
- ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ʼಎನ್ಸಿ 22ʼ ಟೈಟಲ್ ಪೋಸ್ಟರ್
- ಖಾಕಿ ಧರಿಸಿ ರೆಬೆಲ್ ಲುಕ್ನಲ್ಲಿ ಮಿಂಚಿದ ಟಾಲಿವುಡ್ ನಟ ನಾಗಚೈತನ್ಯ
ಟಾಲಿವುಡ್ನ ಸ್ಟಾರ್ ನಟ ನಾಗಚೈತನ್ಯ ಬುಧವಾರ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರತೀಯ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶುಭ ಕೋರುತ್ತಿದ್ದು, ನಾಗಚೈತನ್ಯ ಅವರ ನೂತನ ಚಿತ್ರದ ಹೊಸ ಲುಕ್ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಬಿಡುಗಡೆಗೊಳಿಸುವ ಮೂಲಕ ʼಎನ್ಸಿ 22ʼ ಚಿತ್ರತಂಡ ವಿಶೇಷವಾಗಿ ಹಾರೈಸಿದೆ.
ನಾಗಚೈತನ್ಯ ಮತ್ತು ವೆಂಕಟ್ ಪ್ರಭು ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ನೂತನ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಚಿತ್ರಕ್ಕೆ ʼಕಸ್ಟಡಿʼ ಎಂದು ಹೆಸರಿಡಲಾಗಿದೆ. ಪೋಸ್ಟರ್ನಲ್ಲಿ ಖಾಕಿ ಧರಿಸಿರುವ ನಾಗಚೈತನ್ಯ, ರೆಬೆಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಪೇದೆಯಾಗಿ ಕಾಣಿಸಿಕೊಂಡಿರುವ ನಾಗಚೈತನ್ಯರನ್ನು ಹಲವು ಪೊಲೀಸರು ಸುತ್ತುವರೆದಿದ್ದು, ಬಂದೂಕನ್ನು ಗುರಿಯಾಗಿರಿಸಿ ನಾಯಕನನ್ನು ಬಂಧಿಸುತ್ತಿರುವ ಹಾಗೆ ತೋರಿಸಲಾಗಿದೆ. ʼಕಸ್ಟಡಿʼಯ ಹೊಸ ಲುಕ್ ಪೋಸ್ಟರ್ ಸದ್ಯ ಸಿನಿ ರಸಿಕರಲ್ಲಿ ಕುತೂಹಲ ಹೆಚ್ಚಿಸಿದೆ.
Thank you @vp_offl and the entire team for this first look , really enjoyed working on this one and the journey so far ! And for all the lovely wishes .. cheers . #Custody it is for #NC22 #CustodyFL @IamKrithiShetty @thearvindswami @ilaiyaraaja @thisisysr @SS_Screens #Priyamani pic.twitter.com/h1PzaSQxbe
— chaitanya akkineni (@chay_akkineni) November 23, 2022
ಕಳೆದ ಸೆಪ್ಟೆಂಬರ್ನಲ್ಲಿ ʼಕಸ್ಟಡಿʼ ಚಿತ್ರೀಕರಣ ಶುರುವಾಗಿದ್ದು, 2023ರಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ. ಚಿತ್ರದಲ್ಲಿ ನಾಗಚೈತನ್ಯಗೆ ಕೃತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಪ್ರಿಯಾಮಣಿ, ಅರವಿಂದ್ ಸ್ವಾಮಿ, ಸಂಪತ್ ರಾಜ್, ಶರತ್ ಕುಮಾರ್, ವೆನ್ನೆಲ ಕಿಶೋರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ʼಶ್ರೀನಿವಾಸ ಸಿಲ್ವರ್ ಸ್ಕ್ರೀನ್ʼ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚಿತ್ತೂರಿ ಶ್ರೀನಿವಾಸ ಬಂಡವಾಳ ಹೂಡಿದ್ದು, ಖ್ಯಾತ ಸಂಗೀತ ನಿರ್ದೇಶಕ ಇಳಿಯರಾಜ ಮತ್ತು ಯುವನ್ ಶಂಕರ್ ರಾಜ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.