ಡಾಲಿ ಧನಂಜಯ ನಿರ್ಮಾಣದ ʻಟಗರು ಪಲ್ಯʼ ಚಿತ್ರಕ್ಕೆ ನಾಗಭೂಷಣ್‌ ನಾಯಕ

tagaru palya
  • ಸದ್ಯದಲ್ಲೇ ಸೆಟ್ಟೇರಲಿದೆ ಧನಂಜಯ ನಿರ್ಮಾಣದ 3ನೇ ಚಿತ್ರ
  • ಡಿಸೆಂಬರ್‌ ಮೊದಲ ವಾರದಲ್ಲಿ ಸೆಟ್ಟೇರಲಿದೆ ʼಟಗರು ಪಲ್ಯʼ

ವಿಭಿನ್ನ ಪಾತ್ರಗಳನ್ನು ನಿಭಾಯಿಸುವ ಮೂಲಕ ʼನಟ ರಾಕ್ಷಸʼ ಎಂದೇ ಜನಪ್ರಿಯತೆ ಗಳಿಸಿರುವ ಡಾಲಿ ಧನಂಜಯ, 'ಬಡವ ರಾಸ್ಕಲ್‌' ಮತ್ತು 'ಹೆಡ್‌ ಬುಷ್‌' ಚಿತ್ರಗಳಿಗೆ ಬಂಡವಾಳ ಹೂಡಿ ಯಶಸ್ವಿ ನಿರ್ಮಾಪಕ ಎನ್ನಿಸಿಕೊಂಡಿದ್ದಾರೆ. 'ಹೊಯ್ಸಳ', 'ಪುಷ್ಪ-2', 'ಉತ್ತರಕಾಂಡ' ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಧನಂಜಯ 'ಹೆಡ್‌ ಬುಷ್‌' ಚಿತ್ರದ ಪ್ರಿ ರಿಲೀಸ್‌ ಕಾರ್ಯಕ್ರಮದಲ್ಲಿ ತಮ್ಮ ʼಡಾಲಿ ಪಿಕ್ಚರ್ಸ್‌ʼ ಬ್ಯಾನರ್‌ನಡಿಯಲ್ಲಿ ʼಟಗರು ಪಲ್ಯʼ ಚಿತ್ರವನ್ನು ಘೋಷಿಸಿದ್ದರು.

ಈ ಚಿತ್ರಕ್ಕೆ ಯುವ ನಿರ್ದೇಶಕ ಉಮೇಶ್‌ ಕೆ ಕೃಪ ಆಕ್ಷನ್‌ ಕಟ್‌ ಹೇಳಲಿದ್ದಾರೆ ಎಂಬುದು ಅಂದೇ ಬಹಿರಂಗವಾಗಿತ್ತು. ಆದರೆ, ʼಟಗರು ಪಲ್ಯʼ ಚಿತ್ರದ ನಾಯಕ ಯಾರು ಎಂಬುದನ್ನು ಮಾತ್ರ ಚಿತ್ರತಂಡ ಬಹಿರಂಗಪಡಿಸಿರಲಿಲ್ಲ. ಇದೀಗ ನಾಯಕ ಮತ್ತು ತಾರಾಬಳಗದ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿದೆ.

Eedina App

ಶಿವರಾಜ್‌ ಕುಮಾರ್‌ ಮತ್ತು ದುನಿಯಾ ಸೂರಿ ಕಾಂಬಿನೇಶನ್‌ನ ʼಟಗರುʼ ಚಿತ್ರದಲ್ಲಿ ʼಡಾಲಿʼ ಪಾತ್ರವನ್ನು ನಿಭಾಯಿಸುವ ಮೂಲಕ ಸಿನಿ ರಸಿಕರ ಮೆಚ್ಚುಗೆ ಗಳಿಸಿದ ಧನಂಜಯ, ನಂತರದ ದಿನಗಳಲ್ಲಿ ʼಡಾಲಿ ಧನಂಜಯʼ ಎಂದೇ ಖ್ಯಾತಿ ಗಳಿಸಿದರು. ʼಡಾಲಿʼ ಪಾತ್ರ ಅವರ ವೃತ್ತಿ ಬದುಕಿಗೆ ಮಹತ್ತರ ತಿರುವು ನೀಡಿದ ಕಾರಣಕ್ಕೆ ʼಡಾಲಿ ಪಿಕ್ಚರ್ಸ್‌ʼ ಹೆಸರಿನ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ ಅವರು ವರ್ಷಕ್ಕೆ ಎರಡು ಸಿನಿಮಾಗಳನ್ನು ನಿರ್ಮಿಸುವುದಾಗಿ, ಆ ಪೈಕಿ ಒಂದು ಚಿತ್ರವನ್ನು ಯುವ ಪ್ರತಿಭೆಗಳಿಗೆ ಮೀಸಲಿಡುವುದಾಗಿ ತಮ್ಮ ಹುಟ್ಟು ಹಬ್ಬದಂದು ಘೋಷಿಸಿದ್ದರು. ಅದರಂತೆ ಇತ್ತೀಚೆಗೆ ʼಟಗರು ಪಲ್ಯʼ ಚಿತ್ರವನ್ನು ಘೋಷಿಸಿದ್ದ ಧನಂಜಯ, ತಮ್ಮ ಆಪ್ತ ನಾಗಭೂಷಣ್‌ ಅವರಿಗೆ ಅವಕಾಶ ನೀಡಿದ್ದಾರೆ.

‘ಟಗರು ಪಲ್ಯ’ ಮೂಲಕ ಹೊಸ ಪ್ರತಿಭೆಗಳಿಗೆ ʼಡಾಲಿ ಪಿಕ್ಚರ್ಸ್ʼ ವೇದಿಕೆ ಮಾಡಿಕೊಟ್ಟಿದೆ. ಚಿತ್ರದಲ್ಲಿ ನಾಗಭೂಷಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಮೂಲಕ ಉಮೇಶ್ ಕೆ ಕೃಪ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಯೋಗರಾಜ್ ಭಟ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಉಮೇಶ್‌ ಅವರಿಗಿದೆ. " 'ಟಗರು ಪಲ್ಯ' ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಚಿತ್ರಕಥೆಗೆ ಸಂಬಂಧಿಸಿದ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ" ಎಂದು ನಿರ್ದೇಶಕ ಉಮೇಶ್ ಕೆ ಕೃಪ ತಿಳಿಸಿದ್ದಾರೆ. 

AV Eye Hospital ad

ಈ ಸುದ್ದಿ ಓದಿದ್ದೀರಾ? ಯುವರಾಜ್‌ ಕುಮಾರ್‌ ಚೊಚ್ಚಲ ಸಿನಿಮಾ ಆಡಿಷನ್‌ ಶುರು; ಯುವ ಪ್ರತಿಭೆಗಳಿಗೆ ಅವಕಾಶ

ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್ ಕೆ ರಾವ್ ಛಾಯಾಗ್ರಹಣ, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಿತ್ರಕ್ಕೆ ನಾಯಕಿ ಯಾರೆಂಬುದು ಸದ್ಯದಲ್ಲೇ ರಿವೀಲ್ ಆಗಲಿದ್ದು, ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಒಳಗೊಂಡ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app