ಸಂದರ್ಶನ | ನೀತು ಕಂಡಂತೆ ಸಂಚಾರಿ ವಿಜಯ್‌

ದಿವಂಗತ ನಟ ಸಂಚಾರಿ ವಿಜಯ್‌ ಅವರ 39ನೇ ಹುಟ್ಟು ಹಬ್ಬದ ಪ್ರಯುಕ್ತ ಅವರು ಓದಿದ ಸರ್ಕಾರಿ ಶಾಲೆಗೆ ಹೊಸ ರೂಪ ನೀಡುವ ಪ್ರಯತ್ನ ಮಾಡಿದ್ದಾರೆ ನಟಿ ನೀತು ಶೆಟ್ಟಿ ಮತ್ತು ಕನ್ನಡ ಮನಸ್ಸುಗಳು ತಂಡ.
neethu sanchari vijay

ಕನ್ನಡದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್‌ ನಮ್ಮನ್ನಗಲಿ ಒಂದು ವರ್ಷ ಕಳೆದಿದೆ. ವಿಜಯ್‌ ಅಗಲಿಕೆಯ ನೋವಲ್ಲೇ ಕುಟುಂಬಸ್ಥರು ಮತ್ತು ಚಿತ್ರರಂಗದ ಆಪ್ತ ಸ್ನೇಹಿತರು ಸೇರಿಕೊಂಡು ಜುಲೈ 17ರಂದು ಅವರ 39ನೇ ವರ್ಷದ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. 

ವಿಜಯ್‌ ಜನುಮದಿನದ ಹಿನ್ನೆಲೆ ಜುಲೈ 16ರಂದೇ ನಟನ ಹುಟ್ಟೂರಾದ ಪಂಚನಹಳ್ಳಿಗೆ ಭೇಟಿ ನೀಡಿದ್ದ ʼಕನ್ನಡ ಮನಸ್ಸುಗಳುʼ ತಂಡ, ವಿಜಯ್‌ ಅವರು ಪ್ರಾಥಮಿಕ ಶಿಕ್ಷಣ ಪಡೆದ ಸರ್ಕಾರಿ ಶಾಲೆ ಸ್ವಚ್ಛಗೊಳಿಸಿ, ಶಾಲೆಯ ಗೋಡೆಗಳಿಗೆ ಬಣ್ಣ ಬಳಿದು ಹೊಸ ರೂಪ ನೀಡಿದೆ. ʼಕನ್ನಡ ಮನಸ್ಸುಗಳʼ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದ ಕನ್ನಡದ ಖ್ಯಾತ ನಟಿ, ವಿಜಯ್‌ ಸ್ನೇಹಿತೆ ನೀತು ಶೆಟ್ಟಿ ತಾವು ಕಂಡ ಸಂಚಾರಿ ವಿಜಯ್‌ ಬಗ್ಗೆ ಈದಿನ.ಕಾಮ್‌ ಜೊತೆಗೆ ಮಾತನಾಡಿದ್ದಾರೆ.

Eedina App

ಕನ್ನಡ ಮನಸ್ಸುಗಳು ತಂಡದ ಜೊತೆಗೂಡಿ ಪಂಚನಹಳ್ಳಿ ಶಾಲೆಗೆ ಹೊಸ ರೂಪ ನೀಡಿದ್ದೀರಿ?

