ಸಿಹಿ ಸುದ್ದಿ | ₹75ಗೆ ಮಲ್ಟಿಪ್ಲೆಕ್ಸ್‌‌ನಲ್ಲಿ ನೋಡಿ ನಿಮ್ಮ ಇಷ್ಟದ ಸಿನಿಮಾ!

multiplex
  • ಸೆ.23ರಂದು ಒಂದು ದಿನದ ಮಟ್ಟಿಗೆ ಟಿಕೆಟ್ ದರದಲ್ಲಿ ವಿನಾಯಿತಿ ನೀಡಿದ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್
  • ಅವಕಾಶ ವಂಚಿತರಾದ ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಸಿನಿಮಾ ಪ್ರಿಯರು

2022ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 23ರಂದು ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳಲ್ಲಿ ಕೇವಲ 75 ರೂಪಾಯಿಗೆ ಮಲ್ಟಿಪ್ಲೆಕ್ಸ್‌‌ಗಳಲ್ಲಿ ಟಿಕೆಟ್ ಖರೀದಿಸಿ ನಿಮ್ಮ ಇಷ್ಟದ ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಈ ಬಗ್ಗೆ 'ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ' ಇಂದು ಟ್ವೀಟ್ ಮೂಲಕ ಪ್ರಕಟಣೆ ಹೊರಡಿಸಿದ್ದು, "ಸೆಪ್ಟೆಂಬರ್ 23ರಂದು ರಾಷ್ಟ್ರೀಯ ಚಲನಚಿತ್ರ ದಿನವನ್ನು ಆಚರಿಸಲಾಗುತ್ತಿದೆ. ಚಲನಚಿತ್ರ ದಿನಾಚರಣೆ ಅಂಗವಾಗಿ ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳು ನಾಡು ಈ ಮೂರು ರಾಜ್ಯಗಳನ್ನು ಹೊರತುಪಡಿಸಿ ದೇಶದ ಯಾವುದೇ ಪ್ರದೇಶದಲ್ಲಿರುವ ಮಲ್ಟಿಪ್ಲೆಕ್ಸ್‌‌ಗಳಲ್ಲಿ ಒಂದು ದಿನದ ಮಟ್ಟಿಗೆ ಸಿನಿಮಾಸಕ್ತರು ತಮ್ಮ ಇಷ್ಟದ ಸಿನಿಮಾಗಳನ್ನು ಕೇವಲ 75₹ ಪಾವತಿಸಿ ನೋಡಬಹುದಾಗಿದೆ. ಕೊರೋನಾ ಸೋಂಕಿನಿಂದಾಗಿ ಚಿತ್ರಮಂದಿರಗಳಿಂದ ವಿಮುಖರಾಗಿದ್ದ ಜನರ ಗಮನ ಸೆಳೆಯುವ ಸಲುವಾಗಿ ಮಲ್ಟಿಪ್ಲೆಕ್ಸ್‌‌ಗಳಲ್ಲಿ ಕಡಿಮೆ ದರಕ್ಕೆ ನೀಡುವ ನಿರ್ಧಾರ ಕೈಗೊಂಡಿರುವುದಾಗಿ" ಅಸೋಸಿಯೇಷನ್ ತಿಳಿಸಿದೆ.

 

ತೆಲಂಗಾಣ, ಆಂಧ್ರಪ್ರದೇಶ ಮತ್ತು‌ ತಮಿಳುನಾಡು ರಾಜ್ಯಗಳಲ್ಲಿ ಸಿನಿಮಾ ಟಿಕೆಟ್ ಮಾರಾಟದ ಮೇಲೆ ಸ್ಥಳೀಯ ಸರ್ಕಾರಗಳ ನಿಯಂತ್ರಣ ಇರುವುದರಿಂದ ಈ ಮೂರು ರಾಜ್ಯಗಳ ಜನರಿಗೆ ಈ ವಿನಾಯಿತಿ ಇರುವುದಿಲ್ಲ ಎಂದು ಅಸೋಸಿಯೇಷನ್ ತಿಳಿಸಿದೆ.

ಈ ಹಿಂದೆ ಸೆಪ್ಟೆಂಬರ್ 16 ರಾಷ್ಟ್ರೀಯ ಚಲನಚಿತ್ರ ದಿನವನ್ನು ಆಚರಿಸಲು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ನಿರ್ಧರಿಸಿತ್ತು. ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಚಿತ್ರದ ಕಾರಣಕ್ಕೆ ರಾಷ್ಟ್ರೀಯ ಚಲನಚಿತ್ರ ದಿನಾಚರಣೆಯನ್ನು ಸೆಪ್ಟೆಂಬರ್ 23ಕ್ಕೆ‌ ಮುಂದೂಡಲಾಗಿತ್ತು. ಬ್ರಹ್ಮಾಸ್ತ್ರದ ವಿತರಣಾ ಹಕ್ಕನ್ನು ಪಡೆದಿರುವ ಡಿಸ್ನಿ ವಾಲ್ಟ್‌‌ ಸ್ಟುಡಿಯೋಸ್ ಸಂಸ್ಥೆ, "ಅಗ್ಗದ ಟಿಕೆಟ್ ದರ ಚಿತ್ರದ ಗಳಿಕೆಯ ಪರಿಣಾಮ ಬೀಳುತ್ತದೆ. ಹೀಗಾಗಿ ಚಲನಚಿತ್ರ ದಿನಾಚರಣೆಯನ್ನು ಮುಂದೂಡಿ" ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌‌ಗೆ ಮನವಿ ಮಾಡಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್