
1 ಬೇಡರ ಕಣ್ಣಪ್ಪ
ಬಿಡುಗಡೆಯಾದ ವರ್ಷ: 1954
ಡಾ.ರಾಜ್ಕುಮಾರ್ ನಾಯಕನಾಗಿ ಅಭಿನಯಿಸಿದ ಮೊದಲ ಚಲನಚಿತ್ರ. ಏಕಕಾಲಕ್ಕೆ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರದ್ದು. ರಾಜ್ಯದಾದ್ಯಂತ 20 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಚಿತ್ರದ ʼಶಿವಪ್ಪ ಕಾಯೋ ತಂದೆ…ʼ ಹಾಡು ಇಂದಿಗೂ ಜನರ ಮನದಲ್ಲಿದೆ. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ ಇದು. ಕನ್ನಡದಲ್ಲಿ ಯಶಸ್ಸು ಕಂಡ ನಂತರ ಮೂರು ಭಾಷೆಗಳಲ್ಲಿ ಈ ಚಿತ್ರ ರಿಮೇಕ್ ಆಗಿತ್ತು. ಬೇಡರ ಕಣ್ಣಪ್ಪ ಚಿತ್ರದ ತೆಲುಗು ಅವತರಣಿಕೆ ʼಕಾಳಹಸ್ತಿ ಮಹಾತ್ಮೆʼಯಲ್ಲಿ ರಾಜ್ಕುಮಾರ್ ನಟಿಸಿದ್ದರು. ರಾಜ್ ನಟಿಸಿದ ಏಕೈಕ ಪರಭಾಷಾ ಚಿತ್ರವಿದು.

2 ರಣಧೀರ ಕಠೀರವ
ಬಿಡುಗಡೆಯಾದ ವರ್ಷ: 1960
ಮೈಸೂರು ಅರಸರ ಪರಂಪರೆಯಲ್ಲಿ ರಣಧಿರ ಕಂಠೀರವ ನರಸರಾಜ್ ಒಡೆಯರ್ ಅವರ ಹೆಸರು ಪ್ರಸಿದ್ಧವಾಗಿದೆ. ಅವರ ಕಥೆ ಆಧರಿಸಿದ ಈ ಚಿತ್ರಕ್ಕೆ ಜಿ.ವಿ.ಅಯ್ಯರ್ ಚಿತ್ರಸಾಹಿತ್ಯ ಬರೆದಿದ್ದರು. ಚಿತ್ರರಂಗ ಆರ್ಥಿಕ ದುಃಸ್ಥಿತಿಯಲ್ಲಿದ್ದ ಕಾಲದಲ್ಲಿ ಕಲಾವಿದರಾದ ರಾಜ್ಕುಮಾರ್, ಬಾಲಕೃಷ್ಣ, ನರಸಿಂಹರಾಜು ಅವರೇ ನಿರ್ಮಾಣ ಮಾಡಿದ ಚಿತ್ರವಿದು. ಈ ಚಿತ್ರ ಡಾ.ರಾಜ್ಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಚಿತ್ರ. ಚಿತ್ರ “ಕರುನಾಡ ವೈರಮುಡಿ ಕಂಠೀರವಾ…” ಚಿತ್ರಗೀತೆ ಜನರ ನೆನಪಲ್ಲಿ ಇನ್ನು ಉಳಿದಿದೆ. ಈ ಚಿತ್ರದಲ್ಲಿದ್ದ ಸಾಹಸ ದೃಶ್ಯಗಳು ಜನರನ್ನು ಆಕರ್ಷಿಸಿದ್ದವು. ಈ ಚಿತ್ರಕತೆ ವಿವಾದಕ್ಕೆ ಕಾರಣ ವಾಗಿತ್ತು. ಈ ಚಿತ್ರ ಹೆಚ್ಚು ಆದಾಯ ಗಳಿಸದಿದ್ದರೂ ಹೆಚ್ಚು ಜನರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ನಡೆದ ಗದ್ದಲಗಳು, ಕನ್ನಡ ಪರ ನಿಲುವುಗಳದ್ದೇ ರೋಚಕ ಕಥೆಗಳಿವೆ.

3 ಭಕ್ತ ಕನಕದಾಸ
ಚಿತ್ರ ಬಿಡುಗಡೆಯಾದ ವರ್ಷ: 1960
ಈ ಚಿತ್ರದಲ್ಲಿ ಕನಕದಾಸನಾಗಿ ರಾಜ್ಕುಮಾರ್ ಅಭಿನಯ ಇಂದಿಗೂ ಜೀವಂತ. ಅಂದಿನ ಸಾಮಾಜಿಕ ಬಿಕ್ಕಟ್ಟನ್ನು ಚಿತ್ರದಲ್ಲಿ ಸ್ಪಷ್ಟವಾಗಿ ಚಿತ್ರಿಸಲಾಗಿದೆ. ಕೆಳ ಸಮುದಾಯದ ಕನಕನನ್ನು ದೇವಸ್ಥಾನ ಪ್ರವೇಶಿಸದಂತೆ ತಡೆಯುವ ಜನ ಅವನನ್ನು ಹಿಂಸಿಸುತ್ತಾರೆ. ದರುಶನಕ್ಕಾಗಿ ಮೊರೆ ಇಡುವ ಭಕ್ತನಿಗೆ ಹರಿ ತಾನೆ ಗೋಡೆಯೊಡೆದು ದರ್ಶನ ನೀಡುತ್ತಾನೆ. ಭಕ್ತಿಯು ಜಾತಿ-ಧರ್ಮಗಳನ್ನು ಮೀರಿದ್ದು ಎಂಬ ಸಂದೇಶ ಸಾರುವ ಚಿತ್ರ. ʼಬಾಗಿಲನು ತೆರೆದು…ʼ ಹಾಡು ಜನಪ್ರಿಯ ಹಾಡಾಗಿದೆ.