ಕನ್ನಡ ಮನಸ್ಸುಗಳು ತಂಡದವರು ʼಸರ್ಕಾರಿ ಶಾಲೆ ಉಳಿಸಿ ಬೆಳೆಸಿʼ ಅಭಿಯಾನದಡಿ ನಾಡಿನ ಹಲವು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮರು ಜೀವ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಕೇವಲ ಸುಣ್ಣ- ಬಣ್ಣ ಬಳಿಯುವುದು ಮಾತ್ರವಲ್ಲ. ಗೆದ್ದಲು ಹಿಡಿದ ಶಾಲೆಯ ಸೂರು ಬದಲಾಯಿಸುವುದು, ಮಕ್ಕಳ ಕಲಿಕೆಗೆ ಬೇಕಾದ ಪೀಠೋಪಕರಣ ನೀಡುವುದು, ಶಾಲೆಯ ಆವರಣದಲ್ಲಿ ಗಿಡ ನೆಡುವುದು ಹೀಗೆ ಹಲವು ಕಾರ್ಯಗಳನ್ನು ಈ ತಂಡದವರು ಮಾಡಿಕೊಂಡು ಬಂದಿದ್ದಾರೆ. ಕಾಸರಗೋಡು, ಸಿಗಂದೂರು, ಬೆಳಗಾವಿ, ಮಂಡ್ಯ ಹೀಗೆ ನಾಡಿನ ಬೇರೆ ಬೇರೆ ಪ್ರದೇಶಗಳ ಶಾಲೆಗಳಿಗೆ ಈ ತಂಡ ನೆರವಾಗಿದೆ. ಈ ತಂಡದ ಆಶಯ ನನಗೆ ತುಂಬಾ ಹಿಡಿಸಿತು. ಹಲವಾರು ಮಂದಿ ಸ್ವಯಂ ಸೇವಕರು ಯಾವುದೇ ಅಪೇಕ್ಷೆಗಳಿಲ್ಲದೆ ಈ ಅಭಿಯಾನದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ನಾನು ಈ ತಂಡದ ಜೊತೆಗೆ ಕೈ ಜೋಡಿಸಿದೆ. ಕನ್ನಡ ಮನಸ್ಸುಗಳ ಜೊತೆ ಸೇರಿ ನಾನು ಕೂಡ ನಾಲ್ಕು ಶಾಲೆಗಳಿಗೆ ಮರುಜೀವ ನೀಡುವ ಪ್ರಯತ್ನ ಮಾಡಿದ್ದೇನೆ. ಪಂಚನಹಳ್ಳಿ ಶಾಲೆಯ ಕುರಿತು ಹೇಳಬೇಕು ಎಂದರೆ, ವಿಜಯ್‌ ಅವರನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವು ಜೊತೆಯಾಗಿ ಸಿನಿಮಾದಲ್ಲಿ ನಟಿಸದಿದ್ದರೂ, ಕೋವಿಡ್‌ ಲಾಕ್‌ಡೌನ್‌ ಸಂದರ್ಭ ಒಟ್ಟಾಗಿ ತೊಡಗಿಸಿಕೊಂಡಿದ್ದೆವು. ವಿಜಯ್‌ ಓದಿದ ಶಾಲೆಗೆ ಬಣ್ಣ ಹಚ್ಚಿ ಹೊಸ ರೂಪ ನೀಡುವ ಮೂಲಕ ಅವರ ಹುಟ್ಟು ಹಬ್ಬವನ್ನು ಭಿನ್ನವಾಗಿ ಆಚರಿಸುವ ಪ್ರಯತ್ನ ಮಾಡಿದ್ದೇವೆ ಎಂದರು. 

AV Eye Hospital ad
kannada manassugalu

ವಿಜಯ್‌ ಆಸೆಯಂತೆ ಹಾಡಿಗಳಿಗೆ ತೆರಳಿ ಟಾರ್ಪಲ್‌ ಹಂಚಿದ್ದೀರಿ?

