ನನ್ನ ದೇವರು, ನನ್ನ ಭಕ್ತಿ, ನನ್ನ ಹಕ್ಕು: ವೈರಲ್‌ ಆದ ನಟ ಕಿಶೋರ್ ಪೋಸ್ಟ್‌

Actor Kishore
  • ಲೀನಾ ಮಣಿಮೇಕಲೈ ಚಿತ್ರದ ವಿವಾದ ಹಿನ್ನೆಲೆಯಲ್ಲಿ ಗಮನಸೆಳೆದ ಪೋಸ್ಟ್‌
  • ಬ್ರಾಹ್ಮಣ ದೇವರ ಕಲ್ಪನೆ ಹೇರುವ ಪ್ರಯತ್ನ ನಡೆಯುತ್ತಿದೆ ಎಂದ ನಟ

"ನನ್ನ ದೇವರು, ನನ್ನ ಭಕ್ತಿ, ನನ್ನ ನೈವೇದ್ಯೆಗಳು ನನ್ನ ಹಕ್ಕು, ನನ್ನ ಸ್ವಾತಂತ್ರ್ಯ. ಅದು ನನ್ನ ನಾಡಿನ ಸೌಂದರ್ಯ, ನನ್ನ ನಾಡಿನ ಶಕ್ತಿ. ಯಾರಿಗೂ ಅದನ್ನು ನಿರ್ದೇಶಿಸುವ, ರಾಜಕೀಯವಾಗಿಸುವ ಹಕ್ಕಿಲ್ಲ'' ಎಂದು  ಅಭಿಪ್ರಾಯ ಹಂಚಿಕೊಂಡ ನಟ ಕಿಶೋರ್ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಈಗ ವೈರಲ್‌ ಆಗಿದೆ.

ಡಾ. ರಾಜ್‌ ಕುಮಾರ್‌ ಅವರು ಅಭಿನಯಿಸಿದ ಬೇಡರ ಕಣ್ಣಪ್ಪ ಚಿತ್ರದೊಂದಿಗೆ ಹಂಚಿಕೊಳ್ಳಲಾದ ಈ ಸಾಲುಗಳಲ್ಲಿ ಎಲ್ಲೂ ಲೀನಾ ಅವರ ಹೆಸರಾಗಲಿ, ಕಾಳಿ ಚಿತ್ರದ ಪ್ರಸ್ತಾಪವಾಗಲಿ ಇಲ್ಲವಾದರೂ, ವಿವಾದದ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.

ತಮಿಳು ನಿರ್ದೇಶಕಿ ಲೀನಾ ಮಣಿಮೇಕಲೈ ಅವರು ನಿರ್ದೇಶಿಸಿರುವ ಕಾಳಿ ಚಿತ್ರದ ಪೋಸ್ಟರ್‌ ಇತ್ತೀಚೆಗೆ ವಿವಾದಕ್ಕೆ ಕಾರಣವಾಯಿತು. ಪೋಸ್ಟರ್‌ನಲ್ಲಿ ಕಾಳಿ ದೇವಿಯ ಪಾತ್ರಧಾರಿ ಧೂಮಪಾನ ಮಾಡುತ್ತಿರುವುದನ್ನು ಚಿತ್ರಿಸಲಾಗಿತ್ತು. ಇದು ಹಿಂದು ಸಂಘಟನೆಗಳ ಕೆಂಗಣ್ಣಿಗೆ  ಗುರಿಯಾಯಿತು.  ಪೋಸ್ಟರ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಆದರೆ ಲೀನಾ ಅವರ ಪರ ಅನೇಕರು ದನಿ ಎತ್ತಿದ್ದು, ಸ್ವತಃ ಲೀನಾ ತಮ್ಮ ಕಲ್ಪನೆಯನ್ನು ಸಮರ್ಥಿಸಿಕೊಂಡಿದ್ದಾರೆ.  ಕಾಕತಾಳೀಯವೆಂಬಂತೆ ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟ, ಇನ್‌ಸ್ಟಾಗ್ರಾಮ್‌ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಈಗ ವೈರಲ್‌ ಆಗಿದೆ.