4 ನಾಂದಿ
ಬಿಡುಗಡೆಯಾದ ವರ್ಷ: 1964
“ನಾಂದಿ” ಕನ್ನಡ ಚಲನ ಚಿತ್ರಗಳು ಹೊಸ ಸ್ವರೂಪ ಪಡೆದುಕೊಳ್ಳಲು ಇದು ನಾಂದಿ ಹಾಡಿತ್ತು. ಎನ್ ಲಕ್ಷ್ಮಿನಾರಾಯಣ ಅವರ ನಿರ್ದೇಶನದ ಈ ಚಿತ್ರ ಕನ್ನಡದಲ್ಲಿ ಹೊಸ ಪ್ರಜ್ಞೆಯನ್ನು ಮೂಡಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಿವುಡ-ಮೂಗರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿತ್ತು. ಶಾಲಾ ಶಿಕ್ಷಕನ ಸರಳ ಜೀವನ, ಆತನ ಪತ್ನಿ ಹೆರಿಗೆ ಸಮಯದಲ್ಲಿ ತೀರಿ ಹೊದಾಗ ಶಿಕ್ಷಕ ಒಬ್ಬ ಕಿವುಡ ಮತ್ತು ಮೂಗಿ ಯುವತಿಯನ್ನು ಮದುವೆಯಾಗಿ ಅವಳಿಗೆ ಆಸರೆಯಾಗುತ್ತಾನೆ. ಇದು ಒಂದು ಪ್ರಯೋಗಾತ್ಮಕ ಚಿತ್ರವಾಗಿತ್ತು.

5 ಚಂದವಳ್ಳಿಯ ತೋಟ
ಚಿತ್ರ ಬಿಡುಗಡೆಯಾದ ವರ್ಷ: 1964
ತ.ರಾ. ಸುಬ್ಬರಾಯ ಅವರು ಬರೆದ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತ ಚಿತ್ರ. ಗ್ರಾಮೀಣ ಹಿನ್ನಲೆಯಲ್ಲಿ ರೈತ ಕುಟುಂಬದಲ್ಲಿರುವ ಮಾನವ ಸಂಬಂಧಗಳ ಸಂಕೀರ್ಣತೆಗಳ ಪ್ರಾಮಾಣಿಕ ಚಿಂತನೆ ಈ ಚಿತ್ರದ ಆತ್ಮವಾಗಿತ್ತು. ಕುಟುಂಬದ ವಿಘಟನೆಯಿಂದಾಗುವ ದುಷ್ಪರಿಣಾಮಗಳನ್ನು ಭಾವನಾತ್ಮಕವಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದ ವಾತಾವರಣ ಮತ್ತು ಚಿತ್ರದ ಮಾತುಗಳಲ್ಲಿ ಗ್ರಾಮೀಣ ಜೀವನದ ಸೊಗಡಿದೆ. ಈ ಚಿತ್ರಕ್ಕೆ ಕೇಂದ್ರ ಸರ್ಕಾರದಿಂದ ಬೆಳ್ಳಿಯ ಪದಕ ಪ್ರಶಸ್ತಿ ಸಿಕ್ಕಿದೆ.
6 ಸತ್ಯ ಹರಿಶ್ಚಂದ್ರ
ಚಿತ್ರ ಬಿಡುಗಡೆಯಾದ ವರ್ಷ: 1965
ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಚಿತ್ರ ʼಸತ್ಯ ಹರಿಶ್ಚಂದ್ರʼ. ಇತ್ತಿಚೆಗೆ ಬಣ್ಣದಲ್ಲಿ ತೆರೆ ಕಂಡಿರುವ ಚಿತ್ರವಿದು. ಚಿತ್ರದ 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ…' ಹಾಡು ಇಂದಿಗೂ ಎಲ್ಲ ವಯಸ್ಸಿನವರು ಮೆಲುಕು ಹಾಕುವ ಹಾಡಾಗಿದೆ. ಸತ್ಯ ಪರಿಪಾಲಕನಾದ ರಾಜ ಹರಿಶ್ಚಂದ್ರ ಸತ್ಯ-ಧರ್ಮ ಪಾಲನೆಗಾಗಿ ಹೆಂಡತಿ ಮಕ್ಕಳನ್ನು ಅಡವಿಟ್ಟು, ತಾನು ಸ್ಮಶಾನ ಕಾಯುವವನಾಗುತ್ತಾನೆ. ಆತನ ಸತ್ಯ ಮಾರ್ಗದಲ್ಲಿ ಎದುರಾಗುವ ಅಡ್ಡಿ ಮತ್ತು ಅವನ ಸತ್ಯ ನಿಷ್ಠೆ, ಚಿತ್ರದ ಕಥಾಹಂದರ.

