ಈ ಸಿನಿಮಾ | ಹುಟ್ಟೂರು ನೆನಪಿಸುವ ಅಪರೂಪದ ʻಡೊಳ್ಳುʼ

ಡೊಳ್ಳು ಅಳಿವಿನಂಚಿನಲ್ಲಿರುವ ಎಲ್ಲ ಜನಪದ ಕಲೆಗಳ ಪ್ರತಿನಿಧಿ ಎಂದರೆ ತಪ್ಪಾಗಲಾರದು. ಬದುಕು ಕಟ್ಟಿಕೊಳ್ಳುವ ಹಂಬಲದಲ್ಲಿ ಊರು ಬಿಟ್ಟು ಬೆಂಗಳೂರು ಸೇರಿದ ಪ್ರತಿಯೊಬ್ಬರ ಕತೆ ಇದು.
dollu movie

ಚಿತ್ರ: ಡೊಳ್ಳು | ನಿರ್ದೇಶನ: ಸಾಗರ್‌ ಪುರಾಣಿಕ್‌ | ತಾರಾಗಣ: ಕಾರ್ತಿಕ್‌ ಮಹೇಶ್‌, ನಿಧಿ ಹೆಗ್ಡೆ, ಚಂದ್ರ ಮಯೂರ ಬಾಬು ಹಿರಣ್ಣಯ್ಯ | ಭಾಷೆ: ಕನ್ನಡ | ಸಂಗೀತ ನಿರ್ದೇಶನ : ಅನಂತ್‌ ಕಾಮತ್‌ | ನಿರ್ಮಾಪಕ : ಪವನ್‌ ಒಡೆಯರ್‌, ಅಪೇಕ್ಷಾ ಪುರೋಹಿತ್‌ |

ʼರಿಂಗ್‌ ರೋಡ್‌ ಸುಮಾʼ, ʼಮಹಾನ್‌ ಹುತಾತ್ಮʼ, ಕಿರುಚಿತ್ರಗಳ ಮೂಲಕ ಕನ್ನಡಿಗರ ಗಮನ ಸೆಳೆದಿದ್ದ ಯುವ ನಿರ್ದೇಶಕ ಸಾಗರ್‌ ಪುರಾಣಿಕ್‌ ಇದೀಗ ಪೂರ್ಣ ಪ್ರಮಾಣದ 'ಡೊಳ್ಳು' ಸಿನಿಮಾದ ಮೂಲಕ ಕನ್ನಡದ ಪ್ರೇಕ್ಷಕರನ್ನು ಎದುರುಗೊಂಡಿದ್ದಾರೆ. ಈ ಚಿತ್ರಕ್ಕೆ ಕನ್ನಡದ ಅತ್ಯತ್ತುಮ ಚಿತ್ರ ರಾಷ್ಟ್ರ ಪ್ರಶಸ್ತಿ ಲಭಿಸಿರುವುದು ಕೂಡ ಹೆಮ್ಮೆಯ ವಿಚಾರ.

