ಈ ಸಿನಿಮಾ | ಹೇಳಿದ್ದು ಭರ್ಜರಿ ವೇದಾಂತ, ಬಡಿಸಿದ್ದು ಮಾತ್ರ ಕೊಳೆತ ಬದನೆಕಾಯಿ!

ಬೆಡ್‌ ರೂಮಲ್ಲೂ ವೇದಾಂತ ಹೇಳಲು ಹೋಗಿ ಅದು ಅತ್ತ ರೊಮ್ಯಾಂಟಿಕ್‌ ಆಗಿಯೂ ರುಚಿಸದೆ, ಇತ್ತ ವೇದಾಂತವಾಗಿಯೂ ತಾಕದೆ ಆ ದೃಶ್ಯದಲ್ಲಿ ನಟ-ನಟಿಯರ ಏನನ್ನೂ ಉದ್ದೀಪಿಸದ ಬಟ್ಟೆಗಳಂತೆಯೇ ಅಸ್ತವ್ಯಸ್ಥವಾಗಿ ಕೊನೆಯಾಗಿದೆ.
petromax

ಚಿತ್ರ : ಪೆಟ್ರೋಮ್ಯಾಕ್ಸ್‌  | ನಿರ್ದೇಶಕರು : ವಿಜಯ್‌ ಪ್ರಸಾದ್‌ | ತಾರಾಗಣ: ಸತೀಶ್‌ ನೀನಾಸಂ, ಹರಿಪ್ರಿಯ, ಕಾರುಣ್ಯ ರಾಮ್, ನಾಗಭೂಷಣ್‌,  ಅಚ್ಯುತ್‌ಕುಮಾರ್‌ | ಭಾಷೆ: ಕನ್ನಡ | ಅವಧಿ: 2 ಗಂಟೆ 14 ನಿಮಿಷಗಳು|

ಪೆಟ್ರೋಮ್ಯಾಕ್ಸ್..‌ ತೊಂಬತ್ತರ ದಶಕದಲ್ಲಿ ಪಡ್ಡೆ ಹುಡುಗರ ಪೋಲಿ ಮಾತಿನ ಡಿಕ್ಷನರಿಯ ಭಾಗವಾಗಿದ್ದ ಪದ. ಅಂತಹ ಪೋಲಿ ಪದವೊಂದನ್ನೇ ಬಂಡವಾಳ ಮಾಡಿಕೊಂಡು ಸಿನಿಮಾ ಗೆಲ್ಲಿಸಿ ʼಸಿಕ್ಸರ್‌ ಬಾರಿಸುತ್ತೇನೆʼ ಎಂದು ಹೊರಟಿದ್ದಾರೆ ಈ ಸಿನಿಮಾದ ನಿರ್ದೇಶಕರು.

ಮೂವರು ಅನಾಥ ಮಧ್ಯವಯಸ್ಕ ಹುಡುಗರು ಮತ್ತು ಅವರಂಥೆಯೇ ಅನಾಥಾಶ್ರಮದಲ್ಲಿ ಬೆಳೆದ ಹುಡುಗಿ ಸೇರಿ ನಾಲ್ವರು, ಆಶ್ರಮದಿಂದ ಹೊರಬಿದ್ದು ಹೊಸ ನೆಲೆಕಂಡುಕೊಳ್ಳಲು ನಡೆಸುವ ಪರದಾಟ ಮತ್ತು ಅವರಿಗೆ ಮನೆ ಹುಡುಕಲು ನೆರವಾಗುವ ರಿಯಲ್‌ ಎಸ್ಟೇಟ್‌ ಏಜೆಂಟ್‌(ಹರಿಪ್ರಿಯಾ) ಆ ಪರದಾಟಕ್ಕೆ ನೀಡುವ ಹೊಸ ತಿರುವು ಸಿನಿಮಾದ ವಸ್ತು.