7 ಸಂಧ್ಯಾರಾಗ
ಚಿತ್ರ ಬಿಡುಗಡೆಯಾದ ವರ್ಷ 1966
ಅ.ನ.ಕೃ ಅವರ ಕಾದಂಬರಿ ಆಧರಿಸಿದ ಚಿತ್ರ ʼಸಂಧ್ಯಾರಾಗʼ. ಕನ್ನಡ ಚಿತ್ರ ರಂಗದಲ್ಲೆ ಚಿರಸ್ಥಾಯಿಯಾಗಿ ಉಳಿದ ಚಿತ್ರವಿದು. ಈ ಚಿತ್ರವು 1966ರ ಅತ್ಯುತ್ತಮ ಚಿತ್ರವೆಂಬ ರಾಷ್ಟ್ರಪ್ರಶಸ್ತಿ ಪಡೆದಿತ್ತು. ಇದು ಸಂಗೀತ ಪ್ರಧಾನ ಚಿತ್ರವಾಗಿದ್ದು, ಪಂಡಿತ್ ಭೀಮಸೇನ್ ಜೋಷಿಯವರ ದ್ವನಿಯ ʼಕನ್ನಡತಿ ತಾಯಿ ಬಾ…ʼ ಎಂಬ ಹಾಡಿನೊಂದಿಗೆ ಸಿನಿಮಾ ಆರಂಭವಾಗುತ್ತದೆ. ಸಂಗೀತಗಾರನಾಗಿ ಸಾಧನೆಗಿಳಿದಾಗ ಆತ ಅನುಭವಿಸುವ ಅಡೆ-ತಡೆಗಳು ಚಿತ್ರದ ಹೂರಣ. ಚಿತ್ರದಲ್ಲಿ ಶಾಸ್ತ್ರೀಯ ಸಂಗೀತಗಾರನಾಗಿ ರಾಜ್ ಅಭಿನಯಿಸಿದ್ದಾರೆ. ಕುಟುಂಬಕ್ಕೆ ಹಿರಿಯರ ಅಗತ್ಯ ಎಷ್ಟಿದೆ ಮತ್ತು ಹಿರಿಯರನ್ನು ಗೌರವಿಸುವುದು ಹೇಗೆ ಎಂಬುದನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ.
8 ಇಮ್ಮಡಿ ಪುಲಿಕೇಶಿ
ಚಿತ್ರ ಬಿಡುಗಡೆಯಾದ ವರ್ಷ: 1967
ಚಾಲುಕ್ಯರ ದೊರೆ ಇಮ್ಮಡಿ ಪುಲಿಕೇಶಿ ಜೀವನಾಧರಿತ ಚಿತ್ರ ಇದು. ರಾಜ್ಕುಮಾರ ಈ ಚಿತ್ರದಲ್ಲಿ ಪುಲಿಕೇಶಿಯಾಗಿ ಕಾಣಿಸಿದ್ದಾರೆ. ದೇಶದಲ್ಲಿ ಆಗಿದ್ದ ಒಗ್ಗಟ್ಟಿನ ಅಭಾವ, ಕನ್ನಡ ನಾಡನ್ನು ಒಂದುಗೂಡಿಸುವ ಮತ್ತು ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ವಿಶೇಷವಾದ ಕಾಳಜಿ ಈ ಚಿತ್ರದಲ್ಲಿದೆ. “ಭಾರತ ಮಾತೆಯ ಮಕ್ಕಳು ಶತ್ರುಗಳಲ್ಲ, ಅವರೆಲ್ಲಾ ಹೃದಯದಿಂದ ಒಂದಾಗಬೇಕು ಐಕಮತ್ಯವೇ ರಾಷ್ಟ್ರಬಲ. ವಿದೇಶಿಯರಿಗೆ ವಿಶೇಷವಾಗಿ ಕಣ್ಣು ಕುಕ್ಕುವ ಕೀರ್ತಿ ನಮ್ಮದು. ಆದರೆ ನಾವೇ ಬಡಿದಾಡುವ ಸ್ಥಿತಿಯಿದೆ” ಎಂಬ ಚಿತ್ರದ ಸಂಭಾಷಣೆ ಇಂದಿಗೂ ಪ್ರಸ್ತುತ. ಹೀಗೆ ರಾಷ್ಟ್ರ ಪ್ರೇಮ ಉಕ್ಕಿಸುವ ಅನೇಕ ಸನ್ನಿವೇಶಗಳನ್ನು ಚಿತ್ರ ಒಳಗೊಂಡಿದೆ.
9 ಜೇಡರ ಬಲೆ
ಚಿತ್ರ ಬಿಡುಗಡೆಯಾದ ವರ್ಷ: 1968
ಇದು ಕನ್ನಡ ಚಿತ್ರ ರಂಗದಲ್ಲಿ ಬಾಂಡ್ ಶೈಲಿಯ ಮೊದಲ ಚಿತ್ರ. ಈ ಚಿತ್ರದ ಮೂಲಕ ಡಾ.ರಾಜ್ ತಮ್ಮ ಮೊದಲಿನ ಜಾಡಿನಿಂದ ಸಂಪೂರ್ಣವಾಗಿ ಹೊರ ಬಂದರು. ಈ ಚಿತ್ರ ಬರುವ ಮೊದಲು ಸಾಹಸ ದೃಶ್ಯಗಳು, ಹೊಡೆದಾಟದ ಸನ್ನಿವೇಶಗಳು ಕನ್ನಡ ಚಿತ್ರಗಳಲ್ಲಿ ಅತ್ಯಂತ ಕಡಿಮೆ ಇದ್ದವು. ಈ ಚಿತ್ರದ ಮೂಲಕ ರಾಜ್ಕುಮಾರ್ ಕನ್ನಡದ ಜೇಮ್ಸ್ ಬಾಂಡ್ ಆಗಿ ಮೆರೆದಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ರಾಜ್ ಈ ಚಿತ್ರದಲ್ಲಿ ಸೂಟು ಬೂಟು ಹಾಕಿ ಪಿಸ್ತೂಲು ಹಿಡಿದಿದ್ದರು. ಈ ಪರಿವರ್ತನೆ ಭಾರಿ ಜಯಪ್ರಿಯತೆ ಗಳಿಸಿತ್ತು.