ಅಳಿವಿನಂಚಿನಲ್ಲಿರುವ ಜನಪದ ಕಲೆ ʼಡೊಳ್ಳು ಕುಣಿತದʼ ಸುತ್ತ ಈ ಸಿನಿಮಾ ಮೂಡಿ ಬಂದಿದೆ. ಮಲೆನಾಡಿನ ಕುಗ್ರಾಮ. ತಲೆತಲಾಂತರಗಳಿಂದ ʼಮಹೇಶ್ವರʼನನ್ನು ಆರಾಧಿಸುತ್ತ ಬಂದಿರುವ ಆ ಊರಿನ ಜನತೆ. ವರ್ಷಕ್ಕೊಮ್ಮೆ ಡೊಳ್ಳು ಕುಣಿತದ ಮೂಲಕ ಮಹೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಶಿವನನ್ನು ಆರಾಧಿಸುತ್ತಾ ಕೃಷಿಯನ್ನೇ ನೆಚ್ಚಿಕೊಂಡು ಈ ಜಾನಪದ ಕಲೆಯನ್ನು ಜೀವಂತವಾಗಿರಿಸಿಕೊಂಡು ಬಂದಿರುವ ಹಿರಿಯರು. ಆದರೆ, ಬದಲಾದ ಕಾಲಘಟ್ಟದಲ್ಲಿ ಯುವ ಪೀಳಿಗೆಯ ಮುಂದಿರುವ ಸವಾಲುಗಳೇ ಬೇರೆ. ಚಿಕ್ಕಂದಿನಿಂದ ಆಸೆಪಟ್ಟು ಕಲಿತ ಡೊಳ್ಳು ಕುಣಿತ, ಜೀವನಾಡಿಯಾಗಿರುವ ಕೃಷಿ ಇದ್ಯಾವುದರಿಂದಲೂ ಬದುಕು ನಡೆಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಬೆಂಗಳೂರು ಸೇರುವ ಯುವಕರು. ಅನಾಥವಾಗುವ ಡೊಳ್ಳು ಕುಣಿತ. ಈ ಸಾಂಪ್ರದಾಯಿಕ ಕಲೆಯನ್ನು ಉಳಿಸಲು ಹೋರಾಡುವ ಕಥಾನಾಯಕ ಭದ್ರ. ಕೊನೆಗೆ ಕಟ್ಟುಪಾಡುಗಳನ್ನು ಮೀರಿ ಡೊಳ್ಳು ಕುಣಿತಕ್ಕೆ ಹೊಸ ಆಯಾಮ ನೀಡುತ್ತಾನೆ. ಡೊಳ್ಳು ಅಳಿವಿನಂಚಿನಲ್ಲಿರುವ ಎಲ್ಲ ಜನಪದ ಕಲೆಗಳ ಪ್ರತಿನಿಧಿ ಎಂದರೆ ತಪ್ಪಾಗಲಾರದು.

ಮಲೆನಾಡಿನ ಕುಗ್ರಾಮದಲ್ಲಿ ಶುರುವಾಗುವ ಡೊಳ್ಳಿನ ಕತೆ ಪ್ರತಿ ಹಳ್ಳಿಗಳ ಇಂದಿನ ವಾಸ್ತವವನ್ನು ತೆರೆದಿಡುತ್ತ ಸಾಗುತ್ತದೆ. ಒಂದು ಕಾಲಕ್ಕೆ ಕೃಷಿಯನ್ನು ನೆಚ್ಚಿಕೊಂಡು ನೆಮ್ಮದಿಯಾಗಿದ್ದ ಹಳ್ಳಿಯ ಜನ ಈಗ ಕೃಷಿಯಿಂದ ವಿಮುಖರಾಗಿ ಆಸೆ ಕಂಗಳಿಂದ ಪೇಟೆಯ ಹಾದಿ ಹಿಡಿಯುತ್ತಿರುವುದು, ಪೇಟೆಯಲ್ಲಿ ಅನಿವಾರ್ಯವಾಗಿ ಕೆಳ ದರ್ಜೆಯವರಂತೆ ಬದುಕು ಸಾಗಿಸುತ್ತಿರುವ ಶೋಚನೀಯ ಸ್ಥಿತಿಯನ್ನು ನಿರ್ದೇಶಕರು ಅತ್ಯಾಪ್ತವಾಗಿ ಕಟ್ಟಿಕೊಟ್ಟಿದ್ದಾರೆ.

ಭದ್ರನ ಪಾತ್ರದಲ್ಲಿ ಯುವನಟ ಮಹೇಶ್‌ ಜೀವಿಸಿದ್ದಾರೆ. ಭದ್ರನ ತಂದೆಯ ಪಾತ್ರ ನಿಭಾಯಿಸಿದ ಚಂದ್ರ ಮಯೂರ ನಟನೆ ಮೆಚ್ಚುವಂಥದ್ದು. ನಿಧಿ ಹೆಗ್ಡೆ ನಾಯಕಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೆಂಪ, ಸಿದ್ದ, ಭರತ ಸೇರಿದಂತೆ ಪ್ರತಿ ಪಾತ್ರಧಾರಿಗಳು ಆಪ್ತ ಎನ್ನಿಸುವಷ್ಟರ ಮಟ್ಟಿಗೆ ಅದ್ಭುತವಾಗಿ ನಟಿಸಿದ್ದಾರೆ. ಪೂಜಾರಿಯ ಪಾತ್ರಧಾರಿ ಬಾಬು ಹಿರಣ್ಣಯ್ಯ ನೆನಪಿನಲ್ಲಿ ಉಳಿಯುತ್ತಾರೆ.  