ವಿಜಯ್‌ ಸಾವನ್ನಪ್ಪುವ ಎರಡು ದಿನದ ಹಿಂದೆ ಹಾಡಿಗಳಿಗೆ ಟಾರ್ಪಲ್‌ ಕೊಡುವ ಬಗ್ಗೆ ನಾವೆಲ್ಲರೂ ಯೋಜಿಸಿದ್ದೆವು. ಹಾಡಿಗಳಿಗೆ ಟಾರ್ಪಲ್‌ ಕೊಡಬೇಕು ಅನ್ನೋದು ವಿಜಯ್‌ ಆಸೆಯಾಗಿತ್ತು. ಸುಮಾರು ಟಾರ್ಪಲಿನ್‌ಗಳ ವ್ಯವಸ್ಥೆಯನ್ನು ಅವರೇ ಮಾಡಿದ್ದರು. ಅದಾದ ಎರಡು ದಿನಕ್ಕೆ ಅವರೇ ಇಲ್ಲವಾದರು. ಆದರೆ, ವಿಜಯ್‌ ಆಸೆ ಈಡೇರಿಸಬೇಕು ಎಂಬುದು 'ಉಸಿರು' ತಂಡದ ಭಾಗವಾಗಿದ್ದ ಎಲ್ಲರ ನಿರ್ಧಾರವಾಗಿತ್ತು. ಅದರಂತೆ ನಾವೆಲ್ಲರೂ ಸೇರಿ ನಾಗರಹೊಳೆಯ ಹಾಡಿಗಳಿಗೆ ತೆರಳಿ ಬುಡಕಟ್ಟು ಜನಾಂಗದವರ ಮನೆಗಳಿಗೆ ಟಾರ್ಪಲ್‌ ಹೊದಿಸಿ ಬಂದಿದ್ದೆವು. ವಿಜಯ್‌ ಸ್ಮರಣಾರ್ಥ ಇನ್ನೂ ಹಲವು ಕೆಲಸಗಳನ್ನು ಮಾಡಬೇಕು ಎಂದುಕೊಂಡಿದ್ದೇವೆ. 'ಉಸಿರು' ತಂಡ ಕಟ್ಟಿ ಬೆಳೆಸಿರುವ ಕವಿರಾಜ್‌ ಅವರಿಗೆ ವಿಜಯ್‌ ಹೆಸರಲ್ಲಿ ಒಂದು ಔಷಧದ ಅಂಗಡಿಯನ್ನು ತೆರೆಯುವ ಆಸೆ ಇದೆ. ಸದ್ಯಕ್ಕೆ ನಮ್ಮ ಕೈಲಾದಷ್ಟನ್ನು ಮಾಡಿದ್ದೇವೆ.

ವಿಜಯ್‌ ಜೊತೆಗೆ ನಿಮ್ಮ ಒಡನಾಟ ಹೇಗಿತ್ತು?

ವಿಜಯ್ ಮತ್ತೆ ನನ್ನ ನಡುವೆ ಒಳ್ಳೆಯ ಸ್ನೇಹವಿತ್ತು. ನಾವು ಜೊತೆಯಾಗಿ ಯಾವ ಸಿನಿಮಾಗಳಲ್ಲಿಯೂ ನಟಿಸಿಲ್ಲ. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಒಡನಾಟಕ್ಕೆ ಬಂದೆವು. ವಿಜಯ್‌ ಅವರಿಗೆ ಜೀವನ ಏನು ಅಂತ ಗೊತ್ತಿತ್ತು. ಸಂಭಾವನೆ ವಿಷಯದಲ್ಲಿ ನಿರ್ಮಾಪಕರು ತೋರುವ ತಾರತಮ್ಯಗಳ ಬಗ್ಗೆ ಮಾತಾಡಿಕೊಂಡು ನಕ್ಕು ಸುಮ್ಮನಾಗುತ್ತಿದ್ದೆವು. ಅವರ ಬೆಳವಣಿಗೆ ಕಂಡು ನಮಗೆ ಖುಷಿಯಾಗುತ್ತಿತ್ತು. 'ನಾನು ಅವನಲ್ಲ ಅವಳು' ಸಿನಿಮಾದಲ್ಲಿನ ನಟನೆ ಅವರಿಗೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಅತಂಹ ಅಭಿನಯ ನಮಗೆ ಸದ್ಯಕ್ಕಂತೂ ಕಾಣ ಸಿಗುವುದಿಲ್ಲ. ಆ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಅವರಿಗೆ ರಾಷ್ಟ್ರಪ್ರಶಸ್ತಿ ಕೂಡ ಬಂತು. ಹೀಗಾಗಿಯೇ ಅವರ ಮೇಲೆ ನಮಗೆ ಹೆಚ್ಚು ಗೌರವವಿತ್ತು. 