10 ಹಣ್ಣೆಲೆ ಚಿಗುರಿದಾಗ
ಚಿತ್ರ ಬಿಡುಗಡೆಯಾದ ವರ್ಷ: 1968
ತ್ರಿವೇಣಿಯವರ 'ಹಣ್ಣೆಲೆ ಚಿಗುರಿದಾಗ' ಕಾದಂಬರಿ ಆಧರಿತ ಚಿತ್ರ. ರಾಜ್ಯ ಸರ್ಕಾರದಿಂದ ಎರಡನೇ ಉತ್ತಮ ಚಿತ್ರ ಪ್ರಶಸ್ತಿ ಗಳಿಸಿದ್ದ ಚಿತ್ರ. ವಿಧವೆಯರಲ್ಲೂ ಪ್ರೇಮದ ಹಂಬಲವಿರುತ್ತದೆ. ತಾವೂ ಮರುಮದುವೆಯಾಗಿ ಬಾಳಬೇಕು ಎಂಬ ತುಡಿತವಿರುತ್ತದೆ. ಅದಕ್ಕೆ ಸಮಾಜ ಅವಕಾಶ ನೀಡಬೇಕು ಎಂಬ ಒತ್ತಾಸೆಯ ಕಥಾಹಂದರ ಹೊಂದಿರುವ ಚಿತ್ರ ʼಹಣ್ಣೆಲೆ ಚಿಗುರಿದಾಗʼ. ಈ ಚಿತ್ರದ ʼಹೂವು ಚೆಲುವೆಲ್ಲ ತಂದೆಂದಿತು…” ಎಂಬ ಹಾಡು ಇಂದಿಗೂ ಜನರ ಸ್ಮರಣೀಯ ಹಾಡು. ಕಲ್ಪನಾ ಅವರ ಭಾವನಾತ್ಮಕ ಅಭಿನಯ ಮನಮಿಡಿಯುವಂತಿದೆ.
11 ಮೇಯರ್ ಮುತ್ತಣ್ಣ
ಚಿತ್ರ ಬಿಡುಗಡೆಯಾದ ವರ್ಷ: 1969
ಹಳ್ಳಿಯಿಂದ ಬರುವ ಒಬ್ಬ ವ್ಯಕ್ತಿ ತನ್ನ ಸಾಮಾಜಿಕ ಕಳಕಳಿಯಿಂದ ಬೆಂಗಳೂರಿನ ಮೇಯರ್ ಸ್ಥಾನಕ್ಕೇರುವ ಭಿನ್ನ ಕಥಾಹಂದರವಿರುವ ಚಿತ್ರ. ಹಳ್ಳಿಯ ಮುಗ್ಧನಾಗಿ ಮತ್ತು ಮೇಯರ್ ಸ್ಥಾನಕ್ಕೇರಿದ ಮೇಲೆ ಪ್ರಬುದ್ಧರಾಗಿ ಕಾಣುವ ರಾಜ್ ಅವರನ್ನು ನೋಡಲು ಕಣ್ಣಿಗೆ ಆನಂದ. ಇನ್ನು ಈ ಚಿತ್ರದ ʼಹಳ್ಳಿಯಾದರೇನು ಶಿವಾ….ʼ ಮತ್ತು ʼಅಯ್ಯಯ್ಯಯ್ಯೋ ಹಳ್ಳೀಮುಕ್ಕ…ʼ ಹಾಡುಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿವೆ. ಕನ್ನಡ ಚಿತ್ರರಂಗದ ವಾಣಿಜ್ಯ ಚರಿತ್ರೆಯಲ್ಲಿ ʼಮೇಯರ್ ಮುತ್ತಣ್ಣʼ ಚಿತ್ರಕ್ಕೆ ವಿಶೇಷ ಸ್ಥಾನವಿದೆ.
12 ಶ್ರೀಕೃಷ್ಣ ದೇವರಾಯ
ಚಿತ್ರ ಬಿಡುಗಡೆಯಾದ ವರ್ಷ: 1970
ವರ್ಣ ವೈಭವ ಮತ್ತು ದೃಶ್ಯ ವೈಭವಕ್ಕೆ ಸಾಕ್ಷಿಯಾಗಿರುವ ಚಿತ್ರವಿದು. ಡಾ.ರಾಜ್ಕುಮಾರ್, ಭಾರತಿ ಮತ್ತು ಜಯಂತಿಯವರ ತಾರಾಗಣದಲ್ಲಿ ಮೂಡಿಬಂದಿರುವ ಚಿತ್ರ. ಶ್ರೀಕೃಷ್ಣದೇವರಾಯನ ಆಳ್ವಿಕೆಯನ್ನು ಚಿತ್ರಿಸುತ್ತದೆ. ಚಿತ್ರ ನಿರ್ಮಾಣ ವೈಭವದ ಕಾರಣಕ್ಕೆ ಅಪಾರ ಜನ ಮನ್ನಣೆ ಗಳಿಸಿತ್ತು.

