
- ನೆಲೆ ಕಳೆದುಕೊಂಡ ನೆಟ್ಫ್ಲಿಕ್ಸ್
- ಪಥ ಬದಲಿಸಿದ ಲಕ್ಷಾಂತರ ಚಂದಾದಾರರು
ಜಗತ್ತಿನ ಅತಿ ದೊಡ್ಡ 'ಓಟಿಟಿ ಫ್ಲ್ಯಾಟ್ಫಾರಂ' ಮತ್ತು ಜಗತ್ತಿನ ವಿವಿಧ ಭಾಷೆಗಳ ಸಿನಿಮಾ ಮತ್ತು ವೆಬ್ ಸರಣಿಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ 'ನೆಟ್ಫ್ಲಿಕ್ಸ್' ತನ್ನ 150 ಜನ ಖಾಯಂ ಕೆಲಸಗಾರರನ್ನು ಸೇವೆಯಿಂದ ವಜಾಗೊಳಿಸಿದೆ.
ಸಂಸ್ಥೆ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ವ್ಯವಹಾರವನ್ನು ಸುಧಾರಿಸುವ ದೃಷ್ಟಿಯಿಂದ ಅಮೆರಿಕ ಮತ್ತು ಕೆನಡಾದಲ್ಲಿ ಸಂಸ್ಥೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತಿರುವ ಶೇ. 2ರಷ್ಟು ಮಂದಿಯನ್ನು ಕೆಲಸದಿಂದ ವಜಾ ಗೊಳಿಸುತ್ತಿರುವುದಾಗಿ ನೆಟ್ಫ್ಲಿಕ್ಸ್ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಒಂದು ದಶಕದಲ್ಲಿ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ದೈತ್ಯಾಕಾರವಾಗಿ ಬೆಳೆದಿರುವ ನೆಟ್ಫ್ಲಿಕ್ಸ್, ಇತ್ತೀಚಿನ ದಿನಗಳಲ್ಲಿ ದೊಡ್ಡ ಮೊತ್ತದ ಚಂದಾದಾರನ್ನು ಕಳೆದುಕೊಂಡಿದೆ. 2022ರ ಜನವರಿಯಿಂದ ಮಾರ್ಚ್ ಅಂತ್ಯದ ವರೆಗೆ ಬರೋಬ್ಬರಿ 2 ಲಕ್ಷ ಜನರು ನೆಟ್ಫ್ಲಿಕ್ಸ್ ಚಂದಾದಾರಿಕೆಯನ್ನು ತೊರೆದಿದ್ದಾರೆ ಎಂಬುದು ಸಂಸ್ಥೆಯ ತ್ರೈಮಾಸಿಕ ವರದಿಯಲ್ಲಿ ಬಹಿರಂಗಗೊಂಡಿತ್ತು.
ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾದ ಬಳಿಕ ಉಕ್ರೇನ್ ಮೇಲಿನ ಆಕ್ರಮಣವನ್ನು ವಿರೋಧಿಸಿದ್ದ ನೆಟ್ಫ್ಲಿಕ್ಸ್ ರಷ್ಯಾದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಈ ಕಠಿಣ ನಿರ್ಧಾರದಿಂದಾಗಿಯೂ ನೆಟ್ಫ್ಲಿಕ್ಸ್ ರಷ್ಯಾ ಮೂಲದ 7 ಲಕ್ಷ ಚಂದಾದಾರರನ್ನು ಕಳೆದುಕೊಂಡಿತ್ತು. ಅದಾದ ಬಳಿಕ ಜಗತ್ತಿನಾದ್ಯಂತ ಒಟ್ಟಾರೆ 2 ಲಕ್ಷ ಚಂದಾದಾರನ್ನು ಕಳೆದುಕೊಂಡಿದೆ.