ವಿಶೇಷವೆಂದರೆ, ಇಂತಹದ್ದೊಂದು ವಸ್ತುವನ್ನು ಪೂರಕ ಕಥೆ, ಕಥೆಗೆ ತಕ್ಕ ದೃಶ್ಯೀಕರಣ, ಸನ್ನಿವೇಶ, ನಟನೆ ಎಂಬ ಸಿನಿಮಾದ ಮೂಲ ಮಟ್ಟುಗಳ ಬದಲಾಗಿ, ಪಾತ್ರಗಳು ಪ್ರೇಕ್ಷಕರಿಗೆ ನೇರವಾಗಿ `ಪ್ರವಚನʼ ನೀಡುವ ತಂತ್ರದ ಮೂಲಕ ಹೇಳಿರುವುದು ನಿರ್ದೇಶಕರ ʼಎದೆಗಾರಿಕೆʼ.

ಈ ಹಿಂದೆ ʼಸಿದ್ಲಿಂಗುʼ ನಂತಹ ಸಿನಿಮಾ ಮೂಲಕ ಪೋಲಿ ಮಾತು ಮತ್ತು ಚೇಷ್ಠೆಗಳ ಹೊರತಾಗಿಯೂ ಹೊಸದಾಗಿ ಏನನ್ನೋ ಹೇಳುವ ಭರವಸೆ ಹುಟ್ಟಿಸಿದ್ದ ವಿಜಯಪ್ರಸಾದ್‌, ಈ ಬಾರಿ ಅತಿ ವಿಶ್ವಾಸ ಮತ್ತು ಪ್ರೇಕ್ಷಕರನ್ನು ʼಅಗ್ಗʼವಾಗಿ ಪರಿಗಣಿಸಿದ ಪರಿಣಾಮ ಸಿನಿಮಾದಲ್ಲಿ ಕಣ್ಣಿಗೆ ರಾಚುತ್ತದೆ. ಹಾಗಾಗಿ ಸಿನಿಮಾದಲ್ಲಿ ಘಟನೆ, ಸನ್ನಿವೇಶಗಳು ಮಾತಾಡುವ ಬದಲು ಪಾತ್ರಗಳ ಮೂಲಕ ನಿರ್ದೇಶಕರ ʼನೀತಿಬೋಧೆʼ ಮತ್ತು ʼಬಾಲಬೋಧೆʼಗಳೇ ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರ ಮೇಲೆ ಪ್ರಹಾರ ನಡೆಸುತ್ತವೆ.

ದ್ವಿತಿಯಾರ್ಧದ ಬಳಿಕ ತಾಯಿ ಸೆಂಟಿಮೆಂಟ್‌ ಮೂಲಕ ಮತ್ತೇನೋ ಸಂದೇಶ ರವಾನಿಸುವ ಯತ್ನವನ್ನು ಮಾಡಿದ್ದರೂ, ಆ ಸಿದ್ಧ ಸೂತ್ರ ಕೂಡ ಸೂತ್ರಹರಿದ ಗಾಳಿಪಟವಾಗಿದೆ. 

ನೀನಾಸಂ ಸತೀಶ್‌, ಹರಿಪ್ರಿಯಾ, ಅಚ್ಯುತ್‌ ಕುಮಾರ್‌, ಪದ್ಮಜಾ ರಾವ್‌, ಸುಧಾ ಬೆಳವಾಡಿ, ನಾಗಭೂಷಣ್‌, ಗೊಂಬೆಗಳ ಲವ್ ಅರುಣ್‌ ಅವರಂಥ ಪಳಗಿದ ನಟ-ನಟಿಯರು ಮತ್ತು ಸುಮನ್‌ ರಂಗನಾಥ್‌ ಅವರಂಥ ʼವಿಶೇಷ ಆಕರ್ಷಣೆʼಯೆಲ್ಲಾ ತಾರಾಗಣದಲ್ಲಿದ್ದರೂ, ಸಿನಿಮಾದಲ್ಲಿ ಕಥೆ, ನಟನೆ, ನಿರೂಪಣೆಗಿಂತ ʼರತಿ ವಿಜ್ಞಾನʼ, ʼಒತ್ತು ಶಾವಿಗೆʼ, ʼಕವರ್‌ ಡ್ರೈವ್‌ʼ, ʼಬ್ಯಾಟಿಂಗ್‌ʼ, ʼಬೀಜʼ,   .. ಎಂಬಂತಹ ಅಗ್ಗದ ರಂಜನೆಯ ಪೋಲಿಪದ ಪ್ರಯೋಗದ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಡಲು ನಿರ್ದೇಶಕರು ತಿಣುಕಾಡಿದ್ದಾರೆ.