13 ಕಸ್ತೂರಿ ನಿವಾಸ
ಚಿತ್ರ ಬಿಡುಗಡೆಯಾದ ವರ್ಷ: 1971
ರಾಜ್ಕುಮಾರ್ ಅವರ ಸಾರ್ವಕಾಲಿಕ ಯಶಸ್ವೀ ಚಿತ್ರಗಳ ಸಾಲಿನಲ್ಲಿ 'ಕಸ್ತೂರಿ ನಿವಾಸ' ಮೊದಲ ಸ್ಥಾನ ಪಡೆಯುತ್ತದೆ. 16 ಚಿತ್ರಮಂದಿರಗಳಲ್ಲಿ 100 ವಾರ ಪೂರೈಸಿರುವ ಕೀರ್ತಿ ಈ ಚಿತ್ರಕ್ಕಿದೆ. 2014ರಲ್ಲಿ ಕಲರ್ನಲ್ಲಿ ಮತ್ತೆ ಈ ಚಿತ್ರ ತೆರೆಗೆ ಬಂದಿದೆ. ಆಗಲೂ ಅಷ್ಟೇ ಹೆಸರು ಮಾಡಿದ್ದ ಚಿತ್ರ. ಉದ್ಯಮಿಯಾಗಿ, ಗೆಳೆಯನಾಗಿ, ಭಗ್ನಪ್ರೇಮಿಯಾಗಿ, ವಿವಿಧ ಆಯಾಮಗಳಲ್ಲಿ ರಾಜಕುಮಾರ್ ಮಿಂಚಿದ್ದರು. ಚಿತ್ರದ ʼಆಡಿಸಿ ನೋಡು.. ಬೀಳಿಸಿ ನೋಡುʼ ಗೀತೆ ಇಂದಿಗೂ ಜನಪ್ರಿಯ ಹಾಡಾಗಿದೆ.

14. ಬಂಗಾರದ ಮನುಷ್ಯ
ಬಿಡುಗಡೆಯಾದ ವರ್ಷ: 1972
ಸಿದ್ಧಲಿಂಗಯ್ಯ ನಿರ್ದೇಶನದ ಆರ್.ಲಕ್ಷ್ಮಣ್ ಮತ್ತು ಗೋಪಾಲ್ ನಿರ್ಮಾಣದ 'ಬಂಗಾರದ ಮನುಷ್ಯ' ಸಾಮರಸ್ಯದ ಜೀವನ, ಗ್ರಾಮೀಣ-ಕೃಷಿ ಬದುಕು, ಯುವಕರಲ್ಲಿ ಇರಬೇಕಾದ ವಿಶ್ವಾಸ, ಭರವಸೆಯ ಮೌಲ್ಯಗಳನ್ನು ಒಳಗೊಂಡಿದ್ದ ಚಿತ್ರ. ಸಮಾಜದಲ್ಲಿ ಅಪಾರ ಪ್ರಭಾವ ಬೀರಿದ ಅಪರೂಪದ ಸಿನಿಮಾಗಳಲ್ಲಿ ಒಂದು. ಹಲವು ದಾಖಲೆಗಳನ್ನು ಬರೆದ ಈ ಚಿತ್ರ ಇಂದಿಗೂ ಕನ್ನಡದ ಶ್ರೇಷ್ಠ ಸಿನಿಮಾಗಳ ಸಾಲಿನಲ್ಲಿದೆ. ಭಾರತಿ, ಬಾಲಕೃಷ್ಣ, ದ್ವಾರಕೀಶ್, ಎಂ.ಪಿ.ಶಂಕರ್ ಮುಂತಾದವರು ತಾರಾಗಣದಲ್ಲಿದ್ದರು.

15 ಗಂಧದ ಗುಡಿ
ಚಿತ್ರ ಬಿಡುಗಡೆಯಾದ ವರ್ಷ: 1973
ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ದಶಕಗಳಿಂದ ಇರುವ ಜ್ವಲಂತ ಸಮಸ್ಯೆ ಅರೋಣ್ಯೋತ್ಪನ್ನಗಳ ಕಳ್ಳ ಸಾಗಣೆ .ಈ ವಿಷಯದ ಮೇಲೆ ಬೆಳಕು ಚೆಲ್ಲುವ ಚಿತ್ರ 'ಗಂಧದ ಗುಡಿ'. ಅರಣ್ಯಾಧಿಕಾರಿಯ ಪಾತ್ರದಲ್ಲಿ ರಾಜಕುಮಾರ್ ಕಾಣಿಸಿಕೊಳ್ಳುತ್ತಾರೆ. ಮೊದಲ ಬಾರಿ ರಾಜ್ಕುಮಾರ್ ಜೊತೆ ವಿಷ್ಣುವರ್ಧನ್ ನಟಿಸಿದ್ದರು. ಈ ಚಿತ್ರದ ʼನಾವಾಡುವ ನುಡಿಯೇ ಕನ್ನಡ ನುಡಿ…ʼ, ʼಅರೇರೇ ಗಿಣಿರಾಮಾ..ʼ ಹಾಗೂ ʼಎಲ್ಲೂ ಹೋಗಲ್ಲಾ ಮಾಮಾ…ʼ ಇಂದಿನ ಪೀಳಿಗೆಯವರಿಗೂ ಅಚ್ಚು-ಮೆಚ್ಚಿನ ಹಾಡಾಗಿವೆ.