ಈ ಸಿನಿಮಾದ ಒಂದು ಸನ್ನಿವೇಶ ನನ್ನನ್ನು ಬಹುವಾಗಿ ಕಾಡಿತು. ಹುಟ್ಟೂರಲ್ಲಿ ಜೀವನ ನಡೆಸಲು ಸಾಧ್ಯವೇ ಇಲ್ಲ ಎಂದು ಬೆಂಗಳೂರು ಸೇರಿದ ಗೆಳೆಯರನ್ನು ವರ್ಷದ ಪೂಜೆಗಾಗಿ ಊರಿಗೆ ಕರೆದುಕೊಂಡು ಬರುತ್ತೇನೆಂದು ಅಪ್ಪನ ಎದುರು ಪಣ ತೊಟ್ಟು ಕಥಾನಾಯಕ ಭದ್ರ ಬೆಂಗಳೂರಿನ ಹಾದಿ ಹಿಡಿಯುತ್ತಾನೆ. ಆತನದ್ದು ವಿಫಲ ಪ್ರಯತ್ನ. ಆದರೆ, ಆ ಸನ್ನೀವೇಶದಲ್ಲಿ ಕಥಾನಾಯಕ ಭದ್ರ ಮತ್ತವನ ಸ್ನೇಹಿತ ಕೆಂಪನ ನಡುವೆ ನಡೆಯುವ ಸಂಭಾಷಣೆ ನೋಡುಗರನ್ನು ಯೋಚನೆಗೆ ಹಚ್ಚುತ್ತದೆ. "ಬೆಂಗಳೂರು ಚಕ್ರವ್ಯೂಹ ಇದ್ದ ಹಾಗೆ. ನಮ್ಮಂಥವರು ಹುಟ್ಟಿದ ಊರು ಬಿಟ್ಟು ಈ ಬೆಂಗಳೂರಿಗೆ ರಾಶಿ ರಾಶಿ ಕನಸುಗಳನ್ನು ಹೊತ್ತು ಬಂದಿಳಿಯುತ್ತೇವೆ. ಆಸೆ, ಕನಸುಗಳು ಕಮರಿ ಕೊನೆಗೆ ಅನಿವಾರ್ಯತೆಗಾಗಿ ನಾವು ಇಲ್ಲಿಯೇ ಉಳಿದು ಬಿಡುತ್ತೇವೆ" ಎಂದು ಟ್ಯಾಕ್ಸಿ ಓಡಿಸುತ್ತ ಕೆಂಪ ಭದ್ರನಿಗೆ ಹೇಳುವ ಮಾತಿದೆಯೆಲ್ಲ, ಈ ಮಾತನ್ನು ನನ್ನ ಬಾಲ್ಯದ ಗೆಳೆಯ ಯಲ್ಲಪ್ಪನಿಗೋ ಅಥವಾ ನನ್ನ ಒಡ ಹುಟ್ಟಿದ ಅಣ್ಣನಿಗೋ ನಾನೇ ಹೇಳಿದ ಹಾಗನ್ನಿಸಿತು.

