ಕಾಳಿದೇವಿ ಕೈಯಲ್ಲಿ ಸಿಗರೇಟು; ನಿರ್ದೇಶಕಿ ವಿರುದ್ಧ ದೂರು ದಾಖಲು

leena
  • ಕಾಳಿ ದೇವಿ ಸಾಕ್ಷ್ಯಚಿತ್ರಕ್ಕೆ ವ್ಯಾಪಕ ಖಂಡನೆ
  • ಜೀವ ಹೋದರೂ ಅಂಜುವುದಿಲ್ಲ ಎಂದ ನಿರ್ದೇಶಕಿ

ತಮಿಳಿನ ಖ್ಯಾತ ಸಾಕ್ಷ್ಯಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್‌ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.

ಕಾಳಿದೇವಿಯ ಪಾತ್ರದಾರಿ ಕೈಯಲ್ಲಿ 'ಎಲ್‌ಜಿಬಿಟಿಕ್ಯೂ' ಸಮುದಾಯದ ಧ್ವಜ ಹಿಡಿದು ಸಿಗರೇಟ್‌ ಸೇದುತ್ತಿರುವ ಪೋಸ್ಟರ್‌ವೊಂದನ್ನು ನಿರ್ದೇಶಕಿ ಲೀನಾ ಇತ್ತೀಚೆಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಟೊರೆಂಟೊ ಮೆಟ್ರೊಪಾಲಿಟನ್‌ ವಿಶ್ವವಿದ್ಯಾಲಯ ಆಗಾಖಾನ್‌ ಮ್ಯೂಸಿಯಂನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ತಾವು ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿರುವ ಕಾಳಿ ಸಾಕ್ಷ್ಯಚಿತ್ರ ಪ್ರದರ್ಶನ ಕಾಣುತ್ತಿದೆ ಎಂದು ಜುಲೈ 2ರಂದು ಲೀನಾ ಮಾಹಿತಿ ಹಂಚಿಕೊಂಡಿದ್ದರು.

ಸದ್ಯ ಸಿಗರೇಟ್‌ ಸೇದುತ್ತಿರುವ ಕಾಳಿಯ ಪೋಸ್ಟರ್‌ ಸಾಮಾಜಿಕ ಜಾಲಾತಣಗಳಲ್ಲಿ ಹರಿದಾಡುತ್ತಿದ್ದು, ನಿರ್ದೇಶಕಿ ಲೀನಾ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ 'ಅರೆಸ್ಟ್‌ ಲೀನಾ ಮಣಿಮೇಕಲೈ' ಎಂಬ ಟ್ವಿಟರ್‌ ಅಭಿಯಾನವನ್ನು ಕೂಡ ಆರಂಭಿಸಿದ್ದಾರೆ.

ವಿವಾದಿತ ಕಾಳಿ ಪೋಸ್ಟರ್‌ಗೆ ಸಂಬಂಧಿಸಿ ನಿರ್ದೇಶಕಿಯ ವಿರುದ್ಧ ದೂರು ಕೂಡ ದಾಖಲಾಗಿದೆ. ದೆಹಲಿ ಮೂಲದ ವಕೀಲರೊಬ್ಬರು ಲೀನಾ ವಿರುದ್ಧ ದೂರು ದಾಖಲಿಸಿದ್ದು, ಕಾಳಿ ದೇವತೆಯ ವೇಶದಾರಿಯ ಕೈಯಲ್ಲಿ ಸಿಗರೇಟು ಸೇದಿಸುವ ಮೂಲಕ ನಿರ್ದೇಶಕಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಕಾಳಿ ಚಿತ್ರದ ಪೋಸ್ಟರ್‌ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ದೂರು ದಾಖಲಾದ ಬೆನ್ನಲ್ಲೇ ತಮಿಳಿನಲ್ಲಿ ಟ್ವೀಟ್‌ ಮಾಡಿರುವ ಲೀನಾ, "ನನ್ನ ಬಳಿ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ. ಸತ್ಯವನ್ನು ಹೇಳುವುದಕ್ಕೆ ನನಗೆ ಯಾವುದೇ ಅಂಜಿಕೆಯಿಲ್ಲ. ನನ್ನ ಈ ನಿಲುವಿನಿಂದ ಜೀವಕ್ಕೆ ಆಪತ್ತು ಬಂದರೆ ಪ್ರಾಣತ್ಯಾಗಕ್ಕೂ ನಾನು ಸಿದ್ಧಳಿದ್ದೇನೆ" ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್