16. ಸಂಪತ್ತಿಗೆ ಸವಾಲ್
ಚಿತ್ರ ಬಿಡುಗಡೆಯಾದ ವರ್ಷ: 1974
ರಾಜ್ಕುಮಾರ್ ತಮ್ಮ ಚಿತ್ರಕ್ಕೆ ತಾವೇ ಹಾಡು ಹಾಡಿದ ಮೊದಲ ಚಿತ್ರ 'ಸಂಪತ್ತಿಗೆ ಸವಾಲ್'. “ಯಾರೇ ಕೂಗಾಡಲಿ… ಊರೇ ಹೋರಾಡಲಿ…” ಎಂದು ರಾಜ್ ಎಮ್ಮೆ ಮೇಲೆ ಕೂತು ಹಾಡಿದ ಹಾಡು ಇಂದಿಗೂ ಅತ್ಯಂತ ಜನಪ್ರಿಯ ಗೀತೆ. ಸಾಮಾನ್ಯ ಯುವಕನೊಬ್ಬ ಹಣದ ಮದದಿಂದ ಕೊಬ್ಬಿದ ಜಮೀನ್ದಾರನ ವಿರುದ್ಧ ಬಂಡೆದ್ದು ತಮ್ಮ ಹಕ್ಕುಗಳಿಗೆ ಹೋರಾಡುತ್ತಾನೆ. ಜಮೀನ್ದಾರನ ಮಗಳನ್ನು ಪ್ರೇಮಿಸಿ ಅವಳ ಸೊಕ್ಕಿಳಿಸುತ್ತಾನೆ. ಈ ಚಿತ್ರ ಉತ್ತರ ಕರ್ನಾಟಕದ ಪಿ.ಬಿ.ಧತ್ತುರಗಿಯವರ ಜನಪ್ರಿಯ ರಂಗನಾಟಕ ಆಧರಿಸಿದ ಸಿನಿಮಾ. ಬಿಡುಗಡೆಯಾದ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಹಲವೆಡೆ 100 ದಿನಗಳ ಪ್ರದರ್ಶನ ಕಂಡಿತ್ತು.
17 ಭಕ್ತ ಕುಂಬಾರ
ಚಿತ್ರ ಬಿಡುಗಡೆಯಾದ ವರ್ಷ: 1974
'ಭಕ್ತ ಕುಂಬಾರ' ಭಕ್ತಿ ಪರಂಪರೆಯನ್ನು ಮತ್ತು ಪಂಡರಾಪುರ ವಿಠ್ಠಲನ ಭಕ್ತನ ಪ್ರೇಮವನ್ನು ಹಾಗೂ ಭಕ್ತ-ಪರಮಾತ್ಮನ ಸಂಬಂಧಗಳನ್ನು ಕಟ್ಟಿ ಕೊಟ್ಟ ಚಿತ್ರ. ಭಕ್ತ ಕುಂಬಾರನು ಮಣ್ಣು ತುಳಿಯುತ್ತಿದ್ದಾಗ ತನ್ನ ಮಗು ಕಾಲಿಗೆ ಸಿಲುಕಿ ಕೆಸರಲ್ಲಿ ಹೂತುಹೋದರೂ ಅದು ಅರಿವಿಗೆ ಬಾರದಷ್ಟು ದೇವರ ಧ್ಯಾನದಲ್ಲಿರುತ್ತಾನೆ. ಮುಂದೆ ನಡೆಯುವ ಕಥೆ ಭಕ್ತ ಮತ್ತು ಪರಮಾತ್ಮನ ಸಂಬಂಧವನ್ನು ಚಿತ್ರಿಸುತ್ತದೆ. ʼಎಲ್ಲಿ ಮರೆಯಾದೇ ವಿಠಲ...ʼ ಹಾಡು ಅಪಾರ ಜನರ ಮನಸ್ಸು ಸೆಳೆದಿತ್ತು.
18 ಮಯೂರ
ಚಿತ್ರ ಬಿಡುಗಡೆಯಾದ ವರ್ಷ: 1975
“ಕನ್ನಡಿಗರು ಸ್ವಾಭಿಮಾನಿಗಳು, ಕೆಚ್ಚೆದೆಯ ಕಲಿಗಳು, ಮಹಾ ಸಾಹಸಿಗಳು, ಸ್ವಾತಂತ್ರ್ಯ ಪ್ರಿಯರು, ಎಲ್ಲಕ್ಕೂ ಹೆಚ್ಚಾಗಿ ಕ್ಷಮಾಶೀಲರು, ಸ್ನೇಹಪರರು ಎಂಬುದನ್ನು ಪ್ರತ್ಯಕ್ಷ ಪ್ರಮಾಣವಾಗಿ ತೋರಿಸುವ ಇತಿಹಾಸ ಪ್ರಸಿದ್ಧ ಪುರುಷನ ಕಥೆ” ಎಂಬ ಈ ಚಿತ್ರದ ಜಾಹೀರಾತು ಕನ್ನಡಿಗರನ್ನು ಚಿತ್ರದತ್ತ ಸೆಳೆದಿತ್ತು. ʼಮಯೂರ ವರ್ಮನʼ ಪಾತ್ರದಲ್ಲಿ ರಾಜ್ಕುಮಾರ್ ಆವೇಶ, ಆಕ್ರೋಶದ ಅಭಿನಯ ಸಿನಿರಸಿಕರನ್ನು ಚಿತ್ರಮಂದಿರಕ್ಕೆ ಎಳೆದು ತಂದಿತ್ತು. ಚಿತ್ರದ ʼನಾನಿರುವುದೆ ನಿಮಗಾಗಿ…ʼ ಹಾಡು ಗೋಕಾಕ್ ಚಳವಳಿ ಸಂದರ್ಭದಲ್ಲಿ ಜನರ ಜೊತೆ ನಾನಿರುವೆ ಎಂದು ಹೇಳಲು ನೆರವಾಗಿತ್ತು.

