ʻಬ್ರಹ್ಮಾಸ್ತ್ರʼ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ದಿನಾಚರಣೆ ಮುಂದೂಡಿಕೆ

multiplex
  • ಅಗ್ಗದ ಟಿಕೆಟ್‌ ದರ ʼಬ್ರಹ್ಮಾಸ್ತ್ರʼದ ಗಳಿಕೆ ಮೇಲೆ ಪ್ರಭಾವ ಬೀರುವ ಸಾಧ್ಯತೆ
  • ಚಲನಚಿತ್ರ ದಿನಾಚರಣೆ ಮುಂದೂಡಲು ʼವಾಲ್ಟ್ ಡಿಸ್ನಿ ಸ್ಟುಡಿಯೋʼ ಮನವಿ

ಸೆಪ್ಟೆಂಬರ್ 16ಕ್ಕೆ ರಾಷ್ಟ್ರೀಯ ಚಲನಚಿತ್ರ ದಿನವನ್ನು ಆಚರಿಸುವುದಾಗಿ ಈ ಹಿಂದೆ 'ಮಲ್ಟಿಪ್ಲೆಕ್ಸ್‌ʼಗಳ ಒಕ್ಕೂಟ ಘೋಷಣೆ ಮಾಡಿತ್ತು. ಆದರೆ, 'ಬ್ರಹ್ಮಾಸ್ತ್ರ' ಸಿನಿಮಾದ ಸಲುವಾಗಿ ಚಲನಚಿತ್ರ ದಿನಾಚರಣೆ ಮುಂದೂಡಲು 'ಮಲ್ಟಿಪ್ಲೆಕ್ಸ್‌ʼಗಳ ಒಕ್ಕೂಟ ನಿರ್ಧರಿಸಿದೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಚಲನಚಿತ್ರ ದಿನದ ಅಂಗವಾಗಿ ಸೆಪ್ಟೆಂಬರ್ 16ರಂದು ಒಂದು ದಿನದ ಮಟ್ಟಿಗೆ ದೇಶಾದ್ಯಂತ ಕೇವಲ 75 ರೂಪಾಯಿಗೆ ಜನರು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಣೆ ಮಾಡಲು ಅವಕಾಶ ನೀಡುವುದಾಗಿ ʼಮಲ್ಟಿಪ್ಲೆಕ್ಸ್ʼಗಳ ಒಕ್ಕೂಟ ತಿಳಿಸಿತ್ತು. ಆದರೆ, 'ಬ್ರಹ್ಮಾಸ್ತ್ರ' ಸಿನಿಮಾದ ಸಲುವಾಗಿ ʼಚಲನಚಿತ್ರ ದಿನಾಚರಣೆʼ ಮತ್ತು ಅಗ್ಗದ ಟಿಕೆಟ್ ನೀಡುವ ಯೋಜನೆಯನ್ನು ಮುಂದೂಡಲು ಒಕ್ಕೂಟ ನಿರ್ಧರಿಸಿದೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.

ಈ ಸುದ್ದಿ ಓದಿದ್ದೀರಾ? ಸಾಹಸ ಸಿಂಹನ ಕಟೌಟ್‌ ಜಾತ್ರೆ ಮಾಡಲು ಸಜ್ಜಾದ ವಿಷ್ಣು ಸೇನಾನಿಗಳು

ಅಂದಾಜು 410 ಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಾಣವಾಗಿರುವ ʼಬ್ರಹ್ಮಾಸ್ತ್ರʼ ಬಿಡುಗಡೆಯಾದ ಮೊದಲ ವಾರಾಂತ್ಯಕ್ಕೆ 200 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆ ಹಾಕಿದೆ. ಎರಡನೇ ವಾರವೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ಹೊತ್ತಿನಲ್ಲಿ ಟಿಕೆಟ್ ದರವನ್ನು 75 ರೂಪಾಯಿಗೆ ನಿಗದಿ ಪಡಿಸಿದರೆ, ಅದು ನೇರವಾಗಿ ಸಿನಿಮಾದ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಚಲನ ಚಿತ್ರ ದಿನಾಚರಣೆಯನ್ನು ಮುಂದೂಡುವಂತೆ ಈ ಸಿನಿಮಾದ ವಿತರಣೆ ಹಕ್ಕನ್ನು ಪಡೆದಿರುವ ʼವಾಲ್ಟ್ ಡಿಸ್ನಿ ಸ್ಟುಡಿಯೋʼ, ʼಮಲ್ಟಿಪ್ಲೆಕ್ಸ್‌ʼ ಒಕ್ಕೂಟಕ್ಕೆ ಮನವಿ ಮಾಡಿಕೊಂಡಿದೆ. 

ಹೀಗಾಗಿ ಸೆಪ್ಟೆಂಬರ್ 16ರಂದು ನಡೆಯಬೇಕಿದ್ದ ರಾಷ್ಟ್ರೀಯ ಚಲನಚಿತ್ರ ದಿನವನ್ನು ಒಂದು ವಾರದ ಮಟ್ಟಿಗೆ ಮುಂದೂಡಿ 23ರಂದು ಆಚರಿಸಲು ಒಕ್ಕೂಟ ನಿರ್ಧರಿಸಿದೆ ಎನ್ನಲಾಗಿದೆ. ಬಾಕಿ ದಿನಗಳಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ 150 ರೂಪಾಯಿಗೂ ಹೆಚ್ಚಿನ ದರಕ್ಕೆ ದೊರೆಯುವ ಸಿನಿಮಾ ಟಿಕೆಟ್‌ಗಳನ್ನು ಚಲನಚಿತ್ರ ದಿನಾಚರಣೆಯಂದು ಕೇವಲ 75 ರೂಪಾಯಿಗೆ ನೀಡಲು ಮಲ್ಟಿಪ್ಲೆಕ್ಸ್‌ ಒಕ್ಕೂಟ ನಿರ್ಧರಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180