರಾದ ಇ ಕೃಷ್ಣಪ್ಪ, ಸಂಗೀತ ನಿರ್ದೇಶಕರಾದ ಮನೋಮೂರ್ತಿ, ಛಾಯಾಗ್ರಾಹಕ ಚಂದ್ರು ಮತ್ತು ಗಂಗಾಧರ್‌ ಸೇರಿದಂತೆ ಎಲ್ಲರಿಗೂ ಧನ್ಯವಾದ" ತಿಳಿಸಿದ್ದಾರೆ.

"ಮೊಗ್ಗಿನ ಮನಸ್ಸು ಎಂದಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತೆ" ಎಂದಿದ್ದಾರೆ.

ನಿರ್ದೇಶಕ ಶಶಾಂಕ್‌ ಅವರಿಗೂ 'ಮೊಗ್ಗಿನ ಮನಸ್ಸು' ಸಿನಿಮಾ ವಿಶೇಷ. 2007ರಲ್ಲಿ ತೆರೆಕಂಡ ʼಸಿಕ್ಸರ್‌ʼ ಸಿನಿಮಾ ಶಶಾಂಕ್‌ ನಿರ್ದೇಶನದ ಮೊದಲ ಚಿತ್ರವಾಗಿತ್ತು. ಆದರೆ, 'ಸಿಕ್ಸರ್‌' ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ಸು ಕಂಡಿರಲಿಲ್ಲ. ಅದಾದ ಬಳಿಕ ಶಶಾಂಕ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಎರಡನೇ ಸಿನಿಮಾ 'ಮೊಗ್ಗಿನ ಮನಸ್ಸು' ಭರ್ಜರಿ ಯಶಸ್ಸು ತಂದುಕೊಟ್ಟಿತ್ತು. ಹೀಗಾಗಿ ಶಶಾಂಕ್‌ ಅವರಿಗೂ 'ಮೊಗ್ಗಿನ ಮನಸ್ಸು' ಇಷ್ಟದ ಸಿನಿಮಾ. ತಮ್ಮ ವೃತ್ತಿ ಬದುಕಿಗೆ ಮಹತ್ವದ ತಿರುವು ನೀಡಿದ ಚಿತ್ರ ತೆರೆಕಂಡು 14 ವರ್ಷಗಳು ಕಳೆದ ಹಿನ್ನೆಲೆ, ಟ್ವೀಟ್‌ ಮಾಡಿರುವ ಅವರು, "ನಮ್ಮ ಅಸ್ತಿತ್ವಕ್ಕಾಗಿ ಮಾಡಿದ ಚಿತ್ರ, ಅವಿಸ್ಮರಣೀಯ ಚಿತ್ರವಾಗಿರುವುದಕ್ಕೆ ನಿಜಕ್ಕೂ ಹೆಮ್ಮೆ ಎನ್ನಿಸುತ್ತಿದೆ. ಅವಕಾಶ ನೀಡಿದ ನಿರ್ಮಾಪಕ ಕೃಷ್ಣಪ್ಪನವರಿಗೆ ಧನ್ಯವಾದಗಳು. ಚಿತ್ರ ತಂಡಕ್ಕೆ ಶುಭಾಶಯಗಳು" ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್