19 ಬಬ್ರುವಾಹನ
ಚಿತ್ರ ಬಿಡುಗಡೆಯಾದ ವರ್ಷ: 1977
ಬಬ್ರುವಾಹನ, ಅರ್ಜುನನ ಮಗ. ಅರ್ಜುನ ಬಬ್ರುವಾಹನನ ವಿರುದ್ಧ ಯುದ್ಧ ಮಾಡುತ್ತಾನೆ. ಯುದ್ಧದಲ್ಲಿ, ಅವರಿಬ್ಬರ ಮಧ್ಯೆ ನಡೆಯುವ ಸಂಭಾಷಣೆ “ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ, ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ…” ಚಿತ್ರದ ಪ್ರಮುಖ ಆಕರ್ಷಣೆ. ಎಲ್ಲ ಚಿತ್ರಗಳು ಹಾಡಿನಿಂದ ಸದ್ದು ಮಾಡಿದರೆ ಈ ಚಿತ್ರದ ಸಂಭಾಷಣೆ ಇಂದಿಗೂ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ರಾಜ್ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
20 ಶಂಕರ್-ಗುರು
ಚಿತ್ರ ಬಿಡುಗಡೆಯಾದ ವರ್ಷ: 1978
ಡಾ.ರಾಜ್ಕುಮಾರ್ ಈ ಚಿತ್ರದಲ್ಲಿ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನಿಂದ ದೂರಾಗುವ ನಾಯಕಿ, ನಂತರ ತಾಯಿಗೆ ಗೊತ್ತಿಲ್ಲದೆ ಬೇರೆ ಕುಟುಂಬ ಸೇರುವ ಇನ್ನೊಂದು ಮಗು. ತಂದೆ ಹುಡುಕಾಟದಲ್ಲಿ ಕುಟುಂಬವೆಲ್ಲಾ ಒಂದಾಗುವ ಒಂದು ಕೌಟುಂಬಿಕ ಸಿನಿಮಾ. ʼಲವ್ ಮಿ ಆರ್ ಹೇಟ್ ಮಿʼ, ʼನಾ ಬೆಂಕಿಯಂತೆ…ʼ ಚಿತ್ರದ ಗೀತೆಗಳು ಇಂದಿಗೂ ಜನಪ್ರಿಯ.
21 ಆಪರೇಷನ್ ಡೈಮಂಡ್ ರಾಕೆಟ್
ಬಿಡುಗಡೆಯಾದ ವರ್ಷ: 1978
ಬಾಂಡ್ ಸರಣಿಯ ಮೊದಲ ಕಲರ್ ಚಿತ್ರ. ಈ ಚಿತ್ರದಲ್ಲಿ ರಾಜ್ಕುಮಾರ್ ʼಪ್ರಕಾಶ್ ಸಿ.ಐ.ಡಿ ಏಜೆಂಟ್ 999ʼ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದ ನಂತರ ರಾಜಕುಮಾರ್ ಅವರನ್ನು ಜನ ಈ ರೀತಿ ನೋಡಲು ಇಷ್ಟವಿಲ್ಲ ಎಂಬ ಕೆಲ ಅಭಿಪ್ರಾಯಗಳು ಬಂದಿದ್ದವು. ಮುಂದಿನ ಚಿತ್ರಗಳಲ್ಲಿ ದ್ವಿಪಾತ್ರ ಇರುವ ಚಿತ್ರಗಳನ್ನು ನಿರ್ಮಿಸಲು ದಾರಿಯಾಯಿತು. ರಾಜ್ ಅಭಿನಯದ ಬಾಂಡ್ ಸರಣಿ ಚಿತ್ರಗಳಲ್ಲಿ ಈ ಚಿತ್ರವು ಕೊನೆಯದು. ಚಿತ್ರದ ಬಹುಭಾಗ ನೇಪಾಳದಲ್ಲಿ ಚಿತ್ರೀಕರಿಸಿರುವುದು ವಿಶೇಷ. ಮೊದಲ ಬಾರಿಗೆ ರಾಜ್ ಕುಮಾರ್ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹಾಡಿದ ಹಾಡಿದೆ.
22 ಚಲಿಸುವ ಮೋಡಗಳು
ಚಿತ್ರ ಬಿಡುಗಡೆಯಾದ ವರ್ಷ: 1982
ಈ ಚಿತ್ರದಲ್ಲಿ ರಾಜ್ಕುಮಾರ್ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ರಾಜ್ಕುಮಾರ್, ಸರಿತಾ ಹಾಗೂ ಅಂಬಿಕಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರಣಾಂತರಗಳಿಂದ ಪ್ರೀತಿಸಿದವಳಿಂದ ದೂರವಾಗುವ ನಾಯಕ ಸರಿತಾರನ್ನು ಮದುವೆಯಾಗುತ್ತಾರೆ. ವಕೀಲ ವೃತ್ತಿಯಾರಂಭಿಸುತ್ತಾರೆ. ತಮ್ಮ ಪ್ರೇಯಸಿಯೇ ಕೊಲೆಗಾರ್ತಿಯಾಗಿ ಎದುರು ಬಂದಾಗ ಆ ಪ್ರಕರಣದ ಸತ್ಯ ಹೊರಗೆಳೆಯುತ್ತಾನೆ ನಾಯಕ. ಇದು ಚಿತ್ರದ ಕಥೆ. ʼಜೇನಿನ ಹೊಳೆಯೋ', ʼಕಾಣದಂತೆ ಮಾಯವಾದನೋ…ʼ, ʼಚಂದಿರ ತಂದಾ…ʼ ಹಾಡುಗಳು ಇಂದಿಗೂ ಜನಪ್ರಿಯ ಹಾಡುಗಳಾಗಿವೆ.