ಇಡೀ ಸಿನಿಮಾದಲ್ಲಿ, ಈಗ ಎಳೆ ಮುದುಕರಾಗಿರುವ ತೊಂಬತ್ತರ ದಶಕದ ಯುವಕರಿಗೆ ಹಳೆಯ ದಿನಗಳ ಕಚಗುಳಿ ಕೊಡುವ ಪೆಟ್ರೋಮ್ಯಾಕ್ಸ್‌ ಎಂಬ ಪದ ಬಿಟ್ಟರೆ ಪ್ರೇಕ್ಷಕರನ್ನು ಹಿಡಿದಿರುವ ಮತ್ತೊಂದು ಸಂಗತಿ ಇಲ್ಲ. ಕೊನೆಗೆ ಸತೀಶ್‌ ಮತ್ತು ಹರಿಪ್ರಿಯಾ ನಡುವಿನ ಒಂದು ಬೆಡ್‌ ರೂಮ್‌ ದೃಶ್ಯ ಕೂಡ, ನಿರ್ದೇಶಕರ ಮೇಲಿನ ನಿರೀಕ್ಷೆಯನ್ನು ಈಡೇರಿಸುವಲ್ಲಿ ಯಶಸ್ವಿಯಾಗಿಲ್ಲ! ಬೆಡ್‌ ರೂಮಲ್ಲೂ ವೇದಾಂತ ಹೇಳಲು ಹೋಗಿ ಅದು ಅತ್ತ ರೊಮ್ಯಾಂಟಿಕ್‌ ಆಗಿಯೂ ರುಚಿಸದೆ, ಇತ್ತ ವೇದಾಂತವಾಗಿಯೂ ತಾಕದೆ ಆ ದೃಶ್ಯದಲ್ಲಿ ನಟ-ನಟಿಯರ ಏನನ್ನೂ ಉದ್ದೀಪಿಸದ ಬಟ್ಟೆಗಳಂತೆಯೇ ಅಸ್ತವ್ಯಸ್ಥವಾಗಿ ಕೊನೆಯಾಗಿದೆ.

ಕಾಶಿನಾಥ್‌ ಬ್ರಾಂಡ್‌ ಮೂವೀಸ್‌ ಎಂದೇ ಹೆಸರಾಗಿರುವ ಕನ್ನಡದ ಭಿನ್ನ ಬಗೆಯ ಸಿನಿಮಾಗಳ ಮಾದರಿಯನ್ನು ಇನ್ನಷ್ಟು ವಿಸ್ತರಿಸುವ ಮತ್ತು ಆ ಸಿನಿಮಾಗಳಿಗೆ ಹೆಚ್ಚಿನ ಮಾನ್ಯತೆ ತಂದುಕೊಡುವ ಸಾಧ್ಯತೆಗಳು ವಿಜಯಪ್ರಸಾದ್‌ ಅವರಿಗೆ ಇದೆ ಎಂಬ ನಿರೀಕ್ಷೆಯನ್ನು ʼಸಿದ್ಲಿಂಗುʼನಂತಹ ಸಿನಿಮಾ ಹುಟ್ಟಿಸಿತ್ತು. ಅದೇ ನಿರೀಕ್ಷೆಯಲ್ಲೇ ನೀವು ಪೆಟ್ರೋಮ್ಯಾಕ್ಸ್‌ ನೋಡಲು ಹೋದರೆ, ನಿರಾಶೆ ಕಟ್ಟಿಟ್ಟಬುತ್ತಿ. ಯಾವ ನಿರೀಕ್ಷೆ ಇಲ್ಲದೆ ಸುಮ್ಮನ್ನೇ ಟೈಂಪಾಸ್‌ ಗೆ ಹೋದರೂ ನಿರಾಶೆಯಿಂದ ಪಾರಾಗಲಾಗದು ಎಂಬುದು ಈ ಸಿನಿಮಾದ ದೊಡ್ಡ ಮೈನಸ್‌ ಪಾಯಿಂಟ್!‌