ಈ ಸುದ್ದಿಯನ್ನು ಓದಿದ್ದೀರಾ? ಅಕ್ರಮ ಹಣ ವರ್ಗಾವಣೆ | ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ಪ್ರಕರಣ ದಾಖಲು
ಜಗತ್ತಿನಾದ್ಯಂತ 22.2 ಕೋಟಿ ಚಂದಾದಾರರನ್ನು ಹೊಂದಿರುವ ನೆಟ್ಫ್ಲಿಕ್ಸ್ ತಾನು ಮಾರುಕಟ್ಟೆಯಲ್ಲಿ ಬೆಳೆಯಲು ಈ ಹಿಂದೆ ಬಳಸಿಕೊಂಡಿದ್ದ ತಂತ್ರವೇ ಇದೀಗ ಉರುಳಾಗಿ ಪರಿಣಮಿಸಿದೆ. ನೆಟ್ಫ್ಲಿಕ್ಸ್ ವೇದಿಕೆ ಹೆಚ್ಚು ಜನರಿಗೆ ಹತ್ತಿರವಾಗಬೇಕು ಎಂಬ ಕಾರಣಕ್ಕೆ 'ಸ್ಕ್ರೀನ್ ಶೇರಿಂಗ್'(ಪರದೆ ಹಂಚಿಕೆ) ಎಂಬ ಹೊಸ ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆಯಂತೆ ನಿಗದಿತ ಮೊತ್ತವನ್ನು ಭರಿಸಿ ಒಂದೇ ಚಂದಾದಾರಿಕೆಯಲ್ಲಿ ಹೆಚ್ಚು ಜನ ನೆಟ್ಫ್ಲಿಕ್ಸ್ ಬಳಸಲು ಅವಕಾಶ ಕಲ್ಪಿಸಿತ್ತು.
ಒಂದು ಹಂತದಲ್ಲಿ ಈ ಯೋಜನೆ ಸಂಸ್ಥೆಗೆ ದೊಡ್ಡ ಮಟ್ಟದ ಯಶಸ್ಸನ್ನು ಕೂಡ ತಂದು ಕೊಟ್ಟಿತ್ತು. ಆದರೆ, ಸದ್ಯ ಇದೇ ಯೋಜನೆ ನೆಟ್ಫ್ಲಿಕ್ಸ್ಗೆ ಉರುಳಾಗಿ ಪರಿಣಮಿಸಿದೆ. 22 ಕೋಟಿ ಚಂದಾದಾರರ ಖಾತೆಯನ್ನು ಬಳಸಿಕೊಂಡು ಜಗತ್ತಿನಲ್ಲಿ ಬರೋಬ್ಬರಿ 10 ಕೋಟಿ ಜನ ಉಚಿತವಾಗಿ ಸಿನಿಮಾ, ವೆಬ್ ಸರಣಿ ಮತ್ತು ಕಾಮಿಡಿ ಶೋಗಳನ್ನು ನೋಡುತ್ತಿದ್ದಾರೆ ಎಂಬ ಅಂಶವನ್ನು ಸ್ವತಃ ಸಂಸ್ಥೆಯೇ ಬಹಿರಂಗಪಡಿಸಿದೆ. ಇದರಿಂದಾಗಿ ದೊಡ್ಡ ಮಟ್ಟದ ನಷ್ಟ ಉಂಟಾಗಿರುವುದಾಗಿಯೂ ನೆಟ್ಫ್ಲಿಕ್ಸ್ ತಿಳಿಸಿತ್ತು.
ಇದರ ಜೊತೆಗೆ ದುಬಾರಿ ಚಂದಾದಾರಿಕೆ ಕೂಡ ಜನ ನೆಟ್ಫ್ಲಿಕ್ಸ್ ತೊರೆಯಲು ಕಾರಣವಾಗಿದೆ. ಇದರಿಂದ ಎಚ್ಚೆತ್ತುಕೊಂಡಿದ್ದ ಸಂಸ್ಥೆ, ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ಚಂದಾದಾರಿಕೆಯ ಕನಿಷ್ಠ ಮೊತ್ತವನ್ನು 149 ರೂಪಾಯಿಗೆ ಇಳಿಸಿತ್ತು. ಈಗ ಇದೇ ಕಾರಣಕ್ಕೆ ಉದ್ಯೋಗಿಗಳ ಸಂಖ್ಯೆಯನ್ನು ಕೂಡ ತಗ್ಗಿಸುತ್ತಿದೆ.