ಈ ಸುದ್ದಿ ಓದಿದ್ದೀರಾ? | ರಾಜ್ಯಸಭಾ ನೇಮಕ | ಸಾಧಕರ ಸಾಧನೆಯ ಹೊರತಾಗಿಯೂ ಚರ್ಚೆಗೆ ಈಡಾದ ಬಿಜೆಪಿಯ ರಾಜಕೀಯ ತಂತ್ರಗಾರಿಕೆ

ಕಿಶೋರ್‌ ತಮ್ಮ ಈ ಪೋಸ್ಟನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತತ್ವಜ್ಞಾನಿ, ಚಿಂತಕ ಜಿಡ್ಡು ಕೃಷ್ಣಮೂರ್ತಿಯವರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಜಿಡ್ಡು ಕೃಷ್ಣಮೂರ್ತಿ ಈ ವಿಡಿಯೋದಲ್ಲಿ, "ನಾನು ಏನು ಮಾಡಬೇಕೆಂದು ಹೇಳಲು ಯಾರಿಗಾದರೂ ಯಾವ ಹಕ್ಕಿದೆ?" ಎಂದು ಪ್ರಶ್ನಿಸುತ್ತಾರೆ. ಜೊತೆಗೆ ಧಾರ್ಮಿಕ ಮಾರ್ಗದರ್ಶನ ಎಂಬುದು ತಪ್ಪು ಎಂದು ಹೇಳಿದ್ದಾರೆ.

Image
Kaali Poster
ಲೀನಾ ಮಣಿಮೇಕಲೈ ನಿರ್ದೇಶನದ ಕಾಳಿ ಚಿತ್ರದ ಪೋಸ್ಟರ್‌

ಈ ಪೋಸ್ಟ್‌ ಹಿನ್ನೆಲೆಯಲ್ಲಿ ಈ ದಿನ.ಕಾಮ್‌ ನಟ ಕಿಶೋರ್‌ ಅವರೊಂದಿಗೆ ಮಾತನಾಡಿದಾಗ, "ಕಾಳಿ ಚಿತ್ರದ ವಿವಾದ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ಮಹುವಾ ಮೊಯಿತ್ರಾ ಅವರ ಟ್ವಿಟರ್‌ ಚರ್ಚೆಯನ್ನು ಗಮನಿಸಿ ಪ್ರತಿಕ್ರಿಯಿಸಿದ್ದೆ. ಮೊಯಿತ್ರಾ ಅವರು, ಬ್ರಾಹ್ಮಣ ದೇವರ ಕಲ್ಪನೆಯನ್ನು ನಮ್ಮ ಮೇಲೆ ಹೇರಲಾಗ್ತಾ ಇದೆ. ದೇವರು ಮಾಂಸಾಹಾರಿಯಲ್ಲ ಅಂತಾರೆ. ನಾವು ಏನು ತಿನ್ನುತ್ತೇವೋ ಅದನ್ನೇ ಅಲ್ಲವೆ ದೇವರಿಗೆ ಕೊಡೋದು? ಎಂಬ ಪ್ರಶ್ನೆಯನ್ನು ಎತ್ತಿದ್ದರು. ಅದು ನನಗೆ ಸರಿ ಅನ್ನಿಸಿತು, ಆ ಹಿನ್ನೆಲೆಯಲ್ಲಿ ನಾನು ಆ ಪೋಸ್ಟ್‌ ಹಂಚಿಕೊಂಡಿದ್ದೆ" ಎಂದು ಕಿಶೋರ್‌ ವಿವರಿಸಿದರು.

ಮುಂದುವರಿದು ಮಾತನಾಡಿದ ನಟ ಕಿಶೋರ್‌, "ನಮ್ಮಲ್ಲಿ ಅದೆಷ್ಟು ದೇವರಿಗೆ ಸಾರಾಯಿಯನ್ನು ನೈವೇದ್ಯವಾಗಿ ನೀಡುವುದಿಲ್ಲ? ನನ್ನ ದೇವರಿಗೆ ನಾನೇನು ಕೊಡುತ್ತೇನೆ ಎನ್ನುವುದು ನನ್ನ ಹಕ್ಕು, ಅದನ್ನು ಯಾರಾದರೂ ಏಕೆ ನಿರ್ದೇಶಿಸಬೇಕು?" ಎಂದು ಪ್ರಶ್ನಿಸಿದರು.

ನಿಮಗೆ ಏನು ಅನ್ನಿಸ್ತು?
21 ವೋಟ್