ಮಲ್ಟಿಫ್ಲೆಕ್ಸ್‌ | ಪಿವಿಆರ್‌ ಮತ್ತು ಐನಾಕ್ಸ್ ವಿಲೀನ

PVR
  • ಪಿವಿಆರ್ ಮತ್ತು ಐನಾಕ್ಸ್‌ ಸಂಸ್ಥೆಗಳ ವಿಲೀನ
  • ದೇಶದ 73 ನಗರಗಳಲ್ಲಿ 871 ಪರದೆಗಳನ್ನು ಪಿವಿಆರ್‌ ನಿರ್ವಹಿಸುತ್ತದೆ.
  • ಐನಾಕ್ಸ್ - 72 ನಗರಗಳಲ್ಲಿ 675 ಪರದೆಗಳನ್ನು ಹೊಂದಿದೆ

ಭಾರತದ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಾದ ಪಿವಿಆರ್ ಮತ್ತು ಐನಾಕ್ಸ್‌ ವಿಲೀನವಾಗಲಿವೆ ಎಂದು ಎರಡೂ ಕಂಪನಿಗಳ ನಿರ್ದೇಶಕರ ಮಂಡಳಿ ಪ್ರಕಟಿಸಿದೆ. 

ಪಿವಿಆರ್ ಮತ್ತು ಐನಾಕ್ಸ್‌ನ ನಿರ್ದೇಶಕರ ಮಂಡಳಿಯು ಭಾನುವಾರ ಸಭೆ ನಡೆಸಿವೆ. ಸಭೆಯ ಬಳಿಕ ವಿಲೀನಕ್ಕೆ ಎರಡು ಕಂಪನಿಗಳ ಸಂಬಂಧಿತ ಮಂಡಳಿಗಳು ಅನುಮೋದನೆ ನೀಡಿವೆ. ಆದರೂ, ಭಾರತೀಯ ಸ್ಪರ್ಧಾತ್ಮಕ ಆಯೋಗದಿಂದ (ಸಿಸಿಐ- ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ) ಅನುಮೋದನೆ ಪಡೆಯುವುದು ಬಾಕಿ ಇದೆ.

ವಿಲೀನದ ನಂತರ ರಚನೆಯಾಗುವ ಸಂಯೋಜಿತ ಘಟಕಕ್ಕೆ ಪಿವಿಆರ್ ಐನಾಕ್ಸ್ ಎಂದು ಹೆಸರಿಸಲಾಗುವುದು. ಈ ಘಟಕಕ್ಕೆ ಪಿವಿಆರ್‌ನ ಚೇರ್ಮನ್ ಅಜಯ್ ಬಿಜ್ಲಿ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗುತ್ತದೆ. ಅಲ್ಲದೆ, ಪಿವಿಆರ್‌ನ ಸಂಜೀವ್ ಕುಮಾರ್ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. 

ಐನಾಕ್ಸ್ ಗ್ರೂಪ್‌ನ ಅಧ್ಯಕ್ಷ ಪವನ್ ಕುಮಾರ್ ಜೈನ್ ಅವರನ್ನು ಮಂಡಳಿಯ ಕಾರ್ಯನಿರ್ವಾಹಕೇತರ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ಸಿದ್ಧಾರ್ಥ್ ಜೈನ್ ಅವರನ್ನು ಸಂಯೋಜಿತ ಘಟಕದಲ್ಲಿ ನಾನ್-ಎಕ್ಸಿಕ್ಯೂಟಿವ್ ನಾನ್-ಇಂಡಿಪೆಂಡೆಂಟ್ ಡೈರೆಕ್ಟರ್ ಆಗಿ ನೇಮಿಸಲು ಎಂದು ಎರಡೂ ಸಂಸ್ಥೆಗಳು ನಿರ್ಧರಿಸಿವೆ. 

ಪಿವಿಆರ್ ಮತ್ತು ಐನಾಕ್ಸ್ ಎರಡೂ ಸಂಸ್ಥೆಗಳು ಭಾರತದ 109 ನಗರಗಳಲ್ಲಿ ಒಟ್ಟು 1546 ಪರದೆಗಳನ್ನು (ಸ್ಕ್ರೀನ್‌) ನಿರ್ವಹಿಸುತ್ತಿವೆ. ಈ ಪೈಕಿ, ಪಿವಿಆರ್ 73 ನಗರಗಳಲ್ಲಿ 871 ಪರದೆಗಳನ್ನು ನಿರ್ವಹಿಸುತ್ತದೆ. ಐನಾಕ್ಸ್ 72 ನಗರಗಳಲ್ಲಿ 675 ಪರದೆಗಳನ್ನು ಹೊಂದಿದೆ.

ಇದೀಗ ಎರಡೂ ಸಂಸ್ಥೆಗಳು ಒಗ್ಗೂಡುತ್ತಿದ್ದು, ದೇಶದ ಅತಿದೊಡ್ಡ ಚಲನಚಿತ್ರ ಪ್ರದರ್ಶನ ಸಂಸ್ಥೆಯಾಗಿ ಹೊರಹೊಮ್ಮಲಿವೆ. ವಿಲೀನದ ನಂತರ ಮತ್ತಷ್ಟು ಹೊಸ ಚಿತ್ರಮಂದಿರಗಳನ್ನು ತೆರೆಯಲಾಗುತ್ತದೆ ಎಂದು ಸಂಸ್ಥೆಗಳು ತಿಳಿಸಿವೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180