ಆಸ್ಕರ್‌ ಪ್ರಶಸ್ತಿಗೆ ಚಿತ್ರಕಥೆ ಮುಖ್ಯವೇ ಹೊರತು ಗಳಿಕೆಯಲ್ಲ: ಟಿ.ಎಸ್‌ ನಾಗಾಭರಣ

ts nagabharana
  • ʼಆಸ್ಕರ್‌ ರೇಸ್‌ʼನಲ್ಲಿದ್ದ ʼಆರ್‌ಆರ್‌ಆರ್‌ʼ, ʼಕಾಶ್ಮೀರ್‌ ಫೈಲ್ಸ್‌ʼ
  • ʼಚೆಲ್ಲೋ ಶೋʼ ಆಯ್ಕೆ ಕುರಿತು ನಾಗಾಭರಣ ಸ್ಪಷ್ಟನೆ   

2023ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್‌ʼ ಸಿನಿಮಾ ನಾಮ ನಿರ್ದೇಶಗೊಳ್ಳಲಿದೆ ಎಂದೇ ಎಲ್ಲರೂ ನಂಬಿಕೊಂಡಿದ್ದರು. ʼಆರ್‌ಆರ್‌ಆರ್‌ʼ ಚಿತ್ರದ ಪರ ಸಾಮಾಜಿಕ ಜಾಲತಾಣಗಳಲ್ಲಿ ʼಆರ್‌ಆರ್‌ಆರ್‌ ಫಾರ್ ಆಸ್ಕರ್ʼ ಎಂಬ ಅಭಿಯಾನಗಳು ನಡೆದಿದ್ದವು. ಇದರ ಜೊತೆಗೆ ಹಿಂದಿಯ ʼದಿ ಕಾಶ್ಮೀರ್ ಫೈಲ್ಸ್‌ʼ ಕೂಡ ಆಸ್ಕರ್ ರೇಸ್‌ನಲ್ಲಿತ್ತು. ಆದರೆ, ಕೊನೆಗೆ ಆಯ್ಕೆಯಾಗಿದ್ದು ಮಾತ್ರ ʼಚೆಲ್ಲೋ ಶೋʼ ಎಂಬ ಗುಜರಾತಿ ಸಿನಿಮಾ.

ʼಆರ್‌ಆರ್‌ಆರ್‌ʼ ಮತ್ತು ಕಾಶ್ಮೀರ್ ಫೈಲ್ಸ್‌ ಸಿನಿಮಾಗಳನ್ನು ಆಸ್ಕರ್‌ ಪ್ರಶಸ್ತಿಗೆ ಪರಿಗಣಿಸದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಇದೇ ಹೊತ್ತಿನಲ್ಲಿ ʼಚೆಲ್ಲೋ ಶೋʼ ಸಿನಿಮಾವನ್ನೇ ಶಿಫಾರಸ್ಸು ಮಾಡಿದ್ದು ಯಾಕೆ ಎಂದು ʼಫಿಲ್ಮ್ ಫೆಡರೇಶನ್ ಆಫ್ ಇಂಡಿಯಾʼದ ʼಆಸ್ಕರ್ʼ ಆಯ್ಕೆ ಸಮಿತಿಯ ಅಧ್ಯಕ್ಷ, ಕನ್ನಡದ ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಪ್ರತಿಕ್ರಿಯಿಸಿದ್ದಾರೆ.

"ʼಆರ್‌ಆರ್‌ಆರ್‌ʼ ಚಿತ್ರವೇ ಆಸ್ಕರ್‌ಗೆ ನಾಮ ನಿರ್ದೇಶನಗೊಳ್ಳಲಿದೆ ಎಂಬುದು ಬಹುತೇಕರ ನಿರೀಕ್ಷೆಯಾಗಿತ್ತು. ಆದರೆ, ಆಯ್ಕೆ ಸಮಿತಿಯ ಎದುರು 13 ಚಿತ್ರಗಳಿದ್ದವು. ಕೇವಲ ʼಆರ್‌ಆರ್‌ಆರ್‌ʼ ಮಾತ್ರವಲ್ಲ. ಎಲ್ಲ ಸಿನಿಮಾಗಳು ಉತ್ತಮವಾಗಿದ್ದವು. ಆದರೆ, ಅತ್ಯುತ್ತಮ ಕಥೆಯನ್ನೊಳಗೊಂಡ ಚಿತ್ರವನ್ನು ಆಸ್ಕರ್‌ ಪ್ರಶಸ್ತಿಗೆ ಶಿಫಾರಸ್ಸು ಮಾಡುವುದು ನಮ್ಮ ಜವಾಬ್ದಾರಿ. ಸಿನಿಮಾದಲ್ಲಿ ಮನರಂಜನೆ, ಮೇಕಿಂಗ್, ಮಾರ್ಕೇಟಿಂಗ್, ಕಲೆಕ್ಷನ್ ಮಾತ್ರ ಮುಖ್ಯವಲ್ಲ. ಇದೆಲ್ಲಕ್ಕಿಂತ ಕಥಾಹಂದರ ಬಹು ಮುಖ್ಯವಾದದ್ದು. ಅದರಂತೆ ಅತ್ಯುತ್ತಮ ಕಥಾಹಂದರವನ್ನು ಹೊಂದಿರುವ ʼಚೆಲ್ಲೋ ಶೋʼ ಸಿನಿಮಾವನ್ನು ಆಯ್ಕೆ ಮಾಡಿದ್ದೇವೆ" ಎಂದು ನಾಗಾಭರಣ ಹೇಳಿರುವುದಾಗಿ ʼಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

