ನಗ್ನ ಫೋಟೋಶೂಟ್‌ ಪ್ರಕರಣ; ರಣವೀರ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲು

ranveer singh
  • ನಟನ ವಿರುದ್ಧ ದೂರು ದಾಖಲಿಸಿದ ʼಶ್ಯಾಮ್‌ ಮಂಗರಂ ಫೌಂಡೇಶನ್‌ʼ
  • ಲಿಂಗ ಸಮಾನತೆ ಬಗ್ಗೆ  ಅಭಿಪ್ರಾಯ ಎಂದ ರಾಮ್‌ ಗೋಪಾಲ್‌ ವರ್ಮಾ 

ಅಮೆರಿಕ ಮೂಲದ ಪ್ರತಿಷ್ಠಿತ ನಿಯತಕಾಲಿಕೆ ʼಪೇಪರ್‌ʼಗಾಗಿ ಇತ್ತೀಚೆಗೆ ನಗ್ನ ಫೋಟೋಶೂಟ್‌ ಮಾಡಿಸಿ ಅಭಿಮಾನಿಗಳು ಮತ್ತು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಎದುರಿಸಿದ್ದ ಬಾಲಿವುಡ್‌ನ ಖ್ಯಾತ ನಟ ರಣವೀರ್‌ಗೆ ಇದೀಗ ಸಂಕಷ್ಟ ಎದುರಾಗಿದ್ದು, ನಟನ ವಿರುದ್ಧ ಪ್ರಕರಣ ದಾಖಲಾಗಿದೆ.

ರಣವೀರ್‌ ಸಿಂಗ್‌ ಅವರಂತಹ ನಟರನ್ನು ಕೋಟ್ಯಂತರ ಮಂದಿ ಅಭಿಮಾನಿಗಳು ಹಿಂಬಾಲಿಸುತ್ತಾರೆ. ನಟನಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ರಣವೀರ್‌ ಫೋಟೋಶೂಟ್‌ಗೆ ಪೋಸ್‌ ನೀಡಿದ್ದಲ್ಲದೆ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಮಹಿಳೆಯರ ಭಾವನೆಗೆ ಧಕ್ಕೆ ತಂದಿದ್ದಾರೆ. ನಾವು ವಾಕ್‌ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ನಗ್ನ ಚಿತ್ರಗಳನ್ನು ಹಂಚಿಕೊಳ್ಳುವುದು ಸೂಕ್ತವಲ್ಲ. ಹೀಗಾಗಿ ರಣವೀರ್‌ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವಂತೆ ʼಶ್ಯಾಮ್‌ ಮಂಗರಂ ಫೌಂಡೇಶನ್‌ʼನ ಕಾರ್ಯಕರ್ತರೊಬ್ಬರು ಮುಂಬೈನ ಚೆಂಬೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ರಣವೀರ್‌ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.

ರಣವೀರ್‌ ಸಿಂಗ್‌ ಫೋಟೋಶೂಟ್‌ ವಿವಾದಕ್ಕೆ ಸಂಬಂಧಿಸಿ ತೆಲುಗಿನ ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಪ್ರತಿಕ್ರಿಯಿಸಿದ್ದಾರೆ. "ನನ್ನ ಪ್ರಕಾರ ರಣವೀರ್‌ ಸಿಂಗ್‌ ನಗ್ನ ಫೋಟೋಶೂಟ್‌ ಮೂಲಕ ಲಿಂಗ ಸಮಾನತೆಯ ಬಗ್ಗೆ ತಮ್ಮ ಅಭಿಪ್ರಾಯ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಒಬ್ಬ ಮಹಿಳೆ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದಾದರೆ? ಪುರುಷನೇಕೆ ಬೋಲ್ಡ್‌ ಆಗಿ ಕಾಣಿಸಿಕೊಳ್ಳಬಾರದು? ಹೆಣ್ಣಿಗಿರುವ ಸರ್ವ ಸ್ವಾತಂತ್ರ್ಯಗಳು ಪುರುಷರಿಗೂ ಇದೆ ಅಲ್ಲವೇ? ಹಾಗೆಂದ ಮೇಲೆ ರಣವೀರ್‌ ಹಂಚಿಕೊಂಡ ಚಿತ್ರಗಳೇಕೆ ಅಸಹ್ಯ ಎನ್ನಿಸಬೇಕು? ವ್ಯಕ್ತಿಯೊಬ್ಬ ಬೋಲ್ಡ್‌ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ಆತನನ್ನು ಖಳನ ರೀತಿ ಬಿಂಬಿಸುವುದು ಸಲ್ಲ" ಎಂದು ಪ್ರತಿಕ್ರಿಯಿಸಿರುವುದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಉಲ್ಲೇಖಿಸಿದೆ.

ಈ ಸುದ್ದಿ ಓದಿದ್ದೀರಾ? 3,200ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದಾನೆ ವಿಕ್ರಾಂತ್‌ ರೋಣ

ಆಲಿಯಾ ಭಟ್‌, ಅರ್ಜುನ್‌ ಕಪೂರ್‌ ಸೇರಿ ಹಲವು ತಾರೆಯರು ರಣವೀರ್‌ ಸಿಂಗ್‌ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಟನ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು ಎಂದಿದ್ದಾರೆ.   

'ಪೇಪರ್‌' ನಿಯತಕಾಲಿಕೆಯ ಫೋಟೋಶೂಟ್‌ನಲ್ಲಿ  ನಗ್ನವಾಗಿ ಪೋಸ್‌ ನೀಡಿದ್ದ ರಣವೀರ್‌ ಜುಲೈ 22ರಂದು ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ರಣವೀರ್‌ ಅವರ ನಗ್ನ ಚಿತ್ರಗಳನ್ನು ಕಂಡು ಅಚ್ಚರಿಗೊಂಡ ಅಭಿಮಾನಿಗಳಲ್ಲಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಹಲವರು ಆಕ್ರೋಶ ಹೊರ ಹಾಕಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್