ವಿಜಯ್‌ ಜೊತೆಗಿನ ಮರೆಯಲಾಗದ ನೆನಪನ್ನು ಹಂಚಿಕೊಳ್ಳಲು ಸಾಧ್ಯವೇ?

ಲಾಕ್‌ಡೌನ್‌ ಸಂದರ್ಭದಲ್ಲಿ ಒಬ್ಬ ಗರ್ಭಿಣಿ ಮಹಿಳೆಗೆ ಔಷಧಗಳು ಮತ್ತು ಕೆಲ ಸಾಮಗ್ರಿಗಳ ಅಗತ್ಯವಿತ್ತು. ಅವರ ಮನೆ ಹುಡುಕಿಕೊಂಡು ಹೋಗಿ ಅಗತ್ಯವಿದ್ದ ವಸ್ತುಗಳನ್ನು ತಲುಪಿಸುವ ಕೆಲಸ ಮಾಡಿದ್ದೆವು. ಆಗ ಫುಡ್‌ಕಿಟ್‌ಗಾಗಿ ಹಲವರು ನಮ್ಮನ್ನು ಸಂಪರ್ಕಿಸಿದ್ದರು. ಒಂದು ಬಾರಿ ಫುಡ್‌ಕಿಟ್‌ ಪಡೆದವರೇ ಮತ್ತೆ ಮತ್ತೆ ಕಿಟ್‌ಗಾಗಿ ಬೇಡಿಕೆ ಇಡುತ್ತಿದ್ದರು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವಿಜಯ್‌ ಮೊದಲು ಕಿಟ್‌ ಪಡೆದವರನ್ನು ನೆನಪಿಟ್ಟು ಅಗತ್ಯವಿದ್ದವರಿಗೆ ಮಾತ್ರ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದರು. ಎಲ್ಲೂ ಹಣ ಮತ್ತೆ ಶ್ರಮ ವ್ಯರ್ಥವಾಗಲು ಬಿಡುತ್ತಿರಲಿಲ್ಲ. ಅವರಲ್ಲಿನ ಪ್ರಾಮಾಣಿಕ, ನಿಷ್ಠುರ, ಸ್ಪಂದಿಸುವ ಗುಣಗಳೇ ನಮಗೆ ಹೆಚ್ಚು ಇಷ್ಟವಾಗುತ್ತಿದ್ದವು.

ಒಬ್ಬ ನಟನಾಗಿ ವಿಜಯ್‌ ನಿಮಗೆ ಎಷ್ಟು ಹಿಡಿಸುತ್ತಾರೆ?

ನಟನಾಗಿ ವಿಜಯ್‌ ನನಗೆ ತುಂಬಾ ಇಷ್ಟ. ಕೆಲವು ಸಿನಿಮಾಗಳಲ್ಲಿ ತೀರಾ ಸಣ್ಣ ಪಾತ್ರಗಳಲ್ಲೂ ಅವರು ನಟಿಸಿದ್ದನ್ನು ನಾನು ನೋಡಿದ್ದೀನಿ. ಆಗೆಲ್ಲ ನಾನು, ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಯಾಕೆ ಈ ರೀತಿಯ ಪಾತ್ರಗಳನ್ನೆಲ್ಲ ಮಾಡುತ್ತೀರಿ ಎಂದು ಕೇಳಿದ್ದೆ ಕೂಡ. ಕಲಾವಿದರಿಗೂ ಹೊಟ್ಟೆ ಪಾಡು ಅನ್ನೊದೊಂದು ಇರುತ್ತಲ್ಲ. ಅದೇ ಕಾರಣಕ್ಕೆ ಆ ರೀತಿಯ ಪಾತ್ರಗಳನ್ನು ಒಪ್ಪಿ ಮಾಡುತ್ತಿದ್ದರು. ಜನ ಅವರನ್ನು ತಪ್ಪಾಗಿ ಬಳಸಿಕೊಂಡರು ಎನ್ನಬಹುದೇ ಹೊರತು ಅವರದ್ದೇನು ತಪ್ಪಿರಲಿಲ್ಲ ಬಿಡಿ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app