150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಪವನ್‌ ಕಲ್ಯಾಣ್‌ ನಟನೆಯ ʻಹರಿಹರ ವೀರಮಲ್ಲುʼ

Hari-Hara-Veera-Mallu
  • ಚಿತ್ರಕ್ಕಾಗಿ ರಾಮೋಜಿ ಫಿಲಂ ಸಿಟಿಯಲ್ಲಿ ಬೃಹತ್‌ ಸೆಟ್‌ ನಿರ್ಮಾಣ
  • ಚಿತ್ರಕ್ಕೆ ಬಂಡವಾಳ ಹೂಡಿರುವ ಮೆಗಾ ಸೂರ್ಯ ಪ್ರೊಡಕ್ಷನ್ಸ್‌

ಟಾಲಿವುಡ್‌ನ ಸ್ಟಾರ್‌ ನಟ ಪವನ್‌ ಕಲ್ಯಾಣ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ, ಐತಿಹಾಸಿಕ ಕಥಾಹಂದರವುಳ್ಳ ʼಹರಿಹರ ವೀರಮಲ್ಲುʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರಕ್ಕಾಗಿ ಬೃಹತ್‌ ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಅಕ್ಟೋಬರ್‌ ಕೊನೆಯ ವಾರದಿಂದ ಈ ಬೃಹತ್‌ ಸೆಟ್‌ಗಳಲ್ಲಿಯೇ ಚಿತ್ರೀಕರಣ ನಡೆಯುತ್ತಿದೆ.

'ಹರಿಹರ ವೀರಮಲ್ಲು' ಐತಿಹಾಸಿಕ ಚಿತ್ರವಾದ ಕಾರಣಕ್ಕೆ ಪ್ರಮುಖ ಪಾತ್ರಧಾರಿಗಳನ್ನು ಹೊರತು ಪಡಿಸಿ 900ಕ್ಕೂ ಹೆಚ್ಚು ಜೂನಿಯರ್‌ ಆರ್ಟಿಸ್ಟ್‌ಗಳು ಈ ಚಿತ್ರದ ಪ್ರಮುಖ ಸನ್ನಿವೇಶಗಳಲ್ಲಿ ಭಾಗಿಯಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ಸೂಕ್ಷ್ಮತೆಗಳ ಜೊತೆಗೆ ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ" ಎಂದು ಚಿತ್ರಕ್ಕೆ ಬಂಡವಾಳ ಹೂಡಿರುವ ಮೆಗಾ ಸೂರ್ಯ ಪ್ರೊಡಕ್ಷನ್ಸ್‌ ಮಾಹಿತಿ ನೀಡಿದೆ.

ತೆಲುಗಿನ ಖ್ಯಾತ ನಿರ್ದೇಶಕ ರಾಧಾಕೃಷ್ಣ ಜಗರಲಮುಡಿ ʼಹರಿಹರ ವೀರಮಲ್ಲುʼ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದು, 17ನೇ ಶತಮಾನದಲ್ಲಿ ಮೊಘಲರ ಆಳ್ವಿಕೆಯ ಸಂದರ್ಭದಲ್ಲಿ ಬಂಡಾಯಗಾರನಾಗಿ ಗುರುತಿಸಿಕೊಂಡಿದ್ದ ʼಹರಿಹರ ವೀರಮಲ್ಲುʼ ಬದುಕಿನ ಸುತ್ತ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ʼಹರಿಹರ ವೀರಮಲ್ಲುʼ ಪಾತ್ರವನ್ನು ನಿಭಾಯಿಸುವ ಸಲುವಾಗಿ ಪವನ್‌ ಕಲ್ಯಾಣ್‌ ಕುಸ್ತಿ, ಕತ್ತಿವರಸೆ ಸೇರಿದಂತೆ ಹಲವು ಸಾಹಸ ಕ್ರೀಡೆಗಳನ್ನು ಕಲಿತಿದ್ದಾರೆ ಎಂಬುದು ವಿಶೇಷ. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ತುಣುಕುಗಳು ʼಹರಿಹರ ವೀರಮಲ್ಲುʼ ದಕ್ಷಿಣದ ಬಹುನಿರೀಕ್ಷಿತ ಸಿನಿಮಾ ಎಂಬುದನ್ನು ಖಾತರಿಪಡಿಸಿದೆ.

ಈ ಚಿತ್ರದಲ್ಲಿ ಪವನ್‌ ಕಲ್ಯಾಣ್‌ಗೆ ನಾಯಕಿಯಾಗಿ ನಿಧಿ ಅಗರವಾಲ್‌ ಕಾಣಿಸಿಕೊಂಡಿದ್ದು, ಅರ್ಜುನ್‌ ರಾಮ್‌ಪಾಲ್‌, ಆದಿತ್ಯ ಮೆನನ್‌, ಶಿವ ಕಾರ್ತಿಕೇಯನ್‌ ಸೇರಿದಂತೆ ಹಲವು ತಾರೆಯರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಸಂಗೀತ ಸಂಯೋಜನೆಯ ಹೊಣೆ ಹೊತ್ತುಕೊಂಡಿದ್ದು, 2023ರ ಮಾರ್ಚ್‌ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180