ಮತ್ತೆ 10 ಲಕ್ಷ ಚಂದಾದಾರರನ್ನು ಕಳೆದುಕೊಂಡ ʻನೆಟ್‌ಫ್ಲಿಕ್ಸ್‌ʼ

netflix
  • ಜಗತ್ತಿನಾದ್ಯಂತ 22 ಕೋಟಿ ಚಂದಾದಾರರನ್ನು ಹೊಂದಿರುವ ನೆಟ್‌ಫ್ಲಿಕ್ಸ್‌
  • ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ ದೈತ್ಯ ʼಸ್ಟ್ರೀಮಿಂಗ್‌ʼ ಸಂಸ್ಥೆ

ಜಗತ್ತಿನ ಅತಿದೊಡ್ಡ ಒಟಿಟಿ ವೇದಿಕೆ ಎನಿಸಿಕೊಂಡಿರುವ 'ನೆಟ್‌ಫ್ಲಿಕ್ಸ್‌' ಚಂದಾದಾರರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.  ʼನೆಟ್‌ಫ್ಲಿಕ್ಸ್‌ʼ ಸಂಸ್ಥೆಯ ಎರಡನೇ ತ್ರೈಮಾಸಿಕದ ವರದಿ ಬಿಡುಗಡೆಯಾಗಿದ್ದು, ಮಾರ್ಚ್‌ನಿಂದ ಜೂನ್ ತಿಂಗಳ ನಡುವೆ ಬರೋಬ್ಬರಿ 9 ಲಕ್ಷ 70 ಸಾವಿರ ಜನ ಚಂದಾದಾರರು ʼನೆಟ್‌ಫ್ಲಿಕ್ಸ್‌ʼ  ತೊರೆದಿದ್ದಾರೆ ಎಂಬುದು ಬಹಿರಂಗವಾಗಿದೆ.

ದುಬಾರಿ ಶುಲ್ಕ ತೆರಬೇಕಾಗಿರುವ ಹಿನ್ನೆಲೆಯಿಂದಾಗಿ ಜನ ʼನೆಟ್‌ಫ್ಲಿಕ್ಸ್‌ʼ ತೊರೆಯುತ್ತಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಸಂಸ್ಥೆಯನ್ನು ಸುಧಾರಣೆಯ ಹಾದಿಯತ್ತ ತರುವ ಸಲುವಾಗಿ ಮುಂದಿನ ವರ್ಷದಿಂದ ʼನೆಟ್‌ಫ್ಲಿಕ್ಸ್‌ʼನಲ್ಲಿ ಜಾಹಿರಾತುಗಳನ್ನು ಕೂಡ ಪ್ರದರ್ಶಿಸಲಾಗುವುದು ಎಂದು ಸಂಸ್ಥೆ ವರದಿಯಲ್ಲಿ ತಿಳಿಸಿದೆ. 

2022ರ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಬರೋಬ್ಬರಿ 2 ಲಕ್ಷ ಚಂದಾದಾರರು ʼನೆಟ್‌ಫ್ಲಿಕ್ಸ್‌ʼ ತೊರೆದಿದ್ದರು. ರಷ್ಯಾ- ಉಕ್ರೇನ್ ನಡುವೆ ಯುದ್ಧ ಆರಂಭವಾದ ಬಳಿಕ ಉಕ್ರೇನ್ ಮೇಲಿನ ಆಕ್ರಮಣ ವಿರೋಧಿಸಿದ್ದ ʼನೆಟ್‌ಫ್ಲಿಕ್ಸ್‌ʼ ರಷ್ಯಾದಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿತ್ತು. ಈ ಕಠಿಣ ನಿರ್ಧಾರದಿಂದಾಗಿಯೂ ನೆಟ್‌ಫ್ಲಿಕ್ಸ್‌ ರಷ್ಯಾ ಮೂಲದ 7 ಲಕ್ಷ ಚಂದಾದಾರರನ್ನು ಕಳೆದುಕೊಂಡಿತ್ತು.

ಈ ಸುದ್ದಿ ಓದಿದ್ದೀರಾ? ಸ್ಯಾಂಡಲ್‌ವುಡ್‌ಗೆ ಸ್ಟಾರ್‌ ಕಲಾವಿದರನ್ನು ನೀಡಿದ 'ಮೊಗ್ಗಿನ ಮನಸ್ಸು' ಚಿತ್ರಕ್ಕೆ 14ರ ಸಂಭ್ರಮ

ಒಟ್ಟಾರೆಯಾಗಿ ʼನೆಟ್‌ಫ್ಲಿಕ್ಸ್‌ʼ ಜಗತ್ತಿನಾದ್ಯಂತ 22 ಕೋಟಿ ಚಂದಾದಾರರನ್ನು ಹೊಂದಿದ್ದು, ಕಳೆದ 6 ತಿಂಗಳ ಅವಧಿಯಲ್ಲಿ ಸರಿಸುಮಾರು 20 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಈ ಹಿನ್ನೆಲೆ ಅಮೆರಿಕ, ಕೆನಡಾ ಸೇರಿದಂತೆ ವಿವಿಧ ದೇಶಗಳಲ್ಲಿ ಸಂಸ್ಥೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತಿರುವ 500ಕ್ಕೂ  ಹೆಚ್ಚು ಖಾಯಂ ಉದ್ಯೋಗಿಗಳನ್ನು ಮೂರು ಹಂತಗಳಲ್ಲಿ ಕೆಲಸದಿಂದ ಕೈ ಬಿಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app