ನಿಷೇಧದ ಭೀತಿಯಲ್ಲಿ ಅಜಯ್‌ ದೇವಗನ್‌ ಸಿನಿಮಾ

thank god movie
  • ʼಥ್ಯಾಂಕ್‌ ಗಾಡ್‌ʼ ಸಿನಿಮಾ ನಿಷೇಧಕ್ಕೆ ಹೆಚ್ಚಿದ ಆಗ್ರಹ
  • ʼಕಾಯಸ್ಥʼ ಸಮುದಾಯದ ಭಾವನೆಗೆ ಧಕ್ಕೆ ಎಂದ ಸಚಿವ

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ ಸಿನಿಮಾಗಳು ಬಿಡುಗಡೆಗೂ ಮೊದಲೇ ʼಬಾಯ್‌ ಕಾಟ್‌ʼ ಸುಳಿಗೆ ಸಿಲುಕುತ್ತಿವೆ. ಧರ್ಮ, ನಟ, ನಟಿಯರು ಮತ್ತು ನಿರ್ದೇಶಕರ ವಿವಾದಾತ್ಮಕ ಹೇಳಿಕೆಗಳು ಹೀಗಾ ನಾನಾ ರೀತಿಯ ಕಾರಣಗಳನ್ನು ಮುಂದಿಟ್ಟು ಒಂದರ ಹಿಂದೊಂದರಂತೆ ಬಾಲಿವುಡ್‌ ಸಿನಿಮಾಗಳನ್ನು ಅಭಿಮಾನಿಗಳು ಬಹಿಷ್ಕರಿಸುವ, ನಿಷೇಧಿಸುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರಗತಿಯಲ್ಲಿ ನಡೆಯುತ್ತಿವೆ. ಇದೀಗ ʼಬ್ಯಾನ್‌ʼ ಮತ್ತು ಬಾಯ್‌ ಕಾಟ್‌ʼ ಅಭಿಯಾನದ ಪಟ್ಟಿಗೆ ಅಜಯ್‌ ದೇವಗನ್‌ ನಟನೆಯ ʼಥ್ಯಾಂಕ್‌ ಗಾಡ್‌ʼ ಸಿನಿಮಾ ಹೊಸದಾಗಿ  ಸೇರ್ಪಡೆಯಾಗಿದೆ.

ಅಜಯ್‌ ದೇವಗನ್‌ ಮತ್ತು ಸಿದ್ಧಾರ್ಥ್‌ ಮಲ್ಹೋತ್ರಾ ಮುಖ್ಯಭೂಮಿಕೆ ನಿಭಾಯಿಸಿರುವ ʼಥ್ಯಾಂಕ್‌ ಗಾಡ್‌ʼ ಅಕ್ಟೋಬರ್‌ 25ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಹಾಸ್ಯ ಪ್ರಧಾನವಾದ, ಫ್ಯಾಂಟಸಿ ಕಥಾಹಂದರದ ಈ ಚಿತ್ರದ ಟ್ರೈಲರ್‌ಗೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಚಿತ್ರದಲ್ಲಿ ಹಿಂದೂ ದೇವರುಗಳಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಕರ್ನಾಟಕದ ಹಿಂದೂ ಸಂಘಟನೆ ಕೂಡ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿತ್ತು.

ಈ ಎಲ್ಲ ಬೆಳವಣಿಗೆಗಳ ನಡುವೆ ಚಿತ್ರವನ್ನು ನಿಷೇಧಿಸುವಂತೆ ಕೋರಿ ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್‌ ಕೈಲಾಶ್‌ ಸಾರಂಗ್‌, ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ಪತ್ರದ ಪ್ರತಿಯನ್ನು ಟ್ವಿಟರ್‌ನಲ್ಲೂ ಹಂಚಿಕೊಂಡಿದ್ದಾರೆ.

ಪತ್ರ ಹಂಚಿಕೊಂಡು ಚಿತ್ರವನ್ನು ನಿಷೇಧಿಸಿ ಎಂದು ಒತ್ತಾಯಿಸುತ್ತಿರುವುದಕ್ಕೆ ಕಾರಣ ತಿಳಿಸಿರುವ ವಿಶ್ವಾಸ್‌, ʼಥ್ಯಾಂಕ್‌ ಗಾಡ್‌ʼ ಚಿತ್ರದಲ್ಲಿ ಕಾಯಸ್ಥ ಸಮುದಾಯದ ಆರಾಧ್ಯ ದೈವ ಚಿತ್ರಗುಪ್ತ ಪಾತ್ರವನ್ನು ಅಸಂಬದ್ಧವಾಗಿ ಚಿತ್ರಿಸಲಾಗಿದೆ. ಇದರಿಂದ ಕಾಯಸ್ಥ ಸಮುದಾಯದ ಜನರ ಭಾವನೆಗೆ ಧಕ್ಕೆಯುಂಟಾಗಿದೆ. ದೈವಕ್ಕೆ ಅಪಮಾನ ಎಸಗುವ ಚಿತ್ರವನ್ನು ನಿಷೇಧಿಸಿ ಎಂದು ಮನವಿ ಮಾಡಿದ್ದಾರೆ.

ಸಿದ್ಧಾರ್ಥ್‌ ಮಲ್ಹೋತ್ರ ನಾಯಕನಾಗಿ ಕಾಣಿಸಿಕೊಂಡಿರುವ 'ಥ್ಯಾಂಕ್‌ ಗಾಡ್‌' ಚಿತ್ರದಲ್ಲಿ ಅಜಯ್‌ ದೇವಗನ್‌ ಅವರು ಚಿತ್ರಗುಪ್ತನ ಪಾತ್ರ ನಿರ್ವಹಿಸಿದ್ದಾರೆ. ಕಥಾ ನಾಯಕ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವು, ಬದುಕಿನ ಮಧ್ಯೆ ಹೋರಾಡುತ್ತಿರುವಾಗ ಆತನನ್ನು ಯಮಲೋಕಕ್ಕೆ ಕರೆದೊಯ್ಯಲು ಬರುವ ಯಮಧರ್ಮ ಮತ್ತು ಚಿತ್ರಗುಪ್ತ, ನಾಯಕನಿಗೆ ಬದುಕಿನ ಪಾಠ ಹೇಳುವ ಕಥಾಹಂದರವನ್ನು ಹಾಸ್ಯಮಯವಾಗಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಯಮಧರ್ಮ ಮತ್ತು ಚಿತ್ರಗುಪ್ತ ಪಾತ್ರಧಾರಿಗಳು ಮಾಡರ್ನ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಇದೇ ಕಾರಣಕ್ಕೆ ಚಿತ್ರವನ್ನು ನಿಷೇಧಿಸುವಂತೆ ಹಿಂದೂಪರ ಸಂಘಟನೆಗಳು ಅಭಿಯಾನ ಪ್ರಾರಂಭಿಸಿವೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180