"ʼಆರ್‌ಆರ್‌ಆರ್‌ʼ ಮತ್ತು ʼಕಾಶ್ಮೀರ್‌ ಫೈಲ್ಸ್‌ʼ ಚಿತ್ರಗಳನ್ನು ಆಯ್ಕೆ ಮಾಡಲಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 17 ಮಂದಿ ಸದಸ್ಯರನ್ನೊಳಗೊಂಡ ಸಮಿತಿ 13 ಚಿತ್ರಗಳನ್ನೂ ವೀಕ್ಷಿಸಿದ ಬಳಿಕ ಒಮ್ಮತದಿಂದ ʼಚೆಲ್ಲೋ ಶೋʼ ಚಿತ್ರವನ್ನು ಆಸ್ಕರ್‌ಗೆ ಶಿಫಾರಸ್ಸು ಮಾಡಿದೆ. ಸಮಿತಿ ಕೂಡ ಆಯ್ಕೆ ಮಾಡಬೇಕಿರುವುದು ಕೇವಲ ಒಂದು ಚಿತ್ರವನ್ನು ಮಾತ್ರ ಅಲ್ಲವೇ, ಇಂತಹ ಸಮಯದಲ್ಲಿ ಉಳಿದ ಚಿತ್ರತಂಡಗಳಿಗೆ ಮತ್ತು ಆ ಚಿತ್ರಗಳನ್ನು ಬೆಂಬಲಿಸಿದವರಿಗೆ ನಿರಾಸೆ ಆಗುವುದು ಸಹಜ" ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪಾಕಿಸ್ತಾನದ ನೆರೆ ಪೀಡಿತ ಪ್ರದೇಶಕ್ಕೆ ಹಾಲಿವುಡ್ ನಟಿ ಏಂಜೆಲೀನಾ ಜೋಲಿ ಭೇಟಿ

ʼಚೆಲ್ಲೋ ಶೋʼ ಪುಟಾಣಿ ಬಾಲಕನ ಸಿನಿಮಾಸಕ್ತಿಯ ಸುತ್ತ ಮೂಡಿಬಂದಿರುವ ಚಿತ್ರ. ಸಿನಿಮಾ ಕುರಿತು ಅಪಾರ ಕುತೂಹಲ ಹೊಂದಿರುವ ಗುಜರಾತಿನ ಚಲಾಲ ಎಂಬ ಕುಗ್ರಾಮದ ಬಾಲಕ ಸಮಯ್‌, ಥಿಯೇಟರ್‌ನಲ್ಲಿ ಪ್ರೊಜೆಕ್ಟರ್‌ ಅನ್ನು ನಿರ್ವಹಿಸುವ ವ್ಯಕ್ತಿಗೆ ಆಮಿಷವೊಡ್ಡಿ ಪ್ರೊಜೆಕ್ಟರ್‌ ಕೊಠಡಿಯೊಳಕ್ಕೆ ಪ್ರವೇಶ ಪಡೆಯುತ್ತಾನೆ. ಪ್ರೊಜೆಕ್ಟರ್‌ ಕೊಠಡಿಯಲ್ಲಿ, ಬಗೆ ಬಗೆಯ ಸಿನಿಮಾಗಳನ್ನು ನೋಡುತ್ತ ದಿನ ಕಳೆಯುವ ಆ ಎಳೆಯ ಬಾಲಕನ ಜೀವನದ ಸುತ್ತ ʼಚೆಲ್ಲೋ ಶೋʼ ಕಥೆಯನ್ನು ಹೆಣೆದಿದ್ದಾರೆ ನಿರ್ದೇಶಕ ನಳಿನ್‌.

ಭವಿನ್‌ ರಾಬರಿ ಎಂಬ ಬಾಲನಟ ಸಮಯ್‌ ಪಾತ್ರವನ್ನು ನಿಭಾಯಿಸಿದ್ದಾನೆ. ನಿಜ ಜೀವನಕ್ಕೆ ಹತ್ತಿರ ಎನ್ನಿಸುವ ಈ ಚಿತ್ರ 2021ರಲ್ಲಿ ʼಟ್ರಿಬೇಕಾʼ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್