ಇರುವುದರಲ್ಲಿ ಪರವಾಗಿಲ್ಲ ಎನಿಸುವುದು ಸಿನಿಮಾದ ಸಂಗೀತ(ಅನೂಪ್‌ ಸೀಳಿನ್)‌ ಮತ್ತು ಛಾಯಾಗ್ರಹಣ(ನಿರಂಜನ್). ಸಂಕಲನ(ಸುರೇಶ್‌ ಅರಸ್) ಕೂಡ ಚಿತ್ರವನ್ನು ಒಂದಿಷ್ಟು ಸಹನೀಯವಾಗದಂತೆ ಕಾದಿದೆ ಎನ್ನಬಹುದು.

ಇಂತಹ ನಿರಾಶೆ ಕಟ್ಟಿಟ್ಟಬುತ್ತಿ ಎಂಬುದು ನಿರ್ದೇಶಕರಿಗೆ ಮೊದಲೇ ಗೊತ್ತಿತ್ತು ಎಂಬಂತೆ ಸಿನಿಮಾದಲ್ಲಿ ಅಲ್ಲಲ್ಲಿ ಸಿನಿಮಾ ವಿಮರ್ಶೆಯ ಕುರಿತು ಅಪಹಾಸ್ಯ, ಉಡಾಫೆಯ ಸಂಭಾಷಣೆಗಳನ್ನೂ ಅವರು ಉದುರಿಸಿದ್ದಾರೆ. ಆ ಮೂಲಕ ಮೊದಲೇ ಕೇವಿಯಟ್‌ ಹಾಕಿಕೊಂಡಿದ್ದಾರೆ!

ಹಾಗಾಗಿ, ಸಿನಿಮಾದಲ್ಲಿ ಪಾತ್ರಗಳ ಮೂಲಕ ದೊಡ್ಡ ದೊಡ್ಡ ಪ್ರವಚನ ಕೊಡಿಸಿ, ವೇದಾಂತದ ಪಾಠ ಮಾಡಿದ್ದರೂ, ಕಿರಿಕಿರಿ ಎನಿಸುವ ಮಟ್ಟಿನ ಪೋಲಿ ಜೋಕು ಮತ್ತು ತಾಳಮೇಳವಿಲ್ಲದ ನಿರೂಪಣೆಯ ಕಾರಣಕ್ಕೆ ಆ ವೇದಾಂತವೆಲ್ಲಾ ಬದನೆಕಾಯಿ; ಅದರಲ್ಲೂ ಕೊಳೆತ ಬದನೆಕಾಯಿಯಂತಾಗಿದೆ!

ಒಟ್ಟಾರೆ, ʼಸಿಕ್ಸರ್‌ ಹೊಡೆಯುವʼ ಮಾತಾಡುತ್ತಲೇ ನಿರ್ದೇಶಕರು ʼಡಕ್‌ ಔಟ್‌ʼ ಆಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ!

ನಿಮಗೆ ಏನು ಅನ್ನಿಸ್ತು?
4 ವೋಟ್