23 ಕವಿರತ್ನ ಕಾಳಿದಾಸ
ಚಿತ್ರ ಬಿಡಿಗಡೆಯಾದ ವರ್ಷ: 1983
1963ರಲ್ಲಿ 25 ವಾರಗಳ ಯಶಸ್ವಿ ಪ್ರದರ್ಶನ ಕಂಡ ಏಕೈಕ ಚಿತ್ರ ಇದಾಗಿತ್ತು. ಕಾವ್ಯಾತ್ಮಕ ನಿರೂಪಣೆಗೆ ಚಿತ್ರ ಹೆಸರಾಗಿದೆ. ಪೆದ್ದ ಕುರುಬನಾಗಿ ಹಾಸ್ಯದ ಶೈಲಿ, ಕಾಳಿದಾಸನಾಗಿ ಪಂಡಿತನ ಗಾಂಭೀರ್ಯ ಹಾಗೂ ದುಷ್ಯಂತನ ಪಾತ್ರದಲ್ಲಿ ಸುಂದರವಾಗಿ ರಾಜ್ಕುಮಾರ್ರನ್ನು ನೋಡಬಹುದು. ಈ ಚಿತ್ರ ಅವರ ಬದುಕಿಗೆ ಮತ್ತೊಂದು ಮೈಲಿಗಲ್ಲಾಗಿತ್ತು. ಚಿತ್ರದ ʼಬೆಳ್ಳಿ ಮೂಡಿತೋ… ಕೋಳಿ ಕೂಗಿತೋʼ, ʼಓ ಪ್ರಿಯತಮಾ…ʼ, ʼಸದಾ ಕಣ್ಣಲಿ…ʼ ಹಾಡುಗಳು ಇಂದಿಗೂ ಜನರನ್ನು ಆಕರ್ಷಿಸುತ್ತಿವೆ.

24 ಹೊಸಬೆಳಕು
ಚಿತ್ರ ಬಿಡುಗಡೆಯಾದ ವರ್ಷ: 1985
ವಾಣಿಯವರ ಕಾದಂಬರಿಯಾಧರಿತ ಚಿತ್ರ 'ಹೊಸ ಬೆಳಕು'. ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಯಜಮಾನನ ಮಗಳನ್ನು ತ್ಯಜಿಸಿ, ತನ್ನ ಅಕ್ಕನ ಮನೆಯಲ್ಲಿ ಕಷ್ಟಗಳಿಂದ ತೊಳಲಾಡುತ್ತಿರುವ ಆಕೆಯ ಮಲಮಗಳನ್ನು ಮದುವೆಯಾಗುವ ತ್ಯಾಗಕೇಂದ್ರಿತ ಚಿತ್ರ. ಈ ಚಿತ್ರದ ಎಲ್ಲಾ ಹಾಡುಗಳು ಇಂದಿಗೂ ಜಯಪ್ರಿಯವಾಗಿವೆ. ʼತೆರೆದಿದೆ ಮನೆ…ʼ, ʼಕಣ್ಣೀರ ಧಾರೆ ಇದೇಕೆ..ʼ, ʼಚೆಲುವೆಯೇ ನಿನ್ನ ನೋಡಲು…ʼ ಚಿತ್ರಗೀತೆಗಳನ್ನು ಇಂದಿಗೂ ಜನ ಗುನುಗುತ್ತಾರೆ.
25 ಜೀವನ ಚೈತ್ರ
ಚಿತ್ರ ಬಿಡುಗಡೆಯಾದ ವರ್ಷ: 1992
ವಿಶಾಲಾಕ್ಷಿ ದಕ್ಷಿಣಾ ಮೂರ್ತಿಯವರ ಜೀವನ ಚೈತ್ರ ಕಾದಂಬರಿಯಾಧಾರಿತ ಚಿತ್ರವಿದು. ಇದು ಒಂದು ಸಾಮಾಜಿಕ ಚಿತ್ರವಾಗಿದೆ. ಮದ್ಯಪಾನದ ವಿರುದ್ಧ ಹೋರಾಡುವ ಪಾತ್ರದಲ್ಲಿ ರಾಜ್ಕುಮಾರ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪರಿಣಾಮವಾಗಿ ಕರ್ನಾಟಕದ ಹಳ್ಳಿ-ಹಳ್ಳಿಗಳಲ್ಲಿ ಮದ್ಯದಂಗಡಿ ವಿರುದ್ಧ ಪ್ರತಿಭಟನೆಗಳು ನಡೆದವು. ಕೆಲವು ಹಳ್ಳಿಗಳಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಿಸಲಾಯಿತು. ಈ ಚಿತ್ರದ ʼನಾದಮಯಾ…ʼ ಹಾಡಿಗೆ ರಾಜ್ಕುಮಾರ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಈ ಚಿತ್ರ ರಾಜ್ಯದಲ್ಲಿ ನಾಲ್ಕು ಪ್ರಶಸ್ತಿಗಳನ್ನು ಪಡೆದಿತ್ತು.