ಡೊಳ್ಳು, ನನ್ನಂತೆ ಬದುಕು ಕಟ್ಟಿಕೊಳ್ಳುವ ಹಂಬಲದಲ್ಲಿ ಊರು ಬಿಟ್ಟು ಬೆಂಗಳೂರು ಸೇರಿದ ಪ್ರತಿಯೊಬ್ಬರ ಕತೆ. ಹಳ್ಳಿಯ ಪ್ರತಿಭಾವಂತ ಹುಡುಗರು ಅನಿವಾರ್ಯ ಕಾರಣಗಳಿಗೆ ಹುಟ್ಟೂರು ತೊರೆದು ಬೆಂಗಳೂರಿನಂತಹ ʼಮೆಟ್ರೊ ಸಿಟಿʼಗಳಲ್ಲಿ ʼಟ್ಯಾಕ್ಸಿʼ ಓಡಿಸಿಕೊಂಡು, ʼಸ್ವಿಗ್ಗಿʼ, ʼಝೋಮ್ಯಾಟೊʼಗಳಲ್ಲಿ ಡೆಲಿವರಿ ಬಾಯ್‌ಗಳಾಗಿ, ʼಸೆಕ್ಯುರಿಟಿ ಗಾರ್ಡ್‌ʼ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವವರ ಕರುಣಾಜನಕ ಕತೆ. ಮಹಾನಗರಗಳ ಮಲತಾಯಿ ಧೋರಣೆಯ ಜೊತೆ ಜೊತೆಗೆ ಇಲ್ಲಿನ ರಾಜಕೀಯ ಮತ್ತು ಸಾಮಾಜಿಕ ತಾರತಮ್ಯಗಳ ಬಗ್ಗೆ ತಣ್ಣಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ಸಾಗರ್‌. 

ಈ ಸಿನಿಮಾ ನಮ್ಮೂರಲ್ಲಿ ಭಜನೆ ಪದ ಕಟ್ಟುವ ಶಿವಲಿಂಗಣ್ಣ, ತಬಲ ಬಾರಿಸೋದ ಕಲಿಸಿದ ಮೇಲಿನೋಣಿಯ ನಿಂಗಣ್ಣ, ತಾಳ ಹಾಕೋದ್ರಲ್ಲಿ, ತಬಲ ಬಾರಿಸೋದ್ರಲ್ಲಿ ಎತ್ತಿದ ಕೈ ಎನ್ನಿಸಿಕೊಂಡಿದ್ದ ಹಟೇಲಿ, ಆಲಾಬಿ ಪದ ಹಾಡುವ ಹಜರೇಸಾಬ ಎಲ್ಲರನ್ನೂ ನೆನಪಿಸಿತು. ಬಾಲ್ಯದಲ್ಲಿ ಭಜನಾ ಮಂಡಳಿಯ ಭಾಗವಾಗಿದ್ದು, ತಡರಾತ್ರಿಯವರೆಗೂ ತಬಲ ಕಲಿಯುತ್ತಿದ್ದದ್ದು, ಹುಚ್ಚಂಗಿ ಯಲ್ಲವ್ವನಿಗೆ ಪ್ರತಿವರ್ಷ ವಿಶೇಷ ಪೂಜೆ ಸಲ್ಲಿಸಿ, ದಿನವಿಡೀ ಭಜನೆ ಮಾಡುತ್ತಿದ್ದ ದಿನಗಳು ನೆನಪಾಗಿ ಕಣ್ಣು ತುಂಬಿ ಬಂತು.

ಸಿನಿಮಾ ಮುಗಿದು ಹೊರ ನಡೆಯಬೇಕು ಎನ್ನುವ ಹೊತ್ತಿಗೆ ನಿರ್ದೇಶಕ ಸಾಗರ್‌ ಎದುರಾದರು. ಅವರನ್ನು ತಬ್ಬಿಕೊಂಡು ಧನ್ಯವಾದ ತಿಳಿಸಿ, ಬಾಲ್ಯದ ನೆನಪುಗಳನ್ನು ಹೊತ್ತು‌ ಭಾರವಾದ ಮನಸ್ಸಿನಿಂದ ಸಿನಿಮಾ ಹಾಲ್‌ನಿಂದ ಹೊರ ನಡೆದೆ.

ಸಾಧ್ಯವಾದರೆ 'ಡೊಳ್ಳು' ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ. 'ಆಫ್‌ ಬೀಟ್‌' ಸಿನಿಮಾ ಒಟಿಟಿಯಲ್ಲಿ ಬಂದಾಗ ನೋಡೋಣ ಎಂದುಕೊಂಡು ಸುಮ್ಮನಾಗಬೇಡಿ. ಇಂತಹ ಚಿತ್ರಗಳಿಗೆ ಜನರ ಪ್ರೋತ್ಸಾಹ ಅತ್ಯಗತ್ಯ. 

ಒಂದೊಳ್ಳೆಯ ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದ ಸಾಗರ್‌.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app